ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಗಾಳಿ ವಿದ್ಯುತ್: ಗಾಳಿಗೆ ಗುದ್ದು?

ಪವನ ವಿದ್ಯುತ್‌ ಕ್ಷೇತ್ರದಲ್ಲಿ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ, ಶುದ್ಧ ವಿದ್ಯುತ್‌ ಯೋಜನೆ ಹಳ್ಳ ಹಿಡಿಯದಂತೆ ನೋಡಿಕೊಳ್ಳಬೇಕಾಗಿದೆ
Last Updated 14 ಜೂನ್ 2021, 19:31 IST
ಅಕ್ಷರ ಗಾತ್ರ

ಮುಂಗಾರಿನ ಮಳೆ ಹನಿಗಳ ಜೊತೆ ಬೀಸಿ ಬರುವ ಸ್ವಚ್ಛಂದ ಗಾಳಿಯು ದೇಶದ ಗಾಳಿವಿದ್ಯುತ್ ಗಿರಣಿಗಳಲ್ಲಿ ನವಚೈತನ್ಯ ತುಂಬುತ್ತದೆ. ವಿದ್ಯುತ್ ಕಂಪನಿಗಳ ಮಾಲೀಕರು ಹೆಚ್ಚಿನ ಉತ್ಪಾದನೆಯಾಗುತ್ತದೆಂದು ಗೆಲುವಾಗುತ್ತಾರೆ. ಮಳೆಮೋಡಗಳನ್ನು ಹೊತ್ತು ತರುವ ಗಾಳಿ, ರೈತರಲ್ಲಿ ಭದ್ರತೆಯ ಭಾವ ಮೂಡಿಸುತ್ತದೆ.

ಗಾಳಿ ಹೆಚ್ಚಾದಷ್ಟೂ ಕೊಳಕು ಕಲ್ಲಿದ್ದಲನ್ನು ಸುಡುವುದು ಕಡಿಮೆಯಾಗುತ್ತದೆ ಎಂದು ಲೆಕ್ಕ ಹಾಕುವ ಸರ್ಕಾರಗಳು, ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಇನ್ನೆಷ್ಟು ಹೊಸ ಸ್ಥಾವರಗಳು ಬೇಕು ಎಂಬ ಯೋಜನೆಗಳ ಕಡೆ ಗಮನ ಹರಿಸುತ್ತವೆ. ಭೂಮಿಯ ಬಿಸಿಯನ್ನು ಕಡಿಮೆ ಮಾಡಲು ಅಕ್ಷಯ ಇಂಧನ ಮೂಲಗಳತ್ತ ಗಮನ ಹರಿಸಿರುವ ವಿಶ್ವದ ಪ್ರತಿಯೊಂದು ದೇಶವೂ ಪವನ ವಿದ್ಯುತ್‍ನ ಅನುಕೂಲ ಮತ್ತು ಅನಿವಾರ್ಯದ ಕುರಿತು ಜಾಗೃತಿ ಮೂಡಿಸುವ ‘ವಿಶ್ವಗಾಳಿ ದಿನ’ವನ್ನು ಪ್ರತಿವರ್ಷ ಜೂನ್ 15ರಂದು ಆಚರಿಸುತ್ತದೆ.

ಪ್ಯಾರಿಸ್ ಒಪ್ಪಂದ ನೆನಪಾದಾಗಲೆಲ್ಲ ಅಕ್ಷಯ ಇಂಧನ ಮೂಲಗಳ ಬಗ್ಗೆ ಅಕ್ಕರೆ ಉಕ್ಕುತ್ತದೆ. ಸ್ಥಾಪಿತ ಸಾಮರ್ಥ್ಯ, ಬೇಡಿಕೆ, ಉತ್ಪಾದನೆ, ಅಳವಡಿಸಿಕೊಂಡ ತಂತ್ರಜ್ಞಾನ, ಬೇಕಾದ ಬಂಡವಾಳ, ಉತ್ಪಾದಕ ಕಂಪನಿಗಳ ತಗಾದೆ, ಬಾಕಿ ಇರುವ ಯೋಜನೆಗಳು ಮತ್ತು ಇತರ ದೇಶಗಳ ಸಾಧನೆಯ ವಿಷಯಗಳೆಲ್ಲ ಮುನ್ನೆಲೆಗೆ ಬರುತ್ತವೆ.

ದೇಶದ ವಿದ್ಯುತ್ ಬೇಡಿಕೆ ದಿನೇ ದಿನೇ ಏರುತ್ತಿದೆ. ಎಂಟು ಕೋಟಿ ಜನರ ಮನೆಗಳಿಗಿನ್ನೂ ವಿದ್ಯುತ್ತಿನ ಭಾಗ್ಯ ಸಿಕ್ಕಿಲ್ಲ. ಕ್ಲೀನ್ ಆ್ಯಂಡ್ ಗ್ರೀನ್ ಎನರ್ಜಿ ಎಂದೇ ಪ್ರಸಿದ್ಧಿ ಪಡೆದಿರುವ ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಗೆ ಎಲ್ಲ ಕಡೆ ಒತ್ತು ಸಿಗುತ್ತಿದೆ.

2030ರ ವೇಳೆಗೆ ನಮ್ಮ ಒಟ್ಟು ವಿದ್ಯುತ್ ಉತ್ಪಾದನೆಯ ಶೇ 40ರಷ್ಟು ಭಾಗ ಬಿಸಿಲು ಮತ್ತು ಗಾಳಿಯಿಂದ ಬರಬೇಕಿದೆ. ಸದ್ಯಕ್ಕೆ 37.2 ಗಿಗಾವಾಟ್ ವಿದ್ಯುತ್ ಶಕ್ತಿಯು ಗಾಳಿಯಿಂದ ದೊರಕುತ್ತಿದೆ. ಮುಂದಿನ ವರ್ಷದ ಕೊನೆಯ ವೇಳೆಗೆ ಗಾಳಿಯಿಂದ ಹೆಚ್ಚುವರಿ 60 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ.

ಬೇರೆ ಯಾವುದಕ್ಕೆ ಹೋಲಿಸಿದರೂ ಗಾಳಿ
ವಿದ್ಯುತ್‍ನಿಂದ ಮಾಲಿನ್ಯ ಮತ್ತು ಪರಿಸರದ ಮೇಲಿನ ಒತ್ತಡ ಕಡಿಮೆ. ಖರ್ಚಿನ ವಿಷಯದಲ್ಲೂ ಇದು
ಎಲ್ಲರ ಫೇವರಿಟ್. ಭೂಮಿಯಿಂದ 100 ಮೀಟರ್ ಎತ್ತರದಲ್ಲಿ 302 ಗಿಗಾವಾಟ್‍ನಷ್ಟು ಮತ್ತು 120 ಮೀಟರ್ ಎತ್ತರದಲ್ಲಿ 695 ಗಿಗಾವಾಟ್‍ನಷ್ಟು ಗಾಳಿವಿದ್ಯುತ್ ಉತ್ಪಾದನೆ ನಮ್ಮಲ್ಲಿ ಸಾಧ್ಯವಿದೆ. ಸ್ಥಾವರಗಳು ಎತ್ತರದ ಗುಡ್ಡ ಬೆಟ್ಟಗಳ ಮೇಲೆಯೇ ಇರಬೇಕೆಂದಿಲ್ಲ. 347 ಗಿಗಾವಾಟ್ ಸಾಮರ್ಥ್ಯದ ಘಟಕ ಗಳನ್ನು ಸಾಗುವಳಿ ಭೂಮಿ ಮತ್ತು 340 ಗಿಗಾವಾಟ್‍ ಸಾಮರ್ಥ್ಯದ ಘಟಕಗಳನ್ನು ಬೀಳು ಜಮೀನುಗಳಲ್ಲಿ ಸ್ಥಾಪಿಸಲು ಅವಕಾಶವಿದೆ. ಶೇ 97ರಷ್ಟು ಗಾಳಿವಿದ್ಯುತ್ ಗುಜರಾತ್, ಕರ್ನಾಟಕ, ತಮಿಳುನಾಡು, ಮಹಾ ರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಂದ ದೊರೆಯಲಿದೆ.

ಆದರೆ ಕಳೆದ ಎರಡು ವರ್ಷಗಳಿಂದ ಪವನ ವಿದ್ಯುತ್ ಕ್ಷೇತ್ರ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. 2016- 17ರಲ್ಲಿ 5.5 ಗಿಗಾವಾಟ್ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ತಲಾ ನಾಲ್ಕರಂತೆ ಒಟ್ಟು 8 ಗಿಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪನೆಯ ಗುರಿ ಇತ್ತು. ಸಾಕಾರವಾದದ್ದು ಕೇವಲ 3.4 ಗಿಗಾವಾಟ್. 2019- 20ರಲ್ಲಿ ಕೇವಲ 2.07 ಗಿಗಾವಾಟ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ವರ್ಷದಿಂದ ವರ್ಷಕ್ಕೆ ಕಡಿಮೆಯಾದ ಸ್ಥಾಪನಾ ಸಾಮರ್ಥ್ಯವನ್ನು ಗಮನಿಸಿದ ಪಾರ್ಲಿಮೆಂಟರಿ ಸ್ಟ್ಯಾಂಡಿಂಗ್ ಕಮಿಟಿ, ಇದು ಹೀಗೆಯೇ ಮುಂದುವರಿದರೆ 2022ಕ್ಕೆ 60 ಗಿಗಾವಾಟ್ ಸ್ಥಾಪನೆ ಅಸಾಧ್ಯ ಎಂದಿದೆ. ಬದಲೀ ಇಂಧನ ಮೂಲಗಳಿಗಾಗಿಯೇ ಇರುವ ಕೇಂದ್ರ ಸಚಿವಾಲಯದ ಪ್ರಕಾರ, 13 ಗಿಗಾವಾಟ್ ಸಾಮರ್ಥ್ಯದ ಘಟಕಗಳು ಸ್ಥಾಪನೆಯ ವಿವಿಧ ಹಂತಗಳಲ್ಲಿವೆ. 10 ಗಿಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪನೆಗೆ ಮುಂದಿನ ತಿಂಗಳುಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. ತಜ್ಞ ಸಂಸ್ಥೆ ಕ್ರಿಸಿಲ್‍ನ ಪ್ರಕಾರ, 2022ರ ವೇಳೆಗೆ ನಮ್ಮ ಸ್ಥಾಪನಾ ಸಾಮರ್ಥ್ಯ 45 ಗಿಗಾವಾಟ್ ತಲುಪಬಹುದೆಂಬ ಲೆಕ್ಕವಿದೆ.

ಇತ್ತೀಚೆಗೆ ನಡೆಯುತ್ತಿರುವ ಹರಾಜಿನಲ್ಲಿ ಪಾಲ್ಗೊಳ್ಳಲು ಖಾಸಗಿ ಕಂಪನಿಗಳು ಉತ್ಸಾಹ ತೋರುತ್ತಿಲ್ಲ. ಘಟಕ ಸ್ಥಾಪಿಸಲು ಬೇಕಾದ ಸ್ಥಳ ಸುಲಭವಾಗಿ ದೊರಕದೇ ಇರುವುದು, ಪ್ರಸರಣ ಜಾಲದ ಕೊರತೆ, ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಮುಗ್ಗಟ್ಟು, ಖರೀದಿಯ ನಂತರ ಕಂಪನಿಗಳಿಗೆ ಬಾಕಿ ಪಾವತಿಸದಿರುವುದು ಮುಂತಾದ ಕಾರಣಗಳನ್ನು ಅವು ನೀಡುತ್ತವೆ. 1.2 ಗಿಗಾವಾಟ್ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪನೆಯ ವಿಚಾರದಲ್ಲೂ ಇದೇ ಗತಿಯಾಗಿದೆ. ಹರಾಜು ಪ್ರಕ್ರಿಯೆಯನ್ನು ನಾಲ್ಕು ಬಾರಿ ನಡೆಸಿದರೂ ಯಾವ ಡೆವಲಪರ್‌ಗಳೂ ಖರೀದಿಗೆ ಮನಸ್ಸು ಮಾಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸರ್ಕಾರದ ಶುದ್ಧ ವಿದ್ಯುತ್ ಯೋಜನೆ ಹಳ್ಳ ಹಿಡಿಯುತ್ತದೆ.

ಕಂಪನಿಗಳು ಎದುರಿಸುತ್ತಿರುವ ಸಮಸ್ಯೆ
ಗಳನ್ನು ಶೀಘ್ರವಾಗಿ ಕೊನೆಗಾಣಿಸಿದಲ್ಲಿ ಮಾಲಿನ್ಯರಹಿತ ವಿದ್ಯುತ್ ಉತ್ಪಾದನೆಯಲ್ಲಿ ಯಶಸ್ಸು ಗಳಿಸಬಹುದು.
ಇಲ್ಲವಾದರೆ ಕೊಳಕು ಕಲ್ಲಿದ್ದಲಿಗೇ ತಲೆ ಚಚ್ಚಿಕೊಳ್ಳ
ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT