ಗುರುವಾರ , ಆಗಸ್ಟ್ 13, 2020
23 °C
ವಿಭಿನ್ನ ವಿಚಾರಧಾರೆಗಳು ಕಲೆತಾಗಲೇ ಸಾಹಿತ್ಯಕ್ಕೆ ಸಂಭ್ರಮ. ಅತಿರೇಕದ ವರ್ತನೆಗಳು ಯಾರಿಗೂ ಶೋಭೆ ತರುವುದಿಲ್ಲ.

ದುಂಡಾವರ್ತಿ ಸಹಿಸಲಾದೀತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡದ ‘ಸಾಹಿತ್ಯ ಸಂಭ್ರಮ’ದ ಸಮಾರೋಪ ಸಮಾರಂಭದಲ್ಲಿ ಏಕಾಏಕಿ ವೇದಿಕೆಗೆ ಏರಿಬಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಗೂಂಡಾಗಿರಿ ಕುರಿತ ವರದಿ ಓದಿ (ಪ್ರ.ವಾ., ಜ. 21), ಅವರ ಅಸಹಿಷ್ಣುತೆ ಮತ್ತು ಹಿಂಸಾಚಾರಕ್ಕೆ ಅದೇ ಬಗೆಯ ಪ್ರತಿಕ್ರಿಯೆ ಎದುರಾಗುವ ಸಾಧ್ಯತೆ ಎಲ್ಲಾ ನಾಗರಿಕರನ್ನೂ ಕಾಡುತ್ತಿದೆ.

ಶಿವ ವಿಶ್ವನಾಥನ್ ಅವರ ಮಾತುಗಳಿಂದ ‘ನೋವು’ ಉಂಟಾಗಿದ್ದಲ್ಲಿ ಅದಕ್ಕೆ ಹೇಳಿಕೆಯ ಮೂಲಕ ಶಾಂತಿಯುತ ಮಾರ್ಗದಲ್ಲಿ ವೇದಿಕೆಯಿಂದಲೇ ವಿರೋಧ ವ್ಯಕ್ತಪಡಿಸುವ ಅವಕಾಶವನ್ನು ಪ್ರೊ. ರಾಘವೇಂದ್ರ ಪಾಟೀಲರು ಕಲ್ಪಿಸಿದ್ದರೆಂದೂ ವರದಿಯಲ್ಲಿದೆ (ಅದರ ಅವಶ್ಯಕ ವಿತ್ತೇ ಅಥವಾ ಅವರು ಕ್ಷಮೆ ಕೇಳಬೇಕಿತ್ತೇ ಎನ್ನುವುದು ಬೇರೆ ವಿಚಾರ). ಅದೇ ದಿನ ವರದಿಯಾಗಿರುವಂತೆ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ‘ಗೋಮಾಂಸ ತಿನ್ನಬಾರದು ಎನ್ನುವವರು ಬೇರೆ ಮಾಂಸವನ್ನೂ ತಿನ್ನಬಾರದು’ ಎನ್ನುವ ‘ಅಪ್ಪಣೆ’ಗೆ ಇದೇ ರೀತಿ ಪ್ರತಿಭಟನೆ, ಹಿಂಸಾಚಾರ ಉಂಟಾದರೆ ಅದನ್ನು ಒಪ್ಪಲು ಸಾಧ್ಯವೇ? ಮನಮೋಹನ್‍ ಸಿಂಗ್ ಅವರ ನಾಯಕತ್ವವನ್ನು ಅಣಕಿಸುವ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ವಿರುದ್ಧ ಹಿಂಸಾಚಾರ, ಬೆದರಿಕೆ ಸರಿಯಾದ ಮಾರ್ಗವೇ?

ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರ ‘ಧಾರವಾಡ ಸಾಹಿತ್ಯ ಸಂಭ್ರಮದ ಚಟುವಟಿಕೆ ಸಾಹಿತ್ಯಕ್ಕೆ ಸೀಮಿತಗೊಳಿಸದಿದ್ದರೆ ಸಂಭ್ರಮವೂ ಇರುವುದಿಲ್ಲ, ಸಾಹಿತಿಗಳೂ ಇರುವುದಿಲ್ಲ’ ಎಂಬ ರಾಜಕೀಯ ಬೆದರಿಕೆಯನ್ನು ಅವರು ಪ್ರತಿನಿಧಿಸುವ ಪಕ್ಷದ್ದೆಂದೇ ಪರಿಗಣಿಸಿ ಸವಾಲಾಗಿ ಸ್ವೀಕರಿಸುವ ಸಮಯ ಇತರ ಯುವ ಮೋರ್ಚಾಗಳಿಗೂ ಬಂದಿರುವಂತಿದೆ. ‘ಸಾಹಿತಿಗಳೂ ಇರುವುದಿಲ್ಲ’ವೆಂಬ ಮಾತು ಸಾಹಿತಿಗಳ ಜೀವಕ್ಕೂ ಬೆದರಿಕೆಯಂತಿದೆ. ‘ಸಾಹಿತ್ಯ ಸಂಭ್ರಮ’ ಯಾವ ಚೌಕಟ್ಟಿನೊಳಗಿರಬೇಕು ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದೆ; ಆದರೆ ಬೆದರಿಕೆಯ ಜೊತೆ ಒಂದು ಫರ್ಮಾನು ಹೊರಡಿಸಲು ಅವರಿಗೆ ಯಾವುದೇ ಅಧಿಕಾರವಿಲ್ಲ. ಕಣ್ಣೆದುರೇ ಹಿಂಸಾಚಾರ ಕಂಡರೂ ಪೊಲೀಸರು ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸದಿದ್ದುದು ವೈಫಲ್ಯವಲ್ಲವೇ? 

ಪ್ರೊ. ಬಿ.ಕೆ.ಚಂದ್ರಶೇಖರ್,
ಡಾ. ಕೆ.ಮರುಳಸಿದ್ದಪ್ಪ, ಬೆಂಗಳೂರು

***

ಆಚಾರವಿಲ್ಲದ ನಾಲಿಗೆ...

ಕೆಲವರ ಹೇಳಿಕೆಗಳಿಂದ ನಡೆದ ಕಹಿ ಪ್ರಸಂಗಗಳು ಈ ಬಾರಿಯ ‘ಸಾಹಿತ್ಯ ಸಂಭ್ರಮ’ಕ್ಕೆ ಕೆಟ್ಟ ಹೆಸರು ತಂದವು. ‘ಸೈನಿಕರಿಂದಲೇ ಅಲ್ಲಿನ ನಿವಾಸಿಗಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ...’ ಎಂದು ಹೇಳುವ ಮೂಲಕ ಶಿವ ವಿಶ್ವನಾಥನ್‌ ಸೈನಿಕರನ್ನು
ಅವಮಾನಿಸಿದ್ದಾರೆ.

ಇಡೀ ಜಗತ್ತಿನಲ್ಲಿ ಭಾರತೀಯ ಸೇನೆ ಅತ್ಯುತ್ತಮ ಎಂಬ ಹೆಸರು ಪಡೆದಿದೆ. ಮಗ್ಗುಲ ಮುಳ್ಳುಗಳಾದ ಪಾಕಿಸ್ತಾನ ಮತ್ತು ಚೀನಾದ ಸೈನಿಕರ ಹಾವಳಿಯನ್ನು ಭಾರತೀಯ ಸೈನಿಕರು ಧೈರ್ಯವಾಗಿ ಎದುರಿಸಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪದಂಥ ಸಂದರ್ಭಗಳಲ್ಲಿ ಸಂತ್ರಸ್ತರ ರಕ್ಷಣೆಗೆ ಧಾವಿಸುತ್ತಾರೆ. ಶಿವ ಅವರ ಹೇಳಿಕೆ ಇಡೀ ದೇಶದ ಪ್ರಜೆಗಳಿಗೆ ನೋವ
ನ್ನುಂಟುಮಾಡಿದೆ. ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. 

ಪಂಪಾಪತಿ ಹಿರೇಮಠ, ಧಾರವಾಡ

***

ಅಸಹನೀಯ ನಡೆ

‘ಸಾಹಿತ್ಯ ಸಂಭ್ರಮ’ದ ಗೋಷ್ಠಿಯಲ್ಲಿ ಭಾರತೀಯ ಸೇನೆ ಕುರಿತು ಪ್ರಸ್ತಾಪ ಮತ್ತು ಅದಕ್ಕೆ ವ್ಯಕ್ತವಾದ ಪ್ರತಿರೋಧ ಸಹಜವಾದರೂ, ನಂತರ ನಡೆದ ದಾಂದಲೆ ಬಹಳ ವಿಷಾದಕರ ಬೆಳವಣಿಗೆ. ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಮತ್ತೊಂದು ಕಪ್ಪುಚುಕ್ಕೆ.

ಶಿವ ವಿಶ್ವನಾಥನ್ ಅವರ ವಿಚಾರಗಳ ಕುರಿತು ಸೇನೆಯ ಒಬ್ಬ ನಿವೃತ್ತ ಹಿರಿಯ ಅಧಿಕಾರಿ ನನ್ನ ಮುಂದೆ ತೀವ್ರ ಸಂತಸ ವ್ಯಕ್ತಪಡಿಸಿದರು. ಶಿವ ಅವರ ವಿಚಾರಗಳು ಯಾರಿಗೆ ಎಷ್ಟು ಅರ್ಥವಾದವೋ ಗೊತ್ತಿಲ್ಲ. ಆದರೆ ವಿವಾದವಂತೂ ಉದ್ಭವವಾಯಿತು.

ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆ ವಿಪರೀತ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶ ಪ್ರತೀ ತಿಂಗಳು ಕೆಲವು ಸೈನಿಕರನ್ನು ಕಳೆದುಕೊಳ್ಳುತ್ತಿದೆ. ಇದು ಇಡೀ ದೇಶಕ್ಕೆ ಕಳವಳಕಾರಿ ಸಂಗತಿಯಾಗಿದೆ ನಿಜ. ಆದರೆ, ಈಶಾನ್ಯ ರಾಜ್ಯ ಮಣಿಪುರದಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳು ಕಳೆದ ಎರಡು ದಶಕಗಳಲ್ಲಿ ಎಸಗಿದ ಅತಿರೇಕಗಳ ಕುರಿತು ಹಾಗೂ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ದುರ್ಬಳಕೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆದಾಗ, ಕೋರ್ಟ್‌ ನೇಮಿಸಿದ ಅಮಿಕಸ್ ಕ್ಯೂರಿ ಸಲ್ಲಿಸಿದ ವಿವರವಾದ ವರದಿಯನ್ನು ಗಮನಿಸಿ, ನ್ಯಾಯಾಲಯವು ‘ಡು ಯು ಹ್ಯಾವ್‌ ರೇಪಿಸ್ಟ್‌ ಇನ್ ಯೂನಿಫಾರ್ಮ್‌’ ಎಂದು ಸರ್ಕಾರಿ ವಕೀಲರಿಗೆ ಕೇಳಿದ್ದುಂಟು. ಆನಂತರ ಅಂತಹುದನ್ನು ತಡೆಯಲು ಹಲವು ಕ್ರಮಗಳನ್ನು ಸೂಚಿಸಿದ್ದುಂಟು. 

ಸ್ಯೆನಿಕರ ದೌರ್ಜನ್ಯದ ವಿರುದ್ಧ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರಕ್ಕೆ ಆಹ್ವಾನ, ಅಫ್ಸಾ ಕಾಯ್ದೆ ವಿರುದ್ಧ ಇರೋಮ್‌ ಶರ್ಮಿಳಾ ಅವರ 16 ವರ್ಷಗಳ ಸುದೀರ್ಘ ಸತ್ಯಾಗ್ರಹ ನಮಗೆ ನೆನಪಿರಬೇಕು. ಸಾಹಿತ್ಯ ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಸೃಜನಶೀಲ ಕ್ರಿಯೆ. ಸಂವಾದ ಅದರ ಮೂಲ ಆಶಯ. ವಿಭಿನ್ನ ವಿಚಾರಧಾರೆಗಳು ಕಲೆತಾಗಲೇ ಸಾಹಿತ್ಯಕ್ಕೆ ಸಂಭ್ರಮ. ಅತಿರೇಕದ ವರ್ತನೆಗಳು ಯಾರಿಗೂ ಶೋಭೆ ತರುವುದಿಲ್ಲ.

ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.