ಆಪರೇಷನ್ ಹಣ್ಣು!

ಗುರುವಾರ , ಜೂಲೈ 18, 2019
26 °C

ಆಪರೇಷನ್ ಹಣ್ಣು!

Published:
Updated:
Prajavani

ಬ್ರೇಕಿಂಗ್ ನ್ಯೂಸ್ ಹುಡುಕಿಕೊಂಡು ಪತ್ರಕರ್ತ ತೆಪರೇಸಿ, ಯಡ್ಯೂರಪ್ಪ ಅವರ ಮನೆಗೆ ಹೋದರೆ ಮನೆಯಲ್ಲಿ ಅವರಿರಲಿಲ್ಲ. ಆದರೆ ಒಳಗಡೆ ಏನೋ ‘ಗಸ ಗಸ... ಸರಕ್ ಸಿರಕ್’ ಶಬ್ದ! ತೆಪರೇಸಿಗೆ ಕುತೂಹಲ. ಮನೆ ಕೆಲಸದವನನ್ನು ಕರೆದು ಕಿವಿಯಲ್ಲಿ ಕೇಳಿದ ‘ಏನದು ಶಬ್ದ?’

ಮನೆ ಕೆಲಸದವ ‘ಸರ್ ಯಾರಿಗೂ ಹೇಳಂಗಿಲ್ಲ. ಆಪರೇಷನ್ ಮಾಡಾಕೆ ಚಾಕು, ಕತ್ತಿ, ಕತ್ತರಿ ಮಸೀತಿದಾರೆ...’ ಎಂದು ಪಿಸುಗುಟ್ಟಿದ.

‘ಅಲ್ಲಯ್ಯ ಒಂದು ವರ್ಷದಿಂದ್ಲೂ ಕತ್ತಿ ಮಸೀತಾನೇ ಇದಾರೆ. ಒಂದೂ ಆಪರೇಷನ್ ಮಾಡ್ಲಿಲ್ಲಪ್ಪ... ಆ ಕತ್ತಿಗಳೆಲ್ಲ ಏನಾದವು?’

‘ಅವೆಲ್ಲ ತುಕ್ಕು ಹಿಡಿದ್ವು ಸಾರ್, ಈಗ ಹೊಸ ಕತ್ತಿ ಮಸೀತಿದಾರೆ. ಯಾವ ಟೈಮಲ್ಲಿ ಎಲ್ಲಿ ಆಪರೇಷನ್ ಆಗುತ್ತೋ ಗೊತ್ತಿಲ್ಲ. ನೀವು ಯಾರಿಗೂ ಹೇಳಬೇಡಿ, ಮೊದ್ಲು ಜಾಗ ಖಾಲಿ ಮಾಡಿ’ ಕೆಲಸದವ ಅವಸರ ಮಾಡಿದ.

ಒಳ್ಳೆ ಬ್ರೇಕಿಂಗ್ ನ್ಯೂಸ್ ಸಿಕ್ತು ಅಂತ ಖುಷಿಯಾದ ತೆಪರೇಸಿ, ಕಾಂಗ್ರೆಸ್ ಅಧ್ಯಕ್ಷರ ಪ್ರತಿಕ್ರಿಯೆಗಾಗಿ ದಿನೇಶ್ ಗುಂಡೂರಾವ್ ಅವರ ಮನೆಗೆ ಹೋದರೆ ಅವರೂ ಮನೆಯಲ್ಲಿರಲಿಲ್ಲ. ಆದ್ರೆ ಅಲ್ಲೂ ಕತ್ತಿ ಮಸೆಯೋ ಶಬ್ದ!

ಅಲ್ಲೂ ಮನೆ ಕೆಲಸದವನನ್ನು ಕರೆದ ತೆಪರೇಸಿ ಶಬ್ದದ ಬಗ್ಗೆ ವಿಚಾರಿಸಿದಾಗ ‘ಸಾರ್ ರಿವರ್ಸ್ ಆಪರೇಷನ್ ಮಾಡಾಕೆ ಮಚ್ಚು, ಲಾಂಗು ಮಸೀತಿದೀವಿ. ನೋಡ್ತೀರಾ?’ ಎಂದ ಆತ!

ತೆಪರೇಸಿ ಬೆವತು ಹೋದ. ‘ಏನು ಹೇಳ್ತೀಯಯ್ಯ? ಮಚ್ಚು, ಲಾಂಗುಗಳಿಂದ ಆಪರೇಷನ್ನಾ?’ ‘ಮತ್ತೆ? ಬಿಡ್ತೀವಾ? ರಿವರ್ಸ್ ಆಪರೇಷನ್ ಅಂದ್ರೆ ಹಂಗೇ...’ ಕೆಲಸದವ ನಕ್ಕಾಗ ಅಲ್ಲಿಂದ ಪೇರಿ ಕಿತ್ತ ತೆಪರೇಸಿ ಸೀದಾ ರೇವಣ್ಣ ಅವರ ಮುಂದೆ ಪ್ರತ್ಯಕ್ಷನಾದ.

‘ಸಾರ್ ಏನ್ಸಾರ್ ಇದೂ... ಆಪರೇಷನ್ನು, ರಿವರ್ಸ್ ಆಪರೇಷನ್ನು ಅಂತ ಕತ್ತಿ, ಲಾಂಗು, ಮಚ್ಚು ಮಸೀತಾ ಕುಂತಿದಾರೆ?’ ರೇವಣ್ಣ ನಗುತ್ತಾ ಹೇಳಿದರು ‘ರೀ... ಈ ಮಚ್ಚು, ಲಾಂಗೆಲ್ಲ ಯಾಕೆ? ನನ್ ಮಾತು ಕೇಳಿದ್ರೆ ಏನೂ ಆಗಲ್ಲ. ಈಗ ನಮ್ಮ ಜೆಡಿಎಸ್ ಶಾಸಕರಲ್ಲಿ ಆಪರೇಷನ್ ಅಂತ ಏನಾದ್ರು ಕೇಳಿದೀರಾ? ಯಾಕೆ ಹೇಳಿ? ನಾನು ಎಲ್ಲರ ಜೇಬಲ್ಲಿ ಒಂದೊಂದು ಹಣ್ಣು ಇಟ್ಟು ಕಳಿಸಿದೀನಿ. ಆ ಕಾಂಗ್ರೆಸ್‍ನೋರಿಗೂ ಹಣ್ಣು ಬೇಕಾ ಕೇಳಿ, ಕೊಟ್ಟು ಕಳಿಸ್ತೀನಿ. ಹಣ್ಣು ಯಾವುದು ಅಂತ ಅರ್ಥ ಆಯ್ತಾ?’ ‘ಅರ್ಥವಾಯ್ತು ಬಿಡಿ’ ಎಂದ ತೆಪರೇಸಿ!

ಬರಹ ಇಷ್ಟವಾಯಿತೆ?

 • 1

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !