ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹತ್ಯೆಗಳಿಗೆ ತಾರ್ಕಿಕ ಅಂತ್ಯ?

ಎಲ್ಲ ರೀತಿಯ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಲು ನಾಗರಿಕರ ನಡುವೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು
Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡು ವುದೆಂದರೆ ಮೇಲ್ನೋಟಕ್ಕೆ ಮಾತ್ರ ಶಾಂತಿಯುತ ವಾತಾವರಣ ಕಾಪಾಡುವುದು ಅಲ್ಲ. ನಿತ್ಯ ಜೀವನದಲ್ಲಿ ಸಮಾಜವು ಸದಾ ಶಾಂತಿಯುತವಾಗಿಯೇ ಕಾಣುತ್ತದೆ. ಜನರ ನಿತ್ಯದ ಬದುಕಿನ ಜಂಜಾಟಗಳ ನಡುವೆ
ಏರ್ಪಡುವ ಜಗಳ, ವಾಗ್ವಾದ, ಕಚ್ಚಾಟಗಳು ಸಾಮಾಜಿಕ ಜೀವನದ ಒಂದು ಭಾಗವಾಗಿ ನಡೆಯುತ್ತಲೇ ಇರುತ್ತವೆ. ವ್ಯಕ್ತಿಗತ ನೆಲೆಯಲ್ಲಿ, ಕೌಟುಂಬಿಕ ನೆಲೆಯಲ್ಲಿ ನಡೆಯುವ ಈ ವ್ಯಾಜ್ಯಗಳು ಸಮಾಜದ ಶಾಂತಿಯನ್ನೇನೂ ಕದಡುವುದಿಲ್ಲ.

ಈ ದೃಷ್ಟಿಯಿಂದ ನೋಡಿದಾಗ ನಮ್ಮ ಸಮಾಜ ಎಷ್ಟು ಶಾಂತಿಯುತವಾಗಿದೆ ಎಂದು ಭಾಸವಾದರೂ ಅಚ್ಚರಿಯೇನಿಲ್ಲ. ಸರ್ಕಾರ ಸಹ ತಾನು ಕಾನೂನು ಸುವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿರುವ ವಿಧಾನದ ಬಗ್ಗೆ ಸಮಾಧಾನದಿಂದ ಇರಲು ಸಾಧ್ಯ. ಆದರೆ, ರಾಜ್ಯದಲ್ಲಿ ರಾಜಕೀಯ ಕಾರಣಗಳಿಗಾಗಿ, ಸೈದ್ಧಾಂತಿಕ ಕಾರಣಗಳಿಗಾಗಿ ಯುವಕರ ಹತ್ಯೆಗಳು ಆಗಾಗ ನಡೆಯುತ್ತಿವೆ ಎಂದಾದರೆ, ಅಂತಹ ಹತ್ಯೆಗಳ ನಂತರದಲ್ಲಿ ಸಮುದಾಯಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತದೆ ಎಂದಾದಲ್ಲಿ ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ಕೊಲೆಗೆ ಕಾರಣ ಏನೇ ಇರಲಿ, ಸಮಾಜದಲ್ಲಿ ಕೊಲೆ ಮಾಡುವಂತಹ ವಾತಾವರಣ ಹೆಚ್ಚಾಗುತ್ತಿದೆ ಎಂದರೆ ಅದು ಪ್ರಜ್ಞಾವಂತರನ್ನು ಮತ್ತು ಸರ್ಕಾರವನ್ನು ಎಚ್ಚರಿಸಬೇಕಾದ ಸಂಗತಿ. ಸುಳ್ಯ ಬಳಿಯ ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಎಂಬ ಯುವಕನ ಹತ್ಯೆಯಾಗಿದೆ. ಪ್ರವೀಣ್ ಬಿಜೆಪಿ ಕಾರ್ಯಕರ್ತ ಕೂಡ ಆಗಿದ್ದ. ಅವರ ಹತ್ಯೆಯು ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಮಸೂದ್‌ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು.

ನಮ್ಮ ಸಾರ್ವಜನಿಕ ಪ್ರಜ್ಞೆ ಎಷ್ಟು ಕಲುಷಿತವಾಗಿದೆ ಎಂದರೆ ರಾಜಕೀಯ ಸಿದ್ಧಾಂತ, ಮತೀಯ ಅಸ್ಮಿತೆ ಅಥವಾ ಜಾತಿ ಅಸ್ಮಿತೆಗಳನ್ನು ಹೊತ್ತ ಹತ್ಯೆಗಳು ಮಾತ್ರವೇ ನಮ್ಮನ್ನು ಚಿಂತೆಗೆ ನೂಕುತ್ತವೆ. ಇದರಿಂದ ಆಚೆಗಿನ ಹತ್ಯೆಗಳು ನಮ್ಮನ್ನು ಹೆಚ್ಚಾಗಿ ಕಾಡುವುದಿಲ್ಲ.

ಹಂತಕರು ಯಾರು, ಹತ್ಯೆಗೀಡಾದವರು ಯಾರು ಎಂಬ ಪ್ರಶ್ನೆ ಎದುರಾದ ಕೂಡಲೇ ಯಾವುದೋ ಒಂದು ಅಸ್ಮಿತೆ ನಮ್ಮ ಆಲೋಚನೆ, ಮಾತುಕತೆಗಳ ಕೇಂದ್ರಬಿಂದುವಾಗಿ ಬರುತ್ತದೆ. ಹತ್ಯೆಯ ಹಿಂದಿನ ಕಾರಣ, ಹಂತಕನ ಹಿನ್ನೆಲೆ, ಹತ್ಯೆಗೀಡಾದವರ ಹಿನ್ನೆಲೆ ಎಲ್ಲವೂ ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ನಿಷ್ಕರ್ಷೆಗೆ ಒಳಗಾಗುತ್ತವೆ. ಮತ ದ್ವೇಷ, ಜಾತಿ ದ್ವೇಷ, ಜಾತಿ ಶ್ರೇಷ್ಠತೆ, ಮತಾಂಧತೆ ಈ ಎಲ್ಲ ಅವಗುಣಗಳು ಯುವ ಜನರ ಮನಸ್ಸುಗಳಲ್ಲಿ ಉದ್ದೀಪನಗೊಳಿಸುವ ಉನ್ಮಾದ ಬಹಳ ಅಪಾಯಕಾರಿ. ಇಂತಹ ಉನ್ಮಾದವನ್ನು ಪ್ರಚೋದಿಸುವ ಅಂಶಗಳು ಯುವಕರ ಮನಸ್ಸನ್ನು ವ್ಯವಸ್ಥಿತವಾಗಿ ಆವರಿಸುತ್ತಿದ್ದು, ಯಾರದೋ ಹಿತಾಸಕ್ತಿ ಯನ್ನು ಕಾಪಾಡುವ ಸಲುವಾಗಿ, ಅವ್ಯಕ್ತ ಗುರಿಯನ್ನು ತಲುಪುವ ಸಲುವಾಗಿ ಯುವ ಪೀಳಿಗೆಯು ಹಿಂಸಾತ್ಮಕ ಮಾರ್ಗ ಹಿಡಿಯುತ್ತಿದೆ.

ಬೆಳ್ಳಾರೆಯ ಪ್ರವೀಣ್‌ ಮತ್ತು ಮಸೂದ್‌ ಇಬ್ಬರೂ ಇಂತಹುದೇ ಉನ್ಮಾದದ ಬಲಿಪಶುಗಳೇ? ತನಿಖೆಯಿಂದ ಇದು ಗೊತ್ತಾಗಬೇಕು. ಇವರಂತೆಯೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಹಲವು ಯುವಕರು ಪ್ರಾಣ ತೆತ್ತಿದ್ದಾರೆ. ಪ್ರತೀ ಸಲ ಹತ್ಯೆ ಸಂಭವಿಸಿದಾಗಲೂ, ಸರ್ಕಾರದ ವಕ್ತಾರರು ‘ಉಗ್ರ ಕ್ರಮ ಕೈಗೊಳ್ಳುತ್ತೇವೆ, ಆರೋಪಿಗಳು ಎಲ್ಲೇ ಇದ್ದರೂ ಬಂಧಿಸುತ್ತೇವೆ, ಶಿಕ್ಷೆಗೊಳಪಡಿಸುತ್ತೇವೆ’ ಎಂಬ ಮಾತು ಹೇಳುತ್ತಲೇ ಬಂದಿದ್ದಾರೆ.

ಆಡಳಿತಾರೂಢ ಪಕ್ಷದ ನಾಯಕರ ಪ್ರತಿಕ್ರಿಯೆಗಳು ಸಾಮಾನ್ಯವಾಗಿ, ಹತ್ಯೆಗೊಳಗಾದವರ ಅಸ್ಮಿತೆಗಳನ್ನು ಆಧರಿಸಿ ವ್ಯಕ್ತವಾಗುತ್ತವೆ. ವಿರೋಧ ಪಕ್ಷಗಳು ಪ್ರತಿಯೊಂದು ಪ್ರಕರಣ ವರದಿಯಾದಾಗಲೂ ಸರ್ಕಾರದ ವೈಫಲ್ಯದತ್ತ ಬೆಟ್ಟು ಮಾಡುತ್ತವೆ. ಸರ್ಕಾರವು ಈ ಹತ್ಯೆಗಳನ್ನು ನಿಗ್ರಹಿಸಲು ಅಗತ್ಯವಾದ ಕಠಿಣ ಶಾಸನಗಳ ಬಗ್ಗೆ ಚಿಂತೆ ಮಾಡುತ್ತದೆ. ಕಠಿಣ ಶಾಸನಗಳು ಅಪರಾಧಿಗಳನ್ನು ಶಿಕ್ಷಿಸಲು ಬಳಸುವ ಪ್ರಭಾವಶಾಲಿ ಸಾಧನಗಳಾದೀತೇ ವಿನಾ ಹತ್ಯೆಗಳನ್ನು, ದಾಳಿಗಳನ್ನು ನಿಯಂತ್ರಿಸಲು ನೇರವಾಗಿ ನೆರವಾಗುವುದಿಲ್ಲ. ವರದಕ್ಷಿಣೆಗೆ ಸಂಬಂಧಿಸಿದ ಕೊಲೆಗಳು, ಜಾತಿ ವೈಷಮ್ಯ ಆಧರಿಸಿದ ಹತ್ಯೆಗಳು, ಮರ್ಯಾದೆಗೇಡು ಹತ್ಯೆಗಳು, ಮತದ್ವೇಷದ ಕೊಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆಗಳು ಇವೆಲ್ಲವನ್ನೂ ನಿಯಂತ್ರಿಸುವ ಕಾನೂನು ನಮ್ಮ ನಡುವೆ ಇದ್ದರೂ ಇಂತಹ ಕೊಲೆಗಳಿಗೆ ಸಮಾಜ ಸಾಕ್ಷಿಯಾಗುತ್ತಿದೆ.

ಸಂದರ್ಭಾನುಸಾರ ವ್ಯಕ್ತವಾಗುವ ಭಾವನಾತ್ಮಕ ಸನ್ನಿವೇಶಗಳನ್ನು ಬದಿಗಿಟ್ಟು ನೋಡಿದಾಗ, ಇದೊಂದು ಸಾಮಾಜಿಕ ಸಮಸ್ಯೆ ಎಂದೇ ಗುರುತಿಸಬಹುದು. ಈ ಸಾಮಾಜಿಕ ಕ್ಷೋಭೆಯನ್ನು ನಿವಾರಿಸುವ ಬಗೆ ಹೇಗೆ? ಅಧಿಕಾರದಲ್ಲಿರುವವರನ್ನು ಮತ್ತು ಇಡೀ ರಾಜಕೀಯ ವ್ಯವಸ್ಥೆಯನ್ನು, ಪ್ರಜ್ಞಾವಂತ ಸಮಾಜವನ್ನು ಕಾಡ ಬೇಕಿರುವ ಪ್ರಶ್ನೆ ಇದು. ಹತ್ಯೆ ಮತ್ತು ಹಂತಕರ ಹಿಂದಿನ ಉದ್ದಿಶ್ಯಗಳನ್ನೇ ಪ್ರಧಾನವಾಗಿ ಪರಿಗಣಿಸು ವುದರಿಂದ ಸಮಾಜದಲ್ಲಿ ಬೇರೂರುತ್ತಿರುವ ಪಾತಕ ಮನೋಭಾವವನ್ನು ಹೋಗಲಾಡಿಸಲಾಗುವುದಿಲ್ಲ. ಪಾತಕ ಸಾಮ್ರಾಜ್ಯವನ್ನು ವಿಸ್ತರಿಸಲು ನೆರವಾಗುತ್ತಿರುವ ಎಲ್ಲ ರೀತಿಯ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿ ಸಲು ನಾಗರಿಕರ ನಡುವೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆಗಲೇ ಈ ಹತ್ಯೆ ಸರಣಿಗಳನ್ನು ಕೊನೆ ಗೊಳಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT