ಅಕ್ಷೀಕುಮಾರ್ ಸಂದರ್ಶನ

ಶನಿವಾರ, ಮೇ 25, 2019
22 °C
ಚುರುಮುರಿ

ಅಕ್ಷೀಕುಮಾರ್ ಸಂದರ್ಶನ

Published:
Updated:
Prajavani

ವಿಶ್ವಗುರುಗಳ ಸಂದರ್ಶನಕ್ಕೆ 5 ವರ್ಷಗಳಿಂದ ಕಾದಿದ್ದ ಪತ್ರಕರ್ತ ಯಂಕ್ಟನಿಗೆ ನಿರಾಶೆಯಾಗಿತ್ತು. ವಿಶ್ವಗುರುಗಳು ಪಟ್ಟಕ್ಕೇರಿದ 5 ವರ್ಷಗಳ ಬಳಿಕ ಏಕೈಕ ಸಂದರ್ಶನವನ್ನು ಚಿತ್ರನಟ ಅಕ್ಷೀಕುಮಾರನಿಗೆ ನೀಡಿದ್ದರು. ಸಂದರ್ಶನ ‘ಬಿಸಿಬಿಸಿ ಚಾನೆಲ್‌’ನಲ್ಲೂ ವಿಶ್ವದಾದ್ಯಂತ ಪ್ರಸಾರವಾಗಿತ್ತು.

ಈಗೇನು ಮಾಡೋದು? ಆ ಸಂದರ್ಶಕನನ್ನೇ ಸಂದರ್ಶಿಸಿದರೆ? ಪತ್ರಿಕೋದ್ಯಮದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಲಿದೆ! ಯಂಕ್ಟ ಕಷ್ಟಪಟ್ಟು ಅಕ್ಷೀಕುಮಾರ್‌ನ ಸಂದರ್ಶನ ಫಿಕ್ಸ್‌ ಮಾಡಿಕೊಂಡ. ಪ್ರಶ್ನೋತ್ತರ ಶುರುವಾಯಿತು.

*ವಿಶ್ವಗುರುಗಳ ಸಂದರ್ಶನ ಪಡೆಯಲು ಯಾವ ಟ್ರಿಕ್‌ ಬಳಸಿದಿರಿ?
ಅಕ್ಷೀ ಅಕ್ಷೀ ಎಂದು ಸೀನಿದ ಮಹಾನಟ, ‘ಸ್ಸಾರಿ, ಬ್ಯಾಡ್‌ಮ್ಯಾನ್‌ ಚಿತ್ರದಲ್ಲಿ ನಟಿಸಿದ ಬಳಿಕ ನೆಗಡಿ ವಿಪರೀತವಾಗಿದೆ, ಏನಂದಿರಿ?’ ಎಂದ.

*ಸಂದರ್ಶನ ಪಡೆಯಲು ಹೇಗೆ ಟ್ರೈ ಮಾಡಿದಿರಿ?
‘ನಾನೆಲ್ಲಿ ಟ್ರೈ ಮಾಡಿದೆ? ನಾನೇ ಇಂಟರ್‌ವ್ಯೂ ಮಾಡಬೇಕೆಂದು ಅವರೇ ಫಿಕ್ಸ್‌ ಮಾಡಿದ್ದರು’.

*ಹೌದಾ! ಸಂದರ್ಶನದಲ್ಲಿ ಪ್ರಶ್ನೆ ಕೇಳಲು ಏನೆಲ್ಲ ಸಿದ್ಧತೆ ಮಾಡಿಕೊಂಡಿರಿ?
ನಾವು ನಟರಲ್ವೆ... ನಿರ್ದೇಶಕರು ಕೊಟ್ಟ ಸ್ಕ್ರಿಪ್ಟ್‌ ಪ್ರಕಾರ ನಟಿಸುತ್ತೇವೆ. ವಿಶ್ವಗುರು ಸೆಕ್ರೆಟರಿ ಪ್ರಶ್ನೆಗಳನ್ನು ಬರೆದುಕೊಟ್ಟಿದ್ದರು. ಓದ್ಕೊಂಡು ಹೋಗಿದ್ದೆ.

*ನೀವು ದೊಡ್ಡ ನಟ. ಒಂದಾದರೂ ಸ್ವಂತದ ಪ್ರಶ್ನೆ ಕೇಳಬಹುದಿತ್ತಲ್ಲ? ಮುಖ್ಯವಾಗಿ ಅವರ ಪತ್ನಿ ಬಗ್ಗೆ ಕೇಳಬೇಕಿತ್ತು?
ನೋಡ್ರೀ, ನಾನು ನಿರ್ದೇಶಕರ ನಟ. ಸ್ಥಳದಲ್ಲೇ ಸ್ಕ್ರಿಪ್ಟ್‌ ಬದಲಾಯಿಸೋದು ನನಗಾಗಲ್ಲ. ನಟನಿಗೆ ಶಿಸ್ತು ಮುಖ್ಯ ಕಣ್ರೀ. ಅಕ್ಷೀ ಅಕ್ಷೀ ಎಂದು ಮತ್ತೆ ಸೀನಿದ ಮಹಾನಟ, ‘ಸ್ಸಾರಿ ಯಂಕ್ಟೇಶ್‌, ಪ್ಯಾಕಪ್‌’ ಎಂದ. ಯಂಕ್ಟ ನಿರಾಶೆಯಿಂದ ಮೇಲೆದ್ದ. ‘ನೀವು ಮಾವಿನಹಣ್ಣು ಹೇಗೆ ತಿನ್ತೀರಿ...’ ಮುಂತಾಗಿ ಹಲವು ಪ್ರಶ್ನೆಗಳು ಉಳಿದೇಹೋದವು! ಆಫೀಸಿಗೆ ಬಂದವನೇ ಖುಷಿಯಿಂದ ಸಂಪಾದಕರ ಕೋಣೆಗೆ ನುಗ್ಗಿದ ಯಂಕ್ಟ. ಸಂಪಾದಕರು ಸಿಟ್ಟಿಗೆದ್ದಿದ್ದರು.

‘ಅಲ್ರೀ, ಸುದ್ದಿ ಬರೆಯುವಾಗ ಮೈಮೇಲೆ ಜ್ಞಾನ ಇರಲ್ವೇನ್ರೀ ನಿಮ್ಗೆ? ಇದೇನು ಬರೆದಿದ್ದೀರಿ ನೋಡಿ’ ಎಂದು ಅವತ್ತಿನ ‘ಘಂಟಾಘೋಷ’ ಪತ್ರಿಕೆಯನ್ನು ಮುಖಕ್ಕೆ ಹಿಡಿದರು. ‘ಬಿಜೆಪಿಗೆ ಸೇರಿದ ಸನ್ನಿ ಡಿಯೋಲ್‌’ ಎಂದಿರಬೇಕಿದ್ದ ಹೆಡ್ಡಿಂಗ್‌ ‘ಬಿಜೆಪಿಗೆ ಸೇರಿದ ಸನ್ನಿ ಲಿಯೋನ್‌’ ಎಂದಾಗಿತ್ತು. ಅಕ್ಷೀ ಅಕ್ಷೀ ಎಂದು ಸೀನತೊಡಗಿದ ಯಂಕ್ಟ!

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 1

  Sad
 • 1

  Frustrated
 • 8

  Angry

Comments:

0 comments

Write the first review for this !