ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ: ಪುನರ್ವಸತಿಗೆ ಕಂಟಕ

ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿಯಾಗದ ಹೊರತು ಈ ಅನಿಷ್ಟ ಆಚರಣೆ ತೊಲಗುವುದು ಕಷ್ಟಸಾಧ್ಯ
Last Updated 20 ಜನವರಿ 2019, 20:15 IST
ಅಕ್ಷರ ಗಾತ್ರ

ಶತಮಾನಗಳಷ್ಟು ಹಿಂದಿನ ದೇವದಾಸಿ ಪದ್ಧತಿ ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ. ಎರಡು ತಿಂಗಳ ಹಿಂದಷ್ಟೇ ದಾವಣಗೆರೆ ಜಿಲ್ಲೆಯಲ್ಲಿ ಮೂವರು ದೇವದಾಸಿ ಪದ್ಧತಿಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದು ಈ ಅನಿಷ್ಟ ಪದ್ಧತಿ ಚಾಲ್ತಿಯಲ್ಲಿರುವುದಕ್ಕೆ ಸಾಕ್ಷಿ.

ರಾಜ್ಯ ಸರ್ಕಾರ 1982ರಲ್ಲೇ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ, ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದಕ್ಕೆ ಕಾಯ್ದೆಯಲ್ಲಿನ ದೋಷಗಳೇ ಮುಖ್ಯ ಕಾರಣ. ದೇವದಾಸಿ ಪದ್ಧತಿಯ ಫಲಾನುಭವಿಗೆ ಶಿಕ್ಷೆ ವಿಧಿಸಲು ಅವಕಾಶ ಒದಗಿಸದ ಈ ಕಾಯ್ದೆ, ಈ ಪದ್ಧತಿಗೆ ಬಲಿಯಾಗುವ ಮಹಿಳೆ ಮತ್ತು ಆಕೆಯ ಕುಟುಂಬವನ್ನೇ ಗುರಿಯಾಗಿಸು
ತ್ತದೆ. ಮುತ್ತು ಕಟ್ಟುವ ಪದ್ಧತಿಯಲ್ಲಿ ಪ್ರಧಾನ ಪಾತ್ರ ವಹಿಸುವ ದೇವಸ್ಥಾನದ ಪೂಜಾರಿ, ಊರಿನ ಮುಖಂಡರನ್ನು ಹೊಣೆಯಾಗಿಸುವ ಬದಲು, ಅಜ್ಞಾನ ಮತ್ತು ಮೂಢನಂಬಿಕೆಗೆ ಬಲಿಯಾಗಿರುವ ದೇವದಾಸಿ ಕುಟುಂಬವನ್ನು ಶೋಷಕರ ಸ್ಥಾನದಲ್ಲಿ ಇರಿಸಿರುವುದು ಕಾಯ್ದೆಯ ಲೋಪವನ್ನು ಎತ್ತಿಹಿಡಿಯುತ್ತದೆ.

ಈ ಕಾಯ್ದೆಗೆ ತಿದ್ದುಪಡಿಯಾಗದ ಹೊರತು ದೇವದಾಸಿ ಪದ್ಧತಿ ತೊಲಗುವುದು ಅಸಾಧ್ಯ. 1993–94 ಮತ್ತು 2007–08ರಲ್ಲಿ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ 46,660 ದೇವದಾಸಿಯರಿದ್ದಾರೆ. ಆದರೆ, ವಾಸ್ತವವಾಗಿ ಈ ಸಂಖ್ಯೆ ಒಂದು ಲಕ್ಷವನ್ನೂ ಮೀರಿದೆ ಎನ್ನುತ್ತದೆ ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ಅಂಕಿ–ಅಂಶ.

14 ಜಿಲ್ಲೆಗಳಲ್ಲಿ ಜೀವಂತವಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಮಹಿಳಾ ಅಭಿವೃದ್ಧಿ ನಿಗಮ ಹಮ್ಮಿಕೊಂಡಿರುವ ಪುನರ್ವಸತಿ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಾಮಾಜಿಕ ಅನಿಷ್ಟಗಳ ಬಗ್ಗೆ ತಿಳಿವಳಿಕೆ ಇಲ್ಲದ ನಿವೃತ್ತ ನೌಕರರನ್ನು ಅನುಷ್ಠಾನಾಧಿಕಾರಿಗಳನ್ನಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಸೂಕ್ತ ಕಾನೂನು ತರಬೇತಿ ಮತ್ತು ಸಾಮಾಜಿಕ ವ್ಯವಸ್ಥೆಯ ಅರಿವಿಲ್ಲದ ಅಧಿಕಾರಿಗಳಿಂದಾಗಿ ದೇವದಾಸಿಯರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯೇ ಹೆಚ್ಚು. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ನ (ಎನ್‌ಎಲ್‌ಎಸ್‌ಐಯು) ತಳಸಮುದಾಯಗಳ ಅಧ್ಯಯನ ವಿಭಾಗದ ಸಂಶೋ
ಧನೆಯ ಪ್ರಕಾರ, ಶೇ 50ರಷ್ಟು ಅಧಿಕಾರಿಗಳು ದೇವದಾಸಿ ತಾಯಂದಿರನ್ನು ಕನಿಷ್ಠ ಭೇಟಿ ಮಾಡಿ, ಪದ್ಧತಿಯ ನಿಷೇಧ, ಸರ್ಕಾರದ ಯೋಜನೆಗಳ ಕುರಿತು ಅವರೊಂದಿಗೆ ಚರ್ಚಿಸುವ ಕೆಲಸವನ್ನೂ ಮಾಡಿಲ್ಲ.

ಸರ್ಕಾರ ನೀಡುವ ಅಲ್ಪಮೊತ್ತದ ಧನಸಹಾಯದಲ್ಲಿ ದೇವದಾಸಿಯರು ಆರ್ಥಿಕವಾಗಿ ಸಬಲರಾಗುವುದು ಕಷ್ಟ. 45 ವರ್ಷ ದಾಟಿದವರಿಗೆ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಲದು. ಇನ್ನು ಈ ಪದ್ಧತಿಯ ಮೊದಲ ಪೀಳಿಗೆಯ ಮಕ್ಕಳ ಸ್ಥಿತಿಯಂತೂ ದಯನೀಯವಾಗಿದೆ. ದೇವದಾಸಿ ತಾಯಂದಿರು ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಲು ಪರದಾಡುವಂತಾಗಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವೇಳೆ ತಂದೆಯ ಹೆಸರು ಕೇಳಿದಾಗ, ತಾಯಂದಿರು ಮತ್ತು ಮಕ್ಕಳು ಅವಮಾನ ಅನುಭವಿಸುತ್ತಿದ್ದಾರೆ.

ಹಾಗೂ ಹೀಗೂ ಒಂದು ಹಂತದವರೆಗೆ ಶಿಕ್ಷಣ ಪಡೆದರೂ ಈ ಮಕ್ಕಳಿಗೆ ಉನ್ನತ ಶಿಕ್ಷಣವಾಗಲೀ ಅಥವಾ ಉದ್ಯೋಗದ ಖಾತರಿಯಾಗಲೀ ಇಲ್ಲ. ದೇವದಾಸಿಯರಿಗೆ ಹುಟ್ಟಿದ ಹೆಣ್ಣು ಮಕ್ಕಳ ಸ್ಥಿತಿಯಂತೂ ಮತ್ತಷ್ಟು ಶೋಚನೀಯವಾಗಿದೆ. ತಾಯಿಯಂತೆಯೇ ದೇವದಾಸಿಯಾಗಬೇಕು ಎನ್ನುವಂಥ ಸಾಮಾಜಿಕ ಸಂರಚನೆ ಆಕೆಯನ್ನು ಶೋಷಣೆಗೀಡು ಮಾಡುತ್ತಿದೆ. ಇಂಥ ಹೆಣ್ಣು ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ. ಗಂಡು ಮಕ್ಕಳ ಪಾಡೂ ಇದಕ್ಕಿಂತ ಭಿನ್ನವಾಗಿಲ್ಲ. ಅಪ್ಪನ ಹೆಸರು ಹೇಳಲಾಗದೇ, ಒಡಲೊಳಗೆ ನೋವು, ಅವಮಾನದ ಕಿಚ್ಚನ್ನು ಸದಾ ಹೊತ್ತು ತಿರುಗುವ ಈ ಮಕ್ಕಳಿಗೆ ಆತ್ಮ
ವಿಶ್ವಾಸದ ಕೊರತೆ, ಅಭದ್ರತೆ ಜೀವನವಿಡೀ ಕಾಡುತ್ತದೆ.

ದೇವದಾಸಿ ಪದ್ಧತಿಗೆ ಒಳಗಾದವರಿಗೆ ಕನಿಷ್ಠ ಮೊತ್ತದ ಮಾಸಾಶನ ನೀಡಿ ಸರ್ಕಾರ ಜಾಣತನದಿಂದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಪ್ರತಿವರ್ಷವೂ ಬಜೆಟ್‌ನಲ್ಲಿ ಕಣ್ಣೊರೆಸುವ ತಂತ್ರವಾಗಿ ನೂರಿನ್ನೂರು ರೂಪಾಯಿ ಮಾಸಾಶನ ಹೆಚ್ಚಿಸುವ ಬದಲು, ಆಕೆಯ ಕುಟುಂಬಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕಾಗಿದೆ. ಸರ್ಕಾರದ ಸೌಲಭ್ಯಕ್ಕಾಗಿ ಈ ತಾಯಂದಿರು ಎರಡು– ಮೂರು ಇಲಾಖೆಗಳ ಎದುರು ಕೈಯೊಡ್ಡಿ ನಿಲ್ಲುವ ಕೆಲಸಕ್ಕೆ ಇತಿಶ್ರೀ ಹಾಡಬೇಕಾಗಿದೆ. ಈ ಮಹಿಳೆಯರಿಗೆ ಇರುವ ಜಾತಿವಾರು ಸೌಲಭ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ದೀರ್ಘಸಮಯ ತೆಗೆದುಕೊಳ್ಳುತ್ತಿವೆ. ಇದರ ಬದಲು, ಇವರಿಗಾಗಿಯೇ ಪ್ರತ್ಯೇಕ ನಿಗಮ ಸ್ಥಾಪಿಸಿ, ದೇವದಾಸಿ ಪದ್ಧತಿಗೆ ಒಳಗಾದವರನ್ನೇ ಆಯೋಗದ ಮುಖ್ಯ ಸ್ಥಾನದಲ್ಲಿ ಕೂರಿಸಿದಾಗ ಮಾತ್ರ ಈ ಅನಿಷ್ಟ ಪದ್ಧತಿಯನ್ನು ಬೇರುಸಹಿತ ಕಿತ್ತೊಗೆಯಲು ಸಾಧ್ಯವಾಗಬಹುದು.

ದೇವದಾಸಿಯರ ಪುನರ್ವಸತಿಯ ಜತೆಗೆ ಅವರ ಮಕ್ಕಳಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು, ಉದ್ಯೋಗ ಕೌಶಲ ತರಬೇತಿ; ಮೊರಾರ್ಜಿ, ಅಂಬೇಡ್ಕರ್, ನವೋದಯ, ಸೈನಿಕ, ಇಂದಿರಾ ಗಾಂಧಿ ಶಾಲೆಗಳಲ್ಲಿ ಆದ್ಯತೆಯ ಮೇರೆಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಕೆಲಸವಾಗಬೇಕಿದೆ. ಸರ್ಕಾರಿ, ಅರೆಸರ್ಕಾರಿ, ಗುತ್ತಿಗೆ ಆಧಾರದ ಕೆಲಸಗಳಿಗೆ ನೇಮಕ ಮಾಡಿಕೊಳ್ಳುವಾಗ ದೇವದಾಸಿಯರ ಮಕ್ಕಳಿಗೆ ಆದ್ಯತೆ, ಸ್ವ–ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಬೇಕಿದೆ. ಮುಖ್ಯವಾಗಿ, ಈ ತಾಯಂದಿರು ಮತ್ತು ಮಕ್ಕಳ ಬಗ್ಗೆ ಸಮಾಜದಲ್ಲಿ ಅಂಟಿರುವ ‘ಅಸ್ಪೃಶ್ಯತೆ’ ನಿವಾರಣೆಗೆ ಸಮಗ್ರ ಕಾರ್ಯಕ್ರಮ ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT