ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಅತಿಯಾದ ನಿರೀಕ್ಷೆಯ ಭಾರದಲ್ಲಿ ಮಕ್ಕಳು ಹೈರಾಣಾಗಿದ್ದಾರೆ

ಬದಲಾಗಬೇಕಾದವರು ಮಕ್ಕಳಲ್ಲ
Last Updated 19 ಜನವರಿ 2021, 19:30 IST
ಅಕ್ಷರ ಗಾತ್ರ

ಮೊನ್ನೆ ಹೊಸ ಸಂವತ್ಸರದ ಬೆಳಕು ಹರಿಯುತ್ತಿದ್ದಂತೆ ಮನೆಯ ಮಕ್ಕಳ ಮನಸ್ಸಲ್ಲಿ ಏನೋ ಸಂಚಲನ. ಕೊರೊನಾದ ಬಲವಂತದ ರಜಾ ಅವಧಿಯನ್ನು ಕಳೆದು ಹೊರಬೀಳುವ ಕಾತರವದು. ಮಕ್ಕಳೇ ಹಾಗೆ, ಸದಾ ಬಂಧಮುಕ್ತಿಗೆ ಹಂಬಲಿಸುವ ಅವರು ಎಂದಿಗೂ ಉತ್ಸಾಹದ ಬುಗ್ಗೆ.

ಪುಟಾಣಿಗಳ ಪ್ರತೀ ನಡೆಯಲ್ಲಿಯೂ ಕಲಿಕೆಯಿದೆ, ಸ್ವಂತಿಕೆ-ಅನುಕರಣೆಗಳು ಹದವಾಗಿ ಬೆರೆತ ಸೃಜನಶೀಲ ಕಲೆಯಿದೆ. ಯಾವುದೂ ಅವರಿಗೆ ಅಸ್ಪೃಶ್ಯವಲ್ಲ, ಹಿಂಜರಿಕೆಯ ಮಾತಿಲ್ಲ. ಭೇದಭಾವದ ಅರಿವಿಲ್ಲ, ಮೋಸ ಗೊತ್ತಿಲ್ಲ, ಅದಕ್ಕೇ ಅವರು ನಡೆದಾಡುವ ದೇವರು. ಎಲ್ಲದಕ್ಕೂ ಅಲ್ಲಿ ಕ್ಷಮೆ ಇದೆ. ಹಟ-ಸಿಟ್ಟು, ಭಾವಾವೇಶಗಳೂ ಕ್ಷಣಿಕ. ಆವರಾಡುವ ಪ್ರತೀ ಜಗಳದಲ್ಲೂ ಬಾಲ್ಯದ ಹುಡುಗಾಟವಿದೆ, ಬದುಕಿನ ಹುಡುಕಾಟವಿದೆ.

ಮಕ್ಕಳಮಟ್ಟಿಗೆ ಆಟದ ಬಯಲೇ ಅವರ ವಿಶ್ವವಿದ್ಯಾಲಯ, ಅದು ಬೆಳಕಿನೂರು- ಬೆಡಗಿನೂರು, ಗೆಳೆಯರೊಂದಿಗೆ ಅವರದ್ದು ಎಂದಿಗೂ ಮುದ್ದಾದ ಸಂಬಂಧ. ಎಲ್ಲ ಋತುಮಾನ-ಕಾಲಮಾನವನ್ನೂ ಮೀರುವ ಜಾಯಮಾನ ಅವರದ್ದು. ಅಲ್ಲಿ ಗಡಿಯಾರಕ್ಕೂ ಒಂಥರಾ ಅವಸರ. ತಿಳಿಯದೇ ಗಡಿಬಿಡಿಯಲ್ಲಿ ಕಳೆದುಹೋಗುವ ಕಾಲವದು.

ಜಾತಿ-ಧರ್ಮ, ದೇಶ-ಭಾಷೆ, ರೂಪ-ಬಣ್ಣಗಳ ಸೋಂಕಿರದೆ ಜನ್ಮವೆತ್ತುವ ಮಕ್ಕಳೆಲ್ಲರೂ ಕುವೆಂಪು ಕನಸಿನ ‘ವಿಶ್ವಮಾನವರೇ’. ಕ್ರಿಯಾಶೀಲತೆ ಮತ್ತು ಹೃದಯ ವೈಶಾಲ್ಯದಿಂದ ಅದು ದೊಡ್ಡವರಿಗೂ ಮಾದರಿ. ಮನೋವಿಜ್ಞಾನದ ಪ್ರಕಾರ, ಚೈಲ್ಡ್‌ ಈಸ್‌ ದಿ ಫಾದರ್‌ ಆಫ್‌ ಮ್ಯಾನ್‌. ಹಾಗಾಗಿಯೇ ಹಿರಿಯರು ತಾವು ಕಳೆದುಕೊಂಡಿದ್ದನ್ನೆಲ್ಲ ಎಳೆಯರಲ್ಲಿ ಹುಡುಕಾಡುತ್ತಾರೆ. ಬದುಕನ್ನೇನಾದರೂ ಹೊಸದಾಗಿಂದ ಶುರು ಮಾಡುವ ಅವಕಾಶ ಸಿಕ್ಕಲ್ಲಿ ಖಂಡಿತ ದೊಡ್ಡವರೆಲ್ಲ ಬಯಸುವುದು ಅವರವರ ಬಾಲ್ಯವನ್ನೇ.

ಕುಟುಂಬ ಕಿರಿದಾದಷ್ಟೂ ಮಗುವಿನ ಒತ್ತಡಗಳು ಹಿರಿದಾಗುತ್ತಿವೆ. ತುಂಬು ಕುಟುಂಬದಲ್ಲಿ ಮಗು ಸಹಸದಸ್ಯರೊಂದಿಗೆ ಕಲೆತು-ಬೆರೆತು ಕಲಿಯುವುದು ಬಹಳಷ್ಟು. ಮಕ್ಕಳೊಂದಿಗೆ ಆಡುವ, ಬೆರೆಯುವ, ತಿದ್ದುವ, ಅವರಲ್ಲೊಂದು ಭದ್ರತಾ ಭಾವ ಬೆಳೆಸುವ ಅವಕಾಶ ಅಲ್ಲಿರುತ್ತದೆ. ಪಠ್ಯದ ಹಂಗಿರದೆ ಅನುಕರಣೆ-ಅನುಸರಣೆಗಳಿಂದ ತನ್ನ ಪರಿಸರವೇ ಶಾಲೆಯಾಗಿಬಿಡುವ ಸಮಯವದು. ಆದರೆ ಸಹಜತೆಯನ್ನು ನಿರಾಕರಿಸಿ ನಿಯಂತ್ರಿತ ಬೆಳವಣಿಗೆಯನ್ನು ಹಂಬಲಿಸುತ್ತಿರುವ ಪೋಷಕರಿಗೆ ವರ್ಷ ಮೂರು ತುಂಬುವ ಮೊದಲೇ ಹಸುಗೂಸುಗಳನ್ನು ಕಾನ್ವೆಂಟಿನ ನಿರ್ಜೀವ ಕೋಟೆಯೊಳಗೆ ತಳ್ಳಿಬಿಡುವ ಅವಸರ.

ಇತ್ತೀಚೆಗೆ ಮನಸ್ಸು ಅರಳಿಸುವ ರಜೆಯ ಮಜಾದಿಂದಲೂ ವಂಚಿತರಾಗುತ್ತಿರುವ ಮಕ್ಕಳು ಸಹಜಪ್ರಕೃತಿ, ಜೀವಜಂತುಗಳು, ಸಸ್ಯ-ಪ್ರಾಣಿಸಂಕುಲದ ವಿಸ್ಮಯ ಲೋಕದ ಬೆರಗು-ಬಿನ್ನಾಣಗಳಿಗೆ ತೆರೆದುಕೊಳ್ಳಲಾರದೆ ಬಾಲ್ಯದ ಸಂಭ್ರಮವನ್ನೇ ಕಳೆದುಕೊಳ್ಳುವಂತಾಗಿದೆ. ಸಂಜೆವರೆಗಿನ ಶಾಲಾ ಒತ್ತಡವನ್ನು ಹೊತ್ತು ಮನೆ ಸೇರುವ ಮಗುವಿನ ಭಾವನೆಗಳನ್ನು ಆಲಿಸುವ, ತಲೆ ಸವರುವ ಪುರಸತ್ತೇ ಮನೆಗೀಗ ಉಳಿದಿಲ್ಲ.

ಶಾಲಾವಧಿ ಮುಗಿದ ಮೇಲೂ ಮಕ್ಕಳಿಗೆ ತಪ್ಪುತ್ತಿಲ್ಲ ಗೋಳು. ಮನೆಪಾಠ, ಚಿತ್ರಕಲೆ, ನೃತ್ಯ, ಸಂಗೀತ, ಕರಾಟೆ, ಈಜು, ಸ್ಕೇಟಿಂಗ್‍ನಂತಹ ತರತರದ ತರಬೇತಿ. ಪ್ರಸ್ತುತ ಕೊರೊನಾ ಕಾಲದ ಅಗತ್ಯಗಳಾಗಿ ಮಾರ್ಪಟ್ಟ ಆನ್‌ಲೈನ್ ತರಗತಿಗಳಿಗಾಗಿ ಪೋಷಕರೇ ಕೊಟ್ಟುಕೂರಿಸಿದ ಮೊಬೈಲು, ಇಂಟರ್ನೆಟ್‍ಗಳು ನಂತರದಲ್ಲಿ ಉಂಟುಮಾಡಿದ ಅನಗತ್ಯ ಸೆಳೆತದಿಂದ ಮಕ್ಕಳನ್ನು ನಾಜೂಕಾಗಿ ಬಿಡಿಸಿಕೊಳ್ಳುವುದು ಹೆತ್ತವರ ಮುಂದಿರುವ ಸದ್ಯದ ಸವಾಲು.

ಬಹುಮುಖ್ಯವಾಗಿ, ಮೊದಲು ಬದಲಾಗಬೇಕಾಗಿರುವುದು ಹಿರಿಯರೇ ಹೊರತು ಮಕ್ಕಳಲ್ಲ. ಕೈಯಲ್ಲಿ ಮೊಬೈಲು, ಟಿ.ವಿ ರಿಮೋಟ್‍ಗಳನ್ನು ಹಿಡಿದವರಿಗೆ ತಮ್ಮ ಮಕ್ಕಳು ಮಾತ್ರ ಪುಸ್ತಕ ಹಿಡಿದಿರಬೇಕೆಂಬ ಅರ್ಥವಿರದ ಬಯಕೆ! ಮಕ್ಕಳನ್ನು ಬಹುವಾಗಿ ತಟ್ಟುವುದು ಕೇಳುವ ನೀತಿ ಪಾಠಗಳಲ್ಲ. ಹಿರಿಯರು ಕಾರ್ಯ ನಿರ್ವಹಿಸುವ ರೀತಿ. ಖಲೀಲ್ ಗಿಬ್ರಾನ್ ಹೇಳಿದಂತೆ ‘ಪೋಷಕರು ಬಿಲ್ಲುಗಳಾದರೆ ಮಕ್ಕಳು ಬಾಣ. ಬಿಲ್ಲು ಬಾಗಿದಷ್ಟೂ ಬಾಣ ಮುಂದೆ ಹೋಗುತ್ತದೆ’.

ನೋಡಿ-ಮಾಡಿ-ಆಡಿ ಕಲಿಯುವ ಹೊತ್ತಲ್ಲಿ ತಲೆಮೇಲೆ ಪುಸ್ತಕದ ರಾಶಿ ಹೇರಿ, ಅರ್ಥವಾಗದ ಭಾಷೆ- ಬರವಣಿಗೆಗಳನ್ನು ತುರುಕಿ, ಮನಸ್ಸನ್ನು ಮರಗಟ್ಟಿಸುವ ಶಿಕ್ಷಣ ಪದ್ಧತಿಗೆ ಸಮಾಜ ಜೋತು ಬಿದ್ದಿರುವುದು ಈ ಕಾಲದ ದುರಂತ. ಧಾವಂತದ ಬದುಕಲ್ಲಿ ನೀಡುತ್ತಿರುವ ಶಿಕ್ಷಣವೂ ಹೂಡಿಕೆಯಂತಾಗಿರುವ ವಿಚಿತ್ರ ಕಾಲಘಟ್ಟವಿದು. ಇಲ್ಲಿ ಹೋಲಿಕೆ, ಸ್ಪರ್ಧೆ, ಅಂಕ, ಕೀರ್ತಿ, ಹಣ ಗಳಿಕೆಗಳೇ ಯಶಸ್ಸಿನ ಮಾನದಂಡವಾಗುತ್ತಿರುವ ಪರಿಣಾಮ, ಅತಿಯಾದ ನಿರೀಕ್ಷೆಯ ಭಾರ ಹೊರಲಾಗದೇ ಮಕ್ಕಳು ಹೈರಾಣಾಗುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಾಳಿನ ಮಕ್ಕಳೆಲ್ಲಾ ಕೀಲಿ ಕೊಟ್ಟ ರೊಬಾಟ್‍ಗಳಂತಾಗಿ, ಮೆದುಳಷ್ಟೇ ಕ್ರಿಯಾಶೀಲವಾಗಿ ಉಳಿಯುವ ಹೃದಯಹೀನ, ಯಾಂತ್ರಿಕ ಮನಃಸ್ಥಿತಿಯನ್ನು ಎದುರುಗೊಳ್ಳಬೇಕಾದ ಭಯವೂ ಕಾಡುತ್ತದೆ.

ತಾಜಾ ಹರಿಯುವ ನದಿಯಂತೆ ಮಗುವಿನ ಮನಸ್ಸೂ ಒತ್ತಡಮುಕ್ತ ನಿರಾಳ ಬದುಕಿಗೆ ಹಂಬಲಿಸುತ್ತದೆ. ಮಗುವಿಗೆ ಮಗುವಾಗಿರಲು ಬಿಡಬೇಕಿದೆ. ಅತಿಯಾದ ನಿರೀಕ್ಷೆಗಳ ಸಂಕೋಲೆಗಳನ್ನು ಸಡಿಲಿಸಿ, ಒತ್ತಡದ ಮೂಟೆಯನ್ನು ಇಳಿಸಿದರಷ್ಟೇ ಮಗುವಿಗೆ ಅರಿವಿನ ದಾರಿ ತೆರೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT