ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಕ್ಕಳ ಪಾಲನೆ: ಅರಿಯಿರಿ ಸೂಕ್ಷ್ಮ

ಮಕ್ಕಳ ಪಾಲನೆಗೆ ಸಿದ್ಧ, ಸರಳ ಸೂತ್ರಗಳಿಲ್ಲ. ಮಕ್ಕಳ ಅನನ್ಯತೆಯನ್ನು ಗೌರವಿಸುವ ಮೂಲಕ ಅವರ ಸಹಜ ಬೆಳವಣಿಗೆಗೆ ಅನುವು ಮಾಡಿಕೊಡಬೇಕು
Published 30 ಸೆಪ್ಟೆಂಬರ್ 2023, 0:30 IST
Last Updated 30 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಮಕ್ಕಳ ಹಟಮಾರಿತನಕ್ಕೆ ಮಣಿಯದೆ ಅವರನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಪೋಷಕರಿಗೆ ತಲೆಬಿಸಿ ಸಹಜ. ಮಕ್ಕಳು ಹೀಗೆಯೇ ಇರಬೇಕು ಮತ್ತು ವರ್ತಿಸಬೇಕು ಎಂಬ ಕಾರಣದಿಂದ ಕಠಿಣ ಶಿಸ್ತು ಹೇರುವುದು ಸೂಕ್ತವೇ ಅಥವಾ ಅವರಿಗೆ ಸ್ವಾತಂತ್ರ್ಯ ನೀಡಿ ಮುಕ್ತವಾಗಿ ಬೆಳೆಸುವುದು ಉತ್ತಮವೇ ಎಂಬ ಬಗ್ಗೆ ಪೋಷಕರಿಗೆ ಗೊಂದಲಗಳು ಇರುತ್ತವೆ.

ಮಕ್ಕಳ ಪಾಲನೆಯು ಒಂದು ಕೌಶಲ ಎನ್ನಬಹುದು. ಅದಕ್ಕೆ ಮನೋವೈಜ್ಞಾನಿಕ ತತ್ವ, ಸಿದ್ಧಾಂತಗಳು ನಮಗೆ ಒಂದಷ್ಟು ನೆರವು, ಒಳನೋಟಗಳನ್ನು ನೀಡಬಹುದಾದರೂ ಅವುಗಳ ನೆರವಿನಿಂದಲೇ ಮಕ್ಕಳ ಪಾಲನೆಯಲ್ಲಿ ಪೂರ್ಣ ಯಶ ಕಂಡುಕೊಳ್ಳಲು ಸಾಧ್ಯವಾಗದು. ವೀಣೆಯ ತಂತಿಯನ್ನು ಅತಿಯಾಗಿ ಬಿಗಿ ಮಾಡಿದರೆ ತಂತಿ ಹರಿಯುತ್ತದೆ ಹಾಗೂ ಅತಿ ಸಡಿಲ ಮಾಡಿದರೆ ನಾದ ಬಾರದು. ತಂತಿ ಹದವಾಗಿದ್ದರೆ ವೀಣಾ ನಾದ ಹೊಮ್ಮುವಂತೆ ಮಕ್ಕಳ ಪಾಲನೆಯು ಶಿಸ್ತಿನ ನಿಯಮಗಳ ಹೇರಿಕೆ ಅಥವಾ ಯಾವುದೇ ನಿಯಮಗಳಿಲ್ಲದೆ ಅವರನ್ನು ಅವರಿಷ್ಟಕ್ಕೇ ಬೆಳೆಯುವಂತೆ ಬಿಡುವುದರಿಂದ ಫಲ ನೀಡದು.

ಮಕ್ಕಳನ್ನು ಹೇಗೆ ಪಾಲನೆ ಮಾಡಬೇಕು ಎಂಬ ಬಗ್ಗೆ ಮಗು ಹುಟ್ಟುವುದಕ್ಕೆ ಮುಂಚೆಯೇ ಪೋಷಕರಿಗೆ ತರಬೇತಿ ನೀಡುವ ವ್ಯವಸ್ಥೆ, ಸೌಲಭ್ಯ ಹಾಗೂ ಅನುಕೂಲಗಳು ಪಾಶ್ಚಾತ್ಯ ದೇಶಗಳಲ್ಲಿವೆ. ನಮ್ಮ ದೇಶದಲ್ಲಿ ಕೌಟುಂಬಿಕ ವ್ಯವಸ್ಥೆ ಬಲವಾಗಿರುವ ಕುಟುಂಬಗಳಲ್ಲಿ ಮಕ್ಕಳ ಪಾಲನೆಯ ವಿಷಯದಲ್ಲಿ ಹೆಚ್ಚಿನ ತೊಂದರೆ ಕಾಣಿಸದು. ಈ ವಿಷಯದಲ್ಲಿ ಹೆಚ್ಚು ಅನುಭವ ಇರುವ ಅಜ್ಜ, ಅಜ್ಜಿ ಹಾಗೂ ಕುಟುಂಬದ ಹಿರಿಯರು ಮಕ್ಕಳೊಂದಿಗೆ ವರ್ತಿಸುವಾಗ ಗಮನಿಸಬೇಕಾದ ಸೂಕ್ಷ್ಮಗಳನ್ನು ಪೋಷಕರಿಗೆ ಪರೋಕ್ಷವಾಗಿ ಕಲಿಸುತ್ತಾರೆ.

ಕುಟುಂಬ ಅಥವಾ ಶಾಲಾ ಪರಿಸರದಲ್ಲಿ ಮಕ್ಕಳ ಪಾಲನೆ ಮಾಡುವಲ್ಲಿ ಅಥವಾ ಶಿಕ್ಷಣ ನೀಡುವಲ್ಲಿ ಪ್ರಮುಖವಾಗಿ ನಾಲ್ಕು ಮಾದರಿಗಳನ್ನು ಮನೋವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ‘ಮಕ್ಕಳಿಗೇನೂ ತಿಳಿಯದು, ಈ ಕಾರಣ ಅವರ ಕುರಿತಾದ ಎಲ್ಲ ವಿಷಯಗಳ ಬಗ್ಗೆ ನಾನೇ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇನೆ’ ಎಂಬ ‘ಸರ್ವಾಧಿಕಾರಿ’ ಧೋರಣೆಯ ಪಾಲನಾ ಅಥವಾ ಶಿಕ್ಷಣ ನೀಡುವ ಶೈಲಿಯನ್ನು ಕೆಲವರು ಅನುಸರಿಸುತ್ತಾರೆ. ಈ ವಿಧಾನದಲ್ಲಿ ಮಕ್ಕಳ ಬೇಕು, ಬೇಡಗಳು, ಸಮಸ್ಯೆಗಳನ್ನು ಆಲಿಸುವ ಗೋಜಿಗೇ ಹೋಗುವುದಿಲ್ಲ. ತೀರ್ಮಾನ ಕೈಗೊಳ್ಳುವ ಸಂದರ್ಭಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದೆ ಅವರನ್ನು ಸದಾ ಅಂಕೆಯಲ್ಲಿ ಇಟ್ಟುಕೊಂಡು, ಶಿಕ್ಷೆಯ ಮೂಲಕ ಅವರ ಮೇಲೆ ನಿಯಂತ್ರಣ ಸಾಧಿಸುತ್ತಾರೆ.

ಹೊರನೋಟಕ್ಕೆ ಈ ವಿಧಾನದಲ್ಲಿ ಯಶಸ್ಸು ದೊರಕುತ್ತಿದೆ ಎಂಬ ಭಾವನೆ ಮೂಡಿದಾಗ್ಯೂ ಆಳದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸಿಗೆ ಗಾಸಿಯಾಗಿ, ಪೋಷಕರು ಹಾಗೂ ಶಿಕ್ಷಕರ ಬಗ್ಗೆ ಮನದೊಳಗೆ ದ್ವೇಷ, ಅಸಹನೆಯ ಭಾವನೆಗಳು ಮೊಳೆಯುತ್ತವೆ. ಮಕ್ಕಳಲ್ಲಿ ಅಸಂತೋಷದ ಜೊತೆ ಆಕ್ರಮಣಕಾರಿ ವರ್ತನೆಗಳು ತಲೆದೋರುವುದಲ್ಲದೆ ಭವಿಷ್ಯದಲ್ಲಿ ತಮ್ಮ ಪೋಷಕರಂತೆ ತಾವೂ ಸರ್ವಾಧಿಕಾರಿ ಧೋರಣೆಯ ವ್ಯಕ್ತಿತ್ವ ರೂಢಿಸಿಕೊಳ್ಳುತ್ತಾರೆ.

ಇನ್ನು ಕೆಲ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಯಾವುದೇ ವರ್ತನೆಗೆ ತಲೆಕೆಡಿಸಿಕೊಳ್ಳದೆ ತಮ್ಮಷ್ಟಕ್ಕೇ ತಾವು ಹಾಗೂ ಮಕ್ಕಳ ಪಾಡಿಗೆ ಮಕ್ಕಳು ಎಂಬ ಧೋರಣೆ ಅನುಸರಿಸುವ ಮೂಲಕ ‘ನಿರ್ಲಕ್ಷ್ಯದ ಪಾಲನೆ’ಯ ವಿಧಾನವನ್ನು ಅನುಸರಿಸುತ್ತಾರೆ. ಈ ವಿಧಾನದ ಬಹು ದೊಡ್ಡ ಅಪಾಯವೆಂದರೆ, ಮಕ್ಕಳಿಗೆ ಸರಿ, ತಪ್ಪುಗಳ ವಿವೇಚನೆಯಿಲ್ಲದೆ ತಮಗೆ ಹೇಗೆ ಬೇಕೋ ಹಾಗೆ ಬೆಳೆಯುತ್ತಾ ಹೋಗುತ್ತಾರೆ. ಕೆಲವರು ಉತ್ತಮವಾಗಿ ಬೆಳೆದರೆ, ಇನ್ನು ಕೆಲವರು ಹಾಳಾಗಿಹೋಗುವ ಅಪಾಯವಿರುತ್ತದೆ. ಇಂತಹ ಪಾಲನಾ ಶೈಲಿಯಲ್ಲಿ ಬೆಳೆದ ಮಕ್ಕಳಲ್ಲಿ ಅಶಿಸ್ತು, ಅವಿಧೇಯತೆ ಹೆಚ್ಚಾಗಿ ಕಂಡುಬರುವ ಜೊತೆಗೆ ಶೈಕ್ಷಣಿಕ ಪ್ರಗತಿಯಲ್ಲಿಯೂ ಹಿಂದೆ ಬೀಳುತ್ತಾರೆ.

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುವ ಮತ್ತು ಅವರು ಹೇಳಿದ್ದಕ್ಕೆಲ್ಲಾ ಸರಿ ಎಂದು ಸಮ್ಮತಿಸುವ ಪಾಲನಾ ಶೈಲಿಯನ್ನು ಕೆಲ ಪೋಷಕರು ಹಾಗೂ ಶಿಕ್ಷಕರು ಅನುಸರಿಸುವುದನ್ನು ಕಾಣಬಹುದು. ಮಕ್ಕಳ ಯಾವುದೇ ನಿರ್ಧಾರಗಳಲ್ಲಿ ಪಾಲ್ಗೊಳ್ಳದೆ ಎಲ್ಲದಕ್ಕೂ ಸಮ್ಮತಿ ಸೂಚಿಸುವುದರಿಂದ, ಭವಿಷ್ಯದಲ್ಲಿ ಸಮ್ಮತಿ ದೊರೆಯದ ಸಂದರ್ಭಗಳಲ್ಲಿ ವ್ಯಗ್ರರಾಗಿ, ಅಸಮಾಧಾನಗೊಂಡು, ಆಕ್ರಮಣಶೀಲ ಪ್ರವೃತ್ತಿ ತೋರುತ್ತಾರೆ.

ಈವರೆಗೆ ಚರ್ಚಿಸಿದ ಮೂರೂ ಪಾಲನಾ ಶೈಲಿಗಳ ಬದಲಿಗೆ ಮಕ್ಕಳ ಆಸೆ, ಆಕಾಂಕ್ಷೆಗಳಿಗೆ ಸೂಕ್ಷ್ಮವಾಗಿ ಶಾಂತ ಸ್ವರೂಪದಿಂದ ಸ್ಪಂದಿಸುವ, ಅವರನ್ನು ಸದಾ ಆಲಿಸುವ, ಗಮನ ನೀಡುವ ‘ಅಧಿಕೃತ’ ಪಾಲನಾ ಶೈಲಿಯು ಪರಿಣಾಮಕಾರಿ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಈ ಶೈಲಿಯಲ್ಲಿ ಮಕ್ಕಳ ವರ್ತನೆಗಳಿಗೆ ಸಂಬಂಧಿಸಿದಂತೆ ಸನ್ನಿವೇಶಕ್ಕೆ ತಕ್ಕಂತೆ ಪಾಲಕರು ಅಥವಾ ಶಿಕ್ಷಕರು ತಮ್ಮ ಪ್ರತಿವರ್ತನೆಗಳನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳು ಹೀಗೆ ವರ್ತಿಸಿದರೆ ಒಳಿತು ಎಂಬ ಬಗ್ಗೆ ತಮ್ಮ ನಿರೀಕ್ಷೆಗಳನ್ನು ಅವರಿಗೆ ಮೊದಲೇ ವಿವರಿಸಿರುತ್ತಾರೆ. ಆಕಸ್ಮಿಕವಾಗಿ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಮಕ್ಕಳು ವರ್ತಿಸಿದಾಗ್ಯೂ ಸಹನೆ ಕಳೆದುಕೊಳ್ಳದೆ ಸಮಾಧಾನದ ವರ್ತನೆಯಿಂದ ದುಷ್ಪರಿಣಾಮಗಳನ್ನು ವಿವರಿಸುತ್ತಾ, ನಿರಂತರವಾಗಿ ಖಚಿತ ಮನೋಭಾವದಿಂದ ಶ್ರಮಿಸುತ್ತಾರೆ.

ಸ್ವಂತ ನಿರ್ಧಾರಗಳನ್ನು ಕೈಗೊಳ್ಳಲು ಮಕ್ಕಳಿಗೆ ಸಹಾಯ ಮಾಡುವ ಮೂಲಕ ಅವರ ಸ್ವಂತಿಕೆಗೆ ಬೆಲೆ ನೀಡುತ್ತಾರೆ. ಭಿನ್ನತೆಗಳು ತಲೆದೋರಿದಲ್ಲಿ ಪರಸ್ಪರ ಚರ್ಚಿಸಿ, ಒಮ್ಮತದ ನಿರ್ಧಾರಕ್ಕೆ ಬರುವ ಕೊಡು- ಕೊಳ್ಳುವಿಕೆ ವಿಧಾನ ಅನುಸರಿಸುತ್ತಾರೆ. ಇಂತಹ ಪಾಲನಾ ಶೈಲಿಯಲ್ಲಿ ಬೆಳೆದ ಮಕ್ಕಳು ಆತ್ಮಗೌರವ, ಸ್ವನಿಯಂತ್ರಣ, ಸ್ವಯಂಶಿಸ್ತು, ಸಹಕಾರದ ಗುಣಗಳನ್ನು ಪ್ರದರ್ಶಿಸುವ ಜೊತೆಗೆ ಶೈಕ್ಷಣಿಕವಾಗಿ ಹಾಗೂ ಭವಿಷ್ಯದಲ್ಲಿ ಉತ್ತಮ ಸಾಧನೆಯನ್ನು ತೋರುತ್ತಾರೆ.

ಮಕ್ಕಳ ಪಾಲನೆಗೆ ಸಿದ್ಧ, ಸರಳ ಸೂತ್ರಗಳಿಲ್ಲ. ಅವರ ಅನನ್ಯತೆಯನ್ನು ಗೌರವಿಸುವ ಮೂಲಕ ಅವರ ಸಹಜ ಬೆಳವಣಿಗೆಗೆ ಅನುವು ಮಾಡಿಕೊಡುವ ಜೊತೆಗೆ ಸನ್ನಿವೇಶಗಳಿಗೆ ತಕ್ಕಂತೆ ಸ್ಪಂದಿಸುವ ಪಾಲನಾ ಶೈಲಿಯನ್ನು ಅನುಸರಿಸುವುದು ಸೂಕ್ತವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT