ಮಂಗಳವಾರ, ಏಪ್ರಿಲ್ 7, 2020
19 °C

ಕೊರೊನಾ ಪಾಸ್...!

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಆ ಕಾಲ ಒಂದಿತ್ತು, ಆಕ್ಷೀ ಅಂದಕೂಡಲೇ ಶತಾಯಸ್ಸು, ದೀರ್ಘಾಯಸ್ಸು ಅಂತ ಹಾರೈಸೋವ್ರು, ಈಗ ನೋಡು ಆಕ್ಷೀ ಅನ್ನೋ ಶಬ್ದಕ್ಕೆ ಮೊದಲೇ ‘ಹೋಗಾಚೆ, ಬಾಯ್ಮುಚ್ಕೊ’ ಅನ್ನೋ ಬೈಗುಳಪ್ರಹಾರ, ಎಲ್ಲ ಕೊರೊನಾ ಮಹಿಮೆ’ ಕಂಠಿ ಸಪ್ಪಗೆ ಉಲಿದ.

‘ಇನ್ನೇನ್ಮತ್ತೆ, ಈ ಹೊಸ ವೈರಾಣು ಜಗತ್ತನ್ನೇ ಅಲ್ಲಾಡಿಸ್ತಿದೆ. ನಮ್ಮ ಜಾಗ್ರತೇಲಿ ನಾವಿರಬೇಕಲ್ವಾ?’ ನಾನೂ ದನಿಗೂಡಿಸಿದೆ.

‘ಒಂದ್ಕಡೆ ಹೋಗೋ ಹಾಗಿಲ್ಲ, ಬರೋ ಹಾಗಿಲ್ಲ, ಟಿ.ವಿ ನ್ಯೂಸ್ ನೋಡಿದ್ರೆ ಕ್ಷಣ ಕ್ಷಣಕ್ಕೂ ದಿಗಿಲು ಹುಟ್ಟಿಸುತ್ತೆ’.

‘ಅದಕ್ಕೇ ಹೇಳೋದು ಧಾರಾವಾಹಿಗಳನ್ನು ನೋಡಿ, ಕಣ್ಣು ಕೋರೈಸುವಂಥ ಉಡುಗೆ ತೊಡುಗೆ ತೊಟ್ಟ ಪಾತ್ರಗಳು... ಹಬ್ಬ, ಹರಿದಿನಕ್ಕೆ ಸೆಲೆಕ್ಷನ್ ಸುಲಭ ತಾನೇ, ಯಾವುದೇ ಟೆನ್ಷನ್ ಇಲ್ಲದೆ...’ ಎನ್ನುತ್ತಾ ನನ್ನವಳು ಸುಡುವ ಕಾಫಿ ತಂದಳು. ‘ಬೇಸಿಗೆ ಆಗಿರುವುದರಿಂದ ಪರವಾಗಿಲ್ಲ, ಆ ವೈರಾಣು 25 ಡಿಗ್ರಿ ತಡೆಯೋಲ್ಲವಂತೆ’ ಎಂಬ ಸಮರ್ಥನೆ.

‘ಕಾಫಿ ನೋಡುತ್ತಲೇ ಸ್ವಲ್ಪ ತಣ್ಣಗಾದ ಕಂಠಿ, ‘ಸುರ್’ ಎಂದು ಹೀರಿ, ‘ಆದರೂ ಮನೇಲಿ ಪರಿಸ್ಥಿತಿ ಬಿಗಡಾಯಿಸಿದೆ. ಬೇಸಿಗೆ ರಜೆಯೊಂದಿಗೆ ಪರೀಕ್ಷೆಗಳಿಲ್ಲದೆಯೇ ಪಾಸ್ ಆದ ಮಕ್ಕಳ ಹಿಂಡು ನಮ್ಮ ಮನೇಲಿ ಸೇರಿದೆ. ಆ ಗದ್ದಲವೇ ದೊಡ್ಡ ತಲೆಬಿಸಿ’.

‘ಅಪ್ಪಾ, ಅಜ್ಜಿ ಕಾಲದಲ್ಲಿ ಸ್ವತಂತ್ರ ಬಂದ ಹಿನ್ನೆಲೆಯಲ್ಲಿ ಆ ವರ್ಷ ಎಲ್ಲರೂ ಪಾಸ್ ಅಂತೆ, ಅದನ್ನ ಗಾಂಧಿ ಪಾಸ್ ಅಂತಿದ್ರಂತೆ, ಈಗ ಕೊರೊನಾ ಪಾಸ್. ಆದರೆ ನಾವು ಮಾತ್ರ ಪರೀಕ್ಷೆ ಬರೀಬೇಕು’ ಪದವಿಯ ಓದಿನಲ್ಲಿದ್ದ ಪುಟ್ಟಿಯ ಸಂಕಟ.

‘ಮುಂದಿನ ತಿಂಗಳು ಅಮೆರಿಕದಿಂದ ನನ್ನ ಕಸಿನ್ ಬರೋವ್ಳಿದ್ದಳು, ಬೆಳ್ಳಿಹಬ್ಬದ ವಿವಾಹ ವಾರ್ಷಿಕೋತ್ಸವದಲ್ಲಿ ನಮಗೆಲ್ಲಾ ಬೆಳ್ಳಿ ಲೋಟ, ಸಿಲ್ಕ್ ಸೀರೆ ಗಿಫ್ಟ್ ಕೊಡೋಕ್ಕೆ ಪ್ಲಾನ್ ಮಾಡಿದ್ಳು, ಅದೇನಾಗುತ್ತೋ ಅಂತ ಚಿಂತೆ ನನಗೆ’ ನನ್ನವಳು ಕನಲಿದಳು.

‘ಆ... ಆಕ್ಷೀ...’ ಕಂಠಿ ಸೀನಿದ.

‘ಯಾರ‍್ರೀ ಅದು? ಹೋಗ್ರೀ ಆಚೆ’ ದನಿಯೇರಿಸುತ್ತ ನನ್ನ ಅತ್ತೆ ಬಂದೇಬಿಟ್ಟರು ಕೈಯಲ್ಲಿ ಕೋಲು ಹಿಡಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು