ಸೋಮವಾರ, ಅಕ್ಟೋಬರ್ 18, 2021
22 °C

ಚುರುರುಮುರಿ| ರಾಜಕೀಯ ಸನ್ಯಾಸ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಬೆಕ್ಕಣ್ಣ ಭಲೇ ಖುಷಿಯಲ್ಲಿತ್ತು. ‘ಏ... ನೋಡಿಲ್ಲಿ... ಯೆಡ್ಯೂರಜ್ಜಾರಿಗಿ ಅತ್ಯುತ್ತಮ ಶಾಸಕ ಪ್ರಶಸ್ತಿ ಬಂದೈತಿ... ಸಿದ್ರಾಮಣ್ಣ, ದೇಶಪಾಂಡೆ ಅಂಕಲ್ಲು ವಿರೋಧ ಪಕ್ಷದಾಗೆ ಇದ್ರೂ ನಮ್ಮ ಅಜ್ಜಾರ ಸೇವೆ ಒಪ್ಪಿಕೊಂಡು, ಪ್ರಶಸ್ತಿ ಕೊಟ್ಟಾರೆ. ಈಗರೆ ಒಪ್ತೀಯಿಲ್ಲೋ ಅಜ್ಜಾರು ಖರೇ ಭಯಂಕರ ಜನಸೇವಾ ಮಾಡ್ಯಾರಂತ’ ತನಗೇ ಪ್ರಶಸ್ತಿ ಬಂದಂತೆ ಬೀಗುತ್ತ ಉದ್ಗರಿಸಿತು.

‘ಸೇವೆ ಒಪ್ಪಿಕೊಳ್ಳೂದು ಅಂತಲ್ಲ... ಪ್ರಶಸ್ತಿಗೆ ಹದಿನೈದು ಮಾನದಂಡ ಇಟ್ಟಿದ್ದರಲ್ಲ, ಅದೆಲ್ಲದರಾಗೆ ತೂಗಿದ್ದು ಇವರೊಬ್ಬರೇ ಅಂತ, ಅದಕ್ಕೇ ಕೊಟ್ಟಾರ. ಯಾರಿಗ್ಗೊತ್ತು, ಇನ್ ಮತ್ತ ಚುನಾವಣೆಗೆ ನಿಲ್ಲೂದು ಬಿಟ್ಟು, ಅತ್ಯುತ್ತಮ ಶಾಸಕ ಪ್ರಶಸ್ತಿ ತಗಂಡು ಮನ್ಯಾಗ ಕುಂದರ‍್ರಿ ಅಂತ ಕೊಟ್ಟಾರೇನೋ. ಅದ್ಸರಿ, ಅತ್ಯುತ್ತಮ ಮುಖ್ಯಮಂತ್ರಿ ಅಂತ ಪ್ರಶಸ್ತಿ ಕೊಡೂದಿದ್ದರೆ ಯಾರಿಗೆ ಕೊಡಬೌದು?’ ಸುಮ್ಮನೇ ಒಂದು ಪ್ರಶ್ನೆ ಒಗೆದೆ.

‘ಈಗಿನವರಲ್ಲಿ ಯಾರೂ ಸ್ಪರ್ಧೆ ಹತ್ರಾನೂ ಬರಂಗಿಲ್ಲ. ಕೊಟ್ಟರೆ ಕೆಂಗಲ್ ಹನುಮಂತಯ್ಯ ಅವರಿಗೋ ಅರಸು ಅವರಿಗೋ ಮರಣೋತ್ತರವಾಗಿ ಕೊಡಬೇಕಷ್ಟೆ’ ಎಂದು ಅಪರೂಪಕ್ಕೊಮ್ಮೆ ಶಾಣೇತನದ ಮಾತಾಡಿದ ಬೆಕ್ಕಣ್ಣ ಮತ್ತೆ ಪೇಪರಿನಲ್ಲಿ ಮುಖ ಹುದುಗಿಸಿತು.

‘ಕುಮಾರಣ್ಣನೂ ತಾತಾ ಆಗೀನಿ ಅಂತ ಖುಷಿಯಿಂದ ಹೇಳ್ಯಾರ. ಮರಿಮೊಮ್ಮಗನ ಎಂಟ್ರಿ ಆಯಿತಂತ ದೇಗೌಡಜ್ಜಾರು ರಾಜಕೀಯ ಸನ್ಯಾಸ ತಗೋತಾರೇನೋ ಇನ್ನು’ ಎಂದಿತು.

‘ಹಂಗೆಲ್ಲ ರಾಜಕೀಯ ಸನ್ಯಾಸ ತಗೊಳಾಕ ಇದೇನು ಅಮೆರಿಕ, ಇಂಗ್ಲಂಡು ಅಂತ ಮಾಡೀಯೇನು? ಎಲ್ಲಾರಿಂದ ಭಲೇ ಅನ್ನಿಸಿಕ್ಯಂಡು, ನೊಬೆಲ್ ಶಾಂತಿ ಪ್ರಶಸ್ತಿ ತಗೊಂಡ ಬರಾಕ್ ಒಬಾಮ ಸೈತ ಪ್ರೆಸಿಡೆಂಟ್ ಕುರ್ಚಿಯಿಂದ ಕೆಳಗಿಳಿದ ಕೂಡಲೇ ಸಾಮಾನ್ಯ ಮನುಷ್ಯನ ಹಂಗ ಅದಾನ, ಪುಸ್ತಕ ಬರಿಲಾಕೆ ಹತ್ಯಾನ’ ಎಂದೆ.

‘ನೀ ಹಂಗ ಮನಸ್ಸಿಗೆ ಬಂದಂಗ ಬ್ಯಾರೆಯವ್ರಿಗೆಲ್ಲ ನಮ್ಮೋರಿನ್ನ ಹೋಲಿಕಿ ಮಾಡಬ್ಯಾಡ. ಇಲ್ಲಿ ಮಠದಾಗೆ ಇರೂ ಸನ್ಯಾಸಿಗಳೇ ಕೊನೆಯುಸಿರಿನವರೆಗೂ ರಾಜಕೀಯ ಸನ್ಯಾಸ ತಗೊಳಂಗಿಲ್ಲ, ಇನ್ನ್ ರಾಜಕಾರಣಿಗಳು ಹೆಂಗ ಹಂತಾ ಸನ್ಯಾಸ ತೊಗಳಾಕ ಆಗತೈತಿ...’ ಎಂದು ಕೊಂಕುನಗೆ ಬೀರಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು