ಸೋಮವಾರ, ಮಾರ್ಚ್ 1, 2021
27 °C
ಪ್ರಾಕೃತಿಕ ವಿದ್ಯಮಾನಗಳನ್ನು ಪ್ರಾಕೃತಿಕವಾಗಿಯೇ ನಿರ್ವಚಿಸಬೇಕು

ಖಗೋಳ ಹಬ್ಬವನ್ನು ಸಂಭ್ರಮಿಸೋಣ

ಬಿ.ಎಸ್‌. ಭಗವಾನ್‌ Updated:

ಅಕ್ಷರ ಗಾತ್ರ : | |

Prajavani

ಪ್ರತೀ ವರ್ಷ ಸಂಕ್ರಾಂತಿ ಹಬ್ಬದಂದು, ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಐತಿಹಾಸಿಕ ಗವಿ ಗಂಗಾಧರೇಶ್ವರ ದೇಗುಲದತ್ತಲೇ ಎಲ್ಲರ ಚಿತ್ತ. ಅಲ್ಲೊಂದು ಜಾತ್ರೆಯೇ ಸೇರಿರುತ್ತದೆ. ಅಂದು ಸಂಜೆ ನಿಗದಿತ ಸಮಯಕ್ಕೆ ಸೂರ್ಯನ ಕಿರಣಗಳು ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗದ ಮೇಲೆ ಬೀಳುತ್ತವೆ. ಈ ಖಗೋಳ ವಿದ್ಯಮಾನವು ಸಾಟಿಯಿಲ್ಲದ ಆಕರ್ಷಣೆ.

ಅಧ್ಯಾತ್ಮ- ವಿಜ್ಞಾನ ಸಾಮರಸ್ಯದ ಸಂಭ್ರಮವಾದ್ದರಿಂದ ‘ಸಂಕ್ರಾಂತಿ’ ವಿಶಿಷ್ಟ ಹಬ್ಬ. ಸಂಕ್ರಾಂತಿಯು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸರಿಯುವ ಸಂದರ್ಭವೆಂದು ತಿಳಿಯುತ್ತೇವೆ. ಆದರೆ ಸೂರ್ಯ ಪೂರ್ವದಲ್ಲಿ ಹುಟ್ಟಿದ, ನೆತ್ತಿ ಮೇಲೆ ಬಂದ, ಪಶ್ಚಿಮದಲ್ಲಿ ಮುಳುಗಿದ, ಪಕ್ಕದ ರಾಶಿಗೆ ಬಂದ, ಚಲನಾ ದಿಶೆ ಬದಲಿಸಿದ ಎಂಬಿತ್ಯಾದಿ ಗ್ರಹಿಕೆಗಳು ನೈಜವಲ್ಲ, ಕೇವಲ ತೋರಿಕೆಗಳು. ಭೂಮಿಯೇ ಪಶ್ಚಿಮದಿಂದ ಪೂರ್ವಕ್ಕೆ ಬುಗುರಿಯಂತೆ ತಿರುಗುವುದರಿಂದಾಗಿ ಹಾಗೆ ಭಾಸವಾಗುವುದಷ್ಟೆ.

ರೈಲಿನಲ್ಲಿ ಸಾಗುವ ಪಯಣಿಗನಿಗೆ ವೃಕ್ಷ, ಕಟ್ಟಡ, ಗುಡ್ಡಗಳೇ (ವಿರುದ್ಧ ದಿಕ್ಕಿನಲ್ಲಿ!) ಚಲಿಸುವಂತೆ ತೋರುತ್ತವೆ. ಭೂಮಿಯು ಆವರ್ತಿಸುತ್ತಲೇ ಸೂರ್ಯನನ್ನು ಪಶ್ಚಿಮದಿಂದ ಪೂರ್ವಕ್ಕೆ (ಅಪ್ರದಕ್ಷಿಣೆ) ಸುತ್ತುತ್ತದೆ ಅಥವಾ ಪರಿಭ್ರಮಿಸುತ್ತದೆ. ಅದರ ಪರಿಭ್ರಮಣಾವಧಿಯನ್ನು ಒಂದು ವರ್ಷ ಎಂದು ವ್ಯಾಖ್ಯಾನಿಸಲಾಗುತ್ತದೆ. ಭೂಮಿಯ ಶಿಸ್ತುಬದ್ಧ ದೈನಂದಿನ ಮತ್ತು ವಾರ್ಷಿಕ ಚಲನೆಗಳಿಂದಲೇ ಹಗಲು, ಇರುಳು, ಋತುಗಳು, ಮಳೆ, ಮಾರುತ, ಬೆಳೆ ಎಲ್ಲವೂ.

ವರ್ಷದಲ್ಲಿ ಸೂರ್ಯನು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ... ಹೀಗೆ ಹನ್ನೆರಡು ರಾಶಿಗಳಲ್ಲಿ ತಿಂಗಳಿಗೊಂದರಲ್ಲಿ ತಂಗಿರುವಂತೆ ಗೋಚರಿಸುತ್ತದೆ. ಇದರಂತೆ ಸೂರ್ಯನ ವಾರ್ಷಿಕ ಚಲನಾ ದಿಶೆ ಜೂನ್ 21-22 ಹಾಗೂ ಡಿಸೆಂಬರ್ 21-22ರಂದು ಬದಲಾಗುತ್ತದೆ. ಆ ದಿನಾಂಕಗಳನ್ನು ಆಯನ ಬಿಂದುಗಳೆಂದು ಕರೆಯಲಾಗುತ್ತದೆ. ಅನುಕ್ರಮವಾಗಿ ಆ ದಿನಗಳಂದು ಸೂರ್ಯ ಉತ್ತರದಿಂದ ದಕ್ಷಿಣ, ದಕ್ಷಿಣದಿಂದ ಉತ್ತರಕ್ಕೆ ದಿಕ್ಕು ಬದಲಿಸುವಂತೆ ಭಾಸವಾಗುವುದು.

ಧ್ರುವ ಪ್ರದೇಶಗಳಲ್ಲಿ ವರ್ಷಕ್ಕೆ ಆರು ತಿಂಗಳು ಹಗಲು, ಆರು ತಿಂಗಳು ಇರುಳು ಎಂಬ ನಿಸರ್ಗ ವಿನೋದ. ಒಂದು ಪ್ರದೇಶದಲ್ಲಿ ವರ್ಷದಲ್ಲಿ ಹಗಲು ಕ್ಷೀಣಿಸುತ್ತ ಇರುಳು ಅಧಿಕವಾಗುವುದು. ಇವೆಲ್ಲ ಭೂಮಿಯ ಆವರ್ತನ ಅಕ್ಷ ವಾರೆಯಾಗಿರುವುದರ ಫಲಶ್ರುತಿ. ಅಂದಹಾಗೆ ಸಾಕ್ಷಾತ್ ಸೂರ್ಯನಿಗೂ ಈ ‘ಐಬಿ’ನಿಂದ ಮುಕ್ತಿಯಿಲ್ಲ! 24.45 ಭೂದಿನಗಳಿಗೊಮ್ಮೆ ಆವರ್ತಿಸುವ ಆತನ ವಾಲಿಕೆ 7.5 ಡಿಗ್ರಿಗಳು. ಈ ವಾಲುವಿಕೆ ಒಂದು ಅನನ್ಯ ವರ. ಆರ್ಯಭಟ, ಕೋಪರ್ನಿಕಸ್, ಗೆಲಿಲಿಯೋರಂತಹ ಘಟಾನುಘಟಿ ಖಗೋಳಮತಿಗಳಿಗೂ ಭೂಮಿಯ ‘ತಾಂಡವ ರಿಂಗಣ’ ಗ್ರಹಿಸುವುದು ಸವಾಲೇ ಆಗಿತ್ತು.

ಈಗ ಸಂಕ್ರಾಂತಿ ದಿನ ಸೂರ್ಯನು ಶಿವಲಿಂಗದ ಮೇಲೆ ಕಿರಣಗಳನ್ನು ಸೂಸುವ ನಿಖರತೆಗೆ ಬರೋಣ. ಈ ಕ್ರಿಯೆ ಭೂಮಿಯ ಶಿಸ್ತಿನ ಚಲನೆಯಿಂದಾಗಿಯೇ ಎನ್ನುವುದನ್ನು ನಾವು ಮನಗಾಣಬೇಕು. ಶಾಲೆಯಲ್ಲಿ ಮಕ್ಕಳು ಯಾವಾಗ ಕೊನೆಯ ಬೆಲ್ ಆಗುವುದೋ ಎಂದು ಕಾತರರಾಗಿರುವುದು ಸಹಜ. ಅದಕ್ಕಾಗಿ ಒಂದು ಉಪಾಯ ಹೂಡುತ್ತಾರೆ. ಕಿಟಕಿ, ಬಾಗಿಲು, ಸೂರು ಅಥವಾ ಗವಾಕ್ಷಿ ಮೂಲಕ ಸೂರ್ಯ ರಶ್ಮಿಗಳು ತೂರಿ ಬೆಲ್ ಹೊಡೆಯುವ ಸಮಯಕ್ಕೆ ಸರಿಯಾಗಿ ಗೋಡೆ ಅಥವಾ ನೆಲದ ಮೇಲೆ ಯಾವ ಸ್ಥಳದಲ್ಲಿ ಬೀಳುತ್ತವೆ ಎಂದು ಗುರುತು ಹಾಕಿರುತ್ತಾರೆ. ಗವಿ ಗಂಗಾಧರೇಶ್ವರ ದೇಗುಲದಲ್ಲಿ ಘಟಿಸುವುದು ಪವಾಡ, ಅತಿಮಾನುಷ ಎನ್ನುವುದಕ್ಕಿಂತ ಹೀಗೆ ಪರಿಭಾವಿಸುವುದೇ ಯುಕ್ತ. ದೇಗುಲ ನಿರ್ಮಿಸುವಾಗ ಶಿವಲಿಂಗ ಪ್ರತಿಷ್ಠಾಪಿಸುವ ವೇಳೆಯನ್ನು ಸರಿಯಾಗಿ ಸೂರ್ಯ ಕಿರಣಗಳು ಅದರ ಮೇಲೆ ಬೀಳುವ ಸಮಯಕ್ಕೆ ಹೊಂದಿಸಲಾಗಿದೆ. ಹಾಗಾಗಿ ಇದು ನೋಡಿ ಕಣ್ತುಂಬಿಕೊಳ್ಳಬೇಕಾದ ಪ್ರತೀ ವರ್ಷದ ವಿಸ್ಮಯ. ಈ ವಾಸ್ತವ ಅರಿಯುವುದರಿಂದ ದೇಗುಲದ ಅತಿಶಯವೇನೂ ಹಗುರವಾಗದು. ಏಕೆಂದರೆ ಅಬ್ಬ! ನಮ್ಮನ್ನು ಸಲಹುವ ಭೂಮಿ ಅದೆಷ್ಟು ನಿಯಮಿತವಾಗಿ ತನ್ನ ಚಲನವಲನ ಕಾಪಾಡಿಕೊಂಡಿದೆ ಎಂಬ ಪ್ರಶಂಸೆ ಭೂಮಿಯ ಪಾಲಿಗೆ ಮಾಸದು.

ಅಮೆರಿಕದ ಯುವ ಕಾದಂಬರಿಕಾರ ರೋಮನ್ ಪೇನೆ ‘ವಾಹ್... ಸೂರ್ಯರಶ್ಮಿ! ಭೂಮಿಯಲ್ಲಿ ಲಭ್ಯವಿರುವ ಬಹು ಅನರ್ಘ್ಯ ಬಂಗಾರ’ ಎಂದು ಉದ್ಗರಿಸಿದ್ದಾರೆ. ಮಕರ ಸಂಕ್ರಾಂತಿ ಒಂದು ಸೌರ ಸಂಗತಿ ಎನ್ನುವುದಕ್ಕಿಂತ ಭುವಿಯ ನಿಯಮಿತತನದ ವಾರ್ಷಿಕ ಪ್ರಾತ್ಯಕ್ಷಿಕೆ ಎನ್ನುವುದೇ ಸಮಂಜಸ.

ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡಿದರೆ, ಸಕಲಭಾಗ್ಯವಿಧಾತ ಸೂರ್ಯನ ಬಗ್ಗೆ ಪೂಜ್ಯಭಾವನೆ ಮೂಡುತ್ತದೆ. ಆತನ ಅಗಾಧ ಶರೀರ, ಭುವಿಯ ಸಲಹಲು ಪೇರಿಸಿಕೊಂಡಿರುವ ಇಂಧನ, ಶಕ್ತಿ, ಪ್ರಖರತೆ ಮತ್ತು ಗುರುತ್ವ ಬಲದಿಂದಾಗಿಯೆ ತಾನೆ ಭೂಮಿಯ ಚಲನೆ! ಪ್ರಾಕೃತಿಕ ವಿದ್ಯಮಾನಗಳನ್ನು ಪ್ರಾಕೃತಿಕವಾಗಿಯೇ ನಿರ್ವಚಿಸಬೇಕು.

ವಿಪರ್ಯಾಸವೆಂದರೆ ಸಲ್ಲದ ಭಯ, ಆತಂಕ, ಮೌಢ್ಯದಿಂದ ಶತಮಾನವೇನು, ಸಹಸ್ರಮಾನಕ್ಕೊಮ್ಮೆ ಮಾತ್ರವೇ ಸಂಭವಿಸುವ ಘಟನೆಗಳನ್ನೂ ಆಸ್ವಾದಿಸದೆ ಸ್ವಯಂ ವಂಚಿತರಾಗುತ್ತೇವೆ. ಮನುಷ್ಯನ ಅಸ್ತಿತ್ವವು ಪ್ರಕೃತಿಗೆ ಹೊರತಾಗಿ ಕಲ್ಪಿಸಿಕೊಳ್ಳಲೂ ಅಸಾಧ್ಯ. ಬ್ರಹ್ಮಾಂಡದ ಮಹಾ ಅಂಗಳದಲ್ಲಿ ಬರೀ ಚರಕಾಯಗಳೇ. ಅಂತರಿಕ್ಷ ಯುಗದಲ್ಲಿರುವ ನಾವು ಮತ, ಧರ್ಮ, ಪಂಥ, ಪಂಗಡ, ಪ್ರಾಂತ್ಯದ ಎಲ್ಲೆ ಮೀರಿ ಸಂಕ್ರಾಂತಿಯನ್ನು ಖಗೋಳ ಹಬ್ಬವಾಗಿ ಆಚರಿಸಬೇಕು. ಜಾಗತಿಕವಾಗಿ ಸಡಗರಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.