ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳ ಎದುರು ದ್ವೇಷದ ಮಾದರಿ?

ಯಾವುದು ವಿಶ್ವಾಸಾರ್ಹ ಮಾಹಿತಿ ಎಂದು ವಿವೇಚಿಸುವ ಸಾಮರ್ಥ್ಯವೇ ಇಲ್ಲದ ಮಕ್ಕಳನ್ನು ದ್ವೇಷ ರಾಜಕೀಯದ ಸರಕಿನಿಂದ ದೂರವಿರಿಸುವ ಹೊಣೆಗಾರಿಕೆ ಪೋಷಕರ ಹೆಗಲೇರಿದೆ
Last Updated 17 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ತಾನು ಇಷ್ಟಪಡುವ ನಟನ ಸಿನಿಮಾ ದೃಶ್ಯಗಳನ್ನು ಅಥವಾ ತಾನು ಮೆಚ್ಚುವ ಕ್ರಿಕೆಟ್ ಆಟಗಾರರಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‍ಗೆ ಹಾಕಿಕೊಳ್ಳುತ್ತಿದ್ದ ಪರಿಚಯದ ಶಾಲಾ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಹಾಕಿಕೊಂಡಿದ್ದ ವಾಟ್ಸ್‌ಆ್ಯಪ್‌ ಸ್ಟೇಟಸ್ ಕಂಡು ಕಸಿವಿಸಿಯಾಯಿತು.

ಆರನೇ ತರಗತಿಯಲ್ಲಿ ಓದುತ್ತಿರುವ ಹುಡುಗ, ತನ್ನ ವಿವಾದಿತ ಭಾಷಣಗಳಿಂದಾಗಿ ಕುಖ್ಯಾತಳಾಗಿರುವ ಕರಾವಳಿ ಮೂಲದ ಯುವತಿಯೊಬ್ಬಳ ಭಾಷಣದ ತುಣುಕನ್ನೇ ತನ್ನ ಸ್ಟೇಟಸ್‍ಗೆ ಹಾಕಿಕೊಂಡಿದ್ದ.

‘ನಮ್ಮೂರಿನ ಸಾಕಷ್ಟು ಹೆಣ್ಣುಮಕ್ಕಳನ್ನು ನೀವು ಮತಾಂತರ ಮಾಡಿದ್ದು ನಮಗೆ ಗೊತ್ತು. ನೋಡುವಷ್ಟು ನೋಡಿದ್ದೇವೆ, ಸಹಿಸುವಷ್ಟು ಸಹಿಸಿದ್ದೇವೆ. ನಮ್ಮ ತಾಳ್ಮೆಯ ಮಿತಿ ಮೀರಿದ್ರೆ ನಮಗೂ ಮತಾಂತರ ಮಾಡೋಕೆ ಚೆನ್ನಾಗಿ ಗೊತ್ತು. ನಮಗೂ ನಿಮ್ಮ ಹೆಣ್ಣುಮಕ್ಕಳನ್ನು ಮದುವೆಯಾಗೋದು ಗೊತ್ತು. ಬರೀ 23 ಪರ್ಸೆಂಟ್ ಇರೋ ನೀವೇ ಇಷ್ಟು ಹಾರಾಡ್ಬೇಕಾದ್ರೆ ಇನ್ನು 70 ಪರ್ಸೆಂಟ್ ಇರೋ ಹಿಂದೂಗಳೆಷ್ಟು ಹಾರಾಡ್ಬೇಕು? ಸ್ವಾಮಿ, ಇದು ಕೊನೇ ಎಚ್ಚರಿಕೆ ನಿಮಗೆ...’ ಎಂದು ಶುರುವಾಗುವ ಭಾಷಣದ ತುಣುಕು ಅದಾಗಿತ್ತು.

ಕೊರೊನಾ ಕಾರಣಕ್ಕೆ ಶಾಲೆಗಳನ್ನು ಮುಚ್ಚಿ ವರ್ಷಾನುಗಟ್ಟಲೆ ಆನ್‍ಲೈನ್ ಶಿಕ್ಷಣದ ಮೊರೆ ಹೋಗಿ ದ್ದರಿಂದ, ಇದೀಗ ಬಹುಪಾಲು ಶಾಲಾ ವಿದ್ಯಾರ್ಥಿಗಳ ಬಳಿ ಅವರದೇ ಮೊಬೈಲ್‍ಗಳಿವೆ. ವಾಟ್ಸ್‌ಆ್ಯಪ್, ಯುಟ್ಯೂಬ್ ಮತ್ತು ಅಂತರ್ಜಾಲ ತಾಣಗಳಲ್ಲಿ ಕಾಣ ಸಿಗುವ ಮಾಹಿತಿಗಳಲ್ಲಿ ಯಾವುದು ವಿಶ್ವಾಸಾರ್ಹ ಮತ್ತು ಯಾವುದು ತಪ್ಪು ಮಾಹಿತಿ ಎಂದು ವಿವೇಚಿ ಸುವ ಸಾಮರ್ಥ್ಯವೇ ಇಲ್ಲದ ಮಕ್ಕಳನ್ನೂ ತಲುಪತೊಡ ಗಿರುವ ದ್ವೇಷ ರಾಜಕೀಯದ ಸರಕಿನಿಂದ ಅವರನ್ನು ದೂರವಿರಿಸುವ ಹೊಣೆಗಾರಿಕೆಯೂ ಇದೀಗ ಪೋಷಕರ ಹೆಗಲೇರಿದೆ.

ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಸಾರ್ವ ಜನಿಕ ಸಂವಾದದ ಕೇಂದ್ರಬಿಂದುವಾಗಿಸಲು, ಮಾಡ ಬೇಕಿರುವ ಕಸರತ್ತುಗಳನ್ನೆಲ್ಲ ಆಳುವವರು ಚಾಲ್ತಿಗೆ ತಂದಿದ್ದಾರೆ. ಪೋಷಕರು ಮೊದಲಿಗೆ ತಾವು ಈ ದಾಳಕ್ಕೆ ಬಲಿಯಾಗದೇ ಉಳಿಯುವುದಲ್ಲದೆ, ದ್ವೇಷದ ನಂಜು ತಮ್ಮ ಮಕ್ಕಳವರೆಗೂ ತಲುಪದಿರುವಂತೆ ನಿಯಂತ್ರಿಸಲು ಇರುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಜರೂರತ್ತು ಎದುರಾಗಿದೆ.

ಉತ್ತಮ ಬದುಕು ಕಟ್ಟಿಕೊಳ್ಳಲು ಯುವ ಸಮೂಹಕ್ಕೆ ಅಗತ್ಯವಿರುವ ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗುವಂತಹ ನೀತಿಗಳನ್ನು ರೂಪಿಸಲು ಸೋಲುತ್ತಿರುವ ಆಳುವವರು, ಧಾರ್ಮಿಕ ವಿಷಯಗಳಿಗೆ ನೀಡುತ್ತಿರುವ ಮಹತ್ವವು ತಮ್ಮ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದೆಂದು ಪರಿಶೀಲಿಸುವ ಸಂಯಮವನ್ನು ಪೋಷಕರು ತೋರಬೇಕಿದೆ. ಜಾತಿ- ಧರ್ಮಗಳ ಗೊಡವೆಯಿಲ್ಲದೆ ಶಾಲಾ ಕಾಲೇಜುಗಳಲ್ಲಿ ಎಲ್ಲರೊಂದಿಗೂ ಒಡನಾಡುವ ಮೂಲಕ ಕೂಡಿ ಬಾಳುವ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಿದ್ದ ಮಕ್ಕಳ ತಲೆಗೆ ರಾಜಕಾರಣಿಗಳು ತುಂಬಲು ಹೊರಟಿರುವ ವಿಚಾರಗಳಾದರೂ ಎಂತಹವು ಎಂದು ಚಿಂತಿಸಬೇಕಲ್ಲವೇ? ದ್ವೇಷಿಸುವುದನ್ನು ಕಲಿಸುವುದು ನಮ್ಮ ಆದ್ಯತೆಯಾಗಬೇಕೇ? ದ್ವೇಷದ ನಂಜು ಆವರಿಸಿದ ಸಮಾಜವನ್ನು ಮಕ್ಕಳಿಗೆ ಉಳಿಸಿ ಹೋದರೆ ಅವರ ನಾಳೆಗಳು ನೆಮ್ಮದಿಯಿಂದ ಕೂಡಿರಲು ಸಾಧ್ಯವೇ?

ಇದುವರೆಗೂ ಸಿನಿಮಾ ನಟರನ್ನೋ ಕ್ರಿಕೆಟ್ ಆಟಗಾರರನ್ನೋ ಅನುಸರಿಸಲು ಮುಂದಾಗುತ್ತಿದ್ದ ಮಕ್ಕಳಿಗೆ ಇದೀಗ ದ್ವೇಷಿಸುವುದನ್ನು ಕಲಿಸುವ ಭಾಷಣ ಕಾರರು ಮಾದರಿ ವ್ಯಕ್ತಿಗಳಾಗಿ ತೋರತೊಡಗಿರುವುದು ಆತಂಕಕಾರಿ ವಿದ್ಯಮಾನ. ತಮ್ಮ ಪ್ರಚೋದನ ಕಾರಿ ಭಾಷಣಗಳ ಮೂಲಕ ಮಕ್ಕಳ ಗಮನವನ್ನೂ ತಮ್ಮೆಡೆಗೆ ಬಹುಬೇಗ ಸೆಳೆದುಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿಗಳೆಡೆಗೆ ಮಕ್ಕಳು ಆಕರ್ಷಿತರಾಗುವ ಸುಳಿವು ಸಿಕ್ಕರೆ, ಅವರಲ್ಲಿ ತಿಳಿವಳಿಕೆ ಮೂಡಿಸಲು ಪೋಷಕರು ಮುಂದಾಗಬೇಕು. ಹೀಗೆ ಮಾಡಲು ಮಕ್ಕಳಿಗಿಂತ ಮೊದಲು ದೊಡ್ಡವರು ಇಂತಹ ಸುಳ್ಳು, ದ್ವೇಷ ಹರಡುವ ವಿಚಾರಗಳಿಗೆ ಬೆನ್ನು ತೋರಬೇಕಲ್ಲವೇ?

The Silent Coup: A History of India’s Deep State’ ಎಂಬ ಪುಸ್ತಕದ ಲೇಖಕ, ಪತ್ರಕರ್ತ ಜೋಸಿ ಜೋಸೆಫ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ಇಲ್ಲಿ ಮನನೀಯ: ‘ಆಳುವವರ ಕೆಂಗಣ್ಣಿಗೆ ಗುರಿಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಇಂತಹದ್ದೊಂದು ಪುಸ್ತಕ ಬರೆಯಲು ನೀವು ಏಕೆ ನಿರ್ಧರಿಸಿದಿರಿ’ ಎಂಬ ಸಂದರ್ಶಕರ ಪ್ರಶ್ನೆಗೆ, ‘ನನ್ನ ಮಗಳಿಗೆ ನಾನು ಎಂತಹ ಸಮಾಜವನ್ನು ಬಿಟ್ಟು ಹೋಗುತ್ತೇನೆ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಕಣ್ಣೆದುರೇ ವ್ಯವಸ್ಥೆ ಕುಸಿಯುತ್ತಿದ್ದಾಗಲೂ ಅದನ್ನು ತಡೆಯಲು ತನ್ನಿಂದ ಸಾಧ್ಯವಿರುವುದನ್ನು ಮಾಡದೇ ನನ್ನ ತಂದೆ ಸುಮ್ಮನೇ ತಮ್ಮ ಪಾಡಿಗೆ ತಾವಿದ್ದರಲ್ಲ ಎನ್ನುವ ಭಾವನೆ ಅವಳಲ್ಲಿ ಮೂಡದೇ ಇದ್ದರೆ ಅಷ್ಟು ಸಾಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದಿದ್ದರು.

ರಾಜಕಾರಣಿಗಳು ಧರ್ಮಾಧಾರಿತ ದ್ವೇಷದ ದಾಳಗಳನ್ನು ಒಂದೊಂದಾಗಿಯೇ ಉರುಳಿಸುತ್ತ, ಜನರನ್ನು ಒಡೆದು ಆಳುವುದರಲ್ಲೇ ತಮ್ಮ ಯಶಸ್ಸು ಅಡಗಿದೆ ಎಂದು ಮನಗಂಡಿರುವ ಹೊತ್ತಿನಲ್ಲಿ, ತಾವು ಮಕ್ಕಳೆದುರು ಬಿಟ್ಟು ಹೋಗಲಿರುವ ಸಮಾಜ ಎಂತಹುದೆಂದು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT