ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ್ರದರ್ಶನಕ್ಕೆ ಮುಂದಾದ ಸತೀಶ ಜಾರಕಿಹೊಳಿ ಬೆಂಬಲಿಗರು: ಜನಾಗ್ರಹ ಸಮಾವೇಶ

‘ಹೋರಾಟಕ್ಕೆ ಮಣಿದು ಸಚಿವ ಸ್ಥಾನ ಕೊಟ್ಟರೂ ಬೇಡ’
Last Updated 18 ಜೂನ್ 2018, 15:44 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಜೂನ್‌ 19ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಜನಾಗ್ರಹ ಸಮಾವೇಶ’ ಆಯೋಜಿಸಿ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

‘ಜನಪರ ಹಾಗೂ ಪ್ರಬುದ್ಧ ರಾಜಕಾರಣಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಪಾಲಿಸುವಂತೆ ಆಗ್ರಹಿಸಿ ಸಮಾವೇಶ ನಡೆಸಲಾಗುತ್ತಿದೆ. ಸಚಿವ ಸಂಪುಟದಲ್ಲಿ ಕೆಲವು ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆತಿಲ್ಲದಿರುವುದನ್ನು ಖಂಡಿಸಲಾಗುವುದು. ಸರ್ಕಾರವು ಜಾರಿಗೊಳಿಸುವ ಯೋಜನೆಗಳು ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವಂತೆ ಇರಬೇಕು. ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ಸಾಮಾಜಿಕ ನ್ಯಾಯ ಪರಿಪಾಲಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ವೇದಿಕೆಯ ಸಂಚಾಲಕ ಅನಂತ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ವಕೀಲ ಎ.ಕೆ. ಸುಬ್ಬಯ್ಯ, ಪ್ರಾಧ್ಯಾಪಕ ಮಹೇಶ್‌ ಚಂದ್ರಗುರು, ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ಹೋರಾಟಗಾರರಾದ ಮಾವಳ್ಳಿ ಶಂಕರ್‌, ಬಿ.ಕೆ. ಶಿವರಾಮ್‌, ಲಕ್ಷ್ಮಿನಾರಾಯಣ ನಾಗವಾರ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ದಲಿತ, ಹಿಂದುಳಿದ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು, ಜಾರಕಿಹೊಳಿ ಬೆಂಬಲಿಗರು ಸೇರಿ 10ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹೋರಾಟಕ್ಕೆ ಮಣಿದು ಸಚಿವ ಸ್ಥಾನ ಕೊಟ್ಟರೂ ಬೇಡ’

‘ಅಭಿಮಾನಿಗಳು, ಬೆಂಬಲಿಗರು ಹೋರಾಟ ನಡೆಸುತ್ತಿರುವುದಕ್ಕೆ ಮಣಿದು ನನಗೆ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುತ್ತೇನೆ. ನಮ್ಮ ಕೋಟಾ ಮುಗಿದಿದೆ’ ಎಂದು ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

‘ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.

‘ಸಮಾನ ಮನಸ್ಕರು, ಬುದ್ಧಿಜೀವಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಬೆಂಬಲಿಗರು ಸಮಾವೇಶದಲ್ಲಿ ಸೇರಲಿದ್ದಾರೆ. ಅವರು ನನಗೆ ಮತ್ತು ಮೈತ್ರಿ ಸರ್ಕಾರಕ್ಕೆ ಯಾವ ಸಲಹೆಗಳನ್ನು ನೀಡುತ್ತಾರೆ ಕಾದು ನೋಡೋಣ’ ಎಂದರು.

ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಿಂದೆ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡಿಸಲಾಗಿತ್ತು. ಈ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯಾವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಬಜೆಟ್ ಮಂಡಿಸುವುದಕ್ಕೆ ನನ್ನ ಬೆಂಬಲವಿದೆ’ ಎಂದರು.

‘ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಇಲ್ಲವಾದರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಅತೃಪ್ತರ ಸಭೆಗಳನ್ನು ನಡೆಸಬಾರದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸೂಚಿಸಿದ್ದಾರೆ. ಹೀಗಾಗಿ ನಾವು ಸಭೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ಚರ್ಚಿಸುತ್ತಿದ್ದೇವೆ’ ಎಂದು ಹೇಳಿದರು.

‘ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರವಾಗಿದೆಯೇ ಇಲ್ಲವೇ ಎನ್ನುವ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT