ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಜೋಳ: ಉಳಿಯಲಿ ಸಂಸ್ಕೃತಿ

ಪೌಷ್ಟಿಕ ಹಾಗೂ ಸಮತೋಲಿತ ಆಹಾರಧಾನ್ಯವಾದ ಜೋಳ ಬೆಳೆಯುವುದಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು
Last Updated 8 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಜೋಳ ತಿಂದವ ತೋಳ’ ಎನ್ನುವ ಜನಪದ ಮಾತು ಉತ್ತರ ಕರ್ನಾಟಕ ಭಾಗದಲ್ಲಿ ತುಂಬ ಪ್ರಸಿದ್ಧ. ಜೋಳ ಶಕ್ತಿಶಾಲಿ, ಉತ್ತಮ ಪೌಷ್ಟಿಕ ಆಹಾರ ಎಂಬುದನ್ನು ಈ ನುಡಿ ಖಚಿತಪಡಿಸುತ್ತದೆ. ನೋವಿನ ಸಂಗತಿಯೆಂದರೆ, ರೈತರು ಜೋಳ ಬೆಳೆಯುವುದನ್ನು ನಿಲ್ಲಿಸುತ್ತಿದ್ದಾರೆ. ಸೂಕ್ತ ಬೆಲೆ ಸಿಗುವುದಿಲ್ಲ ಎನ್ನುವುದು ಇದಕ್ಕೆ ಮುಖ್ಯ ಕಾರಣ. ಅದಕ್ಕೆ ಬದಲಾಗಿ ಹೆಚ್ಚು ಆದಾಯ ತರುವ ಬೆಳೆ ಬೆಳೆಯತೊಡಗಿದ್ದಾರೆ.

ಪಡಿತರ ವ್ಯವಸ್ಥೆಯಡಿ ಸ್ಥಳೀಯ ಪೌಷ್ಟಿಕ ಆಹಾರಧಾನ್ಯ ವಿತರಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಜೋಳವನ್ನೂ ಹಂಚಿಕೆ ಮಾಡುವ ಮಹತ್ವದ ಕಾರ್ಯವನ್ನು ಸರ್ಕಾರ ಈ ವರ್ಷ ಜೂನ್ ತಿಂಗಳಲ್ಲಿ ಆರಂಭಿಸಿತ್ತು. ಇದಕ್ಕೆ ಬಹುದೊಡ್ಡ ಸ್ವಾಗತ ವ್ಯಕ್ತವಾಗಿತ್ತು. ಅಂತ್ಯೋದಯ ಚೀಟಿದಾರರಿಗೆ 15 ಕೆ.ಜಿ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ 2 ಕೆ.ಜಿ ಜೋಳ ವಿತರಣೆಯನ್ನು ಮಾಡಲಾಯಿತು. ಆದರೆ ಈ ಯೋಜನೆ ಎರಡೇ ತಿಂಗಳಲ್ಲಿ ಸ್ಥಗಿತವಾಗಿ, ಜೋಳ ದೊರಕದಂತಾಗಿದೆ.

ಮಾರುಕಟ್ಟೆಯಲ್ಲಿ ಸಾಕಷ್ಟು ಜೋಳ ಸಿಗುತ್ತಿಲ್ಲ, ಈ ಕಾರಣಕ್ಕೆ ಪಡಿತರದಲ್ಲಿ ಜೋಳ ಹಂಚಿಕೆಯನ್ನು ಆಗಸ್ಟ್ ತಿಂಗಳಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ನೀಡಿದೆ.

ಜೋಳ ಮಳೆಯನ್ನು ಅವಲಂಬಿಸಿ ಬೆಳೆಯುವ ಸುಲಭ ಬೆಳೆ. ರಸಗೊಬ್ಬರ, ಕೀಟನಾಶಕದ ಅವಶ್ಯಕತೆ ಇಲ್ಲ. ಬೂದಿಗೊಬ್ಬರ, ಸಗಣಿ ಗೊಬ್ಬರ ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. ಇದು ನಾಲ್ಕು ತಿಂಗಳ ಅವಧಿಯ ಬೆಳೆ. ನೀಟಾಗಿ ಐದರಿಂದ ಐದೂವರೆ ಅಡಿ ಎತ್ತರ ಬೆಳೆಯುವ ಜೋಳದ ಪೈರು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಜೋಳ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ, ರೋಗನಿರೋಧಕ ಶಕ್ತಿಯನ್ನು ಯಥೇಚ್ಛವಾಗಿ ಹೊಂದಿರುವ ಸಮತೋಲಿತ ಆಹಾರವಾಗಿದೆ. ಪ್ರೋಟೀನ್, ವಿಟಮಿನ್ ಮತ್ತು ಕಾರ್ಬೊಹೈಡ್ರೇಟ್‌ಗಳನ್ನು ಮನುಷ್ಯ ದೇಹಕ್ಕೆ ಬೇಕಾಗುವ ಪ್ರಮಾಣದಲ್ಲಿ ಜೋಳ ಹೊಂದಿರುವುದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ನಾರಿನ ಅಂಶ ಹೆಚ್ಚಾಗಿದ್ದು ನಿಧಾನವಾಗಿ ಜೀರ್ಣವಾಗುವುದರಿಂದ
ಹೃದ್ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಅಕ್ಕಿ ಹಾಗೂ ಗೋಧಿಗಿಂತ 4-5 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ ಮತ್ತು ಜೀವಸತ್ವಗಳನ್ನು ಜೋಳ ಹೊಂದಿದೆ.

ಎರಡು ದಶಕಗಳ ಹಿಂದಿನವರೆಗೆ ಜೋಳ, ಉತ್ತರ ಕರ್ನಾಟಕ ಭಾಗದ ಮುಖ್ಯ ಆಹಾರವಾಗಿತ್ತು. ಎಲ್ಲರ ಮನೆಗಳಲ್ಲಿ ರೊಟ್ಟಿ ಊಟದ ಸಂಭ್ರಮ ಇರುತ್ತಿತ್ತು. ಈಗ ಜೋಳ ಕಡಿಮೆಯಾಗಿ ಗೋಧಿ ಹಾಗೂ ಅಕ್ಕಿಯನ್ನು ಜನ ಹೆಚ್ಚಾಗಿ ಬಳಸುತ್ತಿದ್ದಾರೆ.

ಕಾದಂಬರಿಕಾರ ಬಸವರಾಜ ಕಟ್ಟೀಮನಿ ಅವರ ‘ಜೋಳದ ಬೆಳೆಯ ನಡುವೆ’ ಕಾದಂಬರಿ ಪ್ರಸಿದ್ಧ
ವಾಗಿದೆ. ಸೊಗಸಾಗಿ ಬೆಳೆದು ನಿಂತ ಹಸಿರು ಜೋಳದ ಪೈರಿನ ನಡುವೆ ಯುವ ರೈತರು, ಮಕ್ಕಳು ನಲಿಯುತ್ತಿದ್ದ ಸಂಗತಿಯನ್ನು ತುಂಬ ರಮ್ಯವಾಗಿ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೋಳ ಈ ಭಾಗದ ಕಲೆ, ಸಂಸ್ಕೃತಿಯ ಭಾಗವೂ ಆಗಿತ್ತು ಎಂಬುದನ್ನು ಕಾದಂಬರಿ ಅರ್ಥಪೂರ್ಣವಾಗಿ ಹೇಳುತ್ತದೆ.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳು ಉತ್ತರ ಕರ್ನಾಟಕ ಹಾಗೂ ಸೊಲ್ಲಾಪುರ ಭಾಗದಲ್ಲಿ ಜೋಳ ಬೆಳೆಯುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಕಡಿಮೆ ಮಳೆ, ಬರ ಪ್ರದೇಶದಲ್ಲಿ ಜನರನ್ನು ಜೋಳದ ಬೆಳೆ ಮಾತ್ರ ಸಲಹಬಲ್ಲದು ಎಂಬುದನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದರು.

ವಿಜಯಪುರ, ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಸೊಲ್ಲಾಪುರದಲ್ಲಿ ಜೋಳದ ಕೃಷಿ ಸಂಶೋಧನಾ ಕೇಂದ್ರಗಳನ್ನು ಬ್ರಿಟಿಷರು ಆರಂಭಿಸಿದ್ದರು. ಜೋಳದ ಬೆಳೆಗೆ ಕಂದಾಯ ಇಲಾಖೆಯ ಮೂಲಕ ಸಾಲ ಕೊಡುವ ವ್ಯವಸ್ಥೆಯನ್ನೂ ಮಾಡಿದ್ದರು. ತೀವ್ರ ಬರ, ರೋಗರುಜಿನಗಳ ಹಾವಳಿ ಇದ್ದ ಕಠಿಣ ದಿನಗಳಲ್ಲಿ ಉತ್ತರ ಕರ್ನಾಟಕದ ಜನರನ್ನು ಕಾಪಾಡಿದ್ದು ಜೋಳ.

ಒಂದು ಎಕರೆಯಲ್ಲಿ 5 ಕ್ವಿಂಟಲ್ ಜೋಳ ಬೆಳೆಯಬಹುದು. ಇದರಿಂದ ಬರುವ ಆದಾಯ ಸುಮಾರು ₹ 15 ಸಾವಿರ. ಆದರೆ, ಒಂದು ಎಕರೆ ಜೋಳದ ಕೃಷಿಗೆ ₹ 15 ಸಾವಿರಕ್ಕಿಂತಲೂ ಹೆಚ್ಚು ಖರ್ಚು ಬರುತ್ತದೆ ಎನ್ನುತ್ತಾರೆ ರೈತರು. ಹೀಗಾಗಿ ರೈತರು ಜೋಳ ಬೆಳೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೆಲವು ಕೃಷಿಕರು ತಮ್ಮ ಕುಟುಂಬಕ್ಕೆ ಬೇಕಾಗುವಷ್ಟು ಮಾತ್ರ ಜೋಳ ಬೆಳೆಯುತ್ತಿದ್ದಾರೆ.

ಸರ್ಕಾರ ರಾಗಿಗೆ ಕ್ವಿಂಟಲ್‍ಗೆ ₹ 3,578 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಜೋಳಕ್ಕೆ ಕೇವಲ ₹ 2,970 ನಿಗದಿ ಮಾಡಿದೆ. ಈ ತಾರತಮ್ಯ ನಿವಾರಣೆಗೆ ರೈತರು ಸತತ ಆಗ್ರಹ ಮಾಡಿದರೂ
ಪ್ರಯೋಜನವಾಗಿಲ್ಲ. ಜೋಳಕ್ಕೆ ಲಾಭದಾಯಕ ಬೆಲೆ ನಿಗದಿ ಮಾಡಬೇಕು. ಜೋಳ ಬೆಳೆಯುವುದಕ್ಕೂ ಸಾಲ ಕೊಡುವ ಹಾಗೂ ಸಹಾಯಧನ ನೀಡುವ ಯೋಜನೆಗಳು ಜಾರಿಯಾಗಬೇಕು.

ಉತ್ತರ ಕರ್ನಾಟಕದ ಜನ ತಲೆತಲಾಂತರಗಳಿಂದ ಜೋಳದ ಊಟ ಮಾಡುತ್ತ ಬೆಳೆದಿದ್ದಾರೆ. ಜೋಳ ಈ ಭಾಗದ ಜನರ ಆರೋಗ್ಯಕ್ಕೆ ಪೂರಕ ಆಹಾರವಾಗಿದೆ. ಜೋಳದ ಊಟದ ಸಂಸ್ಕೃತಿ ಉಳಿಸಿಕೊಳ್ಳುವುದು ಬಹಳ ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT