ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರವಾಸ ಮತ್ತು ಪ್ರಯಾಸ!

ಭಕ್ತರೆಲ್ಲರೂ ಸಮಾನರೆಂದು ತಿಳಿದ ದೇವನ ಸನ್ನಿಧಿಯಲ್ಲೂ ಅದೆಂಥ ಭಕ್ತಿಯ ವ್ಯಾಪಾರ, ವ್ಯವಹಾರ!
Last Updated 2 ಜನವರಿ 2023, 19:45 IST
ಅಕ್ಷರ ಗಾತ್ರ

ವರ್ಷದ ಕೊನೆಗೆ ಗೆಳೆಯರೊಂದಿಗೆ ಮೈಸೂರು ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೆ. ಎಲ್ಲಿ ನೋಡಿದರೂ ಜನ ಜನ ಜನ! ಕೋವಿಡ್ ಸಾಂಕ್ರಾಮಿಕದಿಂದ ಹೊದ್ದು ಮಲಗಿದ್ದ ಪ್ರವಾಸೋ ದ್ಯಮವನ್ನು ಬಡಿದೆಬ್ಬಿಸಿದಂತಿತ್ತು ಕಿಕ್ಕಿರಿದ ಜನಸಂದಣಿ. ಜನಸಂಚಾರ ಸ್ತಬ್ಧವಾಗಿದ್ದ ಕಾಲದಲ್ಲಿ ಪ್ರವಾಸೋದ್ಯಮ ಇಲಾಖೆಯ ಬರಿದಾದ ಹಣದ ಖಾತೆ ಈಗ ಸಂಪನ್ನವಾಗಿ ತುಂಬಿರಬಹುದೆಂದು ಖುಷಿಪಡಲು ಏನೂ ಕಾರಣವಿರಲಿಲ್ಲ. ಸರ್ಕಾರದ ಹೆಸರಿನಲ್ಲಿ ನಡೆಯುವ ಸುಲಿಗೆ ಮತ್ತು ಅಲ್ಲಿ ತಾಂಡವವಾಡುವ ಅವ್ಯವಸ್ಥೆ ನೋಡಿದರೆ, ಇದು ಪ್ರವಾಸೋದ್ಯಮವಲ್ಲ ಪ್ರಯಾಸೋದ್ಯಮ ಅಂತಲೇ ತೋರಿತು.

ತಲಕಾಡಿಗೆ ಪ್ರವೇಶಿಸುವ ಆರಂಭದಲ್ಲೇ ತಂಡವೊಂದು ಪ್ರವಾಸಿಗರ ವಾಹನವನ್ನು ತಡೆಯುತ್ತದೆ. ಗ್ರಾಮ ಪ್ರವೇಶಿಸಬೇಕಿದ್ದರೆ ಪಂಚಾಯಿತಿ ನಿಗದಿಪಡಿಸಿದ ಶುಲ್ಕವನ್ನು ಕೊಡಿ ಎಂದು ಕೈಯೊಡ್ಡುತ್ತದೆ. ಅವರು ಕೊಡುವ ಮುದ್ರಿತ ರಸೀದಿ ಸಾಚಾವೋ ಖೊಟ್ಟಿಯೋ ಅಲ್ಲಿರುವ ದೇವರಿಗೇ ಗೊತ್ತು. ಹೀಗೆ ವಸೂಲಿ ಮಾಡಿದ ಹಣವನ್ನು ಪಂಚಾಯಿತಿ ಆ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು ತಾನೆ? ಇಲ್ಲವೇ ಇಲ್ಲ. ಕುಡಿಯುವ ನೀರಿಲ್ಲ, ಸಾರ್ವ
ಜನಿಕರಿಗೆ ಬಯಲೇ ಶೌಚಾಲಯ.

ತಲಕಾಡಿನಿಂದ ಶಿವನಸಮುದ್ರದತ್ತ ಹೊರಟರೆ ಅಲ್ಲೂ ಇದೇ ಗತಿ. ಪಂಚಾಯಿತಿಯ ಕಡೆಯವರೆನಿ
ಸಿಕೊಂಡವರಿಂದ ಸುಲಿಗೆ. ಉತ್ತಮ ರಸ್ತೆಯನ್ನೋ ಶುದ್ಧ ನೀರಿನ ಸರಬರಾಜನ್ನೋ ಅದರಿಂದ ಮಾಡಿದ್ದರೆ ಆಕ್ಷೇಪವಿರಲಿಲ್ಲ. ಸಹಸ್ರ ಸಹಸ್ರ ಪ್ರವಾಸಿಗರು ಬರುತ್ತಾರೆ, ಕುಡಿಯಲು ಶುದ್ಧ ನೀರಿಲ್ಲ, ಕಾಣಲು ಗಗನಚುಕ್ಕಿ, ಭರಚುಕ್ಕಿಯ ನೀರಷ್ಟೇ ಗತಿ. ಮೇಲಿಂದ ನೋಡಿದರೇ ಜಲಪಾತ ಕಾಣಿಸುತ್ತದೆ. ಮೆಟ್ಟಿಲುಗಳ ಮೂಲಕ ಕೆಳಗಿಳಿದು ನೋಡಬೇಕಿದ್ದರೆ ಶುಲ್ಕ ಕೊಡಬೇಕು. ಇಲ್ಲಿ ಆಕಾಶ ನೋಡಲು ದೊಣ್ಣೆಪ್ಪ ನಾಯಕನ ಒಪ್ಪಿಗೆ ಬೇಕೆಂಬ ಗಾದೆ ನೆನಪಾಗುತ್ತದೆ.

ನಂಜನಗೂಡಿನ ದೇವಾಲಯಕ್ಕೆ ಹೋದರೆ ಫಲಕವೊಂದು ಗಮನ ಸೆಳೆಯುತ್ತದೆ, ‘ಮೋಕ್ಷ
ಮಾರ್ಗಕ್ಕೆ ದಾರಿ’. ಹೌದು, ಈ ಫಲಕವಿರುವ ಬೀದಿಯ ಇಕ್ಕಡೆಗಳಲ್ಲೂ ರಾಶಿ ರಾಶಿ ಶೌಚ. ಅಷ್ಟೊಂದು ಜನಸಂದಣಿಯ ಕ್ಷೇತ್ರದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಬೀದಿ ಶೌಚಕ್ಕೆ ಮೋಕ್ಷ ಒದಗಿಸಲು, ದೇವಾಲಯದ ಹಣ ಬಾಚುವ ಮುಜರಾಯಿ ಇಲಾಖೆಗೆ ಸಾಧ್ಯವೇ ಆಗಿಲ್ಲ. ಜನಸಂದಣಿ ಕಂಡರೆ, ಇಡೀ ದಿನ ದೇವರ ದರ್ಶನವಾಗಲಿಕ್ಕಿಲ್ಲ ಎಂಬ ಭಯ ಬೇಕಾಗಿಲ್ಲ. ಭಸ್ಮಧಾರಿಯೊಬ್ಬ ಓಡೋಡಿ ಬರುತ್ತಾನೆ. ಒಬ್ಬರಿಗೆ ನೂರು ರೂಪಾಯಿ ಕೊಟ್ಟರೆ ಶೀಘ್ರ ದೇವರ ದರ್ಶನ ಮಾಡಿಸುವುದಾಗಿ ಹೇಳುತ್ತಾನೆ. ಅನೇಕರು ಅವನಿಗೆ ಹಣ ಕೊಡುತ್ತಾರೆ. ಈ ಮೊತ್ತ ತೆರಲಾಗದೆ ಸರತಿಯಲ್ಲಿ ನಿಂತವರನ್ನು ದೂರ ಸರಿಸುತ್ತ ಶರವೇಗದಿಂದ ಆತ ಕಾಯುವ ಸಂಕಷ್ಟದ ನರಕದ ಹೆಬ್ಬಾಗಿಲುಗಳನ್ನು ದಾಟಿಸಿ ಸಾಕ್ಷಾತ್ ಪರಶಿವನ ಸನ್ನಿಧಿಗೆ ಕರೆದೊಯ್ಯುತ್ತಾನೆ. ಹೀಗೆ ಕೊಡುವ ಹಣಕ್ಕೆ ರಸೀದಿಯೇ ಇಲ್ಲ. ಹಣ ಕೊಡದವರು ಸರತಿ ಸಾಲಿನ ನೂಕಾಟದಲ್ಲಿ ಹೈರಾಣಾಗಿಹೋಗುವ ಕಾಲದಲ್ಲಿ, ಹಣ ಕೊಟ್ಟವ ಹಣದಿಂದ ದೇವರನ್ನೂ ಒಲಿಸಿಕೊಳ್ಳಬಲ್ಲೆ ಎಂಬ ವಿಜಯಗಾಂಭೀರ್ಯದಿಂದ ಹೊರಬರುತ್ತಾನೆ. ಭಕ್ತರೆಲ್ಲರೂ ಸಮಾನರೆಂದು ತಿಳಿದ ದೇವದೇವನ ಸನ್ನಿಧಿಯಲ್ಲೂ ಅದೆಂಥ ಭಕ್ತಿಯ ವ್ಯಾಪಾರ, ವ್ಯವಹಾರ!

ನರಸಿಂಹರಾಜಪುರದ ಹೊಯ್ಸಳ ಶಿಲ್ಪಕಲಾ ಸೌಂದರ್ಯದ ದೇವಾಲಯ ಖಂಡಿತ ವೀಕ್ಷಿಸಲೇಬೇಕಾದ್ದು. ಇಲ್ಲಿ ಪ್ರವಾಸಿಗರ ವಾಹನ ಪುರ ಪ್ರವೇಶಿಸುವಾಗಲೇ ಗಮನ ಸೆಳೆಯುವ ಫಲಕ, ‘ನಿಮ್ಮ ವಾಹನವನ್ನು ಎಲ್ಲಿಯೇ ನಿಲ್ಲಿಸಿದರೂ ಗ್ರಾಮ ಪಂಚಾಯಿತಿಗೆ ₹ 50 ಶುಲ್ಕ ಕೊಡಬೇಕು’. ಸರಿ ಕೊಡೋಣ. ಡಿಸೆಂಬರ್‌ ತಿಂಗಳ ಕೊನೆ. ನಮಗೆ ಬಂದ ರಸೀದಿಯ ಸಂಖ್ಯೆ 124. ಯಾವುದೇ ಸರ್ಕಾರದ ರಸೀದಿಗಳ ಸಂಖ್ಯೆಗಳು ಮುಂದುವರಿಯುವುದು ನಿಯಮ. ಇಡೀ ವರ್ಷದಲ್ಲಿ 124 ವಾಹನಗಳು ಮಾತ್ರ ಬಂದಿರಲು ಸಾಧ್ಯವಿಲ್ಲ, ಈ ಸಂಖ್ಯಾಶಾಸ್ತ್ರದ ಮರ್ಮವೇನೆಂಬುದನ್ನು ದೇವರೇ ಬಲ್ಲ!

ದೇವಾಲಯ ಪ್ರವೇಶಕ್ಕಿಂತ ಬಹುದೂರದಲ್ಲಿ ಬ್ಯಾರಿಕೇಡ್ ಹಾಕಿ ಅಧಿಕಾರಿಗಳು ನಿಲ್ಲುತ್ತಾರೆ. ಇಲ್ಲಿ ತಲೆಗಂದಾಯವನ್ನು ಆನ್‍ಲೈನ್ ಮೂಲಕ ಅವರು ಹೇಳುವ ಖಾತೆಗೆ ರವಾನಿಸಬೇಕು. ಒಬ್ಬರು ಐವರ ತಲೆಗಂದಾಯ ಮಾತ್ರ ಸಲ್ಲಿಸಲು ಅವಕಾಶ. ಮೊಬೈಲಿನಲ್ಲಿ ಹಣ ರವಾನಿಸಲು ತಿಳಿಯದವರಿಗೆ ದೇವಾಲಯ ದರ್ಶನ ಭಾಗ್ಯವಿಲ್ಲ. ಶಾಲೆಗಳಿಂದ ತಂಡತಂಡವಾಗಿ ವಿದ್ಯಾರ್ಥಿಗಳನ್ನು ಕರೆತಂದ ಶಿಕ್ಷಕರಿಗೆ ಐವರಿಗಿಂತ ಹೆಚ್ಚಿನವರ ಶುಲ್ಕ ತುಂಬಿಸಲು ಅವಕಾಶ ಸಿಗಲಿಲ್ಲ. ಆದರೆ ಇಲ್ಲಿರುವ ಅಧಿಕಾರಿಗಳು ಸುಲಿಗೆ ಮಾಡಲಿಲ್ಲ. ಐವರ ಹಣ ಮಾತ್ರ ಹಾಕಿಸಿಕೊಂಡು ಜತೆಗೆ ಬಂದವರನ್ನೆಲ್ಲ ಒಳಗೆ ಬಿಡುತ್ತಿದ್ದರು. ಇದೇ ವ್ಯವಹಾರ ಮುಂದುವರಿದರೆ ಪ್ರವಾಸೋದ್ಯಮ ಇಲಾಖೆಗಾಗುವ ನಷ್ಟದ ಮೊತ್ತ ಸಣ್ಣದೇನಲ್ಲ.

ನಂಜನಗೂಡಿನಿಂದ ಮುಂದೆ ವನ್ಯಮೃಗ ಸಂರಕ್ಷಣಾ ಅರಣ್ಯವಿದೆ. ಮೃಗ ವೀಕ್ಷಣೆಗೆ ಸಾವಿರಾರು ಜನ ಬರುತ್ತಾರೆ. ಅರಣ್ಯ ಅಧಿಕಾರಿಗಳು ಹೇಳುತ್ತಾರೆ, ‘ಇಂದು ಮೃಗಗಳಿಗೆ ಫೀಡಿಂಗ್ ದಿನ. ಅವು ನೋಡೋದಕ್ಕೆ ಸಿಗೋದಿಲ್ಲ’. ಘಾಟಿ ರಸ್ತೆಯ ಬುಡದಲ್ಲಿಯೇ ಫಲಕ ಹಾಕಿ, ಯಾವ ದಿವಸಗಳಲ್ಲಿ ಮೃಗದರ್ಶನಕ್ಕೆ ಅವಕಾಶವಿಲ್ಲ ಎಂಬುದನ್ನು ತಿಳಿಸಿದ್ದರೆ ಜನರ ಸಮಯ, ಹಣ, ಶ್ರಮ ಉಳಿಯುತ್ತಿತ್ತಲ್ಲವೆ!

ಎನ್ನ ಕಿವುಡನ ಮಾಡು, ಎನ್ನ ಕುರುಡನ ಮಾಡು ಎಂದು ವಚನಕಾರರು ಗೋಗರೆದದ್ದು ಈ ಪ್ರವಾಸ ತಾಣಗಳಲ್ಲಿ ನಡೆಯುವ ಅವ್ಯವಹಾರ, ಅಲಕ್ಷ್ಯ, ಅವ್ಯವಸ್ಥೆಯನ್ನು ಕಂಡ ಬಳಿಕ ಅಲ್ಲ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT