ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಸುತ್ತ ಹಲವು ನಿರೀಕ್ಷೆ...

Last Updated 2 ಜುಲೈ 2019, 7:03 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಪ್ರಥಮ ಬಜೆಟ್‌ ಮಂಡನೆಯ ಸಿದ್ಧತೆಯಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಇತ್ತೀಚೆಗೆ ರಾಜ್ಯಗಳ ಹಣಕಾಸು ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈಗಿರುವ ಜಟಿಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡದಿದ್ದರೆ ದೇಶದ ಆರ್ಥಿಕತೆಯ ಸಬಲೀಕರಣ ಸಾಧ್ಯವಿಲ್ಲ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕಿರುವ ಸವಾಲುಗಳನ್ನು ರಾಜ್ಯಗಳೂ ಹಂಚಿಕೊಳ್ಳಬೇಕು ಎಂಬ ಇಂಗಿತವನ್ನು ಬಜೆಟ್ ಮಂಡನೆಗೆ ಮೊದಲೇ ವ್ಯಕ್ತಪಡಿಸುವಲ್ಲಿ ಸಚಿವೆ ಜಾಣತನ ತೋರಿದ್ದಾರೆ.

ನಿರುದ್ಯೋಗ ಸಮಸ್ಯೆಗೆ ನವೋದ್ಯಮಗಳು (ಸ್ಟಾರ್ಟ್ಅಪ್ಸ್) ಪರಿಣಾಮಕಾರಿ ಪರಿಹಾರವಾಗಬಹುದು ಎಂಬುದು ಸರ್ಕಾರದ ದೊಡ್ಡ ನಿರೀಕ್ಷೆಯಾಗಿದೆ. ಆದರೆ, ಶೇ 60ರಷ್ಟು ನವೋದ್ಯಮಗಳು ಕೇವಲ ಐದು ರಾಜ್ಯಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಉತ್ತರಪ್ರದೇಶ, ತೆಲಂಗಾಣ) ಕೇಂದ್ರೀಕೃತವಾಗಿರುವುದರಿಂದ ಅವುಗಳ ಲಾಭ ಇತರ ರಾಜ್ಯಗಳಲ್ಲಿ ತೀರಾ ಸೀಮಿತ. ನವೋದ್ಯಮಗಳಲ್ಲಿ ಉದ್ಯೋಗ ಪಡೆದವರ ವೇತನ ಬಹಳ ಕಡಿಮೆ ಮಟ್ಟದಲ್ಲಿರುವಾಗ, ಈ ಉದ್ಯಮಗಳಲ್ಲಿ ನೇಮಕಾತಿಗಳು ಹೆಚ್ಚಿದ ಮಾತ್ರಕ್ಕೆ ಹಣದ ಹರಿವು ಜಾಸ್ತಿಯಾಗಿ ಮಾರುಕಟ್ಟೆಯಲ್ಲಿ ಸರಕು-ಸೇವೆಗಳಿಗೆ ಬೇಡಿಕೆ ಪುಟಿದೇಳುತ್ತದೆ ಎಂಬ ವಿಶ್ವಾಸ ಸಲ್ಲ.

ಹಿಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ, ಹಂತ ಹಂತವಾಗಿ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸುವ ಆಶ್ವಾಸನೆ ನೀಡಿದ್ದರು. ಉದ್ಯೋಗ, ಆದಾಯ ಸೃಷ್ಟಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು 2018-19ನೇ ಸಾಲಿನ ಬಜೆಟ್‌ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ 30ರಿಂದ ಶೇ 25ಕ್ಕೆ ಇಳಿಸಿ, ಆರ್ಥಿಕ ತಜ್ಞರ ಅಭಿನಂದನೆ ಪಡೆದಿದ್ದರು. ಆದರೆ, ತೆರಿಗೆ ಕಡಿತ ನಿರೀಕ್ಷಿಸಿದ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ದಾರಿ ಮಾಡಲೇ ಇಲ್ಲ. ಈಗ ಕಾರ್ಪೊರೇಟ್ ತೆರಿಗೆ ವಿಷಯದಲ್ಲಿ ನಿರ್ಮಲಾ ಯಾವ ನಿಲುವು ತಳೆಯಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಭಾರತದ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿರುವ ಕಾರ್ಮಿಕರ ಉತ್ಪಾದಕತೆ ತೃಪ್ತಿಕರವಾಗಿಲ್ಲ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ 2018ರ ವರದಿ ತಿಳಿಸಿತ್ತು. ಅಂದರೆ ಇಲ್ಲಿರುವುದು ಅಭಿವೃದ್ಧಿರಹಿತ ಉದ್ಯೋಗ. ಇಂಥ ಉದ್ಯೋಗಗಳಲ್ಲಿರುವ ಕಾರ್ಮಿಕರ, ಅಲ್ಲದೆ ಬಹುದೊಡ್ಡ ಸಂಖ್ಯೆಯಲ್ಲಿರುವ ಉದ್ಯೋಗಾಕಾಂಕ್ಷಿಗಳ ಉತ್ಪಾದಕತೆಯನ್ನು ಹೆಚ್ಚಿಸಲು ಹಿಂದಿನ ಬಜೆಟ್‌ಗಳಂತೆ ಈ ಬಾರಿಯ ಬಜೆಟ್ ಮೂರು ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆಗಳಿಗೆ ದೊಡ್ಡ ಅನುದಾನ ತೆಗೆದಿರಿಸಬೇಕಾಗಿದೆ. ಜತೆಗೆ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಾರಂಭವಾದ ಈ ಯೋಜನೆಗಳು ಈತನಕ ಹೇಳಿಕೊಳ್ಳುವಷ್ಟು ಪ್ರಯೋಜನಕಾರಿಯಾಗಿಲ್ಲದೇ ಇರುವುದನ್ನು ಯುವಶಕ್ತಿ ಆಧಾರಿತ ನವ ಭಾರತದ (2022) ಮುನ್ನೋಟ ನೀಡುತ್ತಿರುವ ಎರಡನೇ ಅವಧಿಯ ಸರ್ಕಾರವಾದರೂ ಗಮನಿಸಬೇಡವೇ?

ಎಲ್ಲಾ ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು, ರಫ್ತುಗಳ ಸ್ಪರ್ಧಾತ್ಮಕತೆ ಏರಿಸಲು ಭೂಮಿಯ ಖರೀದಿ, ಮಾನವ ಶ್ರಮದ ವಿನಿಯೋಗ, ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ದಿಟ್ಟ ಆರ್ಥಿಕ ಸುಧಾರಣೆಗಳನ್ನು ತರಲು ಬಜೆಟ್ ನೆರವಾಗಬೇಕು ಎನ್ನುವುದು ಮಹತ್ವದ ನಿರೀಕ್ಷೆ. ಸಾರ್ವಜನಿಕ ಬ್ಯಾಂಕುಗಳಿಗೆ ಶಕ್ತಿ ತುಂಬಲು ಮರು ಬಂಡವಾಳೀಕರಣ ಮುಂದುವರಿಸುವುದು ಅವಶ್ಯ. ಕಿಸಾನ್ ಸಮ್ಮಾನ್, ರೈತರ ಬೆಳೆ ವಿಮೆ, ಬೆಳೆಗಳಿಗೆ ಬೆಂಬಲ ಬೆಲೆ, ಆಯುಷ್ಮಾನ್ ಭಾರತ– ಹೀಗೆ ಹತ್ತು ಹಲವು ಯೋಜನೆಗಳಿಗೆ ತಗಲುವ ವೆಚ್ಚ ಕಳೆದ ವರ್ಷಕ್ಕಿಂತ ಎಷ್ಟೋ ಹೆಚ್ಚು. ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹ 5 ಲಕ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಸಾರ್ವತ್ರಿಕವಾಗಿದೆ. ಯಾವುದನ್ನೂ ಬಿಡುವಂತಿಲ್ಲ. ಆರ್ಥಿಕ ಮಂದಗತಿಯಿಂದ ಸರ್ಕಾರದ ಆದಾಯ ಕುಗ್ಗುತ್ತಿರುವಾಗ ಎಲ್ಲವನ್ನೂ ಒಂದೇ ಬಜೆಟ್‌ನಲ್ಲಿ ಮಾಡುವುದು ಸುಲಭವಲ್ಲ.

ಜಿಎಸ್‌ಟಿ ಜಾರಿ ಮಾಡಿದ್ದು ಪ್ರಥಮ ಅವಧಿಯ ಸರ್ಕಾರದ ಸಾಧನೆ. ಆದರೆ, ಬಜೆಟ್ ಅಗತ್ಯಗಳಿಗೆ ದೊಡ್ಡ ಆಧಾರವಾಗಬಲ್ಲ ಆದಾಯವು ಜಿಎಸ್‌ಟಿಯಿಂದ ಈ ವರ್ಷ ಬರಲು ಸಾಧ್ಯವೇ ಇಲ್ಲ. ವಿದೇಶಿ ಸಾಲದ ಹೊರೆಯನ್ನು ಗಣನೀಯವಾಗಿ ಇಳಿಸಿದ್ದು ಪ್ರಶಂಸಾರ್ಹವಾದರೂ ಒಟ್ಟು ರಾಷ್ಟ್ರೀಯ ಸಾಲದ ಮೊತ್ತವು ಜಿಡಿಪಿಯ ಶೇ 70ರಷ್ಟು ಇರುವಾಗ, ಆಂತರಿಕ ಮತ್ತು ಬಾಹ್ಯ ಮೂಲಗಳಿಂದ ಸಾಲ ಎತ್ತಿ ಭಾರಿ ಗಾತ್ರದ ಸಾರ್ವಜನಿಕ ವೆಚ್ಚವನ್ನು ಭರಿಸಲು ಇರುವ ಅವಕಾಶ ಕಡಿಮೆ ಇದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರು ವಿಕ್ರಯದಿಂದ ಆದಾಯ ಗಳಿಸುವ ಅವಕಾಶವನ್ನು ನಿರೀಕ್ಷಿತ ಬಜೆಟ್ ಹಿಂದಿನ ಸಾಧನೆಗಳೊಂದಿಗೆ ತಿಳಿಸಬಹುದಾದರೂ, ಅದು ಈಗಿರುವ ಸವಾಲುಗಳನ್ನು ಎದುರಿಸಲು ಬೇಕಾದ ವಿತ್ತೀಯ ಶಕ್ತಿಯನ್ನು ಸರ್ಕಾರಕ್ಕೆ ಒದಗಿಸಲು ಸಾಧ್ಯವಿಲ್ಲ.

ಎನ್.ಕೆ.ಸಿಂಗ್ ಸಮಿತಿ ಮತ್ತು ಮೋದಿ ಸರ್ಕಾರದ ಅಪ್ರತಿಮ ಪ್ರಶಂಸಕ ಅರವಿಂದ ಪನಗರಿಯಾ ಅವರು ವಿತ್ತೀಯ ಕೊರತೆಗೆ ಕಡಿವಾಣ ಹಾಕುವಂತೆ ಇತ್ತೀಚೆಗೆ ನೀಡಿದ ಹಿತನುಡಿಯನ್ನು ಸಚಿವೆ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ರಿಸರ್ವ್ ಬ್ಯಾಂಕಿನ ಬಳಿ ಇರುವ ಮೀಸಲು ನಿಧಿಯ ದೊಡ್ಡ ಭಾಗ ಸರ್ಕಾರಕ್ಕೆ ವರ್ಗಾವಣೆಗೊಳ್ಳುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT