ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ನಿಪುಣ’ರಾಗಲು ಮೋಜಿನ ಕಲಿಕೆ

ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದಕ್ಕೆ ಮನೋವೈಜ್ಞಾನಿಕ ಹಾಗೂ ಶೈಕ್ಷಣಿಕ ಹಿನ್ನೆಲೆಗಳಿಂದ ಕಾರಣಗಳನ್ನು ಕಂಡುಕೊಳ್ಳಬೇಕು
Last Updated 3 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ನನ್ನ ಆತ್ಮೀಯ ಮಿತ್ರರೊಬ್ಬರಿಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಿದ್ದು ಎರಡನೇ ತರಗತಿ ಓದುತ್ತಿರುವ ಅವರ ಮಗಳು. ಸದಾ ಲವಲವಿಕೆಯಿಂದ ಹರಟುವ ಅವಳೊಂದಿಗೆ ಮಾತನಾಡುವುದು ನನಗೆ ಖುಷಿಯ ವಿಷಯ. ಅವಳ ಅಪ್ಪ, ಅಮ್ಮ ಹಾಗೂ ಕುಟುಂಬದವರ ಬಗ್ಗೆ, ಗೆಳೆಯ ಗೆಳತಿಯರು, ಆಟ, ಚಟುವಟಿಕೆ, ಶಾಲೆ, ಓದಿನ ಬಗ್ಗೆ ವಿಚಾರಿಸಿದೆ. ಬೇರೆಲ್ಲ ವಿಷಯಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ ಅವಳು ಶಾಲೆ, ಶಿಕ್ಷಕರು, ಪಠ್ಯದ ಚಟುವಟಿಕೆಗಳ ಬಗ್ಗೆ ಸ್ವಲ್ಪ ಕಳೆಗುಂದಿದಂತೆ ಮಾತನಾಡಿದಳೆನಿಸಿತು. ಈ ಹಿಂದೆ ಈ ವಿಷಯಗಳ ಬಗ್ಗೆ ಉತ್ಸಾಹದ ಬುಗ್ಗೆಯಂತೆ ಮಾತನಾಡಿದ್ದನ್ನು ನೆನಪಿಸಿಕೊಂಡೆ. ನಂತರ ನನ್ನ ಮಿತ್ರನಿಂದ ಇದಕ್ಕೆ ಕಾರಣ ತಿಳಿಯಿತು.

ಇತ್ತೀಚೆಗೆ ಯಾಕೋ ಅವಳು ಮುಂಚಿನಂತೆ ಸರಿಯಾಗಿ ಓದುತ್ತಿಲ್ಲ. ಪುಸ್ತಕ ಹಿಡಿಯಲು ಬೇಸರಿಸುತ್ತಾಳೆ. ಬರೆಯಲು ತೊಡಗಿಸಿದರೆ ‘ಏಕೆ ಬರೆಯಬೇಕು’ ಎಂದು ಪ್ರಶ್ನಿಸುತ್ತಾಳೆ ಎಂದು ಮಿತ್ರ ಅಲವತ್ತುಕೊಂಡ. ಜೊತೆಗೆ ‘ನಿನ್ನ ಬಳಿಗೆ ಅವಳನ್ನು ಸಮಾಲೋಚನೆಗೆ ಕರೆದುಕೊಂಡು ಬರಬೇಕೆಂದಿದ್ದೆ, ನೀನೇ ಕರೆ ಮಾಡಿದ್ದು ಚೆನ್ನಾಯಿತು’ ಎಂದೂ ಸೇರಿಸಿದ. ಅವಳಲ್ಲಿ ಓದು, ಬರಹಗಳೆಡೆ ಆಸಕ್ತಿ ಏಕೆ ಕಡಿಮೆಯಾಗಿರಬಹುದು,ಆಸಕ್ತಿ ಬರುವಂತೆ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಅವನೊಂದಿಗೆ ಚರ್ಚಿಸಿದೆ. ‘ಇಂತಹ ಸಂದರ್ಭದಲ್ಲಿ ಪ್ರಾಥಮಿಕವಾಗಿ ಸಮಾಲೋಚನೆ ಬೇಕಿರುವುದು ಪೋಷಕರಿಗೆ’ ಎಂದು ತಿಳಿಸಿದೆ.

ಹೆಚ್ಚಿನ ಮಕ್ಕಳು ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಪ್ಲೇ ಹೋಮ್, ಎಲ್‌ಕೆಜಿ, ಯುಕೆಜಿ ಅಥವಾ ಅಂಗನವಾಡಿಗಳಲ್ಲಿದ್ದಾಗ ಆರಂಭಿಸುತ್ತಾರೆ. ಅಲ್ಲಿ ಆರಂಭದಲ್ಲಿ ಪದ್ಯ, ಹಾಡು, ಆಟ, ಚಟುವಟಿಕೆಗಳ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಕಲಿಸುತ್ತಾರೆ. ಪ್ರಾಣಿ, ಪಕ್ಷಿ, ವಸ್ತುಗಳಿಗೆ ಜೋಡಿಸಿಕೊಂಡು ಅಕ್ಷರಗಳು, ಸರಳ ಪದ, ವಾಕ್ಯಗಳನ್ನು ಪರಿಚಯಿಸಲಾಗುತ್ತದೆ. ಜೊತೆಗೆ ಬರವಣಿಗೆಯ ಅಭ್ಯಾಸ ಆರಂಭಿಸಿ, ಅಂಕಿ-ಸಂಖ್ಯೆಗಳ ಜ್ಞಾನ, ಲೆಕ್ಕಾಚಾರ ಕೌಶಲಗಳನ್ನು ಕಲಿಸಲಾಗುತ್ತದೆ. ಆರಂಭದಲ್ಲಿ ಕಲಿಕಾ ಚಟುವಟಿಕೆಗಳು ಮೂರ್ತ
ಸ್ವರೂಪದಲ್ಲಿದ್ದಾಗ ಹೆಚ್ಚಿನ ಮಕ್ಕಳು ಕಲಿಕೆಯಲ್ಲಿ ಆಸಕ್ತಿ, ಉತ್ಸಾಹ ತೋರ್ಪಡಿಸುತ್ತಾರೆ. ಕಲಿಕಾ ಚಟುವಟಿಕೆಗಳು ಅಮೂರ್ತ ಸ್ವರೂಪದೆಡೆಗೆ ಸಾಗಿದಾಗ ಕೆಲವು ಮಕ್ಕಳಿಗೆ ಕಲಿಕೆಯು ನಿರಾಸಕ್ತಿ ಎನಿಸಲು ಆರಂಭವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ಹಾಗೂ ಪೋಷಕರು ಮನೋವೈಜ್ಞಾನಿಕ ಹಾಗೂ ಶೈಕ್ಷಣಿಕ ಹಿನ್ನೆಲೆಗಳಿಂದ ಅದಕ್ಕೆ ಕಾರಣಗಳನ್ನು ಕಂಡುಕೊಳ್ಳದೆ ಮಕ್ಕಳನ್ನು ಕಲಿಕೆಗೆ ಒತ್ತಾಯಿಸುವುದು, ಕಠಿಣವಾಗಿ ನಡೆದುಕೊಳ್ಳುತ್ತಾ ಆಗಾಗ್ಗೆ ಶಿಕ್ಷೆ ನೀಡುವುದನ್ನೂ ಮಾಡಿದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹಾಗಾದರೆ ಪರಿಹಾರವೇನು ಎಂಬ ಪ್ರಶ್ನೆ ಸಹಜ.

‘ಮಕ್ಕಳ ಮಿದುಳು ಎಂಬುದು ಒಂದು ಚೀಲದಂತೆ ಹಾಗೂ ಅದರಲ್ಲಿ ಮಾಹಿತಿಯನ್ನು ಸದಾ ಭರ್ತಿ ಮಾಡುತ್ತಿರಬೇಕು’ ಎಂಬ ತಪ್ಪು ಕಲ್ಪನೆಗಳಿಂದ ಪೋಷಕರು ಹಾಗೂ ಶಿಕ್ಷಕರು ಹೊರಬರಬೇಕು. ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಆಕರ್ಷಣೀಯಗೊಳಿಸಬೇಕು. ಇದಕ್ಕೆ ಅಗತ್ಯವಾದ ಕಲಿಕಾ ಸಂಪನ್ಮೂಲಗಳನ್ನು ಕತೆ, ಕಾಮಿಕ್ ಪುಸ್ತಕಗಳು, ಚಟುವಟಿಕೆಯ ಹಾಳೆಗಳು, ಸಾಮಗ್ರಿಗಳ ರೂಪದಲ್ಲಿ ಸಂಗ್ರಹಿಸಬೇಕು ಅಥವಾ ರೂಪಿಸಬೇಕು. ಅವುಗಳನ್ನು ಬಳಸಿ ಕಲಿಕೆಯನ್ನು ಸಂತಸ, ಮೋಜಿನಿಂದ ಕೂಡಿರುವಂತೆ ಮಾಡಬೇಕು.

ಕೋವಿಡ್ ಸನ್ನಿವೇಶದಲ್ಲಿ ಶಿಕ್ಷಕರೊಂದಿಗೆ ಮಕ್ಕಳ ನೇರ ಮುಖಾಮುಖಿ ಸಾಧ್ಯವಾಗದೆ ಇರುವುದು, ಇತರ ಮಕ್ಕಳೊಂದಿಗೆ ಬೆರೆತು, ಕಲಿಕಾ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇರುವ ಕಾರಣ ಅವರಲ್ಲಿ ಕಲಿಕೆಯಲ್ಲಿ ನಿರಾಸಕ್ತಿಯ ಭಾವ ಹೆಚ್ಚಾಗಿರುವ ಸಂಭವ ಇರುತ್ತದೆ. ಶಾಲೆಗಳು ಪುನರಾರಂಭಗೊಂಡಿದ್ದರೂ ನಗರಗಳಲ್ಲಿನ ಹೆಚ್ಚಿನ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಇನ್ನೂ ಮನಸ್ಸು ಮಾಡುತ್ತಿಲ್ಲ. ಪೋಷಕರೇ ಶಿಕ್ಷಕರಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಬೇಕಾದ ತಜ್ಞತೆ ರೂಢಿಸಿಕೊಳ್ಳಲು ಅವರಿಗೆ ಸಮಯ, ವ್ಯವಧಾನ ಇಲ್ಲ.

ಮಕ್ಕಳು ಆರಂಭಿಕ ಓದು, ಬರಹ, ಲೆಕ್ಕಾಚಾರಗಳನ್ನು ತಮ್ಮ ಪ್ರಾಥಮಿಕ ತರಗತಿಗಳಲ್ಲಿ ಕರಗತ ಮಾಡಿಕೊಳ್ಳದಿದ್ದಲ್ಲಿ ನಿರಾಸಕ್ತಿಯ ಭಾವವುಂಟಾಗಿ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ಇದು ಅವರಿಗೆ ಶಾಲೆ, ಶಿಕ್ಷಕರು, ಬೋಧನೆಗಳ ಬಗ್ಗೆ ಭಯ, ತಿರಸ್ಕಾರಗಳನ್ನು ಉಂಟುಮಾಡಿ ಅವರು ಶಾಲೆಗೆ ಗೈರುಹಾಜರಾಗುವಂತೆಯೂ ಮಾಡಬಹುದು.

ದೇಶದಲ್ಲಿ ಸುಮಾರು 5 ಕೋಟಿಗೂ ಅಧಿಕ ಮಕ್ಕಳು ಆರಂಭಿಕ ಓದು, ಬರಹ, ಲೆಕ್ಕಾಚಾರಗಳಲ್ಲಿ ಹಿಂದೆ ಉಳಿದಿದ್ದಾರೆಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ– 2020ರ ಶಿಫಾರಸಿನಂತೆ 2026- 27ರೊಳಗೆ ದೇಶದ ಎಲ್ಲಾ ಮಕ್ಕಳು ಮೂಲಭೂತ ಕೌಶಲಗಳನ್ನು ಕರಗತ ಮಾಡಿಕೊಳ್ಳಲು ನಿಪುಣ್ ಭಾರತ್ (NIPUN- National Initiative for Proficiency in Reading with Understanding and Numeracy) ಎಂಬ ರಾಷ್ಟ್ರೀಯ ಮಿಷನ್ ಆರಂಭಿಸಲಾಗಿದೆ. ಇದನ್ನು ಎಲ್ಲ ರಾಜ್ಯಗಳಲ್ಲಿಯೂ ಆರಂಭಿಸಿ, ಕಾಲಮಿತಿಯೊಳಗೆ ಕ್ರಿಯಾ ಯೋಜನೆ ರೂಪಿಸಿ, ಗುರಿ ತಲುಪಲು ಯೋಜಿಸಲಾಗಿದೆ. ಪೋಷಕರು ಹಾಗೂ ಶಿಕ್ಷಕರು ಸಹ ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಲ್ಲಿ ಗುರಿ ತಲುಪಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT