ಶನಿವಾರ, ಮೇ 8, 2021
22 °C
ಅಗತ್ಯ ಸಲಕರಣೆಗಳನ್ನು ದಾನ ಪಡೆಯುವ ಸರ್ಕಾರವು ಅವುಗಳ ಬಳಕೆಯ ಸೂಕ್ತ ತರಬೇತಿಯನ್ನು ನೀಡಬೇಕಾಗುತ್ತದೆ.

ಧರ್ಮಕ್ಕೆ ದಟ್ಟಿ ಬಂದಿದೆ: ಮೊಳ ಹಾಕಿ!

ಡಾ. ಈಶ್ವರ ಶಾಸ್ತ್ರಿ ಮೋಟಿನಸರ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಜಗತ್ತಿನಲ್ಲೆಲ್ಲ ಬದಲಾವಣೆ ಕಾಣುತ್ತಿದೆ. ಕೆಲವು ರಾಷ್ಟ್ರಗಳು ಹಿತಕರ ಸಂಬಂಧ ಹೊಂದಿರದ ರಾಷ್ಟ್ರಗಳಿಗೂ ವ್ಯಾಕ್ಸಿನ್ ನೀಡಿ ಸಹಾಯಹಸ್ತ ಚಾಚುತ್ತಿವೆ. ಮಿತ್ರ ರಾಷ್ಟ್ರಗಳು ಸಲಕರಣೆಗಳನ್ನು ನೀಡುತ್ತಿವೆ. ಅಷ್ಟೇ ಅಲ್ಲ, ಮಧುರ ಸಂಬಂಧ ಹೊಂದಿರದ ರಾಷ್ಟ್ರಗಳೂ ಸಲಕರಣೆಗಳನ್ನು ನೀಡಲು ಮುಂದಾಗುತ್ತಿವೆ. ಆದರೆ ಹೀಗೆ ಈ ಸಲಕರಣೆಗಳು ಯಾವುದೇ ಒಂದು ದೇಶಕ್ಕೆ ಬಂದಮೇಲೆ ಮುಂದೇನಾಗುತ್ತದೆ?!

ನಮ್ಮ ಮನೆಯ ಮೂರು ಮಂದಿ ಕೋವಿಡ್‌ಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆಗೆ ಮರಳಿದ ಬಳಿಕ ನಮಗೆ ಒಂದು ಆಕ್ಸಿಜನ್ ಪರೀಕ್ಷಾ ಮೀಟರ್‌ನ ಅವಶ್ಯಕತೆ ಇದೆ ಅನಿಸಿತು. ಸುಮಾರು ₹ 400ರ ಆಸುಪಾಸಿನಲ್ಲಿ ಇದ್ದ ಆ ಯಂತ್ರವನ್ನು ಮೆಡಿಕಲ್‌ ಸ್ಟೋರ್ಸ್‌ನವರು ಹೇಳಿದಷ್ಟು ಹಣ ನೀಡಿ ಮನೆಗೆ ತಂದೆ. ನಾಲ್ಕು ಕಡೆ ವಿಚಾರಿಸಿದ್ದರೆ ಸ್ವಲ್ಪ ಹಣ ಉಳಿಯುತ್ತಿತ್ತು. ಆದರೆ ಅವಶ್ಯಕತೆ ಇದ್ದಾಗ ಬೆಲೆಯ ಮುಖ ನೋಡಬಾರದು ಎಂಬ ಕಾರಣಕ್ಕೆ ಅಲ್ಲೇ ಕೊಂಡು ತಂದಿದ್ದೆ.

ಆದರೆ ಸಾರ್ವಜನಿಕ ಹಣವನ್ನು ಬಳಸುವವರು ಹೀಗೆ ಏಕಾಏಕಿ ನಿರ್ಧಾರ ಮಾಡಬಾರದು. ವಿವೇಚನೆ ಬಳಸಿ, ಬೇಕೋ ಬೇಡವೋ, ಎಷ್ಟು ದರ ನೀಡಬಹುದು, ಎಷ್ಟು ಯಂತ್ರಗಳು ಅಥವಾ ಸಲಕರಣೆಗಳ ಅವಶ್ಯಕತೆ ಇದೆ ಎಂಬುದನ್ನೆಲ್ಲಾ ಪರಿಶೀಲಿಸಿ ಪ್ರಾಮಾಣಿಕವಾಗಿ ನಿರ್ಧರಿಸಬೇಕು.

ನಿತ್ಯವೂ ಮೀಟರ್‌ನ ಪ್ರಯೋಜನ ಪಡೆಯುತ್ತಿದ್ದೆವು. ಆದರೆ ಈ ಯಂತ್ರವು ಕೆಲವು ಬಾರಿ ವಿಚಿತ್ರವಾಗಿ ವರ್ತಿಸತೊಡಗಿತು. ಮೂವರಲ್ಲಿ ಇಬ್ಬರಿಗೆ ಕೆಲವೇ ಸೆಕೆಂಡಿಗೆ ಫಲಿತಾಂಶ ತೋರಿಸಿದರೆ, ನನಗೆ ನಿಮಿಷಗಳು ಕಳೆದರೂ ತೋರಿಸುತ್ತಿರಲಿಲ್ಲ. ಹಲವಾರು ಬಾರಿ ಪ್ರಯತ್ನಿಸಿ ನಿರ್ಧಾರಕ್ಕೆ ಬಂದೆ- ‘ಈ ಯಂತ್ರವನ್ನು ನಾನು ಮುಟ್ಟುವುದಿಲ್ಲ. ಇದು ನಿಷ್ಪ್ರಯೋಜಕ’ ಎಂದು ಘೋಷಣೆ ಮಾಡಿದೆ.

ವಾಟ್ಸ್ಆ್ಯಪ್, ಫೇಸ್‌ಬುಕ್ ಪಾರಾಯಣ ಮಾಡುತ್ತಿದ್ದ ಮಡದಿ, ಯಂತ್ರವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ವಿವರಿಸಿದಳು. ಅಂಗೈ ತಣ್ಣಗಿದ್ದರೆ ಅದು ಕೆಲಸ ಮಾಡುವುದಿಲ್ಲ ಎಂದು ಹೇಳಿ, ನನ್ನ ಅಂಗೈಯನ್ನು ಕೆಲ ಸೆಕೆಂಡುಗಳ ಕಾಲ ಉಜ್ಜಿದಳು. ನಾನು ಬೆರಳು ಒಳಗಿಟ್ಟ ತಕ್ಷಣವೇ ಫಲಿತಾಂಶ ನೀಡಿತು ಆ ನಿಷ್ಪ್ರಯೋಜಕ ಯಂತ್ರ!

ತಪ್ಪು ಎಲ್ಲಿದೆ ಎಂದು ಅವಳು ಗುರುತಿಸಿರದಿದ್ದರೆ, ನಾನು ಅದನ್ನು ನಿಷ್ಪ್ರಯೋಜಕ ಎಂದೇ ತಿಳಿಯುತ್ತಿದ್ದೆ. ಹೀಗೆಯೇ ಉಪಯೋಗಿಸುವ ಪದ್ಧತಿ ಗೊತ್ತಿಲ್ಲದೆ ಸರ್ಕಾರಿ ಸಂಸ್ಥೆಗಳಲ್ಲಿ ಹಲವಾರು ವಸ್ತುಗಳನ್ನು ನಿಷ್ಪ್ರಯೋಜಕ ಎಂದು ಮೂಲೆಗೆ ಎಸೆಯಲಾಗುತ್ತದೆ.

ಈ ಪ್ರಸಂಗ ನಡೆದಾದ ಮೇಲೆ, ಹಲವು ವರ್ಷಗಳ ಹಿಂದೆ ನನಗೆ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗಳ (ಡಿ.ಎಚ್.ಒ) ಆವರಣಗಳಲ್ಲಿ ತುಂಬಿ ತುಳುಕುವ ಹರಕು ಮುರುಕು ಕಾರು, ಜೀಪು, ವ್ಯಾನುಗಳ ರಾಶಿ ನೆನಪಿಗೆ ಬಂದಿತು. ಅವೂ ಹೀಗೇ. ಹಲವು ದೇಶಗಳಿಂದ ಯಾವ ಯಾವುದೋ ಯೋಜನೆಗಳ ಹೆಸರಿನಲ್ಲಿ ಬಂದವಾಗಿ ದ್ದವು. ಕ್ಷುಲ್ಲಕ ಕಾರಣದಿಂದಾಗಿ ಜಂಗು ಹಿಡಿದು ಅಸಹ್ಯವಾಗಿ ಕಾಣುತ್ತಿದ್ದವು. ಅವು ದೇಣಿಗೆ ರೂಪದಲ್ಲಿ ಬಂದದ್ದರಿಂದ, ಅದಕ್ಕೆಂದೇ ಬಜೆಟ್ ಇಲ್ಲದ್ದರಿಂದ ಯಾರಿಗೂ ಅವುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಹರಾಜು ಹಾಕಲೂ ನೂರೆಂಟು ನಿಯಮಗಳು ಅಡ್ಡಗಾಲು, ತೊಡರುಗಾಲು ಹಾಕುತ್ತಿದ್ದವು.

ಈಗ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಾಗಿರುವ ಸಲಕರಣೆಗಳಲ್ಲಿನ ಸಣ್ಣಪುಟ್ಟ ದೋಷಗಳನ್ನು ವೈದ್ಯ ವರ್ಗ ಸರಿಪಡಿಸುವ ಸಾಧ್ಯತೆ ಇಲ್ಲ. ಹೊಸ ಉಪಕರಣಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ವೈದ್ಯರಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು.

ದಾನ ಪಡೆಯುವುದರ ಜೊತೆಗೆ ಸರ್ಕಾರವು ಅವುಗಳ ಬಳಕೆಯ ತರಬೇತಿಯನ್ನೂ ನೀಡಬೇಕಾಗುತ್ತದೆ. ಅಲ್ಲಲ್ಲಿ ಸ್ಥಾಪಿಸಲಾಗುತ್ತಿರುವ ಆಕ್ಸಿಜನ್ ತಯಾರಕ ಘಟಕಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ, ಅಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ ಹೇಗೆ ಬಳಕೆಯಾಗುತ್ತದೆ, ಕೊರೊನಾಮುಕ್ತವಾದ ಮೇಲೆ ಅದನ್ನು ಬೇರೆಯದಕ್ಕೆ ಹೇಗೆ ಬಳಸಬಹುದು ಎಂಬ ಬಗೆಗೆ ಕಣ್ಗಾವಲು ಇಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ವಾಹಿನಿಯೊಂದರ ಪ್ರಕಾರ, ಹಲವಾರು ವೆಂಟಿ ಲೇಟರ್‌ಗಳು ಸ್ಟೋರ್ ರೂಮ್‌ಗಳಲ್ಲಿ ಕೊಳೆಯುತ್ತಿವೆ. ಈಗ ಬರುತ್ತಿರುವ ಹೊಸ ನಮೂನೆಯ ಯಂತ್ರಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಒಂದು ಶಾಶ್ವತ ತಾಂತ್ರಿಕ ತಂಡದ ರಚನೆಯನ್ನು ಹಾಗೂ ಅದರ ವಿಲೇವಾರಿ ಬಗೆಗಿನ ನಿಯಮಾವಳಿಗಳನ್ನು, ಜೊತೆಗೆ ಸಾಕಷ್ಟು ಬಜೆಟ್ ಅನ್ನು ಈಗಲೇ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಡಿಎಚ್ಒ ಕಚೇರಿಯ ಕಥೆ ಆಗುತ್ತದೆ.

ನನ್ನನ್ನು ಇಡೀ ಬೆಳಗಾವಿ ವಿಭಾಗದಲ್ಲೆಲ್ಲಾ ಸುತ್ತಾಡಿಸಿದ್ದ ವಾಹನವು ಕೆಲ ವರ್ಷಗಳ ನಂತರ, ಜಡ್ಡುಗಟ್ಟಿದ ಸ್ಥಿತಿಯಲ್ಲಿ ಇದ್ದದ್ದನ್ನು ನೋಡಿ ಹೊಟ್ಟೆ ಉರಿದು ಹೋಯಿತು. ಒಂದು ಕ್ಷುಲ್ಲಕ ಕಾರಣದಿಂದಾಗಿ ಅದಕ್ಕೆ ಆ ಗತಿ ಬಂದಿತ್ತು.

ಕಳೆದ ವರ್ಷ ನಮ್ಮೂರ ಮುನಿಸಿಪಾಲಿಟಿಯಲ್ಲಿ ಸರ್ಕಾರದ ಆದೇಶದಂತೆ ಒಂದು ಸ್ಯಾನಿಟೈಸರ್ ಟಾರ್ಪಾಲಿನ ಸುರಂಗ ರಚನೆಯಾಯಿತು. ಅದರೊಳಗೆ ಹಾದು ಹೋದ ಒಬ್ಬರನ್ನೂ ನಾನು ನೋಡಲಿಲ್ಲ. ಅದನ್ನು ಎಲ್ಲಿ ಇಟ್ಟರೆ ಸೂಕ್ತ ಎಂಬುದು ಒಬ್ಬರಿಗೂ ಹೊಳೆದಿರಲಿಕ್ಕಿಲ್ಲ. ಒಂದು ವಾರೊಪ್ಪತ್ತಿನಲ್ಲಿ ಅದು ಮಾಯವಾಯಿತು. ಈಗ ಅದು ಎಲ್ಲಿದೆಯೋ ಗೊತ್ತಿಲ್ಲ.

ಪ್ರಜೆಗಳು ನೀಡಿದ ತೆರಿಗೆ ಹಣದಿಂದ ನಡೆಯುವ ಸರ್ಕಾರವು ತಾನು ಪ್ರಜೆಗಳ ಹೆಸರಿನಲ್ಲಿ ನಡೆಸುವ ಇಂತಹ ಅಂದಾದುಂದಿ ಕೆಲಸವನ್ನು ಬಿಟ್ಟು, ಸರಿಯಾಗಿ ಯೋಚಿಸಿ ಮುಂದುವರಿಯಲಿ. ಪಾರದರ್ಶಕತೆ ಢಾಳಾಗಿ ಇರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು