ಶನಿವಾರ, ಜೂನ್ 25, 2022
24 °C

ವಿಡಂಬನೆ ‌ ಆಡಿಯೊರಪ್ಪ ಧಾರಾವಾಹಿ- 3

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಇಲ್ಲಿಯವರೆಗೆ...

ಕಣ್ಣೀರು ಪಕ್ಷದ ಶಾಸಕ ಮದಕರಿ ಅವರನ್ನು ಬಲೆಗೆ ಹಾಕುವುದಕ್ಕೆ ಸ್ವತಃ ಬಾಜಪ್ಪ ಪಕ್ಷದ ಅಧ್ಯಕ್ಷರೇ ಮುಂದಾಗುತ್ತಾರೆ. ಮದಕರಿ ಅವರ ಮಗ ಮರಿಮದಕರಿಯ ಮೂಲಕ ‘ಆಪರೇಷನ್ ಗಮಲು’ಗೆ ಪ್ರಯತ್ನಿಸುತ್ತಾರೆ. ಆದರೆ ಮಗರಾಯ ಹೂಡಿದ ‘ಆಪರೇಷನ್ ಆಡಿಯೊ’ ಸಂಚಿನಿಂದಾಗಿ ಬಾಜಪ್ಪ ಅಧ್ಯಕ್ಷರಿಗೆ ‘ಆಡಿಯೊರಪ್ಪ’ಎಂಬ ಹೆಸರು ಅಂಟಿಕೊಳ್ಳುತ್ತದೆ.

ಆ ನಂತರ ಆಡಿಯೊರಪ್ಪರು ಜನಜನಿತವಾದ ಹೆಸರನ್ನು ಉಳಿಸುವುದಕ್ಕೋಸ್ಕರವೇನೋ ಎಂಬಂತೆ ಮತ್ತೊಮ್ಮೆ ಅಂತಹ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಪಕ್ಷದ ಸಭೆಯೊಂದರಲ್ಲಿ ‘ಆಪರೇಷನ್ ಗಮಲು’ವಿನ ನಗ್ನಸತ್ಯ ಬಿಚ್ಚಿಟ್ಟದ್ದನ್ನು ಯಾರೋ ಹಿತಶತ್ರು ಬಣದವರು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ತೇಲಿಬಿಡುತ್ತಾರೆ.

ಮುಂದೆ ಓದಿ…

ಅಕಟಕಟಾ! ಆಡಿಯೊರಪ್ಪರು ಸಂಕಟದಿಂದ ರಾತ್ರಿಯಿಡೀ ನಿದ್ದೆಗೆಟ್ಟು ನರಳಾಡುತ್ತಾರೆ. ಶನಿ ತನ್ನನ್ನು ಪರೀಕ್ಷಿಸಲು ಅದ್ಯಾವ ರೂಪಗಳಲ್ಲಿ ಬರುತ್ತಾನೋ ಎಂದು ಅವರು ಚಿಂತಾ-ಭ್ರಾಂತರಾಗುತ್ತಾರೆ. ಸೂರ್ಯೋದಯ ಆಗುವ ಸಮಯಕ್ಕೆ ಅವರೊಂದು ನಿರ್ಧಾರಕ್ಕೆ ಬರುತ್ತಾರೆ. ತನ್ನ ಭೇಟಿಗೆ ಯಾರೇ ಬರಲಿ, ಅವರೊಂದಿಗೆ ಮೊಬೈಲ್ ಇರಬಾರದು. ಸದನದಲ್ಲಿ ಸಜ್ಜನರಾಗಿರಲು ಸಾಧ್ಯವಿಲ್ಲ ಎಂದೇ ಮಾಧ್ಯಮ ಛಾಯಾಗ್ರಾಹಕರಿಗೆ, ಟಿ.ವಿ.ಚಾನೆಲ್‌ಗಳಿಗೆ ನಿಷೇಧ ಹೇರಿದ್ದಲ್ಲವೇ? ಇದೂ ಹಾಗೇ! ನಾಲಗೆ ಮೇಲೆ ಹಿಡಿತ ಇಡುವುದು ಸಾಧ್ಯವೇ ಇಲ್ಲ ಎಂದಾದರೆ ಮೊಬೈಲ್ ನಿಷೇಧ ಮಾಡುವುದೊಂದೇ ಉಳಿದಿರುವ ಮಾರ್ಗ.

ಇನ್ನು ಈ ಆಡಿಯೊ ಶನಿಕಾಟದ ತೊಂದರೆ ಇರುವುದಿಲ್ಲ ಎಂದು ನಿಟ್ಟುಸಿರುಬಿಟ್ಟು ಕುಳಿತಿದ್ದಾಗ, ಆಡಿಯೊರಪ್ಪರ ಕಟ್ಟಾ ಬೆಂಬಲಿಗ ಕಿ.ತಾ.ಪತಿ ಪ್ರತ್ಯಕ್ಷನಾಗುತ್ತಾನೆ. ಕಿ.ತಾ.ಪತಿ ಮೊಬೈಲನ್ನು ಭದ್ರತಾ ಸಿಬ್ಬಂದಿಗೆ ಕೊಟ್ಟು ಮುಖ್ಯಮಂತ್ರಿ ಚೇಂಬರಿಗೆ ಪ್ರವೇಶಿಸಿದ.

‘ಏನ್ರೀ ಕಿ.ತಾ.ಪತಿ… ಮೊಬೈಲ್ ಇಲ್ಲ ತಾನೇ?’ ಸಿ.ಎಂ ದೃಢಪಡಿಸಿಕೊಂಡರು. ಅವರಿಗೆ ಶ್ರೀಮಾನ್ ಕಿ.ತಾ.ಪತಿ ತನ್ನ ಬಣದವನೆಂದು ಬಲವಾದ ನಂಬಿಕೆ. ಆದ್ದರಿಂದಲೇ ಅವರ ನಾಲಗೆಯಿಂದ ಸತ್ಯಾನುಸತ್ಯಗಳೆಲ್ಲಾ ಹರಿಯಲು ಶುರುವಾದವು ನೋಡಿ!

‘ಆತ ಲಕ್ಷ್ಮಣನಾಗಿದ್ದರೆ ನಾನೇನು ರಾಮನಲ್ಲವೇ? ಅಣ್ಣನ ಮಾತನ್ನು ಕೇಳೋಕೆ ಅವನಿಗೇನು ಧಾಡಿ? ಇಡೀ ದಿವಸ ಸವದಿ ಮತ್ಸರ ತೋರಿಸುತ್ತಿರುತ್ತಾನೆ. ಈತನನ್ನು ಡಿಸಿಎಂ ಮಾಡಿದ್ದೇ ದೊಡ್ಡ ತಪ್ಪು’.

‘ಅಲ್ರೀ... ಆಪರೇಷನ್ ಗಮಲು ಮಾಡಿದ್ದನ್ನು ನಾನು ಒಪ್ಪಿದ್ದರಲ್ಲಿ ತಪ್ಪೇನಿದೆ? ಆಪರೇಷನ್ ಮಾಡಿದ್ದಕ್ಕಾಗಿಯೇ ಆ ವೈದ್ಯೋನಾರಾಯಣನಿಗೆ ಡಿಸಿಎಂ ಪಟ್ಟ ಕೊಟ್ಟ ವಿಷಯ ಜಗಜ್ಜಾಹೀರಾಗಿರುವಾಗ ನಾನು ಹೇಳಿದ್ದರಲ್ಲಿ ಹೊಸತೇನಿದೆ ಹೇಳಿ?’

‘ಒಂದಂತೂ ನನಗೆ ತುಂಬಾ ಬೇಸರವಿದೆ. ಅಂದು ನಾನು ಗುಡುಗಿದರೆ ಇಡೀ ಸದನ ನಡುಗುತ್ತಿತ್ತು. ಈಗ ನೋಡಿ! ಮೊನ್ನೆ ಪಕ್ಷದ ಸಭೆಯಲ್ಲಿ ಗುಡುಗಿದ್ದಕ್ಕೆ ನಾನೇ ನಡುಗುವಂತಾಗಿದೆ!’

‘ಆ ಮಾಜಿ ಸಿಎಮ್ಮಯ್ಯ ನನ್ನನ್ನು ದುರ್ಬಲ ಸಿ.ಎಂ. ಎಂದು ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಅವರ ಪಕ್ಷದಲ್ಲಿರುವಂತೆ ಸರ್ವಾಧಿಕಾರಿ ಹೈಗಮಾಂಡ್ ಇದ್ದರೆ ಸಿ.ಎಂಗಳು ದುರ್ಬಲರಾಗದೆ ಇರುತ್ತಾರೆಯೇ? ಆದರೆ ನಮ್ಮಲ್ಲಿ ಅದರ ಜತೆಗೆ ಅಸಂತೋಷ ವಿಭಾಗ ಎಂಬುದಿದೆ!’

‘ಆ ಬಚ್ಚಾಗೌಡರು ಎಷ್ಟು ಚಾಲು ಗೊತ್ತಾ? ಅನರ್ಹ ಶಾಸಕರ ವಿರುದ್ಧ ತಾನು ಮಾತನಾಡದೆ ಅವರ ಬಚ್ಚಾನನ್ನೇ ಮುಂದಕ್ಕೆ ಬಿಟ್ಟಿದ್ದಾರೆ. ಇವರೆಲ್ಲಾ ಯಾಕೆ ಬಚ್ಚಾ ತರ ವರ್ತಿಸ್ತಿದ್ದಾರೆ ಎಂದೇ ಗೊತ್ತಾಗಿಲ್ಲಪ್ಪಾ!’

‘ನಮ್ಮಲ್ಲಿ ಅತೃಪ್ತ ಶಾಸಕರಿಲ್ಲ. ಇರೋದು ಸಂತ್ರಸ್ತ ಶಾಸಕರು! ನೆರೆ ಸಂತ್ರಸ್ತರಿಗಾದರೂ ಪರಿಹಾರ ಕೊಡದೆ ಸುಮ್ಮನಿರಬಹುದು… ಇವರಿಗೆ ಉಪಚುನಾವಣೆಗೆ ಮುಂಚೆ ಏನಾದರೂ ‘ಪರಿಹಾರ’ದ ವ್ಯವಸ್ಥೆ ಮಾಡದಿದ್ದರೆ ನನ್ನ ಜೀವ ತಿನ್ನಬಹುದು’.

‘ನೋಡಪ್ಪಾ ಕಿ.ತಾ.ಪತಿ... ನಿನಗೊಂದು ವಿಚಾರ ಹೇಳ್ತೀನಿ. ಉಪಚುನಾವಣೆಯಲ್ಲಿ ನಮಗೆ ಬೇಕಾದಷ್ಟು ಸೀಟುಗಳು ಸಿಗಲ್ಲ ಎಂದು ನನಗೆ ಗೊತ್ತು. ಸುಮ್ನೆ ಹೆಸರಿಗೆ ಚುನಾವಣೆ ನಡೆಯಲಿದೆ. ಆಗಲೇ ಕಣ್ಣೀರು ಪಕ್ಷದವರ ಜತೆ ಫಿಕ್ಸಿಂಗ್ ಆಗಿರುವುದರಿಂದ ನಮ್ಮ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ’.

‘ಅನರ್ಹ ಶಾಸಕರಿಗೆ ಅನ್ಯಾಯವಾಗಬಹುದು. ಅವರ ಉಪಕಾರವನ್ನು ನಾನಂತೂ ಮರೆಯುವುದಿಲ್ಲ. ಈ ಉದ್ದೇಶದಿಂದಲೇ ನನ್ನೂರಿನಲ್ಲಿ ಮಂಗಗಳ ಉದ್ಯಾನವೊಂದನ್ನು ಆರಂಭಿಸಲಿದ್ದೇವೆ. ಅಲ್ಲಿ ಸಕಲ ಸೌಲಭ್ಯಗಳಿರುತ್ತವೆ. ಮುಂಬೈ ಹೋಟೆಲ್‌ಗಿಂತಲೂ ಖುಷಿ ಖುಷಿಯಾಗಿ ಅಲ್ಲಿ ಅವರು ಇರಬಹುದು’.

‘ಪಕ್ಷದ ಹೊಸ ಅಧ್ಯಕ್ಷರ ಆಯ್ಕೆ ಸರಿಯಿಲ್ಲ. ನೋಡ್ತಾ ಇರಿ... ಪಕ್ಷವನ್ನು ಪಿಟೀಲ್ ಕುಮಾರ್ ಮಲಿನ ಮಾಡಿಬಿಡ್ತಾರೆ. ಈ ಮಾರಾಯನಿಗಿಂತ ನಮ್ಮ ನೃತ್ಯಾಚಾರ್ಯನಿಗೆ ಆ ಸ್ಥಾನ ಕೊಡುತ್ತಿದ್ದರೆ... ನಾನು ಹೇಳಿದಂತೆ ಕುಣಿಯುತ್ತಿದ್ದರು’.

‘ಕಿ.ತಾ.ಪತಿಯವರೇ, ನೀವು ನಮ್ಮವನೂಂತ ಮನಬಿಚ್ಚಿ ಎಲ್ಲಾ ಹೇಳಿಬಿಟ್ಟಿದ್ದೇನೆ. ನೀವು ಯಾರಿಗೂ ಹೇಳೊಲ್ಲಾಂತ ನನಗೆ ನಂಬಿಕೆಯಿದೆ ಬಿಡಿ’.

ಮಾರನೇ ದಿವಸ ಎಲ್ಲಾ ಮಾಧ್ಯಮಗಳಲ್ಲಿ ಆಡಿಯೊರಪ್ಪರು ಮತ್ತೆ ದೊಡ್ಡ ಸುದ್ದಿಯಾಗಿದ್ದರು! ಕಿ.ತಾ.ಪತಿ ಕೈಗೆ ಕಟ್ಟಿಕೊಂಡಿದ್ದ ಓವರ್ ಸ್ಮಾರ್ಟ್ ವಾಚ್‌ನಲ್ಲಿ ಆಡಿಯೊ ರೆಕಾರ್ಡ್ ಮಾಡುವ ವ್ಯವಸ್ಥೆ ಇತ್ತು! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು