ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೇಶಿಯ ಚೌಕಾಶಿ

Last Updated 23 ಮೇ 2019, 18:30 IST
ಅಕ್ಷರ ಗಾತ್ರ

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿಕ್ಕೇಶಿಯ ಬಾಸ್‍ಗೆ ಡಿಪಾಸಿಟ್ ಹೋಗಿತ್ತು. ಫಲಿತಾಂಶ ಘೋಷಣೆಯ ನಂತರ ಚಿಕ್ಕೇಶಿ ನೇಪಥ್ಯಕ್ಕೆ ಸರಿದಿದ್ದ. ಮಾತಾಡಿಸಿಕೊಂಡು ಬರಲು ಹೋದಾಗ ಕೇಳಿದೆ- ‘ನೀನ್ಯಾಕೆ ಹಿಂಗೆ ತಲೆ ಮೇಲೆ ಕೈಹೊತ್ತು ಕುಳ್ತಿದೀಯೋ? ರಾಮ ರಾಜ್ಯ ಆಳಿದ್ರೂ ನಮ್ಗೆ ರಾಗಿ ಬೀಸೋದು ತಪ್ಪುತ್ತೇನಯ್ಯಾ? ಯಾರು ಸೋತ್ರೂ ಗೆದ್ರೂ ನಮ್ಗೆ ಬರೋದು ಅಷ್ಟರಲ್ಲೇ ಇದೆ... ಅದ್ಸರಿ ನಿಮ್ಮ ಬಾಸು ಕೊನೇ ಗಳಿಗೇಲಿ ನಾಮಿನೇಷನ್ ವಾಪಸ್‌ ತಗೋತಾರೆ ಅನ್ನೋ ಮಾತಿತ್ತಲ್ಲಯ್ಯಾ?’

‘ಹೌದಪ್ಪಾ, ಫಲಿತಾಂಶ ಊಹಿಸಿದ್ದ ಅವ್ರು ವಾಪಸ್‌ ತಗೊಳ್ಳೋಕೆ ತಯಾರಿದ್ರು, ಆದ್ರೆ ಲೆಕ್ಕಾಚಾರ ತಲೆಕೆಳಗಾಯ್ತು’ ಎಂದ. ‘ಅಂದ್ರೆ?! ಸ್ವಲ್ಪ ಬಿಡಿಸಿ ಹೇಳಯ್ಯಾ’ ಎಂದೆ.

‘ಎದುರಾಳಿ ಅಭ್ಯರ್ಥಿ ಲೆಕ್ಕ ಕೊಟ್ರೆ ಮಾಡಿದ ಖರ್ಚು ಕೊಡ್ತೀವಿ, ಮತ್ತೆ ತಮ್ಮ ಪರವಾಗಿ ಪ್ರಚಾರ ಮಾಡ್ಬೇಕು ಅಂದ್ರೆ ಯಾರು ಒಪ್ತಾರೆ ಹೇಳು!’ ಎಂದ.

‘ಆಮೇಲೆ ಏನಾಯ್ತೋ?’

‘ಚೌಕಾಶಿ ವ್ಯವಹಾರ ಫೈನಲ್ ಆಗೋ ಹೊತ್ತಿಗೆ ನಾಮಪತ್ರ ವಾಪಸ್‌ ತಗೊಳ್ಳೋ ಗಡುವು ಮುಗಿದು ಹೋಗಿತ್ತು. ಹಾಗಾಗಿ ಮತಯಂತ್ರದಲ್ಲಿ ನಮ್ಮ ಬಾಸ್ ಹೆಸ್ರು ಉಳ್ಕೊಂಡ್ತು - ಡಿಪಾಸಿಟ್ ಕಳಕೊಂಡ್ರು ಅಂತ ಕೆಟ್ಟ ಹೆಸ್ರು ತಗೊಳ್ಳೋ ಹಾಗಾಯ್ತು!’

‘ಪಾಪ! ನಿಂಗೆ ಭಾರಿ ಲಾಸ್ ಆಗಿರ್ಬೇಕು’ ಎಂದು ಕುಟುಕಿದೆ.

‘ಹಾಗೇನಿಲ್ಲ, ಮೇ 29ಕ್ಕೆ ನಡೆಯೋ ಪಟ್ಟಣ ಪಂಚಾಯ್ತಿ ಎಲೆಕ್ಷನ್ನಲ್ಲಿ ಅದನ್ನ ಸರಿದೂಗಿಸಿ
ಕೊಳ್ತಿದೀನಿ’ ಎಂದ ಖದೀಮ!

‘ಅದು ಹೇಗೋ?’ - ಅಚ್ಚರಿಯಿಂದ ಕೇಳಿದೆ.

‘ನೋಡಿಲ್ಲಿ!’ ಎಂದು ತನ್ನ ವಾರ್ಡಿನ ಮತದಾರರ ಪಟ್ಟಿ ತೋರಿಸಿದ.

‘ಹೆಂಗಸರು, ಗಂಡಸರ ಬೇರೆ ಬೇರೆ ಪಟ್ಟಿಗಳು ಯಾಕೋ?’ ಎಂದೆ

‘ವಸ್ತುರೂಪದ ಕೊಡುಗೆ ಕೊಟ್ಟ ಲೆಕ್ಕ ತೋರಿಸಲು ಒಂದು, ನಗದು ಬಟವಾಡೆಗೆ ಇನ್ನೊಂದು!’ ಎಂದು ಕಣ್ಣು ಮಿಟುಕಿಸಿದ.

‘ಭಲೆ, ಕಿಲಾಡಿ ಕಣಯ್ಯಾ ನೀನು, ನಡಿ, ಎಸ್ಕೇಸಿ ಕೊಡಿಸು’ ಎಂದು ತೋಳಿಗೆ ಕೈಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT