ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳವುಗಳ ನಡುವೆ ಸಿಲುಕಿದರೇ ಪಾಂಡ್ಯ?

ಈ ಪ್ರಕರಣವನ್ನು ತಟಸ್ಥ ಭಾವದಿಂದ ನೋಡುವ ಸಾಧ್ಯತೆಯಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ
Last Updated 15 ಜನವರಿ 2019, 20:02 IST
ಅಕ್ಷರ ಗಾತ್ರ

ಕರಣ್ ಜೋಹರ್‌ ಅವರ ‘ಕಾಫಿ ವಿತ್ ಕರಣ್’ ಟಿ.ವಿ ಕಾರ್ಯಕ್ರಮದ ಕಂತೊಂದರಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಇತ್ತೀಚೆಗೆ ಪಾಲ್ಗೊಂಡು ‘ಮನಬಿಚ್ಚಿ’ ಮಾತನಾಡಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇವರಿಬ್ಬರೂ ಕಾರ್ಯಕ್ರಮದಲ್ಲಿ ಕೆಲ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರೂ ಲೋಕದ ದೃಷ್ಟಿಗೆ ಹಾರ್ದಿಕ್ ಪಾಂಡ್ಯ ಹೆಚ್ಚು ತಪ್ಪಿತಸ್ಥರಾಗಿ ಕಂಡಿದ್ದಾರೆ. ಪಾಂಡ್ಯ ವಿರುದ್ಧ ಮಹಿಳೆಯನ್ನು ಭೋಗದ ವಸ್ತುವಾಗಿ ನೋಡಿದ, ತನ್ಮೂಲಕ ಸ್ತ್ರೀ ಗೌರವಕ್ಕೆ ಚ್ಯುತಿ ತಂದಿರುವುದರ ಜೊತೆಗೆ ಜನಾಂಗೀಯ ನಿಂದನೆಯ ಆರೋಪಗಳೂ ಕೇಳಿಬಂದಿವೆ.

ಅವರ ಮಾತುಗಳು ಹಲವೆಡೆ ಸಭ್ಯತೆಯ ಮೇರೆ ಮೀರಿದ್ದವು ಎಂಬುದು ನಿಜವಾದರೂ ಇಡೀ ಪ್ರಕರಣವನ್ನು ತಟಸ್ಥ ಭಾವದಿಂದ ನೋಡುವ ಸಾಧ್ಯತೆಯಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ. ಈ ನಿಟ್ಟಿನಿಂದ ಆಲೋಚಿಸಿದಲ್ಲಿ ಕೆಲ ತರ್ಕಗಳು ಮೂಡುತ್ತವೆ. ಮೊದಲನೆಯದಾಗಿ, ಪಾಂಡ್ಯ ನೀಡಿರುವ ಸ್ಪಷ್ಟೀಕರಣದಂತಹ ಕ್ಷಮೆಯನ್ನೇ ಗಮನಿಸಿದರೆ ಸಂಪೂರ್ಣವಾಗಿ ತಿರಸ್ಕರಿಸಲಾಗದ ಅಭಿಪ್ರಾಯವೊಂದು ಅದರಲ್ಲಿ ಗೋಚರಿಸುತ್ತದೆ. ಇದು ಕರಣ್ ಕಾರ್ಯಕ್ರಮದ ಸ್ವರೂಪ ಕುರಿತಾಗಿದೆ. ನಾನು ‘ಕಾಫಿ ವಿತ್ ಕರಣ್’ ಅನ್ನು ಆಸ್ಥೆಯಿಂದ ವೀಕ್ಷಿಸಿಲ್ಲವಾದರೂ, ಸಹಜ ಕುತೂಹಲದಿಂದಾಗಿ ನೋಡಿದ ಆಧಾರದ ಮೇಲೆ ಕೆಲ ಅಭಿಪ್ರಾಯಗಳನ್ನು ಹೊಂದಿದ್ದೇನೆ.

ಇದು, ಸಿಮಿ ಗರೇವಾಲ್ ಅವರು ನಡೆಸಿಕೊಡುತ್ತಿದ್ದ ಸುಪ್ರಸಿದ್ಧ ‘ರಾಂಡೆವ್ಯು ವಿತ್‌ ಸಿಮಿ ಗರೇವಾಲ್’ನ ಬಿಸಿ ನೆತ್ತರಿನ, ಅತೀ ಸಲುಗೆಯ, ಎಗ್ಗಿಲ್ಲದ ಖಾಸಗಿ ಮಾತುಗಳ ಅವತಾರದಂತೆ ನನಗೆ ತೋರುತ್ತದೆ. ಗರೇವಾಲ್ ತನ್ನ ಅತಿಥಿಗಳ ಹೃದಯದಾಳದ ಭಯ-ಬೇಸರಗಳನ್ನು, ಬಯಕೆಗಳನ್ನು, ನಿಕಟ ಸ್ಮೃತಿಗಳನ್ನು ಆಪ್ತವಾಗಿ ಹಂಚಿಕೊಳ್ಳುವಂತೆ ಮಾಡುವಲ್ಲಿ ನಿಷ್ಣಾತೆ. ಆಕೆಯ ‘ರಾಂಡೆವ್ಯು’ ಕಂತುಗಳಲ್ಲಿ ಬಾಲಿವುಡ್‌ನ ರೇಖಾ ಅವರ ಮನದಲ್ಲಿ ಹೆಪ್ಪುಗಟ್ಟಿದ್ದ ಮೌನ ಕಣ್ಣೀರಿನ ಕೋಡಿಯಾಗಿ ಹರಿದದ್ದು, ಅಮಿತಾಭ್‌ ಬಚ್ಚನ್‌ ಹಮ್ಮಿಲ್ಲದ ಮಗುವಿನ ನಗು ನಕ್ಕಿದ್ದು ಅಥವಾ ಜಯಲಲಿತಾ ಭಿಡೆ ಸರಿಸಿ ಹಾಡೊಂದನ್ನು ಗುನುಗಿದ್ದನ್ನು ನೋಡಿದವರು ಮರೆಯಲಾರರು.

‘ಕಾಫಿ ವಿತ್‌ ಕರಣ್’, ಗರೇವಾಲ್ ಕಾರ್ಯಕ್ರಮದ ಅತಿರೇಕದ ರೂಪ. ಹಾಗೆಂದು ಇದರ ಪ್ರಸಾರವನ್ನು ತಡೆಯಬೇಕೆಂಬುದು ನನ್ನ ಭಾವನೆಯಲ್ಲ. ನೋಡುಗರಿದ್ದಾರೆ ಎಂದಮೇಲೆ ಪ್ರಸಾರವನ್ನು ನಿಲ್ಲಿಸುವ ಮಾತೆಲ್ಲಿಯದು? ಕರಣ್ ಅವರ ‘ಟಾಕ್ ಷೋ’ನ ಸ್ವರೂಪ ಎಂಥದ್ದು ಎಂಬುದಷ್ಟೇ ಇಲ್ಲಿ ಪ್ರಸ್ತುತ. ಕಾರ್ಯಕ್ರಮದ ಈ ಲಕ್ಷಣಗಳನ್ನು ಅರಿತವರು ಅಲ್ಲಿ ದಾಖಲಾಗುವ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡಲಾರರು. ಹಿಂದಿನ ಕಂತುಗಳಲ್ಲಿ ಹಲವರು ಪಾಂಡ್ಯ ಅವರಂತೆಯೇ ಎಗ್ಗಿಲ್ಲದೆ ಮಾತನಾಡಿದ್ದಿದೆ. ಅಂತರ್ಜಾಲದ ಅನಭಿಷಿಕ್ತ ವ್ಯಾಖ್ಯಾನಕಾರರು ಇಂತಹವರ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ. ಹೀಗಿರುವಾಗ ಪಾಂಡ್ಯ ಅವರ ಮಾತುಗಳನ್ನು ಉಪೇಕ್ಷಿಸುವ ಸಾಧ್ಯತೆ ಇತ್ತೇನೋ? ಅಷ್ಟಕ್ಕೂ ಸಭ್ಯತೆಯ ಎಲ್ಲೆ ಮೀರಿದ ಹೇಳಿಕೆಗಳು ಈ ಷೋದಲ್ಲಿ ಆಗಿಂದಾಗ್ಗೆ ಕೇಳಿಬಂದಿದ್ದರೂ ಈಗ ಮಾತ್ರ ದಂಡನೆಯಾಗಿರುವುದು ತಮಾಷೆಯಾಗಿದೆ.

ನಿಜ, ಯುವಜನರ ಕಣ್ಮಣಿಯಾದ ಪಾಂಡ್ಯ ಅಂತಹವರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿಯಿದೆ. ಅವರ ವರ್ತನೆ ಅನುಕರಣೀಯ ಎಂದು ಭಾವಿಸುವವರು ಇರಬಹುದು. ಆದರೆ, ನಾನು ಗಮನಿಸಿದಂತೆ ಟೀಕೆಯಿರುವುದು ಪಾಂಡ್ಯ ಅವರ ನುಡಿಗಳ ವಿರುದ್ಧವೇ ಹೊರತು, ಅವರ ನಡತೆಯ ಕುರಿತಾಗಲ್ಲ. ಕೀಳು ಅಭಿರುಚಿಯ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ ಆತನ ದಾರ್ಷ್ಟ್ಯವನ್ನು, ನಿರ್ಲಜ್ಜೆಯನ್ನು ಖಂಡಿಸಲಾಗಿದೆ. ಆದರೆ, ಪಾಂಡ್ಯ ಹೀಗೇಕೆ ವರ್ತಿಸಿದರು ಎಂದು ಪ್ರಶ್ನಿಸಿದ ಉದಾಹರಣೆಗಳು ಕಡಿಮೆ.

ಒಂದೊಮ್ಮೆ ಈ ಪ್ರಶ್ನೆಯೆದ್ದರೆ, ಅದಕ್ಕೆ ಉತ್ತರಿಸುವ ಸಲುವಾಗಿ ಇಂತಹ ಸ್ವೇಚ್ಛೆಯ ಬಾಳನ್ನು ಬದುಕಲು ಅನುವಾಗುವ ವಾತಾವರಣವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪಬ್ ಸಂಸ್ಕೃತಿಯನ್ನು ಪ್ರಶ್ನಿಸಬೇಕಾಗುತ್ತದೆ, ಮೋಜುಕೂಟಗಳನ್ನು ಧಿಕ್ಕರಿಸಬೇಕಾಗುತ್ತದೆ. ಪಬ್‌ಗಳಿಗೆ ಹೋಗುವ ಆಸಕ್ತಿಯಿರುವ ಹೆಂಗಳೆಯರಿಗೂ ಎಚ್ಚರ ತಪ್ಪಬಾರದೆಂದು ಸೂಚಿಸಬೇಕಾಗುತ್ತದೆ. ಅಷ್ಟೇಕೆ, ಪಾವಿತ್ರ್ಯದ ಬಗ್ಗೆಯೂ ಪ್ರವಚನ ನೀಡಬೇಕಾದೀತು. ಆತನದ್ದು ವ್ಯಭಿಚಾರ ಎಂದಾದರೆ ಅಂತಹ ವ್ಯಭಿಚಾರವನ್ನು ಸಾಧ್ಯವಾಗಿಸಿರುವ ಔದಾರ್ಯವನ್ನೂ ಖಂಡಿಸಬೇಕಿರುತ್ತದೆ. ಬರೀ ಹೇಳಿಕೆಯನ್ನು ವಿರೋಧಿಸಿದಲ್ಲಿ ವ್ಯಭಿಚಾರಕ್ಕಿಂತ ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಹೆಚ್ಚಿನ ಅಪರಾಧ ಎಂದಾಯಿತಲ್ಲವೇ?

ಇದೇನೂ ಸನಾತನ ಸಂಪ್ರದಾಯಗಳ ಪುನರ್ ಪ್ರತಿಷ್ಠಾಪನಾ ಪ್ರಯತ್ನವಲ್ಲ. ಪಬ್‌ಗಳು, ಮೋಜಿನ ಕೂಟಗಳನ್ನು ಲಕ್ಷಾಂತರ ಯುವಕ ಯುವತಿಯರು ತೀವ್ರವಾಗಿ ಬಯಸುವ ಕಾರಣದಿಂದಲೇ ಅವು ಅಸಂಖ್ಯಾತವಾಗಿ ಹರಡಿ ನಿಂತಿವೆ ಎಂಬುದನ್ನು ಬಲ್ಲೆ. ಕಾಲಚಕ್ರದ ವಿರುದ್ಧದ ನಡಿಗೆ ಪಳೆಯುಳಿಕೆಯ ಕಡೆಗೆ ಎಂಬುದೂ ನಿಜವೇ ಇದ್ದಿರಬೇಕು. ಆದರೆ ಬೇರೆಲ್ಲ ಇರುವಂತೆಯೇ ಇದ್ದು, ಪಾಂಡ್ಯ ಮಾತ್ರ ತನ್ನ ಹೀನ ದೃಷ್ಟಿಯನ್ನು ಪಳಗಿಸಿಕೊಳ್ಳಬೇಕೆಂದು ಬಯಸುವುದು ಎಷ್ಟು ತರ್ಕಬದ್ಧ?

ಇಂದಿನ ಭಾರತವು ತನ್ನ ಸದ್ಯದ ಇತಿಹಾಸದಲ್ಲಿ ಕಂಡಿರದ ಲೈಂಗಿಕ ಸ್ವಾತಂತ್ರ್ಯವನ್ನು, ಗಂಡು-ಹೆಣ್ಣುಗಳ ಸಂಬಂಧದಲ್ಲಿ ಹೊಸ ಔದಾರ್ಯವನ್ನು ಅನುಭವಿಸುತ್ತಿದೆ. ಹಲ ಸಂಪ್ರದಾಯಗಳು ಸಡಿಲಗೊಂಡಿವೆ. ಈವರೆಗೆ ಕೆಲ ಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಪಾಶ್ಚಾತ್ಯ ಸಂಸ್ಕೃತಿಯ ಮುಕ್ತತೆ ಇಂದು ಮಧ್ಯಮ ವರ್ಗಕ್ಕೂ ಎಟಕುತ್ತಿದೆ. ಪ್ರಾಯಶಃ ಆಧುನಿಕತೆಯನ್ನು ಅಂಗೀಕರಿಸುವುದು ಅನಿವಾರ್ಯ. ಆದರೆ, ಇವೆಲ್ಲ ನಾಲ್ಕೈದು ದಶಕಗಳಿಂದ ಈಚೆಗಷ್ಟೇ ಆದ ಬೆಳವಣಿಗೆಗಳು ಎಂಬುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT