ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮ ರಚನೆ: ಚರ್ಚೆ ವೈಚಾರಿಕವಾಗಲಿ

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಸರ್ಕಾರವು ಘೋಷಿಸಿದ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ದ ವಿಚಾರವನ್ನು ಎತ್ತಿಕೊಂಡು ರಾಜ್ಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಈ ಕುರಿತು ಕೆಲವು ಅಂಶಗಳನ್ನು ಮನದಟ್ಟು ಮಾಡಿಕೊಂಡರೆ, ಈ ಬಗೆಗಿನ ವಿಮರ್ಶೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಸರ್ಕಾರ ಮೊದಲು ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ ಮಾಡುತ್ತೇವೆ ಎಂದು ಹೇಳಿತು. ಬಹಳಷ್ಟು ಜನ ಇದನ್ನು ‘ಮರಾಠಿ’ ಅಭಿವೃದ್ಧಿ ಪ್ರಾಧಿಕಾರ ಎಂದೇ ತಿಳಿದರು. ಕರ್ನಾಟಕದಲ್ಲಿ ಕನ್ನಡವು ಇತರ ಭಾಷೆಗಳನ್ನು ಮನೆಭಾಷೆಯಾಗಿ ಉಳ್ಳವರಲ್ಲಿ ನೂರಕ್ಕೆ ತೊಂಬತ್ತು ಜನರಿಗಾದರೂ ಬರುವ ಭಾಷೆ. ಅಷ್ಟೇ ಅಲ್ಲ, ಅದನ್ನು ನಾವು ಅಧಿಕೃತ ಭಾಷೆಯನ್ನಾಗಿ ಒಪ್ಪಿಕೊಂಡಿರುವಾಗ ಅದನ್ನು ಆಡಳಿತ ಅಷ್ಟೇ ಅಲ್ಲ, ನ್ಯಾಯಾಂಗ, ವಾಣಿಜ್ಯ, ಶಿಕ್ಷಣ, ಸಂಶೋಧನೆ, ಅಭಿವೃದ್ಧಿಗಳ ಭಾಷೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಒಂದು ಬೃಹತ್ ಹೊಣೆಯಾಗುತ್ತದೆ. ಅದಕ್ಕಾಗಿ ಪ್ರಭಾವಶಾಲಿಯಾದ ಪ್ರಾಧಿಕಾರವೇ ಬೇಕಾಗುತ್ತದೆ ಎಂದು ಸರ್ಕಾರವು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವನ್ನು ಮಾಡಿದೆ.

ಸರ್ಕಾರವು ‘ಮರಾಠಿ (ಭಾಷಾ) ಅಭಿವೃದ್ಧಿ ಪ್ರಾಧಿಕಾರ’ವನ್ನು ಘೋಷಿಸಿದ್ದರೆ, ಅದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂವಾದಿಯಾಗಿ ನಿಲ್ಲುತ್ತಿತ್ತು. ಕರ್ನಾಟಕದಲ್ಲಿ ಅದು ಅಪ್ರಸ್ತುತವಾಗುತ್ತಿತ್ತು. ಆದರೆ, ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿ, ನಂತರ ಅದನ್ನು ಮರಾಠಾ ಅಭಿವೃದ್ಧಿ ‘ನಿಗಮ’ ಮಾಡುತ್ತೇವೆ ಎಂದು ತಿದ್ದಿಕೊಂಡಿದೆ. ಪ್ರಾಧಿಕಾರ ರಚಿಸುವುದು ಎಂದರೆ, ಅದನ್ನು ಎರಡೂ ಸದನಗಳಲ್ಲಿ ಇರಿಸಿ ಅನುಮೋದನೆ ಪಡೆದು ಅಧಿನಿಯಮವನ್ನು ಜಾರಿ ಮಾಡುವ ಮೂಲಕ ಮಾಡಬೇಕಾಗುತ್ತದೆ. ಆದರೆ ನಿಗಮವನ್ನು ಸರ್ಕಾರ ತನಗೇ ಇರುವ ಅಧಿಕಾರದಿಂದ ಒಂದು ಉದ್ದೇಶಕ್ಕಾಗಿ ಮಾಡಬಹುದು.

ಹೀಗಾಗಿ, ಸರ್ಕಾರ ಹೇಳಿರುವ ನಿಗಮವು ‘ಮರಾಠಾ’ (ಸಮುದಾಯದ) ಅಭಿವೃದ್ಧಿಗೆ ಎಂದಿದ್ದು, ‘ಮರಾಠಿ’ ಭಾಷೆ ಅಭಿವೃದ್ಧಿಗೆ ಅಲ್ಲ ಎಂದಿರುವುದರಿಂದ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಪಸ್ಥಿತಿಯೊಂದಿಗೆ ಹೋಲಿಸಿ ಮಾತಾಡುವುದು ಅಸಮಂಜಸ. ‘ಮರಾಠ’ ಎನ್ನುವುದು ಒಂದು ಸಮುದಾಯ, ಅವರು ಮರಾಠಿ ಮಾತಾಡುತ್ತಾರೆ. ಒಂದು: ಇವರು ಯಾರೂ ಮಹಾರಾಷ್ಟ್ರದವರಲ್ಲ. ಕರ್ನಾಟಕದಲ್ಲಿಯೇತಲೆತಲಾಂತರದಿಂದ ಇದ್ದು, ಇಲ್ಲಿನ ನಾಗರಿಕರ ಹಕ್ಕು ಮತ್ತು ಬಾಧ್ಯತೆಗಳನ್ನು ಹೊಂದಿರುವವರು. ಒಂದು ಸಮುದಾಯದ ಅಭಿವೃದ್ಧಿಗಾಗಿ ಒಂದು ನಿಗಮ ಇರಬೇಕೇ, ಅದೂ ಚುನಾವಣೆಯನ್ನು ಎದುರಿಗಿಟ್ಟುಕೊಂಡು ಅದನ್ನು ಘೋಷಣೆ ಮಾಡಬೇಕೇ ಎಂಬುದು ಬೇರೆ ಪ್ರಶ್ನೆ.

ಅದೇ ರೀತಿ ಮಹಾರಾಷ್ಟ್ರದಲ್ಲಿ ಕನ್ನಡ ಮಾತಾಡುವ, ಆದರೆ ತಲೆತಲಾಂತರದಿಂದ ಮಹಾರಾಷ್ಟ್ರದ ನಾಗರಿಕರೇ ಆಗಿರುವ ಒಂದು ನಿರ್ದಿಷ್ಟ ಸಮುದಾಯ ಇದ್ದರೆ (ಹಾಗೊಂದು ‘ಸಮುದಾಯ’ ಇದ್ದಂತಿಲ್ಲ) ಅಲ್ಲಿ ಅವರ ಅಭಿವೃದ್ಧಿಗೆ ಒಂದು ನಿಗಮ ಇದೆಯೇ ಎಂದು ಕೇಳುವುದುಸ್ವಲ್ಪ ಮಟ್ಟಿಗೆ ನ್ಯಾಯ ಹೌದು. ಆದರೆ, ಅವರು ಮಾಡಲಿಲ್ಲ, ಆದ್ದರಿಂದ ನಾವು ಮಾಡುವುದಿಲ್ಲ ಎನ್ನುವುದು ಯಾವ ನ್ಯಾಯ?

ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಇಲಾಖೆ ಇದೆ, ಪರಿಷತ್ತು ಇದೆ, ಹಲವಾರು ಅಕಾಡೆಮಿಗಳಿವೆ, ಪ್ರಾಧಿಕಾರವೂ ಇದೆ. ಹಾಗೆಯೇ, ರಾಜ್ಯದಲ್ಲಿನ ಉರ್ದು, ತುಳು, ಕೊಂಕಣಿ, ಕೊಡವ, ಬ್ಯಾರಿ, ಅರೆಭಾಷೆ ಇತ್ಯಾದಿ ಭಾಷೆಗಳಿಗಾಗಿ ಅಕಾಡೆಮಿಗಳಿವೆ. ಆದರೆ, ಇದೇ ನಾಡಿನಲ್ಲಿರುವ ನಾಗರಿಕರಾಡುವ ಇತರ ಭಾಷೆಗಳಾದ ಕೊಂಕಣಿ (1.4%) ಮತ್ತು ತುಳು (2.38) ಭಾಷೆಗಳಿಗಿಂತ ಹೆಚ್ಚು ಜನ (3.5%) ಮಾತಾಡುವ ತಮಿಳು, ಅದಕ್ಕಿಂತ ಹೆಚ್ಚು ಜನ (3.6) ಮಾತಾಡುವ ಮರಾಠಿ, ಅದಕ್ಕಿಂತ ಹೆಚ್ಚು ಜನ (8%) ಮಾತಾಡುವ ತೆಲುಗು ಭಾಷೆಗಳಿಗಾಗಿ ಅಕಾಡೆಮಿಗಳು ಇಲ್ಲ. ಆಯಾ ಸಮುದಾಯದವರೇ ತಮ್ಮ ತಮ್ಮ ಸಂಘ ಸಂಸ್ಥೆಗಳನ್ನು ಮಾಡಿಕೊಂಡು ಅವರವರ ಭಾಷೆ, ವಿಶಿಷ್ಟ ಸಂಸ್ಕೃತಿ, ಹಬ್ಬಗಳನ್ನು ಆಚರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಶತಮಾನಗಳಿಂದ ವಾಸವಾಗಿರುವುದರಿಂದ ಇವರೆಲ್ಲರೂ ಮಾತಾಡುವ ಉರ್ದು, ತೆಲುಗು, ತಮಿಳು, ಮರಾಠಿ, ಮಲಯಾಳ ಇತ್ಯಾದಿ ಭಾಷೆಗಳು ಅವು ಯಾವ ರಾಜ್ಯಗಳಲ್ಲಿ ಪ್ರಮುಖ ಆಡಳಿತ ಭಾಷೆಗಳಾಗಿವೆಯೋ ಆ ಭಾಷೆಗಳಿಗಿಂತ ತುಂಬ ಭಿನ್ನವಾಗಿವೆ. ಉದಾಹರಣೆಗೆ, ಇಲ್ಲಿನ ನಾಗರಿಕರು ಮಾತಾಡುವ ಮರಾಠಿಯು ಪುಣೆಯಲ್ಲಿ ಮಾತಾಡುವ ಮರಾಠಿಗಿಂತ ಧ್ವನಿ, ಪದ, ಪದಪುಂಜ, ನುಡಿಗಟ್ಟು, ಗಾದೆ, ಉಪಮೆ, ಅಲಂಕಾರಗಳ ದೃಷ್ಟಿಯಿಂದ ಭಿನ್ನವಾಗಿರುತ್ತದೆ. ಇಲ್ಲಿಯವರು ಆಡುವ ಮರಾಠಿಯಲ್ಲಿ ಕನ್ನಡದ ದಟ್ಟ ಪ್ರಭಾವ ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಭಾಷೆ, ಪರಿಸರ, ಅದನ್ನಾಡುವ ಜನ, ಅದು ಆಡಳಿತ, ನ್ಯಾಯಾಂಗ, ಶಿಕ್ಷಣದ ಅಧಿಕೃತ ಭಾಷೆಯಾಗಿರುವ ವಾಸ್ತವ ಮತ್ತು ಅವರಿಗೆ ಮರಾಠಿಯಲ್ಲಿ ಸಾಕ್ಷರತೆ ಇದೆಯೋ ಇಲ್ಲವೋ ಕನ್ನಡದಲ್ಲಿ ಸಾಕ್ಷರತೆ ಇರುತ್ತದೆ. ಇವರ ಮಕ್ಕಳೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಾರೆ. ಅದನ್ನೆಲ್ಲ ಗಮನಿಸುವಾಗ, ಇಲ್ಲಿನ ನಾಗರಿಕರು ಮಾತಾಡುವ ಮರಾಠಿಯು ಕನ್ನಡದ್ದೇ ಒಂದು ಉಪಭಾಷೆಯಾಗಿ ತೋರುತ್ತದೆ. ಇದೇ ಸ್ಥಿತಿ ರಾಜ್ಯದಲ್ಲಿನ ಉರ್ದು, ತೆಲುಗು, ತಮಿಳು, ಮಲಯಾಳ ಇತ್ಯಾದಿ ಭಾಷೆಗಳದ್ದೂ ಆಗಿದೆ.

ಆದ್ದರಿಂದ ಈ ವಿಷಯವನ್ನು ಭಾಷಿಕ ದೃಷ್ಟಿಯಲ್ಲಿ ನೋಡದೆ, ಇದೇ ನಾಡಿನ ಒಂದು ಜನಸಮುದಾಯದ ವಿಚಾರ ಎಂಬುದಾಗಿ ನೋಡಿದರೆ ನಮ್ಮ ಚರ್ಚೆ ಹೆಚ್ಚು ವೈಚಾರಿಕವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT