ಶುಕ್ರವಾರ, ಮಾರ್ಚ್ 27, 2020
19 °C
ಚೀನಾದ ಆರ್ಥಿಕ ಯಂತ್ರದ ಕರ್ಕಶ ಸದ್ದು, ವಿಶ್ವದ ಇತರೆಡೆಗಳ ಬೆಳವಣಿಗೆಗೆ ಬೆದರಿಕೆ ಒಡ್ಡುತ್ತದೆ

ಕೊರೊನಾದ ಆರ್ಥಿಕ ಪರಿಣಾಮ

ಕೀತ್ ಬ್ರಾಡ್ಶರ್ Updated:

ಅಕ್ಷರ ಗಾತ್ರ : | |

Prajavani

ಚೀನಾ ದೇಶವು ಆರ್ಥಿಕ ಬೆಳವಣಿಗೆ ಮಟ್ಟವನ್ನು ದಶಕಗಳಿಂದ ಕಾಯ್ದುಕೊಂಡಿತ್ತು. ತಿಯಾನಾನ್‌ಮೆನ್‌ ಚೌಕದಲ್ಲಿನ ದಬ್ಬಾಳಿಕೆ, ಜಾಗತಿಕ ಆರ್ಥಿಕ ಕುಸಿತ, ಅಮೆರಿಕದ ಜೊತೆಗಿನ ವಾಣಿಜ್ಯ ಸಮರವನ್ನು ಚೀನಾ ಎದುರಿಸಿ ನಿಂತಿತ್ತು. ಆದರೆ, ಆ ದೇಶ ಈಗ ಕೊರೊನಾ ವೈರಾಣು ಸೃಷ್ಟಿಸಿರುವ ಉಪಟಳವನ್ನು ತಡೆದುಕೊಳ್ಳುವುದು ಸುಲಭವಲ್ಲ. ಇದರಿಂದಾಗಿ, ವಿಶ್ವದ ಇತರ ರಾಷ್ಟ್ರಗಳು ಆರ್ಥಿಕ ಮಂದಗತಿಯಿಂದ ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಲಿದೆ.

ವೈರಾಣುವಿನಿಂದ ಆಗಿರುವ ನಷ್ಟವು ಈಚೆಗೆ ಬಿಡುಗಡೆಯಾದ ಅಂಕಿ–ಅಂಶಗಳಲ್ಲಿ ಗಾಢವಾಗಿ ಕಾಣಿಸಿದೆ. ಕೈಗಾರಿಕಾ ಉತ್ಪಾದನೆ, ಚಿಲ್ಲರೆ ಮಾರಾಟ ಮತ್ತು ಹೂಡಿಕೆಯಲ್ಲಿ ಈ ವರ್ಷದ ಆರಂಭದ ಎರಡು ತಿಂಗಳುಗಳ ಅವಧಿಯಲ್ಲಿ (ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ) ಎರಡು ಅಂಕಿಗಳ ಕುಸಿತ ಕಂಡುಬಂದಿದೆ. 1976ರಲ್ಲಿ ತಾಂಗ್ಶಾನ್‌ನಲ್ಲಿನ ಭೂಕಂಪ ಹಾಗೂ ಮಾವೊನ ಸಾವಿನ ನಂತರ ಅರ್ಥವ್ಯವಸ್ಥೆ ಈ ರೀತಿ ಆಗಿರುವುದು ಇದೇ ಮೊದಲು.

ವಿಶ್ವದ ಮೇಲೆ ಇದರ ಅಡ್ಡಪರಿಣಾಮಗಳು ಮಹತ್ವದ್ದಾಗಿರುತ್ತವೆ. ಅಂಗೋಲಾ, ಸಿಯಾರಾ ಲಿಯೋನ್ ಮತ್ತು ಚಿಲಿಯಿಂದ ಬರುವ ತೈಲ ಹಾಗೂ ಇತರ ವಸ್ತುಗಳನ್ನು ಚೀನಾದ ಕಾರ್ಖಾನೆಗಳು ನೆಚ್ಚಿಕೊಂಡಿವೆ. ಚೀನಾದಲ್ಲಿ ಆ್ಯಪಲ್‌ ಫೋನುಗಳಿಗೆ, ಷೆವರ್ಲೆ ಕಾರುಗಳಿಗೆ, ಸ್ಟಾರ್‌ಬಕ್ಸ್‌ ಕಾಫಿಗೆ ದೊಡ್ಡ ಬೇಡಿಕೆಯಿದೆ. ಬ್ರೆಜಿಲ್ ಅಥವಾ ಆಸ್ಟ್ರೇಲಿಯಾದ ಗಣಿಗಳಿಂದ ತೆಗೆದ ಅದಿರಿನಿಂದ ಸಿದ್ಧಪಡಿಸಿದ ಕಬ್ಬಿಣವು ಚೀನಾದ ನಿರ್ಮಾಣ ಕಾರ್ಯಗಳಿಗೆ ಬಳಕೆಯಾಗುತ್ತದೆ. ‘ಮತ್ತೆ ಹಣ ಖರ್ಚು ಮಾಡುವಂತೆ ಜನರನ್ನು ಒಪ್ಪಿಸಲು ಸಾಧ್ಯವಾಗದಿದ್ದರೆ ಅದರ ಪರಿಣಾಮವು ಪೂರ್ವ ಏಷ್ಯಾ, ಯುರೋಪ್‌, ಅಮೆರಿಕದ ಮೇಲೆ ಆಗಬಹುದು. ಇಡೀ ವಿಶ್ವವೇ ಆಘಾತ ಎದುರಿಸಬೇಕಾಗಬಹುದು’ ಎನ್ನುತ್ತಾರೆ ಪೀಕಿಂಗ್ ವಿಶ್ವವಿದ್ಯಾಲಯದಲ್ಲಿನ ಅರ್ಥಶಾಸ್ತ್ರಜ್ಞ ಕಾವ್ ಹೆಪಿಂಗ್.

ಈ ವೈರಾಣು ವುಹಾನ್ ನಗರದಿಂದ ಹರಡಲು ಆರಂಭವಾದಾಗ, ಇಡೀ ದೇಶವನ್ನು ಬಂದ್ ಮಾಡುವ ತೀರ್ಮಾನವನ್ನು ಚೀನಾ ಕೈಗೊಂಡಿತು. ಜನರ ಸಂಚಾರ ಹಾಗೂ ಸರಕು ಸಾಗಣೆ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತು. ಅರ್ಥವ್ಯವಸ್ಥೆ ಸ್ಥಗಿತವಾಗುವತ್ತ ಬಂತು. ವಿಶ್ವದ ಎರಡನೆಯ ಅತಿದೊಡ್ಡ ಅರ್ಥವ್ಯವಸ್ಥೆಯನ್ನು ನಿಲ್ಲಿಸುವ ಕೆಲಸವು ಅದಕ್ಕೆ ಪುನಃ ಚಾಲನೆ ನೀಡುವುದಕ್ಕಿಂತಲೂ ಸುಲಭದ್ದಾಗಿತ್ತು ಎಂಬುದು ಈಗ ಸಾಬೀತಾಗಿದೆ. ಅರ್ಥವ್ಯವಸ್ಥೆ ಕುಸಿಯುವುದು ಮುಂದುವರಿಯಬಹುದು ಎನ್ನುವ ಆತಂಕ ಎದುರಾಗಿದೆ. ವ್ಯವಸ್ಥೆ ಪೂರ್ತಿಯಾಗಿ ಸರಿಹೋಗಲು ತಿಂಗಳುಗಳೇ ಬೇಕಾಗಬಹುದು.

ಅಧಿಕೃತ ಅಂಕಿ–ಅಂಶಗಳ ಅನ್ವಯ ಚೀನಾದ ಬಹುತೇಕ ಕಾರ್ಖಾನೆಗಳು ಈಗ ಪುನರಾರಂಭವಾಗಿವೆ. ಆದರೆ ಅವು ತಮ್ಮ ಪೂರ್ಣ ಸಾಮರ್ಥ್ಯದ ಶೇಕಡ 66ರಷ್ಟನ್ನು ಮಾತ್ರ ಬಳಸಿಕೊಳ್ಳುತ್ತಿವೆ. ಇಲ್ಲಿ ಎರಡು ಸಮಸ್ಯೆಗಳಿವೆ– ಕಾರ್ಮಿಕರು ಹಾಗೂ ಗ್ರಾಹಕರ ಕೊರತೆ. ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರು ಪ್ರತ್ಯೇಕತಾ ಕೊಠಡಿಗಳಲ್ಲಿ ಇದ್ದಾರೆ ಅಥವಾ ತಮ್ಮ ಊರುಗಳಿಗೆ ಮರಳಿದ್ದಾರೆ.

ಚೀನಾದ ಗ್ರಾಹಕರು ಹೊಸದೇನನ್ನೂ ಖರೀದಿಸುತ್ತಿಲ್ಲ. ಕಾರು ಡೀಲರ್‌ಗಳು ಖಾಲಿ ಕೂತಿದ್ದಾರೆ. ಶಾಂಘೈನ ದರ್ಶಿನಿಗಳು, ಮಧ್ಯಮ ಪ್ರಮಾಣದ ಅಂಗಡಿಗಳು ಸೇರಿದಂತೆ ಹಲವೆಡೆ ಗ್ರಾಹಕರ ಸಂಖ್ಯೆ ಮಾಮೂಲಿಗಿಂತ ತೀರಾ ಕಡಿಮೆಯಿದೆ.

‘ವಸ್ತುಗಳ ಪೂರೈಕೆಯ ಸಮಸ್ಯೆಯನ್ನು ಸರಿಪಡಿಸಬಹುದು. ಆದರೆ, ಬೇಡಿಕೆಯನ್ನು ಸೃಷ್ಟಿಸುವುದು ಕಷ್ಟದ ಕೆಲಸ’ ಎನ್ನುತ್ತಾರೆ ಶಾಂಘೈನಲ್ಲಿ ಇರುವ ಅಮೆರಿಕದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕರ್ ಗಿಬ್ಸ್. ಚೀನಾದ ಶಕ್ತಿಶಾಲಿ ಆರ್ಥಿಕ ಯಂತ್ರ ಕರ್ಕಶ ಸದ್ದು ಮಾಡಿದಾಗ, ವಿಶ್ವದ ಇತರೆಡೆಗಳಲ್ಲಿ ಬೆಳವಣಿಗೆಗೆ ಬೆದರಿಕೆ ಎದುರಾಗುತ್ತದೆ. ಚೀನಾಕ್ಕೆ ಬೃಹತ್ ಪ್ರಮಾಣದಲ್ಲಿ ಕಬ್ಬಿಣದ ಅದಿರು ರಫ್ತು ಮಾಡುವುದು ಆಸ್ಟ್ರೇಲಿಯಾ. ಅಲ್ಲಿನ ಷೇರುಮಾರುಕಟ್ಟೆಯು ಈಚಿನ ದಿನಗಳಲ್ಲಿ ಅತಿಹೆಚ್ಚು ಕುಸಿತ ಕಂಡಿದೆ.

ಜರ್ಮನಿಯ ಕಾರು ತಯಾರಕರು ಚೀನಾದ ಮಾರುಕಟ್ಟೆಯನ್ನು ಅತಿಯಾಗಿ ಅವಲಂಬಿಸಿದ್ದಾರೆ. ಅವರ ಮಾರಾಟವು ಕುಸಿದಿದೆ. ದ್ರವೀಕೃತ ನೈಸರ್ಗಿಕ ಅನಿಲ ಹೊತ್ತ ಹಡಗುಗಳನ್ನು ಚೀನಾ ಹಿಂದಕ್ಕೆ ಕಳುಹಿಸಿದೆ. ತೈಲ ಬಳಕೆ ಕಡಿಮೆ ಮಾಡಿದೆ. ಹಾಗಾಗಿ, ಮಧ್ಯ
ಪ್ರಾಚ್ಯದ ಇಂಧನ ಉತ್ಪಾದಕರು ತೊಂದರೆಗೆ ಸಿಲುಕಿದ್ದಾರೆ. ಏನೇ ಆಗುತ್ತಿದ್ದರೂ ತನ್ನ ಅರ್ಥವ್ಯವಸ್ಥೆಯ ಬೆಳವಣಿಗೆ ಸ್ಥಿರವಾಗಿದೆ ಎಂದು ಹೇಳುವುದು ಚೀನಾದ ಚಾಳಿ. ಹಾಗಾಗಿ, ಮೊದಲ ತ್ರೈಮಾಸಿಕದಲ್ಲಿ ತನ್ನ ಅರ್ಥವ್ಯವಸ್ಥೆ ಕುಸಿದಿದೆ ಎಂಬುದನ್ನು ಚೀನಾ ಒಪ್ಪಿಕೊಳ್ಳು
ತ್ತದೆಯೇ ಎಂಬ ಪ್ರಶ್ನೆ ಅರ್ಥಶಾಸ್ತ್ರಜ್ಞರಲ್ಲಿ ಇದೆ.

ಆದರೆ, ಈ ವರ್ಷದ ಮೊದಲ ತ್ರೈಮಾಸಿಕದ ವರದಿ ನೀಡುವ ಸಂದರ್ಭದಲ್ಲಿ ಚೀನಾವು ತನ್ನ ಅನುಮಾನಾಸ್ಪದ ಪರಂಪರೆಯನ್ನು ಕೈಬಿಟ್ಟು, ತೊಂದರೆಗೆ ಒಳಗಾಗಿರುವ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣ ನೀಡುವ ಅಂಕಿ–ಅಂಶಗಳನ್ನು ಬಿಡುಗಡೆ ಮಾಡುವ ಸೂಚನೆ ಇದೆ. ‘ಬೆಳವಣಿಗೆ ದರವು ಸೊನ್ನೆಗಿಂತ ಕಡಿಮೆ (ಶೇಕಡ –2 ಅಥವಾ –3) ಆಗಬಹುದು ಎಂಬ ನಿರೀಕ್ಷೆ ನಮ್ಮಲ್ಲಿ ಬಹುತೇಕರಿಗೆ ಇದೆ’ ಎಂದು ಜಾಗತಿಕ ಮಾರುಕಟ್ಟೆ ವಿಶ್ಲೇಷಕ ಝು ಚಾವೊಪಿಂಗ್‌ ಹೇಳಿದರು.

ಸಮಸ್ಯೆಯು ಅಂದುಕೊಂಡಷ್ಟು ತೀವ್ರವಾಗಿಲ್ಲ ಎಂದು ಬಿಂಬಿಸಲು ಸರ್ಕಾರದ ಅಧಿಕಾರಿಗಳು ಯತ್ನಿಸಿದ್ದಾರೆ. ‘ಸಾಂಕ್ರಾಮಿಕದ ಪರಿಣಾಮವು ಅಲ್ಪಾವಧಿಯದ್ದು. ಅದನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದು ಚೀನಾದ ರಾಷ್ಟ್ರೀಯ ಅಂಕಿ–ಅಂಶಗಳ ಬ್ಯೂರೊದ ಅಧಿಕಾರಿ ಮಾವೊ ಶೆಂಗ್ಯಾಂಗ್‌ ಹೇಳಿದರು. ಮೊದಲ ತ್ರೈಮಾಸಿಕ ದಲ್ಲಿ ಅರ್ಥವ್ಯವಸ್ಥೆ ಕುಗ್ಗಿತೇ ಎಂಬುದನ್ನು ಇಷ್ಟು ಬೇಗ ಅಂದಾಜಿಸಲಾಗದು ಎಂದರು. ಚೀನಾದ ಅರ್ಥವ್ಯವಸ್ಥೆ ಸಾಮಾನ್ಯವಾಗಿ ಜನವರಿ–ಫೆಬ್ರುವರಿ ಅವಧಿಯಲ್ಲಿ ಮಂದಗತಿಗೆ ತಿರುಗುತ್ತದೆ ಎನ್ನುವುದು ಅವರ ವಿವರಣೆ.

ಮೊದಲ ಎರಡು ತಿಂಗಳುಗಳ ಅಂಕಿ–ಅಂಶಗಳು ಆಶಾದಾಯಕವಾಗಿ ಇರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಆದರೆ, ಈಚೆಗೆ ಬಿಡುಗಡೆಯಾದ ವಿವರಗಳು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಕೆಟ್ಟ ಸುದ್ದಿ ತಂದಿವೆ. ಹಲವಾರು ಅಂಗಡಿಗಳು ಮಾಮೂಲಿಗಿಂತ ಹೆಚ್ಚಿನ ಅವಧಿಗೆ ಮುಚ್ಚಿದ್ದ ಪರಿಣಾಮ, ಚಿಲ್ಲರೆ ಮಾರಾಟದ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 20.5ರಷ್ಟು ಕಡಿಮೆಯಾಗಿದೆ. ಅಂಗಡಿಗಳು ಫೆಬ್ರುವರಿ ಯಲ್ಲಿ ಮತ್ತೆ ವಹಿವಾಟು ಆರಂಭಿಸಿದರೂ ಮಾರ್ಚ್‌ ಮೊದಲ ವಾರದವರೆಗೆ ಗ್ರಾಹಕರೇ ಬರುತ್ತಿರಲಿಲ್ಲ.

ಕೈಗಾರಿಕಾ ಉತ್ಪಾದನೆ ಫೆಬ್ರುವರಿಯಲ್ಲಿ ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡ 13.5ರಷ್ಟು ಕುಸಿದಿದೆ. ಫೆಬ್ರುವರಿ ಕೊನೆಯ ವಾರದವರೆಗೆ ಹಲವು ಕಾರ್ಖಾನೆಗಳು ಬಾಗಿಲು ತೆರೆದಿರಲಿಲ್ಲ. ಕಟ್ಟಡ, ರಸ್ತೆ, ರೈಲುಹಳಿಗಳಂತಹ ಸ್ಥಿರಾಸ್ತಿಗಳ ಮೇಲಿನ ಹೂಡಿ ಕೆಯು ಕಳೆದ ತಿಂಗಳಿನಲ್ಲಿ ಶೇಕಡ 24.5ರಷ್ಟು ಕುಸಿದಿದೆ.

ಕೊರೊನಾ–2 ಸಾಂಕ್ರಾಮಿಕವು ಚೀನಾದ ಆರ್ಥಿಕ ಗುರಿಗಳ ಮರುಹೊಂದಾಣಿಕೆಗೆ ಕಾರಣವಾಗುತ್ತಿದೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಕಡುಬಡತನವನ್ನು ಈ ವರ್ಷಾಂತ್ಯದ ವೇಳೆ ಇಲ್ಲವಾಗಿಸಬೇಕು ಎಂದು ಕರೆ ನೀಡಿದ್ದರು. ಈ ವಿಚಾರದಲ್ಲಿ ತುಸು ಮರುಹೊಂದಾಣಿಕೆ ಮಾಡಿಕೊಳ್ಳುವ ಸೂಚನೆಯನ್ನು ಸರ್ಕಾರವೇ ನೀಡಿದೆ. ಸರ್ಕಾರಿ ಸ್ವಾಮ್ಯದ ‘ಚೀನಾ ಡೈಲಿ’ ಪತ್ರಿಕೆಯಲ್ಲಿನ ವರದಿಯೊಂದು, ‘ಈ ವರ್ಷಾಂತ್ಯದ ವೇಳೆಗೆ ಕಡುಬಡತನವನ್ನು ನಿರ್ಮೂಲಗೊಳಿಸ ಬಹುದಾದರೂ, 2021ರ ವೇಳೆಗೆ ಆರ್ಥಿಕ ಉತ್ಪಾದನೆ
ಯನ್ನು ದ್ವಿಗುಣಗೊಳಿಸಬೇಕಾದ ಗುರಿಯನ್ನು ಇಟ್ಟುಕೊಳ್ಳಬೇಕಿದೆ’ ಎಂದು ಹೇಳಿದೆ.

ಚೀನಾ ಈ ವರ್ಷದ ತನ್ನ ಗುರಿ ತಲುಪಲು ಯಾವ ಪ್ರಮಾಣದ ಆರ್ಥಿಕ ಬೆಳವಣಿಗೆ ಕಾಯ್ದುಕೊಳ್ಳಬೇಕು ಎಂಬುದು ಸ್ಪಷ್ಟವಿಲ್ಲ. ಅಂದಾಜು ಶೇ 5ರಷ್ಟರಿಂದಶೇ 6ರಷ್ಟು ಬೆಳವಣಿಗೆಯ ಅಗತ್ಯವಿದೆ ಎನ್ನಲಾಗಿದೆ. ಆದರೆ, ಚೀನಾದ ಬೆಳವಣಿಗೆ ಈ ವರ್ಷ ಶೇಕಡ 5.2ರಷ್ಟು ಇರಲಿದೆ ಎಂದು ಫಿಚ್ ಸಲ್ಯೂಷನ್ಸ್ ಅಂದಾಜಿಸಿದೆ. ಅದು ಶೇ 4.2ರಷ್ಟು ಇರಲಿದೆ ಎಂದು ಬ್ಯಾಂಕ್ ಆಫ್ ಆಸ್ಟ್ರೇಲಿಯಾ ಹೇಳಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು