ಭಾನುವಾರ, ಆಗಸ್ಟ್ 25, 2019
23 °C

ಕಮಲವ್ವನ ಮಕ್ಕಳೂ ಬೆಕ್ಕಣ್ಣನ ವಕ್ರನಗೆಯೂ

Published:
Updated:

ಬೆಳಗ್ಗೆ ಎದ್ದು ಬರುವಷ್ಟರಲ್ಲಿ ಬೆಕ್ಕಣ್ಣ ಹಳೇ ಪೇಪರುಗಳನ್ನೆಲ್ಲ ಹರಡಿಕೊಂಡು ಕೂತಿತ್ತು. ಜೊತೆಗೆ ನನ್ನ ಲ್ಯಾಪ್ಟಾಪನ್ನೂ ತೆರೆದಿಟ್ಟುಕೊಂ ಡಿತ್ತು. ‘ಏನ್ ಮಾಡಾಕಹತ್ತೀಯಲೇ’ ಎಂದರೆ ‘ಕಾಣವಲ್ದೇನು... ಹುಡುಕಾಕಹತ್ತೀನಿ’ ಗುರ‍್ರೆಂ ದಿತು. ‘ನಿಂದೇನು ಕಳದದ’ ಮೆಲ್ಲಗೆ ಕೇಳಿದೆ.

‘ಅತೃಪ್ತ ಶಾಸಕರು ಎಲ್ಲದಾರ ಅಂತ ಹುಡುಕಾಕಹತ್ತೀನಿ. ಕಮಲವ್ವ ಕುರ್ಚಿ ಕೊಡ್ತೀನಿ ಅಂದಿದ್ದೇ ಎದ್ದೂಬಿದ್ದೂ ಅತ್ತಾಗೆ ಓಡಿದ್ರು. ಕುರ್ಚಿನೂ ಸಿಗಲಿಲ್ಲ, ಶಾಸಕರ ಸ್ಥಾನನೂ ಕಳ್ಕೊಂಡ್ರು. ಊರಾಗ ನೋಡಿದ್ರ ಪ್ರವಾಹದಾಗ ಎಲ್ಲಾ ಕೊಚ್ಚಿಹೋಗ್ಯಾವು, ಮಂದಿ ಗಂಜಿ ಕೇಂದ್ರದಾಗದಾರ. ಜನಸೇವೆ ಮಾಡಾಕಂತನೇ ರಾಜೀನಾಮೆ ಕೊಟ್ಟೀವಿ ಅಂದವರು ಈಗ ಏನ್ ಮಾಡಾಕಹತ್ಯಾರ, ಹಳೀ ಸುದ್ದಿವಳಗ ಏನರ ಐತೇನಂತ ಹುಡುಕಾಕ ಹತ್ತಿದ್ದೆ’ ಎಂದಿತು.

‘ಕಾಶ್ಮೀರದಾಗ ಸೈಟು, ಸೇಬಿನ ತ್ವಾಟ ಕೊಳ್ಳಾಕ ಹೋಗಿರಬೌದು. ಕಾಶ್ಮೀರಿ ಹುಡುಗೀ ರನ್ನ ಮದುವಿಯಾಗೂದು ಸರಳ ಆತಿನ್ನು ಅಂತ ಕಮಲವ್ವನ ಮಕ್ಕಳೇ ಖುಷಿಯಾಗಿ ಹೇಳ್ಯಾರ. ಕುದುರೆ ಹರಾಜಿನಾಗ ತಮ್ಮನ್ನೇ ಮಾರಿಕೊಂಡರಲ್ಲ, ಕೋಟಿಗಟ್ಟಲೆ ರೊಕ್ಕ ಬಂದೈತಿ. ಅಲ್ಲೊಂದಿಷ್ಟು ಆಸ್ತಿ ಮಾಡೂಣು ಅಂತ ಹೋಗಿರಬಕು’ ಅಂದೆ. ‘ನಿಂಬೆಯಣ್ಣಂದೂ ಸುದ್ದಿ ಇಲ್ಲ. ಮಳಿ ನಿಲ್ಲಿಸಪಾ ಅಂತ ವರುಣದೇವ್ರನ್ನ ಬೇಡ್ಕೊಳಾಕ ದೇವಸ್ಥಾನಕ್ಕೂ ಹೋಗಿಲ್ಲ ಕಾಣ್ತದ’ ಬೆಕ್ಕಣ್ಣ ಚುಚ್ಚಿತು.

‘ಏನೇ ಅಂದ್ರೂ ನಿನ್ನ ಎಡ್ಯೂರಜ್ಜ ಭಾರೀ ಲಕ್ಕಿ ಬಿಡು. ಮುಖ್ಯಮಂತ್ರಿ ಜೊತಿಗಿ ಅಷ್ಟೂ ಖಾತೆಗಳಿಗೆ ಮಂತ್ರಿ, ಇನ್ನಾ ಹತ್ತು ಜನ್ಮಕ್ಕೆ ಆಗೋಅಷ್ಟು ಮಂತ್ರಿಗಿರಿ ಆಸೆ ತೀರಿಸ್ಕೊಂಡ್ರು. ಏಕಭಾರತ ಆತು, ಇನ್ನೀಗ ಏಕಕರ್ನಾಟಕ, ಏಕಚಕ್ರಾಧಿಪತಿ! ಮೋಡಬಿತ್ತನೆ, ವರುಣಪೂಜೆ ಅಂತ ಅಷ್ಟಕೊಂದು ರೊಕ್ಕ ಖರ್ಚ್ ಮಾಡಿದವ್ರು ಮನಿಗಿ ಹೋಗಿ ಮಕ್ಕೊಂಡ್ರು. ಈಗ ಅವೆರಡನ್ನೂ ರಿವರ್ಸ್ ಮಾಡಕ್ಕೆ ಎಡ್ಯೂರಜ್ಜಂಗೆ ಆಗಲ್ಲವಂತಾ’ ಅಂದೆ.

‘ಬ್ಯಾಡಾದಾಗ ಪಿತೂರಿ ಮಾಡಿ ಮನಿಗಿ ಕಳಿಸಾಕ ಮಳಿಮೋಡ ಅಂದ್ರ ಮೈತ್ರಿ ಸರ್ಕಾರ ಅಂದ್ಕಂಡಿಯೇನು... ಪ್ರಕೃತಿ ಎಂಥ ‘ಶಾ’ಣ್ಯಾರಿಗೂ ಛಲೋ ಪಾಠ ಕಲಿಸ್ತದ’  ಬೆಕ್ಕಣ್ಣ ತತ್ವಜ್ಞಾನಿಯ ವಕ್ರನಗು ಬೀರಿತು.   

Post Comments (+)