ಮಂಗಳವಾರ, ಜೂನ್ 2, 2020
27 °C
ಜಗತ್ತು ತನಗೆ ಮಾತ್ರ ಎಂಬ ಮನುಷ್ಯನ ನಿಲುವಿಗೆ ಕೊರೊನಾ ಸಡ್ಡು ಹೊಡೆಯುತ್ತಿದೆ

ಸಂಗತ | ಬಯಲಾಗಿವೆ ಮಹಾಪೊಳ್ಳುಗಳು

ಡಾ. ಎಸ್.ನಟರಾಜ ಬೂದಾಳು Updated:

ಅಕ್ಷರ ಗಾತ್ರ : | |

Prajavani

‘ಕೊರೊನಾ ವೈರಸ್ ವಿಶ್ವವನ್ನೇ ನಡುಗಿಸುತ್ತಿದೆ’, ‘ಮಹಾಮಾರಿಗೆ ನಲುಗಿದ ಜಗತ್ತು’... ಇತ್ಯಾದಿ ತಲೆಬರಹಗಳು ಮಾಧ್ಯಮಗಳಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಮುಖಕ್ಕೆ ರಾಚುತ್ತಿವೆ. ಆದರೆ ಕೊರೊನಾ ವೈರಸ್ ವಿಶ್ವವನ್ನೂ ನಡುಗಿಸುತ್ತಿಲ್ಲ, ಜಗತ್ತನ್ನೂ ನಲುಗಿಸುತ್ತಿಲ್ಲ; ಅದು ಹೆದರಿಸುತ್ತಿರುವುದು ಮನುಷ್ಯನನ್ನು ಮಾತ್ರ! ತನಗೆ ಬಂದಿರುವ ಈ ಸಂಕಟವನ್ನು ಇಡೀ ಜಗತ್ತಿನ ಸಂಕಟವೆಂದು ಬೊಬ್ಬೆ ಹೊಡೆಯುತ್ತಿರುವ ಮನುಷ್ಯನನ್ನು ಕಂಡು ನಿಸರ್ಗಕ್ಕೆ ನಗಲೂ ಪುರಸತ್ತಿಲ್ಲ. ಜಗತ್ತೆಂದರೆ ಮನುಷ್ಯ, ಉಳಿದ ಎಲ್ಲವೂ ಅವನಿಗಾಗಿ ಎಂಬ ನಿಲುವೇ ಒಂದು ಮಹಾಪೊಳ್ಳು. ಮನುಷ್ಯ ಗುಡ್ಡೆ ಹಾಕಿಕೊಂಡಿರುವ ಪೊಳ್ಳುಗಳನ್ನೆಲ್ಲ ಕೊರೊನಾ ಬಯಲಿಗೆ ಎಳೆದಿದೆ.

ಕೆಲವು ಮಹಾಪೊಳ್ಳುಗಳ ಮಾದರಿಗಳು ಇವು

ಅಮೆರಿಕ ಎನ್ನುವುದೊಂದು ಸಾರ್ವಕಾಲಿಕ ಬಲಿಷ್ಠ ರಾಷ್ಟ್ರ ಎಂಬ ಮಹಾಪೊಳ್ಳು ಒಂದೇ ವಾರದಲ್ಲಿ ಕಸದ ರಾಶಿ ಸೇರಿಕೊಂಡಿದೆ.

* ಹಲವಾರು ಧರ್ಮಗಳ ನೂರಾರು ದೇವರುಗಳು, ದೇವದೂತರು, ಪ್ರವಾದಿಗಳನ್ನೆಲ್ಲ ಕೊರೊನಾ ಅವರವರ ಗುಡಿ, ಚರ್ಚು, ಮಸೀದಿಗಳಲ್ಲಿ ಕೂಡಿಹಾಕಿದೆ.

* ದೃಶ್ಯಮಾಧ್ಯಮಗಳ ಮೂಲಕ ಮನೆ ಮನೆಗೆ ತೀರ್ಥಪ್ರಸಾದ ಹರಿಸುತ್ತಿದ್ದ ಜಗದ್ಗುರುಗಳು ಎಂತಹ ಜಾಗತಿಕ ಸಮಸ್ಯೆಗಳನ್ನೂ ಕ್ಷಣಾರ್ಧದಲ್ಲಿ ಬಗೆಹರಿಸುತ್ತಿದ್ದರು! ಆದರೆ ಕೊರೊನಾ ಎಂಬ ಯಃಕಶ್ಚಿತ್ ಕಣಕ್ಕೆ ಅವರಲ್ಲಿ ಪರಿಹಾರವಿಲ್ಲ.

* ಬೃಹತ್ತಾದ ಸೈನ್ಯ, ಕೋಟ್ಯಂತರ ಬೆಲೆಯ ಯುದ್ಧೋಪಕರಣಗಳು, ಅತ್ಯಾಧುನಿಕ ಮಿಸೈಲ್‍ಗಳು,
ಅಣು ಬಾಂಬುಗಳಿಂದ ತಮ್ಮ ದೇಶವನ್ನು ರಕ್ಷಿಸಿಕೊಳ್ಳಬಹುದು ಎಂದುಕೊಂಡಿದ್ದ ವಿಶ್ವದ ಯಜಮಾನರುಗಳಿಗೆ ಕೊರೊನಾ ಮುಂದಿಟ್ಟ ಪ್ರಶ್ನೆ: ಯಾರಿಂದ ರಕ್ಷಿಸಿಕೊಳ್ಳಲು ಇವನ್ನೆಲ್ಲ ಗುಡ್ಡೆ ಹಾಕಿಕೊಂಡಿದ್ದೀರಿ? ನಿಮ್ಮನ್ನು ಎದುರಿಸಲು ನಿಮಗಿಂತ ಬಲಶಾಲಿಯೇ ಆಗಬೇಕೇ?

* ವಿಜ್ಞಾನದ ವಿವೇಕಕ್ಕೆ ನಮ್ಮ ಪ್ರಾಚೀನಜ್ಞಾನ ಸಡ್ಡು ಹೊಡೆಯುತ್ತದೆ, ನಮ್ಮ ಪಾರಂಪರಿಕ ತಿಳಿವಳಿಕೆಗೆ ಮೀರಿದ್ದು ಯಾವುದೂ ಇಲ್ಲ ಎಂಬೆಲ್ಲ ಮಾತುಗಳೂ ಸದ್ಯಕ್ಕೆ ಬಾಯಿ ಹೊಲಿದುಕೊಂಡಿವೆ.

* ಯಾವ ಯಾವ ದೇಶ ಎಷ್ಟೆಷ್ಟು ಇಂಧನವನ್ನು ಉರಿಸಿ ಇಂಗಾಲವನ್ನು ನಿಸರ್ಗಕ್ಕೆ ಸೇರಿಸಬಹುದು ಎಂಬುದನ್ನು ಹಂಚಿಹಾಕಿ, ಉಳಿದದ್ದು ನನಗೆ ಎಂಬ ನ್ಯಾಯದಾನ ಮಾಡುತ್ತಿದ್ದ ಕೋತಿ ಖರ್ಜೂರದ ನ್ಯಾಯ ಈಗ ನಗೆಪಾಟಲಾಗಿದೆ.

ವಿಶ್ವದ ಯಾವ ಜೀವಿಯೂ ವಸ್ತುವೂ ಸಂಗತಿಯೂ ಸ್ವತಂತ್ರವಲ್ಲ, ಶಾಶ್ವತವೂ ಅಲ್ಲ; ಅನೇಕ ಅಂಶಗಳ ಸಂಬಂಧವಿಲ್ಲದೆ ಯಾವ ವಸ್ತುವೂ ಉಂಟಾಗಲು ಸಾಧ್ಯವಿಲ್ಲ. ಸಂಬಂಧದಲ್ಲಿ ಮಾತ್ರ ಜಗತ್ತು. ಹಾಗಾಗಿ ಸಂಬಂಧವೆನ್ನುವುದು ದೊಡ್ಡದು; ಎಲ್ಲವೂ ನಿರಂತರ ಬದಲಾಗುತ್ತಲೇ ಇರುತ್ತವೆ ಮತ್ತು ಎಲ್ಲವೂ ನಿರಂತರ ತಲ್ಲಣದಲ್ಲಿಯೇ ಇರುತ್ತವೆ– ಎಂಬ ಸಮುತ್ಪಾದ ತತ್ವವನ್ನು ಬುದ್ಧಗುರು ಲೋಕವಿವರಣೆಯನ್ನಾಗಿ ಮಂಡಿಸಿದ. ಈ ಹೊತ್ತಿನವರೆಗೆ ವಿಜ್ಞಾನವೂ ಇದನ್ನು ಸತ್ಯವೆಂದು ಮಾನ್ಯ ಮಾಡಿದೆ.

ಇಂದಿನ ಸಮಸ್ಯೆಗೊಂದು ಸದ್ಯದ ಮನುಷ್ಯ ಪರಿಹಾರ ದೊರಕೀತು. ಅಲ್ಲಿಗೆ ಎಲ್ಲ ಬಗೆಹರಿಯಿತು ಎಂದಲ್ಲ. ಬದಲಿಗೆ, ಈ ಮೂಲಕ ನಿಸರ್ಗ ನಮಗೆ ನೀಡುತ್ತಿರುವ ಎಚ್ಚರಗಳನ್ನು ಒಪ್ಪಿಕೊಂಡು ಬಾಳಬೇಕಾದ ಅನಿವಾರ್ಯವಿದೆ. ಈ ಭೂಮಿಯು ತನ್ನ ಏಕಸ್ವಾಮ್ಯವನ್ನೇನೂ ಮನುಷ್ಯನಿಗೆ ನೀಡಿಲ್ಲ. ಅದನ್ನು ಈಡಾಡಿಕೊಂಡು ಬದುಕುತ್ತೇನೆ ಎನ್ನಲು, ಕೇಕಿನಂತೆ ತುಂಡು ತುಂಡು ಮಾಡಿ ಹೋದಷ್ಟಕ್ಕೆ ಮಾರಿಕೊಂಡು ದುಡ್ಡು ಮಾಡಿಕೊಳ್ಳುತ್ತೇನೆ ಎನ್ನಲು ಭೂಮಿ ಮನುಷ್ಯರಿಗೆಂದೇ ಇರುವ ಲೇಔಟಲ್ಲ!

ಇಲ್ಲಿರುವ ನದಿ, ಗುಡ್ಡ, ಕಾಡುಗಳನ್ನೆಲ್ಲ ದೊಗೆದೊಗೆದು, ಮೊಗೆಮೊಗೆದು ಮಾರಿ, ನಂತರ ಮಂಗಳ ಗ್ರಹಕ್ಕೆ ಹೋಗಿ ಬದುಕಲು ಸಾಧ್ಯವಿಲ್ಲ. ಆದರೆ ಸದ್ಯದ ಭಾರತೀಯ ಬದುಕಿನ ಮಾದರಿ ಮಾತ್ರ, ಮುಂದಿನ ಪೀಳಿಗೆಗೆ ಏನನ್ನೂ ಉಳಿಸಬೇಕಾಗಿಲ್ಲ ಎನ್ನುವ ತೀರ್ಮಾನವನ್ನು ತೆಗೆದುಕೊಂಡಂತಿದೆ. ಇನ್ನು ನಾವು ಹೇಗೆ ಇದ್ದೇವೆಯೋ ನಮ್ಮ ಸರ್ಕಾರಗಳೂ ಹಾಗೆಯೇ ಇವೆ!

ಇನ್ನು, ‘ಮೇಲಿಂದು ಬೆಂದಿಲ್ಲ, ಕೆಳಗಿಂದು ಸೀದಿದೆ, ಮಧ್ಯದ್ದನ್ನು ದೊಗೆದು ಇಕ್ಕು’– ಎನ್ನುವಂತಿರುವ ಭಾರತದ ಮಧ್ಯಮವರ್ಗಕ್ಕೆ ಈ ನೆಲದ ಯಾವ ಸಂಕಟಗಳ ಉಸಾಬರಿಯೂ ಬೇಡ. ಇದೊಂದು ರೀತಿಯ ವಾತಾನುಕೂಲಿ ಭಾರತ! ಎಲ್ಲ ರೀತಿಯ ನೈಸರ್ಗಿಕವಿಪತ್ತುಗಳಿಗೂ ತಲೆ ಕೊಡಬೇಕಾದವರು ರೈತರು, ಕೂಲಿಕಾರರು, ಅಸಂಘಟಿತ ವರ್ಗದ ದುಡಿಮೆಗಾರರುಮತ್ತು ಕೆಳಸ್ತರದ ಹೆಣ್ಣುಮಕ್ಕಳು. ಕೊರೊನಾದ ಸದ್ಯದ ಸಂಕಟಗಳಿಂದ ನರಳುತ್ತಿರುವವರು ಮತ್ತು ಕೊರೊನೋತ್ತರ ಸಂಕಟಗಳಿಂದ ನಲುಗಬೇಕಾದವರು ಮತ್ತೆ ಅವರೇ ಎಂಬುದು ಪ್ರಶ್ನಾತೀತವಾದುದು. ಅವರ ಸಂಕಟಗಳಿಗೆ ಸರ್ಕಾರವಷ್ಟೇ ಅಲ್ಲ, ಇಡಿಯಾಗಿ ದೇಶ ಸ್ಪಂದಿಸಬೇಕಾಗಿದೆ.

ಇದು ವಿಶ್ವಮಟ್ಟದ ಬಿಕ್ಕಟ್ಟಿನ ಸಂದರ್ಭ. ಇದು ನಮ್ಮ ಭಿನ್ನಭೇದಗಳನ್ನು ಬದಿಗಿಟ್ಟು ಯೋಚಿಸಬೇಕಾದ ಕಾಲ. ಯಾವ ಸರ್ಕಾರವೂ ಇಂತಹ ಬಿಕ್ಕಟ್ಟಿನಲ್ಲಿ ಎಲ್ಲವನ್ನೂ ಬಿಟ್ಟು ವಿಜ್ಞಾನದ ಮೊರೆ ಹೋಗಲೇಬೇಕು. ವಿಜ್ಞಾನದ ಬೆಳಕೇ ನಮ್ಮ ದಾರಿದೀಪ.

ಕೊರೊನಾ ಸಂಬಂಧದಲ್ಲಿ ಸರ್ಕಾರ ನೀಡುವ ಆದೇಶಗಳನ್ನು ಶ್ರದ್ಧೆಯಿಂದ ಪಾಲಿಸೋಣ. ಅಂಧಶ್ರದ್ಧೆ, ಮೌಢ್ಯ, ಧರ್ಮನಿಂದನೆಗಳಿಗೆ ಕೈಹಾಕದಿರೋಣ. ಭಯ ಖಂಡಿತ ಬೇಡ. ವಿಶ್ವವು ಕೊರೊನಾಮುಕ್ತ ಆಗುತ್ತದೆ. ಮತ್ತೆ ಬದುಕು ಮುಂದಕ್ಕೆ ಹರಿಯುತ್ತದೆ. ಅಲ್ಲಿಯವರೆಗೆ ತಾಳ್ಮೆ ಮತ್ತು ವಿವೇಕವನ್ನು ಕಳೆದುಕೊಳ್ಳದ ಸಮಚಿತ್ತದ ನಡೆ ಮುಖ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು