ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇದು ಜೀವಜಲ, ಇರಲಿ ಎಚ್ಚರ

ನೀರು ಸೋರಿಕೆ ಹಾಗೂ ಅನಧಿಕೃತ ಕೊಳವೆ ಮಾರ್ಗಗಳ ಸಂಪರ್ಕ ನಿಯಂತ್ರಣಕ್ಕೆ ಜಲಮಂಡಳಿ ತುರ್ತಾಗಿ ಗಮನಹರಿಸಬೇಕಿದೆ
Published 29 ಅಕ್ಟೋಬರ್ 2023, 19:30 IST
Last Updated 29 ಅಕ್ಟೋಬರ್ 2023, 19:30 IST
ಅಕ್ಷರ ಗಾತ್ರ

ಕಾವೇರಿ ನೀರಿನ ವಿವಾದ ಮುಂದುವರಿದಿದೆ. ಮಳೆಯೂ ಮುನಿಸಿಕೊಂಡು, ಬಿಸಿಲೂ ಜೋರಾಗಿ, ಕಾವೇರಿ ನೀರನ್ನೇ ಆಧಾರವಾಗಿ ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾನಗರಿಯಾದ ಬೆಂಗಳೂರಿನಲ್ಲಿ ಕಂಡಲ್ಲೆಲ್ಲ ಬಹುಅಂತಸ್ತಿನ ವಾಸದ ಮನೆಗಳು ಅಂದರೆ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗಳು. ನಗರಪ್ರದೇಶ ದಲ್ಲಿಯೇ ಸುಮಾರು 10 ಲಕ್ಷ ವಸತಿ ಸಮುಚ್ಚಯಗಳಿದ್ದು, 40 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ಪ್ರಮುಖವಾಗಿ ಕಾವೇರಿ ನೀರನ್ನು ಅವಲಂಬಿಸಿದ್ದಾರೆ.

ಪತ್ರಿಕೆಗಳಲ್ಲಿ ವರದಿಯಾದಂತೆ, ಇಂತಹಅಪಾರ್ಟ್‌ಮೆಂಟ್‍ಗಳಿಂದಲೇ ಶೇ 50ರಷ್ಟು ಕಾವೇರಿ ನೀರು ಪೋಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇವುಗಳಲ್ಲಿ ಬೋರ್‌ವೆಲ್ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಇಲ್ಲಿನ ಜನ ಕುಡಿಯುವುದ ಕ್ಕಷ್ಟೇ ಅಲ್ಲ ಎಲ್ಲ ಕೆಲಸಗಳಿಗೂ ಕಾವೇರಿ ನೀರನ್ನು ಬಳಸುತ್ತಿದ್ದಾರೆ. ಕಟ್ಟಡದ ಸುತ್ತ ಇರುವ ಉದ್ಯಾನಕ್ಕೆ ಅಗತ್ಯವಾದ ನೀರು, ಕಾರು ತೊಳೆಯುವುದು, ಪಾತ್ರೆ, ಬಟ್ಟೆ ಸ್ವಚ್ಛಗೊಳಿಸುವುದೂ ಸೇರಿದಂತೆ ಎಲ್ಲದಕ್ಕೂ ಬೇಕಾಬಿಟ್ಟಿಯಾಗಿ ನೀರು ಬಳಕೆಯಾಗುತ್ತಿದೆ. ಇವೆಲ್ಲದರ ಬಗ್ಗೆ ಗಮನ ಹರಿಸುವವರೇ ಇಲ್ಲ ಎನ್ನುವುದು ಪ್ರಮುಖ ದೂರು.

ಆದರೆ ಈ ವಸತಿಸಮುಚ್ಚಯಗಳಲ್ಲಿ ವಾಸಿಸುವವರು ಹೇಳುವುದು ಬೇರೆಯೇ ಕಥೆ: ‘ವಾರಕ್ಕೆ ಒಂದು ಅಥವಾ ಹೆಚ್ಚೆಂದರೆ ಎರಡು ದಿನ ಮಾತ್ರ ಕಾವೇರಿ ನೀರಿನ ಸರಬರಾಜು, ಅದೂ ಸೀಮಿತ ಅವಧಿಗೆ ಮಾತ್ರ ಇರುತ್ತದೆ. ಅಪಾರ್ಟ್‌ಮೆಂಟ್‍ಗಳಲ್ಲಿ ಬೋರ್‌ವೆಲ್ ಇದ್ದರೂ ಮಳೆ ಸರಿಯಾಗಿ ಬೀಳುತ್ತಿಲ್ಲ, ಬಿಸಿಲಿನ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಪೈಪೋಟಿಗೆ ಬಿದ್ದು ಬೋರ್‌ವೆಲ್‍ಗಳನ್ನು ಆಳವಾಗಿ ಕೊರೆಯಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‍ಗಳಲ್ಲಿ ನೀರು ಬತ್ತಿಹೋಗಿದೆ. ಹೀಗಾಗಿ, ಬೋರ್‌ವೆಲ್ ಇದ್ದರೂ ಕಾವೇರಿ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದೇವೆ’.

‘ಇತ್ತ ಕಾವೇರಿ ನೀರು ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದೆ, ಅತ್ತ ಬೋರ್‌ವೆಲ್ ನೀರೂ ಸಾಕಾಗದೆ ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿದ್ದೇವೆ. ನಮ್ಮ ಸಂಕಷ್ಟ ಅರಿತಿರುವ ನೀರು ಪೂರೈಕೆ ಟ್ಯಾಂಕರ್‌ ಗಳದ್ದು ದೊಡ್ಡ ದಂಧೆಯೇ ಆಗಿದೆ. ಇವುಗಳಿಂದ ಶುದ್ಧವಾದ ನೀರು ಕೂಡ ದೊರಕುತ್ತಿಲ್ಲ. ಹೀಗಾಗಿ, ಕೂದಲು ಉದುರುವಿಕೆ, ಅಲರ್ಜಿ, ಚರ್ಮರೋಗದಂ ತಹ ಕಾಯಿಲೆಗಳು ಉಂಟಾಗುತ್ತಿವೆ. ಟ್ಯಾಂಕರ್‌ಗಳ ನೀರು ಪೂರೈಕೆಯ ದರ ಕೂಡಾ ಹೆಚ್ಚುತ್ತಲೇ ಇದೆ. ಐದು ಸಾವಿರ ಲೀಟರ್‌ಗೆ ಸುಮಾರು ₹ 700 ದರವಿದ್ದು, ಅದರ ಜೊತೆಗೆ, ಹೋಗಿ ಬರುವ ಖರ್ಚನ್ನು ಕೂಡ ಸೇರಿಸಲಾಗುತ್ತಿದೆ. ಹೀಗಿರುವಾಗ, ನೀರನ್ನು ಪೋಲು ಮಾಡುವ ಪ್ರಶ್ನೆಯೇ ಇಲ್ಲ’.

ಜಲಮಂಡಳಿಯ ಅಧಿಕಾರಿಗಳು ಹೇಳುವ ಪ್ರಕಾರ, ಕಾವೇರಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಮೂರು ನಾಲ್ಕು ವರ್ಷಗಳಿಂದ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನೀರು ಉಳಿತಾಯಕ್ಕೆ ಜಲಮಂಡಳಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸುವಂತೆ ಐದು ವರ್ಷಗಳ ಹಿಂದೆಯೇ ಆದೇಶ ನೀಡಲಾಗಿತ್ತು. ಈ ಘಟಕಗಳು ಹಾಳಾಗಿದ್ದರೆ ಅಂತಹ ಅಪಾರ್ಟ್‌ಮೆಂಟ್‌ಗಳ ವಿರುದ್ಧ ದೂರು ನೀಡಲಾಗುವುದು. ಈ ಸಂಸ್ಕರಣಾ ಘಟಕಗಳು ಇಲ್ಲದಿದ್ದಲ್ಲಿ, ಪೂರೈಸಲಾಗುವ ಕಾವೇರಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಅವಕಾಶವಿದೆ. ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ದಂಡ ವಿಧಿಸುವ ಕ್ರಮ ಜಾರಿಯಲ್ಲಿತ್ತು. ಆದರೆ ಅದರಿಂದ ಪ್ರಯೋಜನವಿಲ್ಲವೆಂದು ಕಾವೇರಿ ನೀರಿನ ಪೂರೈಕೆಯ ಪ್ರಮಾಣವನ್ನೇ ಕಡಿಮೆ ಮಾಡಲು ನಿರ್ಧರಿಸಲಾಗಿತ್ತು. ಸರ್ಕಾರದ ಕ್ರಮಗಳಿಗೆ ಎಲ್ಲರೂ ಸ್ಪಂದಿಸಿದರೆ ಯಶಸ್ಸು ಸಾಧ್ಯ.

ಇವೆಲ್ಲವೂ ಒಳ್ಳೆಯ ಕ್ರಮಗಳು ಸರಿ. ಆದರೆ, ಎಷ್ಟರಮಟ್ಟಿಗೆ ಜಾರಿಯಾಗಿವೆ ಎಂಬುದು ಮುಖ್ಯ! ಅದೂ ಅಲ್ಲದೆ, ಈ ರೀತಿ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿರುವಂತಹ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‍ಗಳಲ್ಲಿ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಸಂಸ್ಕರಿಸಿದ ನೀರಿನ ಸಂಗ್ರಹ ಮತ್ತು ಮರುಬಳಕೆ ದೊಡ್ಡ ಸಮಸ್ಯೆಯಾಗಿದೆ. ಸಂಸ್ಕರಿಸಿದ ನೀರಿನಲ್ಲಿ ಶೇಕಡ 50ರಷ್ಟು ಬಳಕೆಯಾದರೆ, ಉಳಿದ ನೀರನ್ನು ಹತ್ತಿರದ ಕೆರೆಗಳಿಗೆ, ಒಳಚರಂಡಿ ವ್ಯವಸ್ಥೆಗೆ ಹರಿಸುವಂತಿಲ್ಲ. ಕೈಗಾರಿಕೆಗಳು ಅದನ್ನು ಬಳಸಲು ಸಿದ್ಧವಿಲ್ಲ. ಇದರಿಂದಾಗಿ ದಿನಕ್ಕೆ ಏಳು ಲಕ್ಷಕ್ಕೂ ಹೆಚ್ಚು ಲೀಟರ್ ನೀರು ವ್ಯರ್ಥವಾಗುತ್ತಿದೆ. ನೀರು ಸಂಸ್ಕರಣಾ ಘಟಕ ಸ್ಥಾಪನೆಯನ್ನು ಕಡ್ಡಾಯಗೊಳಿಸುವ ಮೊದಲು ಅದರ ಸಂಗ್ರಹ ಮತ್ತು ಬಳಕೆಗೆ ಸೂಕ್ತ ಮಾರ್ಗ ಕಂಡುಕೊಳ್ಳುವುದು ಅಗತ್ಯ ಎನ್ನುವುದು ಈ ಅಸೋಸಿಯೇಶನ್‍ನವರ ಅಭಿಪ್ರಾಯ.

ಇದಲ್ಲದೆ, ನಗರದ ಕೇಂದ್ರ ಪ್ರದೇಶಗಳಲ್ಲಿರುವ ಕೆಲವು ಕೊಳವೆ ಮಾರ್ಗಗಳು 80 ವರ್ಷದಷ್ಟು ಹಳೆಯವಾಗಿವೆ. ಅವುಗಳಲ್ಲಿ ಸೋರುವಿಕೆ ಸಾಮಾನ್ಯ. ಅನಧಿಕೃತವಾಗಿ ಕೇಬಲ್ ಅಳವಡಿಕೆ, ರಸ್ತೆ ನಿರ್ಮಾಣದಂತಹ ಕೆಲಸಗಳಿಗಾಗಿ ನೆಲವನ್ನು ಅಗೆದಾಗ, ಈ ಕೊಳವೆಗಳಿಗೆ ಹಾನಿಯಾಗಿ ನೀರು ನಿರಂತರವಾಗಿ ಒಳಗೊಳಗೆ ಸೋರುತ್ತಲೇ ಇರುತ್ತದೆ.

ನೀರಿಲ್ಲದೇ ಬದುಕಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ತಮಗಾಗಿ ಮತ್ತು ಇತರರಿಗಾಗಿ ನೀರಿನ ಬಗ್ಗೆ ಎಚ್ಚರ ವಹಿಸಲೇಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT