ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೋಮು ಸೌಹಾರ್ದ ಮತ್ತು ಆರೋಗ್ಯಕರ ಸಮಾಜ

ಕೋಮುಗಳ ನಡುವಿನ ಅನ್ಯೋನ್ಯತೆಯು ಮನೋಸಾಮಾಜಿಕ ಆರೋಗ್ಯ ಕಾಪಾಡಬಲ್ಲದು
Last Updated 25 ಜನವರಿ 2022, 19:32 IST
ಅಕ್ಷರ ಗಾತ್ರ

ಈಗ್ಗೆ ಸುಮಾರು ನೂರೈವತ್ತು ವರ್ಷಗಳ ಹಿಂದಿನ ವಿಷಯವೊಂದನ್ನು ಈಗ ಸ್ಮರಿಸಿಕೊಳ್ಳುವುದು ಹಿತವೆನಿಸುತ್ತದೆ. ನಮ್ಮ ತಾತ ಮೈಸೂರಿನ ಅಗ್ರಹಾರ ದಲ್ಲಿ ವಾಸವಾಗಿದ್ದವರು. ಮೈಸೂರಿನ ಸಂಸ್ಕೃತ ಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರದಲ್ಲಿ ಜೀವನೋಪಾಯಕ್ಕಾಗಿ ಪುರೋಹಿತ ವೃತ್ತಿ ಮತ್ತು ಸಂಸ್ಥಾನದ ಉರ್ದು ಶಾಲೆಯೊಂದರಲ್ಲಿ ಮಕ್ಕಳಿಗೆ ಕನ್ನಡ ಕಲಿಸಿಕೊಡುತ್ತಿದ್ದರು. ತುಂಬಾ ಆಚಾರ, ಮಡಿವಂತಿಕೆ. ಆದರೆ ಅವೆಲ್ಲವೂ ಮನೆ ಮತ್ತು ಅಗ್ರಹಾರಕ್ಕಷ್ಟೇ ಸೀಮಿತವಾಗಿದ್ದವು ಎನ್ನುವುದನ್ನು ನನ್ನ ತಂದೆಯವರು ಆಗಿಂದಾಗ್ಗೆ ಪ್ರಸ್ತಾಪಿಸುತ್ತಿದ್ದರು.

ಈ ವಿಷಯ ಹೇಳುವುದಕ್ಕೆ ಕಾರಣವಿದೆ. ಸುಮಾರು 85 ವರ್ಷಗಳ ಹಿಂದೆ ಅವರು ಬೆಂಗಳೂರಿನ ಬಸವನಗುಡಿ, ಗಾಂಧಿ ಬಜಾರಿನಲ್ಲಿ ಸೇವಾಮನೋ ಭಾವದಿಂದ ಪಾಠಶಾಲೆಯೊಂದನ್ನು ಪ್ರಾರಂಭಿಸಿದಾಗ ಅದರ ಮೊದಲ ಅಧ್ಯಕ್ಷರಾಗಲು ಒಪ್ಪಿದವರು ಅಬ್ದುಲ್‌ ಘನಿ ಸಾಬ್ ಎಂಬುವವರು.‌ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಕೆಲವೇ ತಿಂಗಳುಗಳು. ಆದರೆ ಈ ಅಲ್ಪ ಸಮಯದಲ್ಲಿ ಅವರು ಮಕ್ಕಳಿಗಾಗಿ ನೀಡಿದ ಕೊಡುಗೆ ಅಪಾರ. ನರಸಿಂಹರಾಜ ಕಾಲೊನಿಯಲ್ಲಿರುವ ಆಟದ ಮೈದಾನದಲ್ಲಿ ಆಟವಾಡಿರದ ಆಸು ಪಾಸಿನ ಬಡಾವಣೆಯ ಮಕ್ಕಳು ಅಪರೂಪ. ಕೋಮು ಭಾವನೆಗಳು ಮಾನಸಿಕ ನೆಮ್ಮದಿಯನ್ನು ಕೆಡಿಸಿ ಜನಾ ಕ್ರೋಶ ಏರುವಂತೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಇಂತಹದ್ದೊಂದು ಸಂಗತಿಯು ದಕ್ಷಿಣ ಭಾರತದ, ಅದರಲ್ಲಿಯೂ ಕರ್ನಾಟಕದ ಬಹುಪಾಲು ಮಠಗಳು ಮತೀಯ ಮಿತಿಗಳನ್ನು ಮೀರಿ ಅನ್ನದಾಸೋಹ, ಶಿಕ್ಷಣ ದಾಸೋಹ ಮಾಡಿರುವ ಸಾವಿರಾರು ಉದಾಹರಣೆ ಗಳ ಮರುನೆನಪು. ಕೋಮು ಸಮುದಾಯಗಳ ನಡುವಿನ ಸೌಹಾರ್ದ ಭಾವನೆಗಳನ್ನು ವ್ಯಕ್ತಪಡಿಸುವುದು ಆರೋಗ್ಯಕರ ಸಮಾಜದ ಸಂಕೇತ. ಕೋಮುಗಳ ನಡುವಿನ ಅನ್ಯೋನ್ಯತೆ, ಗೌರವಗಳು ಮನೋ ಸಾಮಾಜಿಕ ಆರೋಗ್ಯವು ಉತ್ತಮವಾಗಿ ಇರುವಂತೆ ಕಾಪಾಡಬಲ್ಲಂಥವು.

ಧಾರ್ಮಿಕ ಭಾವನೆಗಳು ಮೂಡುವುದರ ಹಿನ್ನೆಲೆ ಯಲ್ಲಿ ಇರುವಂತಹ ಮನೋವೈಜ್ಞಾನಿಕ ಕಾರಣಗಳನ್ನು ಮನೋವಿಶ್ಲೇಷಣೆಕಾರ ಕಾರ್ಲ್‌ ಯೂಂಗ್‌ ಮತ್ತು ಸಿಗ್ಮಂಡ್‌ ಫ್ರಾಯ್ಡ್‌ ಅತ್ಯುತ್ತಮವಾಗಿ ನಿರೂಪಿಸಿದ್ದಾರೆ. ಯೂಂಗ್‌ ಪ್ರಕಾರ, ತನ್ನನ್ನು ತಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಧಾರ್ಮಿಕ ಶ್ರದ್ಧೆ ನೆರವಾಗುತ್ತದೆ. ಹೇಗೆಂದರೆ, ವ್ಯಕ್ತಿಯು ನಿರಂತರವಾಗಿ ಒಂದಿಲ್ಲೊಂದು ಸಂಕಟ, ಆತಂಕ, ಭಯವನ್ನು ಎದುರಿ ಸುತ್ತಲೇ ಇರಬೇಕಾಗುತ್ತದೆ. ಇಂತಹದ್ದೊಂದು ಸ್ಥಿತಿ ಮನದೊಳಗೆ ಹುದುಗಿರುವ ತವಕ, ತಲ್ಲಣಗಳು ಹೊರಬರುವಂತೆ ಮಾಡುವ ಪ್ರಯತ್ನ ಎಡೆಬಿಡದೆ ನಡೆಯುತ್ತಲೇ ಇದ್ದು ನಾನಾ ರೀತಿಯ ಒತ್ತಡ, ವಕ್ರತೆ ಗಳನ್ನು ಹುಟ್ಟಿಸುತ್ತದೆ. ಇಂತಹ ಒತ್ತಡದ ಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಬಲವು ಧಾರ್ಮಿಕ ಶ್ರದ್ಧೆಯಲ್ಲಿ ಅಡಗಿರುತ್ತದೆ. ಹಾಗೆಯೇ ಧಾರ್ಮಿಕ ಅಂಧಶ್ರದ್ಧೆಯ ಮೂಲಕ ಹೊರಬರುವ ಮಾನಸಿಕತೆ, ವಿಕೃತಿಯು ಮನಸ್ಸಿನ ದೌರ್ಬಲ್ಯವನ್ನು ಬಿಂಬಿಸುತ್ತದೆ.

ಕೆಲವರಲ್ಲಿ ತಾವಷ್ಟೇ ಉತ್ತಮರು ಮಿಕ್ಕವರೆಲ್ಲಾ ಅಧಮರು ಎನ್ನುವಂತಹ ಭಾವನೆಯು ಗಾಢವಾಗಿ ಬೇರೂರಿದ್ದು ವಿಭಿನ್ನ ಆಚರಣೆ, ನಂಬಿಕೆಗಳನ್ನು ಹತ್ತಿಕ್ಕುವುದೇ ಮನಸ್ಸಿನ ಹವಣಿಕೆಯಾಗಿರುತ್ತದೆ. ಮನದಾಳದಲ್ಲಿ ಅಡಗಿ ‍ಪೀಡಿಸುತ್ತಲೇ ಇರುವ ದೌರ್ಬಲ್ಯಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಧಾರ್ಮಿಕ ಅಂಧಶ್ರದ್ಧೆಯ ಅವಲಂಬನೆಯು ಅತ್ಯಂತ ಪರಿಣಾಮಕಾರಿ. ದುರಂತವೆಂದರೆ, ಹೀಗೆ ಇತರರನ್ನು ಪೀಡಿಸುವ ಕ್ರಮ ಪರಸ್ಪರ ದ್ವೇಷ, ಕ್ರೋಧಗಳಿಗೆ ಬೆಂಬಲ ನೀಡುತ್ತದೆ. ಆದುದರಿಂದಲೇ ಧಾರ್ಮಿಕತೆಯನ್ನು ನ್ಯೂರಾಸಿಸ್‌ ಎಂದು ಫ್ರಾಯ್ಡ್‌ ಗುರುತಿಸಿದ್ದು. ಅತ್ಯಂತ ದುರದೃಷ್ಟಕರ ಸಂಗತಿ ಎಂದರೆ, ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಕಾಷಾಯ ವಸ್ತ್ರಧಾರಿಗಳು
ಉತ್ತರಮುಖಿಯಾಗುತ್ತಿರುವುದಲ್ಲದೆ ದ್ವೇಷ, ಆಕ್ರೋಶ ತುಂಬಿರುವ ಮಾತು, ಕೆಲಸಗಳನ್ನು ಮಂತ್ರ, ಆಚರಣೆಗಳೆಂಬಂತೆ ಪ್ರಚಾರ ಮಾಡುತ್ತಿರುವುದು. ಈಗ ಕೆಟ್ಟ ಸುದ್ದಿಯಲ್ಲಿರುವ ರಿಷಿ ಕುಮಾರ ಸ್ವಾಮಿ ಅವರ ವಿಡಿಯೋಪದೇಶ ಇಂತಹ ಅಸಹ್ಯಗಳಲ್ಲಿ ಒಂದು. ಒಂದು ರೀತಿಯಲ್ಲದು ಹೊಸ ನಮೂನೆಯ ಉನ್ಮಾದ; ವಿಡಿಯೊನ್ಮಾದ.

ತಮ್ಮ ಹಾವಭಾವಗಳು, ನಡೆನುಡಿಗಳು ಮಹದೋ ದ್ದೇಶದಿಂದ ಕೂಡಿವೆ ಎನ್ನುವಂತಹ ಏಕಸ್ವರೂಪಿ ಭ್ರಮೆ. ಇಂತಹ ಮಾನಸಿಕ ಅನಾರೋಗ್ಯಕರ ಭಾವನೆ ಯನ್ನು ಬಹಳ ಸುಲಭವಾಗಿ ಸ್ವ-ವಿಡಿಯೊಗಳು ಬಲಪಡಿಸುತ್ತವೆ. ಅವುಗಳನ್ನು ತಾವೇ ಪದೇ ಪದೇ ವೀಕ್ಷಿಸುವ ಮೂಲಕ ಆ ಮಾತುಗಳಲ್ಲಿ ಅತ್ಯದ್ಭುತ ಶಕ್ತಿ ಅಡಗಿದೆ ಎಂದು ವಿಭ್ರಮಿಸುವುದು.

ಇಂದು ಜನ ಕೋವಿಡ್‌ ಹಾವಳಿಯಿಂದ ವೃತ್ತಿ, ಶಿಕ್ಷಣ ಮತ್ತು ಬದುಕಿನ ಲಯವನ್ನು ಕಳೆದುಕೊಂಡು ಮಾನಸಿಕ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿರುವ ಸಮಯದಲ್ಲಿ ಅಧ್ಯಾತ್ಮ, ಭಕ್ತಿಯನ್ನು ಪ್ರಚಾರ ಮಾಡುವವರ ನೆರವು ಅಗತ್ಯ. ಅಂತಹವರೇ ಹಿಂಸೆ, ಆಕ್ರೋಶದ ನಡೆನುಡಿಗೆ ಉತ್ತೇಜನ ನೀಡುತ್ತಿದ್ದಾಗ ಸಂಯಮದ ಸ್ವಭಾವದವರು ಸುಮ್ಮನಿರುವುದು ಸರಿಯಲ್ಲವೆನಿಸುತ್ತದೆ. ಹೊಡಿ, ಕೊಲ್ಲು, ಕಡಿ, ಕೆಡವು ಎನ್ನುವಂತಹ ಮಾತುಗಳು ಅನಾರೋಗ್ಯಕರ ಮನಸ್ಸಿನ ಸ್ಪಷ್ಟ ಸಂಕೇತಗಳು. ಇಂತಹ ಮಾತುಗಳಿಗೆ ಯುವಜನ ಮರುಳಾಗಬಾರದು. ವ್ಯಕ್ತಿಯ ಮನೋಬಲವನ್ನು ಸಂಪೂರ್ಣವಾಗಿ ನಾಶಪಡಿಸುವ ಗುಣ ಇಂತಹ ಆವೇಶಭರಿತ, ಪೂರ್ವಗ್ರಹಪೀಡಿತ ಮಾತುಗಳಲ್ಲಿ ಗಾಢವಾಗಿ ಅಡಗಿರುತ್ತದೆ ಎಂಬುದರ ಅರಿವು ಒಳಿತು.

ಡಿವಿಜಿಯರ ಮಂಕುತಿಮ್ಮ ಹೇಳುವಂತೆ- ಎಲ್ಲರೊಳು ಒಂದಾಗು- ಎನ್ನುವುದನ್ನು ಉತ್ತೇಜಿಸುವು ದಕ್ಕೆ ಇದು ಸೂಕ್ತ ಸಮಯ.

ಲೇಖಕ: ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT