ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆರ್ಥಿಕ ಸಂಕಷ್ಟ, ಉದ್ಯೋಗದ ಅನಿವಾರ್ಯತೆ, ಭೌಗೋಳಿಕ ಅಡಚಣೆಗಳು ಅಥವಾ ಸಾಮಾಜಿಕ ಕಾರಣಗಳಿಂದ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಉನ್ನತ ಹಂತದಲ್ಲಿ ಮುಂದುವರಿಸಲು ಸಾಧ್ಯವಾಗದಿರುವ ಸಂದರ್ಭದಲ್ಲಿ, ದೂರ ಶಿಕ್ಷಣದ ವಿಸ್ತರಣೆಯು ಅಗತ್ಯವೂ ಸಮಯೋಚಿತವೂ ಆಗಿದೆ. ಉನ್ನತ ಶಿಕ್ಷಣದ ಅವಕಾಶಗಳು ಅಸಮಾನ ಆಗಿರುವಾಗ ಇಂತಹ ಕ್ರಮಗಳು ವಿಶ್ವವಿದ್ಯಾಲಯದ ಬಾಗಿಲುಗಳನ್ನು ಇನ್ನಷ್ಟು ಜನರಿಗೆ ತೆರೆದಿಡುವ ಭರವಸೆ ನೀಡುತ್ತವೆ. ಆದರೆ, ಇಂತಹ ವಿಸ್ತರಣೆಯನ್ನು ನಾವು ಆಶಾವಾದದಷ್ಟೇ ಎಚ್ಚರಿಕೆ ಯಿಂದಲೂ ನೋಡಬೇಕಾಗಿದೆ.

ಭಾರತ ಈಗಾಗಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಿಯಂತ್ರಣವಿಲ್ಲದ ವಿಸ್ತರಣೆಯ ಹಂತಗಳನ್ನು ಕಂಡಿದೆ. ಆ ಪ್ರಯತ್ನಗಳು ಜ್ಞಾನೋತ್ಪಾದನೆಗೆ ಕಾರಣವಾಗುವುದಕ್ಕಿಂತಲೂ ಹೆಚ್ಚಾಗಿ ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ದಾರಿ ಮಾಡಿಕೊಟ್ಟಿವೆ. ಕಪಿಲ್ ಸಿಬಲ್ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯಗಳ ಬಗ್ಗೆ ವಿವಾದ ಉಂಟಾಗಿತ್ತು. ಆ ವಿವಾದ, ಕಟ್ಟುನಿಟ್ಟಿನ ವ್ಯವಸ್ಥೆಗಳಿಲ್ಲದ ವೇಗವಾದ ಶೈಕ್ಷಣಿಕ ವಿಸ್ತರಣೆ ಉನ್ನತ ಶಿಕ್ಷಣವನ್ನು ಬರೀ ಪದವಿಗಳ ಕಾರ್ಖಾನೆಯಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಬಹಿರಂಗಪಡಿಸಿತ್ತು.

ನಮ್ಮ ಮುಂದೆ ಪ್ರಸ್ತುತ ಇರುವ ಪ್ರಶ್ನೆ– ದೂರ ಶಿಕ್ಷಣದ ಸ್ನಾತಕೋತ್ತರ ಕಾರ್ಯಕ್ರಮಗಳ ವಿಸ್ತರಣೆಯು ವಿಶ್ವವಿದ್ಯಾಲಯವನ್ನು ವಿಶ್ವವಿದ್ಯಾಲಯ ವಾಗಿಸುವ ಶೈಕ್ಷಣಿಕ ನಿಷ್ಠೆ, ಬೌದ್ಧಿಕ ಗಾಂಭೀರ್ಯ ಮತ್ತು ಸಾಮಾಜಿಕ ಧ್ಯೇಯವನ್ನು ಉಳಿಸಿಕೊಂಡು ಹೋಗುತ್ತದೆಯೇ ಎನ್ನುವುದಾಗಿದೆ. ಗುಣಮಟ್ಟವನ್ನು ಬದಿಗೊತ್ತಿ ಹೆಚ್ಚಿನ ಪ್ರವೇಶಾತಿಗಾಗಿ ಶಿಕ್ಷಣವನ್ನು ಎಲ್ಲರ ಮನೆಯ ಬಾಗಿಲಿಗೆ ವಿಸ್ತರಿಸಿದರೆ, ಅಂತಿಮವಾಗಿ ಯಾವ ವಿದ್ಯಾರ್ಥಿಗಳು ಸಬಲೀಕರಣಗೊಳ್ಳಬೇಕೆಂದು ಬಯಸುತ್ತೇವೆಯೋ ಅವರಿಗೆ ಅನ್ಯಾಯ ಆಗುತ್ತದೆ.

ವಿಶ್ವವಿದ್ಯಾಲಯವೆಂದರೆ ಏನು? ಅದರ ಉದ್ದೇಶವೇನು? ಎನ್ನುವ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಉನ್ನತ ಶಿಕ್ಷಣವನ್ನು ಪದವಿಗಳ ವಿತರಣೆಗಷ್ಟೇ ಸೀಮಿತಗೊಳಿಸಿದರೆ, ದೂರ ಶಿಕ್ಷಣ ಕಾರ್ಯಕ್ರಮಗಳು ತೃಪ್ತಿಕರ ಎಂದು ಹೇಳಬಹುದು. ಆದರೆ, ವಿ.ವಿ.ಯನ್ನು ಬೌದ್ಧಿಕ ರೂಪುಗೊಳಿಸುವಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಜ್ಞಾನಾನ್ವೇಷಣೆಯ ಕೇಂದ್ರವೆಂದು ಪರಿಗಣಿಸಿದರೆ, ಗುಣಮಟ್ಟದ ಪ್ರಶ್ನೆ ಮುಖ್ಯವಾಗುತ್ತದೆ.

ಜರ್ಮನಿಯ ತತ್ತ್ವಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವಾನ್ ಹಂಬೋಲ್ಟ್ ಅವರ ಪ್ರಕಾರ, ವಿಶ್ವವಿದ್ಯಾಲಯಗಳು ಬೋಧನೆ ಮತ್ತು ಸಂಶೋಧನೆಯನ್ನು ಒಂದಾಗಿಸಬೇಕು. ಆಗಷ್ಟೇ ವಿದ್ಯಾರ್ಥಿಗಳು ಮಾಹಿತಿಯನ್ನಷ್ಟೇ ಸ್ವೀಕರಿಸುವವ ರಾಗದೆ, ವಿಚಾರಣೆ ಮತ್ತು ಬೌದ್ಧಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಕಲಿಯುತ್ತಾರೆ. ಬೈಬಲ್ ಆಧಾರಿತ ನಂಬಿಕೆಗಳನ್ನು ಶೈಕ್ಷಣಿಕವಾಗಿ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸಿ ಬೋಧಿಸಿದ ಇಂಗ್ಲೆಂಡಿನ ಜಾನ್ ಹೆನ್ರಿ ನ್ಯೂಮನ್ ಅವರು, ವಿಶ್ವವಿದ್ಯಾಲಯವು ವೃತ್ತಿಪರ ತರಬೇತಿ ಕೇಂದ್ರವಾಗಿರದೆ ವಿಮರ್ಶಾತ್ಮಕ ಚಿಂತನೆ ಮತ್ತು ವಿಶಾಲ ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವ ಸ್ಥಳವೆಂದು ಕಂಡರು. ರವೀಂದ್ರನಾಥ ಟ್ಯಾಗೋರ್, ಶಿಕ್ಷಣ
ವನ್ನು ಪರೀಕ್ಷೆ ಮತ್ತು ಪ್ರಮಾಣಪತ್ರ ಗಳಿಗೆ ಸೀಮಿತಗೊಳಿಸುವ ಯಾಂತ್ರಿಕ ಶಿಕ್ಷಣದ ವಿರುದ್ಧ ಎಚ್ಚರಿಕೆ ನೀಡಿದ್ದರು.

ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳು ಶಿಕ್ಷಕ–ವಿದ್ಯಾರ್ಥಿ ಸಂವಾದ, ರಚನಾತ್ಮಕ ಮೌಲ್ಯಮಾಪನ, ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಂಶೋಧನಾ ಮನೋಭಾವವನ್ನು ಖಚಿತಪಡಿಸಬೇಕು. ದೂರ ಶಿಕ್ಷಣವು ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಬಹುದು. ಆದರೆ ಶೈಕ್ಷಣಿಕ ಕಟ್ಟುನಿಟ್ಟು, ಚರ್ಚೆ, ಮತ್ತು ಬೌದ್ಧಿಕ ಕುತೂಹಲವನ್ನು ಉಳಿಸದಿದ್ದರೆ, ಉನ್ನತ ಶಿಕ್ಷಣವು ಸಾಮೂಹಿಕ ಪ್ರಮಾಣಪತ್ರ ವಿತರಣೆಗೆ ಸೀಮಿತವಾಗುವ ಅಪಾಯವಿದೆ.

ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಉದ್ದೇಶಿಸುವ ಯಾವುದೇ ವಿಶ್ವವಿದ್ಯಾಲಯವು ಹೆಚ್ಚಿನ ಪ್ರವೇಶ ಸಂಖ್ಯೆಯನ್ನು ಗುರಿಯಾಗಿಸಿಕೊಳ್ಳುವ ಮೊದಲು ತನ್ನ ಸಂಸ್ಥಾತ್ಮಕ ಸಿದ್ಧತೆಯನ್ನು ಸಾಬೀತುಪಡಿಸಬೇಕು. ದೂರ ಶಿಕ್ಷಣವೆಂದರೆ ಬರೀ ‘ಹೆಚ್ಚುವರಿ ಬೋಧನಾ ವಿಧಾನ’ವಲ್ಲ; ಅದಕ್ಕೆ ಸಮಗ್ರ ಹಾಗೂ ಪ್ರತ್ಯೇಕ ಶೈಕ್ಷಣಿಕ ವ್ಯವಸ್ಥೆಯ ಅಗತ್ಯವಿದೆ. ಯುಜಿಸಿ ದೂರ ಶಿಕ್ಷಣ ಬ್ಯೂರೊ ನಿಯಮಾವಳಿಗಳ ಪ್ರಕಾರ, ಮುಕ್ತ ಮತ್ತು ದೂರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವ ವಿಶ್ವವಿದ್ಯಾಲಯಗಳು ಸಮರ್ಪಕ ಬೋಧಕ ಸಿಬ್ಬಂದಿ, ವಿದ್ಯಾರ್ಥಿ ಬೆಂಬಲ ಕೇಂದ್ರಗಳು, ಡಿಜಿಟಲ್ ಮೂಲಸೌಕರ್ಯ, ಸ್ವಯಂ ಅಧ್ಯಯನ ಸಾಮಗ್ರಿಗಳು, ಪಾರದರ್ಶಕ ಮೌಲ್ಯಮಾಪನ ವ್ಯವಸ್ಥೆಗಳು ಮತ್ತು ಆಂತರಿಕ ಗುಣಮಟ್ಟ ಭದ್ರತಾ ವ್ಯವಸ್ಥೆಗಳನ್ನು ಹೊಂದಿರಬೇಕು.

ವಿಶ್ವವಿದ್ಯಾಲಯಗಳು ತಮ್ಮನ್ನು ತಾವು ಕೆಲವು ಪ್ರಶ್ನೆ ಕೇಳಿಕೊಳ್ಳಬೇಕು: ದೂರ ಶಿಕ್ಷಣ ನೀಡಲು ಸಮರ್ಥರಾದ ಮತ್ತು ತರಬೇತಿ ಪಡೆದ ಪ್ರತ್ಯೇಕ ಬೋಧಕರು ಇದ್ದಾರೆಯೆ? ಅಧ್ಯಯನ ಸಾಮಗ್ರಿಗಳನ್ನು ಅಪ್ಲೋಡ್ ಮಾಡುವುದನ್ನು ಮೀರಿ, ವಿದ್ಯಾರ್ಥಿಗಳಿಗೆ ಬೌದ್ಧಿಕ ಮಾರ್ಗದರ್ಶನ ಒದಗಿಸಲು ಸಾಧ್ಯವಿದೆಯೆ? ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ತಾಂತ್ರಿಕ ಮೂಲಸೌಕರ್ಯವಿದೆಯೆ? ಪರೀಕ್ಷೆಗಳು ಮತ್ತು ಮೌಲ್ಯಮಾಪನ ನಡೆಸಲು ವಿಶ್ವಾಸಾರ್ಹ ಕ್ರಮ ಇವೆಯೆ?

ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಆದಾಯೋತ್ಪಾದಕ ವ್ಯವಸ್ಥೆ ಎಂದು ಪರಿಗಣಿಸಬಾರದು. ಆಗ, ಉನ್ನತ ಶಿಕ್ಷಣವು ಜ್ಞಾನೋತ್ಪಾದನೆಯ ತನ್ನ ಮೂಲ ಧ್ಯೇಯವನ್ನು ಕಳೆದುಕೊಂಡು, ಬರೀ ವಾಣಿಜ್ಯ ಚಟುವಟಿಕೆಯಾಗುವ ಅಪಾಯ ಎದುರಾಗುತ್ತದೆ.

ದೂರ ಶಿಕ್ಷಣದ ಯಶಸ್ಸು ಸರ್ಕಾರದ ಅನುಮತಿಯ ಮೇಲಷ್ಟೇ ಅವಲಂಬಿತವಾಗಿರದೆ, ವಿಶ್ವವಿದ್ಯಾಲಯಗಳು ಬೌದ್ಧಿಕವಾಗಿ, ಆಡಳಿತಾತ್ಮಕವಾಗಿ, ತಾಂತ್ರಿಕವಾಗಿ ಮತ್ತು ನೈತಿಕವಾಗಿ ಎಷ್ಟು ಸಿದ್ಧವಾಗಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.