ಬುಧವಾರ, ಮೇ 18, 2022
29 °C
ವಿಜ್ಞಾನ ಕ್ಷೇತ್ರದ ಮೇರು ಸಾಧಕಿ ಮೇರಿ ಕ್ಯೂರಿ ಜೀವನಚರಿತ್ರೆಯು ಓದುಗರು ಆಯ್ಕೆ ಮಾಡಿಕೊಳ್ಳುವ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆಯ ಕಿಚ್ಚು ಹತ್ತಿಸಬಲ್ಲ ಶಕ್ತಿ ಹೊಂದಿದೆ

ಸಂಗತ| ಸಾಧಕಿ ಮೇರಿ ಕ್ಯೂರಿ ಇಚ್ಛಾಶಕ್ತಿಗೊಂದು ಮಾದರಿ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಪ್ರತಿವರ್ಷ ಫೆಬ್ರುವರಿ 11ರಂದು, ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಹಿಳೆಯರನ್ನು ಸ್ಮರಿಸಿಕೊಳ್ಳಲಾಗುತ್ತದೆ. ವಿಜ್ಞಾನದಲ್ಲಿ ಮೇರು ಸಾಧನೆ ಮಾಡಿದ ಮಹಿಳೆಯರನ್ನು ಪರಿಗಣಿಸಿದರೆ, ಇಂದಿಗೂ ಮುಂಚೂಣಿಯಲ್ಲಿರುವ ಹೆಸರು ಮೇರಿ ಕ್ಯೂರಿ ಅವರದ್ದು. ಇದನ್ನು ಕ್ಯೂರಿಯವರ ಹೆಗ್ಗಳಿಕೆಯೆನ್ನ ಬೇಕೋ ಅಥವಾ ಮಹಿಳೆಯರು ಇನ್ನೂ ಕ್ರಮಿಸಬೇಕಾದ ದಾರಿ ಬಹಳಷ್ಟಿದೆ ಎನ್ನಬೇಕೋ?

ಮೇರಿ ಕ್ಯೂರಿ ತಮ್ಮ ಕಾಲಘಟ್ಟದಲ್ಲಿ ಹೋರಾಡಿ ಏರಿದ ಪ್ರತಿಯೊಂದು ಮೆಟ್ಟಿಲೂ ‘ಇದನ್ನು ಸಾಧಿಸಿದ ಪ್ರಥಮ ಮಹಿಳೆ’ಯೆಂದೇ ದಾಖಲಾಗಿದೆ. ಅವರಷ್ಟು ಅಪಾರ ಇಚ್ಛಾಶಕ್ತಿ, ಸ್ವಶ್ರಮದಿಂದ ನಿರ್ಮಿಸಿದ ವಿಜ್ಞಾನ ಕ್ಷೇತ್ರದ ಹಾದಿಯಲ್ಲಿ ನಡೆದು ಹೆಸರು ಮಾಡಿರುವ ಮಹಿಳೆಯರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅವರ ಜೀವನಚರಿತ್ರೆಯನ್ನು ನಮ್ಮ ಹೆಣ್ಣುಮಕ್ಕಳು ಓದಿದಷ್ಟೂ ಅವರು ಆಯ್ಕೆ ಮಾಡಿಕೊಳ್ಳುವ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆಯ ಕಿಚ್ಚನ್ನು ಹತ್ತಿಸಬಲ್ಲ ಶಕ್ತಿ ಕ್ಯೂರಿಯವರದ್ದು. ಒಬ್ಬ ಮಹಿಳೆಯಾಗಿ ಪರಿಗಣಿಸದೆ, ಕೇವಲ ವಿಜ್ಞಾನಿಯಾಗಿ ಅಧ್ಯಯನ ಮಾಡಿದರೂ ಅವರ ಸಾಧನೆ ಎಲ್ಲರಿಗೂ ಪ್ರೇರಕ. ಸಾಧಕರಿಗೆ ಸಿಗುವ ಅತ್ಯುನ್ನತ ಪುರಸ್ಕಾರವಾದ ನೊಬೆಲ್ ಪ್ರಶಸ್ತಿಯನ್ನು ಎರಡು ಸಾರಿ ಪಡೆದ ನಾಲ್ವರೇ ವಿಜ್ಞಾನಿಗಳಲ್ಲಿ ಅವರೊಬ್ಬರು.

ಪುರುಷ ಪ್ರಾಬಲ್ಯದ ವೈಜ್ಞಾನಿಕ ಸಂಶೋಧನಾ ಜಗತ್ತಿನಲ್ಲಿ ಮಹಿಳಾ ವಿಜ್ಞಾನಿಯಾಗಿ ತಮ್ಮ ಛಾಪನ್ನು ಸ್ಥಾಪಿಸಿದ್ದು ಅವರ ಮೊದಲ ಹೆಗ್ಗುರುತು. ಮಹಿಳೆಯರ ಬುದ್ಧಿಶಕ್ತಿಯ ಬಗ್ಗೆ ಕೀಳರಿಮೆಯಿದ್ದ ಕಾಲದಲ್ಲಿ ತಮ್ಮ ಸಂಶೋಧನೆಗೆ ಮೂಲಭೂತ ಅಗತ್ಯವಾದ ಪ್ರಯೋಗಾಲಯಕ್ಕಾಗಿ ಹೋರಾಡಿ ಅದನ್ನು ಸ್ಥಾಪಿಸಿದ್ದು ಜನರ ಹುಬ್ಬೇರಿಸಿತ್ತು. ಅವರು ಹುಟ್ಟಿದ ಪೋಲೆಂಡ್‌ನಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯಕ್ಕೆ ಪ್ರವೇಶವಿರಲಿಲ್ಲ. ಆದರೆ, ಧೃತಿಗೆಡದ ಕ್ಯೂರಿ ಉನ್ನತ ಶಿಕ್ಷಣಕ್ಕಾಗಿ ಫ್ರಾನ್ಸ್‌ಗೆ ಹೋಗಲು ನಿರ್ಧರಿಸಿದರು. ಹೆತ್ತವರಿಗೆ ಹೊರೆಯಾಗದೆ, ಬೋಧನಾ ಶುಲ್ಕವನ್ನು ಸ್ವತಃ ಪಾವತಿಸಲು ಹಣ ಸಂಗ್ರಹಿಸುವುದಕ್ಕಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿ, ಆಮೇಲೆ ಫ್ರಾನ್ಸ್‌ಗೆ ತೆರಳಿದರು. ಅದೃಷ್ಟವಶಾತ್, ಅಲ್ಲಿ ಅವರಿಗೆ ಆಗಲೇ ಬಹಳಷ್ಟು ಹೆಸರು ಮಾಡಿದ್ದ ವಿಜ್ಞಾನಿ ಪಿಯರೆ ಕ್ಯೂರಿಯವರ ಪ್ರಯೋಗಾಲಯದಲ್ಲಿ ಪ್ರವೇಶ ಸಿಕ್ಕಿತು. ಅದು ಅವರ ಬಾಳಿನ ಹಾದಿಯನ್ನೇ ಬದಲಾಯಿಸಿತು.

ಹೆಣ್ಣು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಇಚ್ಛೆ ಹೊಂದಿದ್ದರೆ, ಬೆಂಬಲಿಸುವ ಸಂಗಾತಿ ಬಹಳ ಮುಖ್ಯವಾಗುತ್ತದೆ. ಜೊತೆಗೆ, ಉನ್ನತ ಸಾಧನೆಯ ಹಾದಿಯಲ್ಲಿ ಕಷ್ಟಸುಖಗಳನ್ನು ಹಂಚಿಕೊಂಡು ಜೊತೆಯಾಗಿ ಸಾಗುವುದಕ್ಕೆ ಸಮಾನ ಚಿಂತನೆ ಮುಖ್ಯ. ಇಂತಹ ಮಾದರಿಯ ಸಮನ್ವಯ ವೈವಾಹಿಕ ಸಾಂಗತ್ಯ ವನ್ನು ಜಗತ್ತಿಗೆ ಪರಿಚಯಿಸಿದವರು ಕ್ಯೂರಿ ದಂಪತಿ.

ಅವರಿಬ್ಬರೂ ಮದುವೆಯಾಗುವ ಸಂದರ್ಭದಲ್ಲಿ, ಪಿಯರೆಗೆ ಮೇರಿ ಹೀಗೆ ಹೇಳಿದ್ದಾಗಿ ವರದಿಯಾಗಿದೆ, ‘ನಾನು ಪ್ರತಿದಿನ ಧರಿಸುವ ಈ ಉಡುಪು ಬಿಟ್ಟರೆ ನನ್ನ ಬಳಿ ಬೇರೆ ಉಡುಗೆಯಿಲ್ಲ. ನೀನು ಖರೀದಿಸುವುದಾದರೆ, ಸ್ವಲ್ಪ ಕಡು ಬಣ್ಣದ ಬಟ್ಟೆ ಖರೀದಿಸು. ನಾನು ಅದನ್ನು ಪ್ರಯೋಗಾಲಯಕ್ಕೂ ಧರಿಸಬಹುದು’. ಇಬ್ಬರೂ ಲ್ಯಾಬ್‌ಗಳಲ್ಲಿ ದೈಹಿಕ ಮತ್ತು ಮಾನಸಿಕ ಶ್ರಮದಾಯಕ ಪ್ರಯೋಗಗಳನ್ನು ಜೊತೆಯಾಗಿ ನಡೆಸುತ್ತಿದ್ದರು. ಹಾಗಂತ, ಅಷ್ಟೊಂದು ಪ್ರಾಯೋಗಿಕವಾಗಿ ಬದುಕಿದ ಅವರ ವೈವಾಹಿಕ ಜೀವನವೇನೂ ಏಕತಾನತೆಯಿಂದ ಕೂಡಿರಲಿಲ್ಲ. ಇಬ್ಬರೂ ಜೊತೆಯಾಗಿ ಬೈಕ್ ಸವಾರಿ ಮತ್ತು ಈಜಾಡಲು ಹೋಗುತ್ತಿದ್ದರು.

ಒಬ್ಬ ಸಾಮಾನ್ಯ ವಿಜ್ಞಾನಿ ಇಂದಿಗೂ ಎದುರಿಸುತ್ತಿರುವ ಸಮಸ್ಯೆಗಳನ್ನು ಕ್ಯೂರಿ ಕೂಡ ಎದುರಿಸಿದರು: ಹಣದ ಕೊರತೆ, ಪ್ರಯೋಗಾಲಯ ಸೌಲಭ್ಯಗಳ ಕೊರತೆ, ಸಂಶೋಧನೆಗೆ ಸಮಯ ಮತ್ತು ಬೋಧನಾ ಹೊಣೆಯನ್ನು ನಿರ್ವಹಿಸುವುದು, ಜೊತೆಗೆ ಇಬ್ಬರು ಹೆಣ್ಣುಮಕ್ಕಳ ಆರೈಕೆ ಮತ್ತು ಸಂಸಾರ ನಿರ್ವಹಣೆ. ಇವುಗಳನ್ನು ಮೀರಿ, ತಮ್ಮ ಗುರು ಮತ್ತು ಬಾಳಸಂಗಾತಿ ಯಾಗಿದ್ದ ಪಿಯರೆ ಜೊತೆಗೂಡಿ 1903ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದರು. ದುರದೃಷ್ಟವಶಾತ್, ಇದಾದ ಎರಡೇ ವರ್ಷಗಳಲ್ಲಿ ಗಂಡನನ್ನು ಕಳೆದು ಕೊಂಡರು. ಆದರೂ ಧೃತಿಗೆಡದೆ ಸಂಶೋಧನೆಯನ್ನು ಮುಂದುವರಿಸಿ, ಗಂಡನ ಸ್ಥಾನಕ್ಕೆ ‘ಮೊದಲ ಮಹಿಳಾ’ ಪ್ರೊಫೆಸರ್ ಆಗಿ ನೇಮಕವಾದರು.

ಸಾಮಾನ್ಯವಾಗಿ, ಹೆಚ್ಚಿನ ಸಾಧಕ ವೃತ್ತಿಪರರು ಸಹೋದ್ಯೋಗಿಗಳಿಂದ ಅನುಭವಿಸುವ ವೃತ್ತಿಪರ ಅಸೂಯೆಗೆ ಅವರೂ ಈಡಾಗಬೇಕಾಯಿತು. ಅವರ ಖ್ಯಾತಿ ಹೆಚ್ಚಾದಂತೆ, ಹಿತಶತ್ರುಗಳ ಕಾಟವೂ ಹೆಚ್ಚಾಯಿತು. ಅವರನ್ನು ‘ವಿದೇಶಿ ಮಹಿಳೆ’ ಎಂದು ದೂರವಿಡುವ ಪ್ರಯತ್ನಗಳಾದವು. 1910ರಲ್ಲಿ ಅಕಾಡೆಮಿ ಡೆಸ್ ಸೈನ್ಸಸ್‌ನ ಸದಸ್ಯತ್ವಕ್ಕೆ ಮೇರಿ ಹೆಸರು ಮುಂಚೂಣಿಯಲ್ಲಿದ್ದರೂ ಮಹಿಳೆಯೆಂಬ ಕಾರಣಕ್ಕಾಗಿ ಅವರ ಆಯ್ಕೆಯಾಗಲಿಲ್ಲ. ಮಾತ್ರವಲ್ಲ, ವಿಧವೆಯಾಗಿ ಸಂಶೋಧನೆಯಲ್ಲಿ ಅಸ್ತಿತ್ವ ಕಂಡುಕೊಂಡ ಕ್ಯೂರಿಯವರಿಗೆ ಸಂಶೋಧನಾ ಸಹವರ್ತಿಯೊಂದಿಗೆ ಸಂಬಂಧ ಕಲ್ಪಿಸಲಾಗಿ, ಸಾರ್ವಜನಿಕ ಅವಹೇಳನಕ್ಕೆ ಗುರಿಯಾಗಬೇಕಾಯಿತು.

ಆದರೆ, ಇದ್ಯಾವುದೂ ಕ್ಯೂರಿ ಅವರನ್ನು ಅಳುಕಿಸದೆ, 1911ರಲ್ಲಿ ಎರಡನೇ ನೊಬೆಲ್ ಪ್ರಶಸ್ತಿ ಗಳಿಸಿದರು. ಇಂದು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರು ಕ್ಯೂರಿಯಂತೆ ಹರಸಾಹಸ ಪಡಬೇಕಾಗಿಲ್ಲ ನಿಜ. ಆದರೂ ಪ್ರತಿಭಾವಂತ ಮಹಿಳೆ ಯರು ಎಲೆಮರೆಯ ಕಾಯಿಯಂತೆಯೇ ಉಳಿದು ಬಿಡುತ್ತಾರೆ. ಆದ್ದರಿಂದ, ಮೇಡಂ ಕ್ಯೂರಿಯಂತೆ, ಎಲ್ಲಾ ಬಾಹ್ಯ ಅಡೆತಡೆಗಳನ್ನೂ ಮೀರಿ ನಿರಂತರ ಇಚ್ಛಾಶಕ್ತಿ ಉಳಿಸಿಕೊಳ್ಳುವುದು ಮುಖ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು