ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ‘ಹೊಸತು’ ಎಂಬ ಪುಳಕ

ಕಷ್ಟಗಳು ಬಾರದೆ ವರ್ಷಪೂರ್ತಿ ಸುಖ, ಸಮೃದ್ಧಿಯೇ ಇಟ್ಟಾಡಲಿ ಎಂಬ ಹಾರೈಕೆ ಸರಿಯೇ?
Last Updated 28 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

‘ನಿಮ್ಮ ಮುಂದಿನ ಜೀವನ ಸಂತೋಷದಾಯಕ ವಾಗಿರಲಿ’- ಪ್ರಸಕ್ತ ವರ್ಷ ಸಂಪನ್ನಗೊಳ್ಳಲು ಇನ್ನೂ ವಾರವಿರುವಾಗಲೇ ನನ್ನ ಮಿತ್ರರೊಬ್ಬರಿಗೆ ಬಂದ ಸಂದೇಶವಿದು. ಮೇಲ್ನೋಟಕ್ಕೆ, ಸಂತೋಷ ಸದ್ಯಕ್ಕಲ್ಲ, ಏನಿದ್ದರೂ ಮುಂದಿನ ದಿನಗಳಲ್ಲಿ ಪ್ರಾಪ್ತವಾಗಲೆಂಬ ಆಶಯವಿದ್ದಂತೆ ತೋರುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ, ಒಕ್ಕಣೆಯಲ್ಲಿ ಅವಿತ ಸಂದೇಶ ತೆರೆದುಕೊಳ್ಳುವುದು. ವರ್ತಮಾನವನ್ನು ಸಮರ್ಥ ವಾಗಿ ವ್ಯಯಿಸಿ ಭವಿತವ್ಯ ಸೊಗಸಾಗಿಸಿಕೊಳ್ಳಬೇಕೆಂಬ ಹಿತನುಡಿ ಅದು.

ಹೊಸ ವರ್ಷಕ್ಕೆ ಆಪ್ತೇಷ್ಟರಿಂದ ಶುಭಾಶಯ, ಹಾರೈಕೆಗಳ ಮಹಾಪೂರವೆ. ಕಷ್ಟಗಳು ಬಾರದೆ ವರ್ಷ ಪೂರ್ತಿ ಸುಖ, ಸಮೃದ್ಧಿಯೇ ಇಟ್ಟಾಡಲಿ ಎಂಬ ಹಾರೈಕೆ ಪ್ರಶ್ನಾರ್ಹವೇ ತಾನೆ? ನೋವು, ನಲಿವು ಎರಡೂ ಉಂಟು, ಸಮವಾಗಿ ಕಾಣು ಎಂಬ ಆಶಯವೇ
ಹೆಚ್ಚು ತೂಕದ್ದು. ಆ ವೃತ್ತಾಂತವು ಹೊನ್ನಿನ ಮಳೆ ಸುರಿದರೆ ಏನಾಗುವುದೆಂದು ಸ್ವಾರಸ್ಯವಾಗಿ ಬಿಂಬಿಸುತ್ತದೆ.

ಬಂಧುಮಿತ್ರರ ಬಯಕೆಯಂತೆ ಅವನ ಪಾಲಿಗೆ ಹೊಲದಲ್ಲಿ ಸುವರ್ಣ ನಾಣ್ಯಗಳ ವರ್ಷಧಾರೆಯೇ ಆಗು ವುದು. ಅವನಿಗೆ ಎರಡೇ ದಿನಕ್ಕೆ ಅದು ಸಾಕಾಗುತ್ತದೆ. ಮಳೆ ಅಪರೂಪವಾದರೂ ಸರಿ, ಎಂದಿನಂತಿರಲಿ ಅಂತ ನಿಸರ್ಗದ ಮೊರೆ ಹೋಗುತ್ತಾನೆ. ತಾಪತ್ರಯಗಳ ಪರಿಚಯವಾಗದೆ ನಿರಾಳ, ನೆಮ್ಮದಿಯ ಮೌಲ್ಯ ಅನುಭವಕ್ಕೆ ಸಲ್ಲುವುದು ಹೇಗೆ?

ಹೊಸ ವರ್ಷದ ದಿನಮಾನಗಳು ಹಿಂದಿನಂತೆಯೇ ಇರುತ್ತವೆ ಎನ್ನುವುದು ಅನುಭವಜನ್ಯ. ನಾವು ಸುಧಾರಿ ಸದ ಹೊರತು ಕಾಲ ಸುಧಾರಿಸಲು ಹೇಗೆ ಸಾಧ್ಯ? ನವ ವರ್ಷದ ಮೊದಲ ದಿನವೇಕೆ, ಎಲ್ಲ ದಿನಗಳಿಂದಲೂ ಪ್ರಭಾವಿತರಾಗಬಹುದು. ಒಂದೊಂದು ಸೂರ್ಯೋ ದಯವೂ ಬದುಕಿನ ಉಳಿದ ಬಾಳಿನ ಹೊಸ ಅಧ್ಯಾಯ. ಭೂತಕಾಲ ಕಳೆಯಿತು, ಭವಿಷ್ಯತ್ತು ಹೇಗೋ ಏನೋ, ಹಾಗಾಗಿ ವರ್ತಮಾನ ಮಾತ್ರವೇ ನಮ್ಮ ಹಿಡುವಳಿಗಿರುವುದು. ‘ಇದೀಗ’ ಎನ್ನುವುದಕ್ಕೆ ನಮ್ಮ ಕೆಲಸ ಕಾರ್ಯಗಳು ಶ್ರುತಿಗೂಡಬೇಕು. ನಿನ್ನೆ ಬಗೆಗಿನ ವೃಥಾ ಕೊರಗು, ನಾಳೆಯ ಬಗ್ಗೆಯ ಕಲ್ಪಿತ ಕುತೂಹಲ, ಆತಂಕದಿಂದ ಇಂದಿನ ದಿನದೊಂದಿಗಿನ ಅನುಸಂಧಾನಕ್ಕೆ ಅಡೆತಡೆಯಾದೀತು. ಇಂದಿನ ದಿನವನ್ನು ಸಮರ್ಥವಾಗಿ ಬಳಸಿಕೊಂಡರೆ ‘ಸಾಧಿಸ ಬೇಕು’ ಎನ್ನುವುದು ‘ಸಾಧಿಸುವೆ’ ಆಗುತ್ತದೆ. ನಾಳೆಯ ಸಮಸ್ಯೆಗಳು(?) ಇನ್ನೂ ವಕ್ಕರಿಸಿಯೇ ಇಲ್ಲ! ಆ ಕುರಿತು ಒತ್ತಡಕ್ಕೊಳಗಾದರೆ ಈ ಗಳಿಗೆಗಳು ಬಳಲುತ್ತವೆ.

ಆದ ಪ್ರಮಾದಗಳಿಂದ ಪರಿಣಮಿಸುವ ಕೀಳರಿಮೆ, ವ್ಯಾಕುಲದಿಂದ ಹೊರಬರಲು ಮತ್ತೆ ವರ್ತಮಾನದತ್ತ ಮನಸ್ಸು ಕೇಂದ್ರೀಕರಿಸುವುದೇ ಮದ್ದು. ಎಸಗಿದ ತಪ್ಪುಗಳಿಂದ ಕಲಿತ ಪಾಠಗಳೇ ದೀವಟಿಗೆಗಳಾಗಿ ಮುನ್ನಡೆಸಬಲ್ಲವು. ಸೇಡು, ಕೋಪ, ತಾಪಗಳೇ ಆಯ್ಕೆಯಾದರೆ ಖಿನ್ನತೆ ಮತ್ತೂ ನಮ್ಮನ್ನಾಳಿ ಪರಿಸ್ಥಿತಿ ಬಿಗಡಾಯಿಸುವುದು. ಕಲಹಪ್ರಿಯ ಯಾರೊಡನೆಯೂ ಜಗಳವಾಡುವುದಿಲ್ಲ, ತನ್ನೊಡನೆ ತಾನೆ!

ಹೊಸ ವರ್ಷದ ಹಾದಿ ಸುಗಮವೋ ದುರ್ಗಮವೋ ನಮ್ಮ ಮನಃಸ್ಥಿತಿಯನ್ನು ಅವಲಂಬಿ ಸಿದೆ. ಅಧಿಕ ಸಮಯ ಕುಟುಂಬದವರೊಡನೆ, ಗೆಳೆಯರೊಡನೆ ಕಲೆತರೆ ಲಾಭವಿದೆ. ಕುಟುಂಬದವರು ಜವಾಬ್ದಾರಿಯನ್ನು, ಗೆಳೆಯರು ಕಾರುಣ್ಯ, ಸಹಾನುಭೂತಿಯನ್ನು ಕಲಿಸುತ್ತಾರೆ. ಬೆಳಗ್ಗೆ ಬೇಗ ನಿದ್ದೆಯಿಂದ ಎಚ್ಚರಗೊಳ್ಳುವ ನಿರ್ಧಾರವನ್ನು ಹಲವು ಒಳ್ಳೆಯ ಅಭ್ಯಾಸಗಳೂ ಹಿಂಬಾಲಿಸಿರುತ್ತವೆ. ಶಿಸ್ತು ಶಿಸ್ತನ್ನು ಪೋಣಿಸಿಕೊಳ್ಳುತ್ತದೆ. ಇಡೀ ಮನೆಯಲ್ಲಿ ಸಂಚಲನ ಮೂಡುವುದು. ಕುಟುಂಬದ ಇತರರೂ ಪ್ರೇರಿತರಾಗುತ್ತಾರೆ. ಕಚೇರಿಗೆ, ಶಾಲೆಗೆ ಸಮಯಪಾಲನೆ ಸಾಧ್ಯವಾಗುತ್ತದೆ.

ಹೊಸದರಲ್ಲಿ ಏನೋ ಅಂದ, ಉತ್ಕೃಷ್ಟ ಇರುವು ದೆಂಬ ಭರವಸೆ ಸಹಜ. 4,000 ವರ್ಷಗಳ ಹಿಂದೆಯೇ ಬ್ಯಾಬಿಲೋನಿಯನ್ನರು ಅವರ ಹೊಸವರ್ಷ ಸಡಗರಿಸಿದ್ದಕ್ಕೆ ಪುರಾವೆಗಳಿವೆ. ದಿನ, ವಾರ, ಮಾಸ, ವರ್ಷ- ಇವು ನಮ್ಮ ಆವಾಸವಾದ ಭೂಮಿಗಷ್ಟೇ ಸಂಬಂಧಿಸಿದವು. ಭೂಮ್ಯತೀತ ಅಂತರಿಕ್ಷದಲ್ಲಿ, ಅಲ್ಲಿನ ಕಾಯಗಳಲ್ಲಿ ಈ ಕಾಲಮಾನಗಳಿಗೆ ಅರ್ಥವಿಲ್ಲ. ಅಷ್ಟೇಕೆ ಹಗಲು ಮತ್ತು ಇರುಳು ಅಕ್ಷರಶಃ ಭೂಮಿಯಾದ್ಯಂತ ಒಂದೇ ಇಲ್ಲ. ಭಾರತಕ್ಕೆ ಹೋಲಿಸಿದರೆ ವರ್ಷಾರಂಭವು ಪೂರ್ವದ ದೇಶಗಳಲ್ಲಿ ಬೇಗ, ಪಶ್ಚಿಮ ದೇಶಗಳಲ್ಲಿ ತಡ. ಹಾಗಾಗಿ ಹೊಸ ವರ್ಷದ ಉದಯದ ಮುಹೂರ್ತವೇ ಸಾಪೇಕ್ಷ.

ತೊಡುವ ಸತ್ ಸಂಕಲ್ಪಗಳು ಸಂಕಲ್ಪಗಳಾಗಿಯೇ ತುಕ್ಕು ಹಿಡಿದರೆ ಹೊಸ ವರ್ಷ ಒಂದು ಕ್ರಮಸಂಖ್ಯೆ ಏರುವುದಷ್ಟೆ! ಮಹಾಕವಿ ಕಾಳಿದಾಸ ತನ್ನ ‘ರಘು ವಂಶಮ್’ ಮಹಾಕಾವ್ಯದಲ್ಲಿ ರಘು ವಂಶದ ರಾಜರ ಗುಣಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾನೆ. ದಿಲೀಪ ದೊರೆ ‘ಫಲಾನುಮೇಯಾಃ ಪ್ರಾರಂಭಾಃ’ ನಿಲುವಿಗೆ ಬದ್ಧನಾಗಿದ್ದ. ಅಂದರೆ ಯಾವುದನ್ನೂ ಅವನು ಮೊದಲೇ ಪ್ರಕಟಿಸುತ್ತಿರಲಿಲ್ಲ. ಕಾರ್ಯಸಾಧನೆಯ ನಂತರವಷ್ಟೇ ಅವನ ಯೋಜನೆ, ಯತ್ನದ ವಿವರ ಜನರಿಗೆ ತಿಳಿಯುತ್ತಿತ್ತು. ಈ ಆದರ್ಶ ಸರ್ವಕಾಲಕ್ಕೂ ಸಲ್ಲುತ್ತದೆ. ಆರಂಭಶೂರತ್ವ, ಉತ್ತಮರಾಗಲು ಮತ್ತು ಉಪಕಾರಿಯಾಗಲು ನಿರ್ಧರಿಸಿ ಹಾಕಿಕೊಂಡ ರೀತಿ, ನೀತಿಗಳ ಉಪೇಕ್ಷೆ ಆತ್ಮವಂಚನೆ. ನಡೆ, ನುಡಿ ಬೇರೆಯಾದಾಗ ಜನಪದರು ‘ಅಯ್ಯೋ, ನಿನ್ನ ಮಾತು ನಿನಗೇನೆ ಇಲ್ಲವಾಯ್ತಲ್ಲ’, ‘ನಿನ್ನ ನಾಲಿಗೆ ಹೋಯ್ತು’ ಎಂದು ಕೆಣಕುತ್ತಾರೆ. ಭೂತ ಮತ್ತು ಭವಿಷ್ಯತ್ತಿನಲ್ಲಿ ಮುಳುಗಿದರೆ ವರ್ತಮಾನ ದೂರ ಸರಿಯುತ್ತದೆ.

ಹರಿವ ನದಿಗೆ ಮೈಯೆಲ್ಲ ಕಾಲುಗಳು. ಅದು ಪ್ರತಿಯೊಂದು ಕ್ಷಣವನ್ನೂ ಹರಿಯಲು ಮುಡಿಪಿಟ್ಟಾಗ ಮಾತ್ರ ಅದರ ನೀರು ಕೆಡದೆ ಇರಲು ಸಾಧ್ಯ. ಅಂತೆಯೇ ಮನುಷ್ಯ ಕ್ಷಣಕ್ಷಣವನ್ನೂ ಪೋಲಾಗಿಸದೆ ಕರ್ತವ್ಯನಿಷ್ಠನಾಗಿ ಬಳಸಿಕೊಂಡರೆ ಮಾತ್ರ ಅವನ ಅಸ್ಮಿತೆಯ ಸಾರ್ಥಕ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT