ಇಡೀ ವಿಶ್ವವನ್ನೇ ಪ್ರಭಾವಿಸುತ್ತಿರುವ ಎಐ ತಂತ್ರಜ್ಞಾನಕ್ಕೆ ನಮ್ಮಲ್ಲೂ ಮಣೆ ಹಾಕಲಾಗುತ್ತಿದೆ. ಕರ್ನಾಟಕದಲ್ಲಿ ಇನ್ನೂ ಕೆಲವು ಡೇಟಾ ಸೆಂಟರ್ ತೆರೆಯಲಾಗುವುದು ಎಂದು ಸರ್ಕಾರ ಹೇಳಿದೆ. ಈ ಡೇಟಾ ಸೆಂಟರ್ಗಳು ಇತರೆ ವಾಣಿಜ್ಯ ಕಟ್ಟಡಗಳಂತಲ್ಲ. ಇವು ತಡೆರಹಿತ ವಿದ್ಯುತ್ ಮತ್ತು ಅಪಾರ ಪ್ರಮಾಣದ ನೀರನ್ನು ಬೇಡುವ ಕಟ್ಟಡಗಳು!

ಹಗಲಿರುಳೆನ್ನದೆ ಯೂಟ್ಯೂಬ್ ಬಳಸುವವರಿಗಾಗಿ, ಎಐಗಳಿಂದ ಮಾಹಿತಿ ಪಡೆಯುವವರಿಗಾಗಿ ಸರ್ವರ್ಗಳು ಲಕ್ಷಗಟ್ಟಲೆ ಜಾಲತಾಣಗಳನ್ನು ಜಾಲಾಡುತ್ತವೆ. ಅವು 24 ಗಂಟೆಯೂ ಕೆಲಸ ಮಾಡುತ್ತಿರಬೇಕಾಗುತ್ತದೆ. ಅವುಗಳಿಗೆ ‘ಶಟ್ ಡೌನ್’ ಎನ್ನುವುದು ಇಲ್ಲವೇ ಇಲ್ಲ. ಇದರರ್ಥ, ಸದಾಕಾಲ ವಿದ್ಯುತ್ ಪೂರೈಕೆ ಇರಲೇಬೇಕು. ಕ್ಷಣಮಾತ್ರದ ವಿದ್ಯುತ್ ವ್ಯತ್ಯಯವೂ ಅಪಾರ ಮಾಹಿತಿಯನ್ನು ಕಳೆದುಹಾಕುವ ಸಾಧ್ಯತೆಯಿದೆ.

ಅಪಾರ ನೀರು ಯಾಕೆ ಅಂದಿರಾ? ಕಂಪ್ಯೂಟರ್ಗಳು, ಸರ್ವರ್ಗಳು, ಅವುಗಳಲ್ಲಿರುವ ಮೈಕ್ರೊಚಿಪ್ನಂತಹ ಬಿಡಿ ಭಾಗಗಳು ವಿದ್ಯುತ್ ಬಳಸಿ ಕೆಲಸ ಮಾಡುವಾಗ ಸತತ ಬಿಸಿ ಉಗುಳುತ್ತಿರುತ್ತವೆ. ಆ ಬಿಸಿಯಿಂದ ಯಂತ್ರದ ಭಾಗಗಳಿಗೆ ಹಾನಿ ಆಗಬಾರದು, ಸರಾಗವಾಗಿ ಗಣಕ ಕಾರ್ಯಗಳು ನಡೆಯುತ್ತಿರಬೇಕು ಎಂದಾದರೆ ಆ ಬಿಸಿ ಆರುವ ಹಾಗೆ ವ್ಯವಸ್ಥೆ ಇರಬೇಕು. ಯಂತ್ರಗಳ ಬಿಸಿಯನ್ನು ನೀರಿಗೆ ವರ್ಗಾಯಿಸಿ ಆ ನೀರು ಆವಿಯಾಗುವ ಹಾಗೆ ಇರುವ ವ್ಯವಸ್ಥೆಯಲ್ಲಿ ಬಳಸಿದ ನೀರೆಲ್ಲವೂ ವಾತಾವರಣ ಸೇರುತ್ತದೆ. ಅಂದರೆ, ನೀರಿನ ಪೂರೈಕೆ ನಿರಂತರವಾಗಿ ಆಗುತ್ತಿರಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ, 1 ಮೆಗಾವಾಟ್ ಡೇಟಾ ಸೆಂಟರ್ಗೆ ದಿನವೊಂದಕ್ಕೆ 68 ಸಾವಿರ ಲೀಟರ್ ನೀರಿನ ಅವಶ್ಯಕತೆ ಇರುತ್ತದೆ! ಇನ್ನೊಂದು ವ್ಯವಸ್ಥೆಯಲ್ಲಿ, ನೀರನ್ನು ಅತಿಯಾಗಿ ತಂಪಾಗಿಸಿ ಕೊಳವೆಗಳ ಮೂಲಕ ಸರ್ವರ್ ಕೋಣೆಗಳಲ್ಲಿ ಹಾಯಿಸಿ ಬಿಸಿಯನ್ನು ನೀರಿಗೆ ವರ್ಗಾಯಿಸಲಾಗುತ್ತದೆ, ಬಿಸಿ ನೀರನ್ನು ಮತ್ತೆ ತಂಪುಗೊಳಿಸಿ ಅದೇ ಪ್ರಕ್ರಿಯೆ ಮುಂದುವರಿಯುತ್ತದೆ. ಇಲ್ಲಿ ನೀರನ್ನು ತಂಪಾಗಿಸಲು ಬಹಳಷ್ಟು ವಿದ್ಯುತ್ ಶಕ್ತಿ ಬೇಕಾಗುತ್ತದೆ.

ಬೆಂಗಳೂರಿನಲ್ಲಿ ಈಗಾಗಲೇ 31 ಡೇಟಾ ಸೆಂಟರ್ಗಳಿವೆ. ಇವುಗಳ ವಿಸ್ತರಣೆ ಬೇಡ ಎಂದು ಪರಿಸರ ಸಂಘಟನೆಗಳು ವಿರೋಧಿಸುತ್ತಿವೆ. ಸಂಪದ್ಭರಿತ ನೆಲ ಮತ್ತು ನೀರನ್ನು ಡೇಟಾ ಸೆಂಟರ್ಗೆ ಬಲಿ ಕೊಡಲು ನಾವು ಸಿದ್ಧರಿಲ್ಲ ಎಂದು ರೈತಸಂಘಟನೆಗಳೂ ಪಟ್ಟು ಹಿಡಿದಿವೆ. ಜನವಿರೋಧಕ್ಕೆ ತಲೆಬಾಗಿ ಬೆಂಗಳೂರಿನ ಬದಲಾಗಿ ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಸೆಂಟರ್ ತೆರೆಯವುದಕ್ಕೆ ಸರ್ಕಾರ ತಲೆದೂಗಿದೆ.

ಅಮೆರಿಕ, ಐರ್ಲೆಂಡ್, ಬ್ರಿಟನ್, ಜರ್ಮನಿ, ಸ್ಪೇನ್ ಹಾಗೂ ಲ್ಯಾಟಿನ್ ಅಮೆರಿಕದ ಕೆಲವು ದೇಶಗಳಲ್ಲಿ ಬೃಹತ್ ಡೇಟಾ ಸೆಂಟರ್ಗಳಿಗೆ ವಿರೋಧದ ಅಲೆ ಎದ್ದಿದ್ದು, ಅನೇಕ ಕಡೆ ಡೇಟಾ ಸೆಂಟರ್ ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸಿದ ಉದಾಹರಣೆಗಳಿವೆ. ನೀರು, ನೆಲ ಮತ್ತು ವಿದ್ಯುತ್ ಪೂರೈಕೆಯ ಮೇಲೆ ಬೀಳುವ ಒತ್ತಡವನ್ನು ಸ್ಥಳೀಯರು ವಿರೋಧಿಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಮಾನವ ಹಕ್ಕುಗಳ ವೇದಿಕೆ ಹಾಗೂ ವಿಜ್ಞಾನಿಗಳ ಗುಂಪು, ವಿಶಾಖಪಟ್ಟಣದಲ್ಲಿ ಎರಡು ಗೂಗಲ್ ಡೇಟಾ ಸೆಂಟರ್ಗಳಿಗೆ ಅನುಮತಿ ನೀಡಿದ ಸರ್ಕಾರದ ಮೇಲೆ ದಾವಾ ಹೂಡಿವೆ. ವಿಜ್ಞಾನ ಮತ್ತು ನೈತಿಕತೆಯ ಮೂಲಭೂತ ವೈಫಲ್ಯ ಅದು ಎಂದು ಟೀಕಿಸಿವೆ.

ಇದೇ ವೇಳೆಗೆ ನಾಲ್ಕು ಜಿಲ್ಲೆಗಳಲ್ಲಿ ಅಣುವಿದ್ಯುತ್ ಸ್ಥಾವರಕ್ಕಾಗಿ ಕರ್ನಾಟಕ ಸರ್ಕಾರ ಸಮೀಕ್ಷೆ ಮಾಡುತ್ತಿರು
ವುದು ಸುದ್ದಿಯಾಗಿದೆ. ಡೇಟಾ ಸೆಂಟರ್ಗಳ ವಿದ್ಯುತ್ ಬೇಡಿಕೆ ಪೂರೈಕೆಯೂ ಈ ಚಟುವಟಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕೊಪ್ಪಳ, ವಿಜಯಪುರ, ಉತ್ತರಕನ್ನಡ ಹಾಗೂ ಶಿವಮೊಗ್ಗ ಇವೇ ಆ ನಾಲ್ಕು ಜಿಲ್ಲೆಗಳು. ಶಿವಮೊಗ್ಗದ ಸಾಗರ ತಾಲ್ಲೂಕಿನ ಬೇಸೂರು, ರಾಯಚೂರಿನ ಶಕ್ತಿನಗರ, ಉತ್ತರಕನ್ನಡದ ಅಂಕೋಲಾ ತಾಲ್ಲೂಕಿನ ಭಾವಿಕೇರಿ ಮತ್ತು ಕೊಪ್ಪಳದ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಬಳಿ ಹಾಗೂ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಣೂರು ಗ್ರಾಮದ ಸಮೀಪ ಸ್ಥಳ ಪರಿಶೀಲನೆ ನಡೆದಿದೆ ಎಂಬ ವರದಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಾಲಿನ್ಯರಹಿತ ಎಂದು ಹೆಸರು ಪಡೆದಿದ್ದರೂ ಅಣುವಿದ್ಯುತ್ ಯೋಜನೆಗಳು ಜಗತ್ತಿನೆಲ್ಲೆಡೆ ತಿರಸ್ಕೃತವಾಗುತ್ತಿವೆ. ಚೆರ್ನೊಬಿಲ್, ಫುಕುಶಿಮಾ ದುರಂತಗಳು ಅಣು ಅಪಾಯಗಳನ್ನು ಸಾರಿ ಹೇಳಿವೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅಣುಸ್ಥಾವರಗಳ ನಿರ್ಮಾಣವೆಚ್ಚ ಅಧಿಕವಾಗುತ್ತಿದ್ದು, ಅದು ಸುಸ್ಥಿರ ಯೋಜನೆ ಅಲ್ಲ ಎಂದು ಎಷ್ಟೋ ದೇಶಗಳ ಸರ್ಕಾರಗಳು ಕೈಬಿಟ್ಟಿವೆ. ಮುಂದುವರಿದ ದೇಶಗಳು ತಮ್ಮ ಯಂತ್ರ, ತಂತ್ರಜ್ಞಾನವನ್ನು ಭಾರತದಂತಹ ದೇಶಗಳಿಗೆ ಮಾರಿ ಕೈತೊಳೆದುಕೊಳ್ಳುವ ಹುನ್ನಾರ ಅದು ಎಂತಲೂ ಪುಕಾರು ಇದೆ.

ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ, ಡೇಟಾ ಸೆಂಟರ್ಗಳು ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದೇ? ಕೃಷಿಗೆ, ಸಾರ್ವಜನಿಕ ಬಳಕೆಗೆ ಅಗತ್ಯವಾಗಿರುವ ನೀರನ್ನು ಡೇಟಾ ಸೆಂಟರ್ಗಳಿಗೆ ತಿರುಗಿಸಬಹುದೆ? ಎಷ್ಟಾದರೂ ಖಾಸಗಿ ಕಂಪನಿಗಳ ಸೊತ್ತುಗಳು ಅವು. ಮಳೆನೀರು ಸಂಗ್ರಹ, ನೀರಿಂಗಿಸುವಿಕೆ, ತ್ಯಾಜ್ಯನೀರಿನ ಮರುಬಳಕೆಯ ಮೂಲಕ ಈ ಗಜಗಾತ್ರದ ಕಂಪನಿಗಳು ತಮ್ಮ ಅಗತ್ಯದ ನೀರಿನ ಬಹುಪಾಲನ್ನು ಪಡೆಯಬಹುದು. ವಿದ್ಯುತ್ ವಿಷಯದಲ್ಲೂ ಅಷ್ಟೆ. ತಮ್ಮ ಆವರಣದಲ್ಲಿ ಸೌರ, ಪವನ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಯಾಗಲು, ಪರಿಸರಸ್ನೇಹಿ ಆಗಿರಲು ಸಾಧ್ಯವಿದೆ.

ಎಚ್ಚೆತ್ತ ಜನತೆಯಿಂದ ಮಾತ್ರವೇ ಇಂತಹ ಅಪಾಯಕಾರಿ ಯೋಜನೆಗಳಿಗೆ ಕಡಿವಾಣ ಹಾಕಲು ಸಾಧ್ಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.