ಶುಕ್ರವಾರ, ಡಿಸೆಂಬರ್ 6, 2019
21 °C
ಮಕ್ಕಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ ಎಂಬುದನ್ನು ಎಲ್ಲರೂ ಅರಿಯಬೇಕಿದೆ

ಮಕ್ಕಳ ಹಕ್ಕು: ಈಡೇರಿದೆಯೇ ಆಶಯ?

Published:
Updated:
Prajavani

ವಿಶ್ವಸಂಸ್ಥೆಯಿಂದ 1989ರ ನ. 20ರಂದು ಜಾರಿಯಾದ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ (ದಿ ಯುನೈಟೆಡ್‌ ನೇಷನ್ಸ್‌ ಕನ್‌ವೆನ್ಷನ್‌ ಆನ್‌ ದಿ ರೈಟ್ಸ್‌ ಆಫ್‌ ದಿ ಚೈಲ್ಡ್‌– ಯುಎನ್‌ಸಿಆರ್‌ಸಿ) ಇಂದಿಗೆ 30 ವರ್ಷ. ಹಾಗೆಯೇ, ಮಕ್ಕಳ ಹಕ್ಕುಗಳು ಎಂಬ ಪರಿಕಲ್ಪನೆಗೂ 100 ವರ್ಷವಾಗುತ್ತದೆ! ಇವೆರಡೂ ಮೈಲುಗಲ್ಲುಗಳನ್ನು ಇಂದು ನಾವು ಸಂಭ್ರಮದಿಂದ ಸ್ಮರಿಸಿ, ಮಕ್ಕಳ ಹಿತರಕ್ಷಣೆ
ಯಲ್ಲಿ ಈವರೆಗೆ ಆಗಿರುವ ಸಾಧನೆಗಳನ್ನು ಒರೆಗೆ ಹಚ್ಚಿ, ಆಗಬೇಕಿರುವ ಬದಲಾವಣೆಗಳನ್ನು ಕಂಡುಕೊಳ್ಳ
ಬೇಕಿದೆ.

‘ಮಕ್ಕಳ ಹಕ್ಕುಗಳು’ ಎಂಬ ಪದವನ್ನು ಮೊದಲಿಗೆ ಹುಟ್ಟುಹಾಕಿದವರು ಇಂಗ್ಲೆಂಡಿನ ಸಮಾಜ ಸುಧಾರಕಿ
ಯಾಗಿದ್ದ ಎಗ್ಲಾಂಟೈನ್ ಜೆಬ್. ಮಕ್ಕಳ ಹಕ್ಕುಗಳು ಮಾನವ ಹಕ್ಕಿನೊಳಗೇ ಮಿಳಿತವಾಗಿರುವುದರಿಂದ ಅವುಗಳನ್ನು ಪ‍್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬ ಭಾವನೆ ನೆಲೆಯೂರಿದ್ದ ಕಾಲ ಅದು. ಆದರೆ, ಮಕ್ಕಳ ಹಕ್ಕುಗಳನ್ನು ಪ್ರತ್ಯೇಕವಾಗಿಯೇ ನೋಡಬೇಕು ಎಂಬ ಆಶಯದೊಂದಿಗೆ, ಅದಕ್ಕೆ ಒಂದು ವ್ಯಾಖ್ಯಾನವನ್ನೇ ಕೊಟ್ಟವರು ಎಗ್ಲಾಂಟೈನ್.

ಮೊದಲನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಹೀನಾಯ ಪರಿಸ್ಥಿತಿಯು ಎಗ್ಲಾಂಟೈನ್ ಅವರ ಮೇಲೆ ಗಂಭೀರ ಪರಿಣಾಮ ಬೀರಿತು. ಆಗ ಅವರು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ 1919ರಲ್ಲಿ ‘ಸೇವ್ ದ ಚಿಲ್ಡ್ರನ್’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಪ್ರಾರಂಭಿಸಿದರು. ಇವರ ದಿಟ್ಟ, ನಿರಂತರ ಹೋರಾಟವು ಮುಂದೆ ಜಾಗತಿಕ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಘೋಷಣೆಗೆ ದಾರಿ ಮಾಡಿಕೊಟ್ಟಿತು.

ನಂತರದ ವರ್ಷಗಳಲ್ಲಿ ಮಕ್ಕಳ ಹಕ್ಕುಗಳ ಮೇಲಿನ ಜಿನೀವಾ ಘೋಷಣೆಯನ್ನು ಲೀಗ್‌ ಆಫ್‌ ನೇಷನ್ಸ್‌ ಒಪ್ಪಿಕೊಂಡಿತು. ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಬಾಲ್ಯವನ್ನು ‘ವಿಶೇಷ ಆರೈಕೆ ಮತ್ತು ನೆರವು’ ನೀಡಿ ರಕ್ಷಿಸಬೇಕೆಂದು ಸೂಚಿಸಿರುವ ಸಾರ್ವತ್ರಿಕ ‘ಮಾನವ ಹಕ್ಕುಗಳ ಘೋಷಣೆ’ಯನ್ನು ಅನುಮೋದಿಸಿತು. ಪ್ರತಿ ಮಗುವಿಗೂ ಅತ್ಯುತ್ತಮವಾದುದನ್ನು ಕೊಡುವುದು ಮನುಕುಲದ ಕರ್ತವ್ಯ ಎಂದು ಘೋಷಿಸಿ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿತು. ಇದು ನಿರ್ದಿಷ್ಟವಾಗಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ವಿಶೇಷ ರಕ್ಷಣೆಯ ಹಕ್ಕುಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಂತರರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ ಮತ್ತು ಅಂತರರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಒಪ್ಪಂದವನ್ನು ಸಹ ಒಪ್ಪಿಕೊಂಡಿತು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಉದ್ಯೋಗಕ್ಕೆ ಸೇರಲು 18 ವರ್ಷ ದಾಟಿರಬೇಕೆಂಬ ನಿಯಮವನ್ನು ಅಳವಡಿಸಿಕೊಂಡಿತು. ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಕೆಲಸಕ್ಕೆ ಹೋದರೆ ಅವರ ಆರೋಗ್ಯ, ರಕ್ಷಣೆ ಮತ್ತು ನೈತಿಕತೆ ಮೇಲೆ ಉಂಟಾಗಬಹುದಾದ ಹಾನಿಯನ್ನು ತಡೆಯಲು ಮುಂದಾಯಿತು. ವಿಶ್ವಸಂಸ್ಥೆ ಸಾಮಾನ್ಯ ಸಭೆಯು 1979 ಅನ್ನು ಅಂತರರಾಷ್ಟ್ರೀಯ ಮಕ್ಕಳ ವರ್ಷವೆಂದು ಘೋಷಿಸಿ, ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕರಡನ್ನು ತಯಾರಿಸಲು ಚಾಲನೆ ನೀಡಿತು.

ಈ ಎಲ್ಲಾ ಬೆಳವಣಿಗೆಗಳ ಫಲವಾಗಿ ಜಾರಿಗೆ ಬಂದ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಪ್ರಾರಂಭದಲ್ಲಿ 63 ರಾಷ್ಟ್ರಗಳು ಸಹಿ ಹಾಕಿದ್ದವು. ಭಾರತ ಇದಕ್ಕೆ ಸಹಿ ಹಾಕಿದ್ದು 1992ರಲ್ಲಿ. ಅತಿಹೆಚ್ಚು ರಾಷ್ಟ್ರಗಳು ಸಹಿ ಮಾಡಿರುವ ಜಗತ್ತಿನ ಏಕೈಕ ಒಡಂಬಡಿಕೆ ಎಂಬ ಕೀರ್ತಿ ಇದಕ್ಕಿದೆ.

ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲೂ ‘ರಾಷ್ಟ್ರೀಯ ಮಕ್ಕಳ ನೀತಿ’ಯನ್ನು ರೂಪಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಾರಿಯಾಗಿರುವ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಇನ್ನಷ್ಟು ಬಲ ತುಂಬಲಾಗಿದೆ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ, ಬಾಲ ಮತ್ತು ಕಿಶೋರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆ... ಹೀಗೆ ಹಲವು ಕಾಯ್ದೆಗಳು ಮಕ್ಕಳ ರಕ್ಷಣೆಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಷ್ಟಾದರೂ ರಕ್ಷಣೆ ಹಾಗೂ ಪೋಷಣೆಗೆ ಸಂಬಂಧಿಸಿದಂತೆ ಮಕ್ಕಳು ಇನ್ನೂ ಸಂಕಷ್ಟದ ಸ್ಥಿತಿಯಲ್ಲಿಯೇ ಇರುವುದನ್ನು ಕಾಣುತ್ತಿದ್ದೇವೆ. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಮಾರಾಟ ಮತ್ತು ಸಾಗಣೆ, ಅಕ್ರಮ ದತ್ತು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಿಂತಿಲ್ಲ. ಇಂತಹವುಗಳ ನಿಗ್ರಹ ಕಾರ್ಯದಲ್ಲಿ ಸಂಘ ಸಂಸ್ಥೆಗಳಷ್ಟೇ ತೊಡಗಿಸಿಕೊಂಡರೆ ಸಾಲದು, ಸಮುದಾಯದ ಸಹಭಾಗಿತ್ವ ಹಾಗೂ ಸಾರ್ವಜನಿಕರ ಸಹಕಾರ ದೊರಕಿದರೆ ಮಾತ್ರ ಯಶಸ್ಸು ಸಾಧ್ಯ.

ಪೋಷಕರು, ಪಾಲನಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ‘ಮಕ್ಕಳಸ್ನೇಹಿ’ಯಾಗಿ ವರ್ತಿಸಿ ಅವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಂಡರೆ, ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಆಗ ರಾಷ್ಟ್ರ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಮಕ್ಕಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ ಎಂಬುದನ್ನು ಎಲ್ಲರೂ ಅರಿಯಬೇಕಿದೆ.

ಲೇಖಕ: ಮಕ್ಕಳ ಹಕ್ಕುಗಳ ಹೋರಾಟಗಾರ, ಮೈಸೂರು ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ

ಪ್ರತಿಕ್ರಿಯಿಸಿ (+)