ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹದಿಂದ ಮಕ್ಕಳನ್ನು ರಕ್ಷಿಸೋಣ

‘ಬಾಲ್ಯವಿವಾಹ ನಿಷೇಧ ಕಾಯ್ದೆ’ ರಾಜ್ಯದಲ್ಲಿ 2007ರ ನವೆಂಬರ್‌ 1ರಿಂದ ಜಾರಿಗೆ ಬಂದಿದೆ. ಈ ಕಾಯ್ದೆ ನಿಜವಾಗಿಯೂ ಸಮಾಜದಲ್ಲಿ ಬದಲಾವಣೆ ತಂದಿದೆಯೇ?
Last Updated 30 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬಾಲ್ಯವಿವಾಹವನ್ನು ತಡೆಗಟ್ಟಲು ಸ್ವಯಂಸೇವಾ ಸಂಸ್ಥೆಗಳು, ಚೈಲ್ಡ್‌ಲೈನ್– 1098 ಇತ್ಯಾದಿ ಹತ್ತು ಹಲವು ಸಂಘಟನೆಗಳು, ಸರ್ಕಾರದ ಇಲಾಖೆಗಳು ಎಷ್ಟೇ ಪ್ರಯತ್ನಪಟ್ಟರೂ ಅವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಬಾಲ್ಯವಿವಾಹ ತಡೆಗೆ ಪ್ರಬಲ ಕಾನೂನು ರೂಪಿಸಲಾಗಿದೆ. ಎಳೆಯ ಮಕ್ಕಳ ಮದುವೆ ಮಾಡಿಸುವವರಿಗೆ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಈ ಕಾನೂನು ಸಹ ನಿರೀಕ್ಷಿತ ಮಟ್ಟದಲ್ಲಿ ಸಮಾಜದ ಮೇಲೆ ಪರಿಣಾಮ ಉಂಟುಮಾಡಿಲ್ಲ ಎಂಬುದು ಸತ್ಯ.

‘ಭಾರತದಲ್ಲಿ ನಡೆಯುವ ಪ್ರತಿ ನೂರು ಮದುವೆಗಳಲ್ಲಿ 26.8 ಬಾಲ್ಯವಿವಾಹಗಳಾಗಿರುತ್ತವೆ’ ಎಂದು 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ. ಕರ್ನಾಟಕದಲ್ಲಿ ಅದರ ಪ್ರಮಾಣ ಶೇ 21.4ರಷ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳನ್ನು ನೋಡಿದರೆ, ಕೊಪ್ಪಳ ಜಿಲ್ಲೆಯಲ್ಲಿ ಶೇ 35.9, ಬಾಗಲಕೋಟೆ ಶೇ 35.8, ಯಾದಗಿರಿ ಶೇ 35.5, ಬೆಳಗಾವಿ ಶೇ 34.9, ವಿಜಯಪುರ ಶೇ 35.6 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಶೇ 32.3ರಷ್ಟು ಬಾಲ್ಯವಿವಾಹಗಳಾಗುತ್ತವೆ. ಉಡುಪಿ ಶೇ 6.3, ದಕ್ಷಿಣ ಕನ್ನಡ ಶೇ 8.5, ಶಿವಮೊಗ್ಗ ಶೇ 11.6, ಕೊಡಗು ಶೇ 11.7, ಹಾಸನ ಜಿಲ್ಲೆ ಶೇ 14.8 ಮತ್ತು ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ 14.9ರಷ್ಟಿದೆ. ಅತಿ ಹೆಚ್ಚು ಬಾಲ್ಯವಿವಾಹಗಳಾಗುತ್ತಿದ್ದ ಜಿಲ್ಲೆಗಳಲ್ಲಿ ಈಚಿನ ಒಂದೆರಡು ದಶಕಗಳಲ್ಲಿ ಅದರ ಪ್ರಮಾಣ ಶೇ 50ರಷ್ಟು ತಗ್ಗಿರುವುದು ಪ್ರಶಂಸನೀಯ.

‘ಬಾಲ್ಯವಿವಾಹ ನಿಷೇಧ ಕಾಯ್ದೆ– 2006’ ಜಾರಿಗೆ ಬಂದದ್ದು 2007ರ ನವೆಂಬರ್‌ 1ರಿಂದ. 2016ರಲ್ಲಿ ಈ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಕಾಯ್ದೆಯ ಕೆಲವು ಪ್ರಮುಖ ಅಂಶಗಳು ಇಂತಿವೆ:

18 ವರ್ಷದೊಳಗಿನ ಹೆಣ್ಣಮಕ್ಕಳಿಗೆ ಮತ್ತು 21 ವರ್ಷದೊಳಗಿನ ಗಂಡುಮಕ್ಕಳಿಗೆ ವಿವಾಹ ನಿಷೇಧಿಸಲಾಗಿದೆ. ಬಾಲ್ಯವಿವಾಹಗಳನ್ನು ತಡೆಗಟ್ಟಲು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಬಹುದು; ಬಾಲ್ಯವಿವಾಹಗಳನ್ನು ತಡೆಯಲೆಂದೇ ಸರ್ಕಾರವು ‘ಬಾಲ್ಯವಿವಾಹ ನಿಷೇಧಾಧಿಕಾರಿ’ಗಳನ್ನು ನೇಮಿಸಬೇಕು; ಬಾಲಕಿ–ಬಾಲಕರನ್ನು ವಿವಾಹವಾದ ವಯಸ್ಕರು, ಬಾಲ್ಯವಿವಾಹ ಏರ್ಪಡಿಸಿದ
ವರು, ಅದಕ್ಕೆ ಸಹಾಯ ಮಾಡಿದವರು ಮತ್ತು ಮದುವೆಯಲ್ಲಿ ಭಾಗವಹಿಸಿದವರು ಹೀಗೆ ಎಲ್ಲರಿಗೂ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ.

18 ವರ್ಷದೊಳಗಿನ ಹೆಣ್ಣು ಮಗು ತನಗೆ ಈ ಮದುವೆ ಬೇಡವೆಂದರೆ ಅವಳಿಗೆ 20 ವರ್ಷವಾಗುವುದರೊಳಗೆ ಮದುವೆಯಿಂದ ಹೊರಬರಲು ನ್ಯಾಯಾಲಯದ ಆದೇಶ ಪಡೆಯಬಹುದು; ಅವಳಿಗೆ ಮತ್ತು ಅವಳ ಮಕ್ಕಳಿಗೆ (ಆಗಿದ್ದರೆ) ಗಂಡನ ಮನೆಯವರಿಂದ ಪರಿಹಾರ ಪಡೆಯಬಹುದು ಮತ್ತು ಎಲ್ಲ ಬಾಲ್ಯವಿವಾಹ ಪ್ರಕರಣಗಳನ್ನು ಮಾಹಿತಿ ದೊರೆತ ಕೂಡಲೇ ಪೊಲೀಸರು ವಿಚಾರಣಾರ್ಹ ಮತ್ತು ಜಾಮೀನುರಹಿತ ಅಪರಾಧಗಳೆಂದು ಪರಿಗಣಿಸಿ ತಾವೇ
ತಾವಾಗಿ ಕ್ರಮ ಕೈಗೊಳ್ಳಬೇಕು.

ಒಮ್ಮೆ ಮದುವೆ ನಡೆದುಹೋದರೆ ಆಮೇಲೆ ಯಾರಿಂದಲೂ ಏನೂ ಮಾಡಲಾಗದು ಎನ್ನುವ ಭಾವನೆಯಿಂದ ಕದ್ದುಮುಚ್ಚಿಯೋ, ರಾಜಾರೋಷವಾಗಿಯೋ ಈಗಲೂ ಜನ ಬಾಲ್ಯವಿವಾಹಗಳನ್ನು ನಡೆಸುತ್ತಿದ್ದಾರೆ. ಆದರೆ ಎಳೆಯ ವಯಸ್ಸಿನಲ್ಲೇ ವಿವಾಹವಾದ ಹೆಣ್ಣುಮಗು ಮುಂದಿನ ದಿನಗಳಲ್ಲಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ ಎಂಬುದನ್ನು ಮನಗಾಣಬೇಕು.

2018ರಿಂದ ಈಚೆಗೆ ಕರ್ನಾಟಕದಲ್ಲಿ ಬಾಲ್ಯವಿವಾಹವನ್ನು ‘ವಿವಾಹ’ ಎಂದು ಪರಿಗಣಿಸುವುದೇ ಇಲ್ಲ. ಅದು ಅನೂರ್ಜಿತ. ಆದ್ದರಿಂದ ಇಂಥ ವಿವಾಹ ಮಾಡಿಸಿದವರನ್ನು, ಬೆಂಬಲಿಸಿದವರನ್ನು ಬಾಲ್ಯವಿವಾಹ ನಿಷೇಧಾಧಿಕಾರಿಗಳು ಮುಲಾಜಿಲ್ಲದೆ ಬಂಧಿಸಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲೇಬೇಕು. 2018ರಲ್ಲಿ ಮಾಡಿರುವ ಈ ತಿದ್ದುಪಡಿಯು ಹೊರನೋಟಕ್ಕೆ ಕ್ರಾಂತಿ
ಕಾರಕವಾಗಿ ಕಂಡರೂ ಅದರ ಜಾರಿಯ ಕುರಿತು ಇನ್ನೂ ಸ್ಪಷ್ಟತೆ ಬೇಕಿದೆ.

‘18 ವರ್ಷದೊಳಗಿನ ಹೆಂಡತಿಯೊಡನೆ ಲೈಂಗಿಕ ಸಂಬಂಧವೂ ಅತ್ಯಾಚಾರವಾಗುತ್ತದೆ’ ಎಂದು 2017ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದರ ನೇರ ಪರಿಣಾಮ 18 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಮದುವೆಯಾದ, 18 ದಾಟಿದ ಪುರುಷರ ಮೇಲೆ ಆಗುತ್ತದೆ. ಈ ಕೃತ್ಯವನ್ನು ಮಕ್ಕಳ ಮೇಲೆ ಲೈಂಗಿಕ ಅಪರಾಧಗಳ ವಿರುದ್ಧ ರಕ್ಷಣೆ ಕಾಯ್ದೆ– 2012ರ ಜೊತೆಗೆ ನೋಡಬೇಕಿದೆ. ಮಗುವಿನ ಮೇಲೆ ಲೈಂಗಿಕ ಅಪರಾಧ ಆಗಿರುವುದು ತಿಳಿದೂ ದೂರು ಕೊಡದಿರುವುದು ಸಹ ಅಪರಾಧ ಎಂದು ಕಾಯ್ದೆ ಸ್ಪಷ್ಟಪಡಿಸಿದೆ. ಆದ್ದರಿಂದ ಬಾಲ್ಯವಿವಾಹವನ್ನು ತಡೆಯಲು ವಿಫಲವಾಗಿ ಶಿಕ್ಷೆ ಪಡೆಯಲು ಅರ್ಹರಾಗುವವರ ಪರಿಧಿಯಲ್ಲಿ ಇನ್ನೂ ಹಲ
ವರು ಬರುತ್ತಾರೆ (ಪೋಷಕರು, ಸ್ಥಳೀಯ ಬಾಲ್ಯವಿವಾಹ ನಿಷೇಧಾಧಿಕಾರಿಗಳು, ವೈದ್ಯರು, ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ಬಾಲಕಿಗೆ 18 ವರ್ಷ ಆಗಿಹೋಗಿದೆಯೆಂದು ಸುಳ್ಳು ಪ್ರಮಾಣ ಪತ್ರ ನೀಡಿದವರು... ಇತ್ಯಾದಿ).

ಬಾಲ್ಯವಿವಾಹಗಳನ್ನು ನಿಲ್ಲಿಸಲೇಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆ, ಭಾರತ ಸರ್ಕಾರ ಎಲ್ಲರೂ ಒಕ್ಕೊರಲಿನಿಂದ ಹೇಳುತ್ತಿರುವುದರ ಹಿಂದೆ ಮಕ್ಕಳ ಆರೋಗ್ಯದ ಬಗೆಗಿನ ಚಿಂತನೆ ಮಾತ್ರವಲ್ಲದೆ ಒಟ್ಟಾರೆ ಸಾಮಾಜಿಕ ಕಳಕಳಿಯೂ ಇದೆ. ಬಾಲ್ಯವಿವಾಹಗಳು ಬಡತನ, ಅನಕ್ಷರತೆ, ಅಸ್ಥಿರತೆ, ಅನಾರೋಗ್ಯಗಳನ್ನು ಹೆಚ್ಚಿಸುತ್ತವೆ ಎಂಬುದೂ ಅದರ ನಿಷೇಧಕ್ಕೆ ಕಾರಣ.

ಈಗಾಗಲೇ ತಾಯಿಯಾಗಿರುವ ಅಥವಾ ಗರ್ಭಿಣಿಯಾಗಿರುವ, 15 ರಿಂದ 19 ವರ್ಷದೊಳಗಿನ ಹೆಣ್ಣುಮಕ್ಕಳ ಸಂಖ್ಯೆ ದೇಶದಲ್ಲಿ ಶೇ 7.9ರಷ್ಟಿದೆ ಎಂದು 2015–16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಹೇಳಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ 7.8
ರಷ್ಟಿದೆ. ‘ಅಷ್ಟೇ ತಾನೇ, ಬಾಲ್ಯ ವಿವಾಹದಿಂದ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ವಾದಿಸುವವರು ಕೆಲವು ಅಂಶಗಳನ್ನು ತಿಳಿಯಲೇಬೇಕಾಗಿದೆ. ಕರ್ನಾಟಕದಲ್ಲಿ 15 ರಿಂದ 19 ವಯೋಮಾನದ ಶೇ 44.7ರಷ್ಟು ಹೆಣ್ಣಮಕ್ಕಳಲ್ಲಿ ರಕ್ತಹೀನತೆಯಿದೆ.

ಇಂಥವರು ಹೆರುವ ಮಕ್ಕಳು ಮುಂದೆ ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಬದುಕಬೇಕಾಗುತ್ತದೆ. ಆ ಮಕ್ಕಳ ತೂಕ ಕಡಿಮೆ ಇರುತ್ತದೆ, ಮುಂದೆ ಅವು ಆರೋಗ್ಯಕರವಾಗಿ ಬೆಳೆಯುವುದಿಲ್ಲ. ಮೇಲಿಂದ ಮೇಲೆ ಅನಾರೋಗ್ಯಕ್ಕೆ ಈಡಾಗಬಹುದು. ಬಹಳ ಕೆಟ್ಟ ದೈಹಿಕ ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳು, ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಬಹಳ ಕಷ್ಟಪಡಬೇಕಾಗುತ್ತದೆ. ಇದೊಂದು ರಾಷ್ಟ್ರೀಯ ನಷ್ಟವಾಗುತ್ತದೆ.

ಆದ್ದರಿಂದ ಒಟ್ಟಾರೆ ಸಮಾಜವೇ ಒಂದಾಗಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಮುಂದಾಗಬೇಕಾದ್ದು ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT