ಡಿಎನ್‌ಎ ಮಸೂದೆ ಮತ್ತು ಸುರಕ್ಷತೆ

7

ಡಿಎನ್‌ಎ ಮಸೂದೆ ಮತ್ತು ಸುರಕ್ಷತೆ

Published:
Updated:

ಕೇಂದ್ರ ಸರ್ಕಾರವು ಕಳೆದ ಗುರುವಾರ ಲೋಕಸಭೆಯಲ್ಲಿ ಡಿಎನ್ಎ ತಂತ್ರಜ್ಞಾನ (ಬಳಕೆ ಮತ್ತು ಉಪಯೋಗ) ನಿಯಮಾವಳಿ –2018 ಮಸೂದೆಯನ್ನು ಮಂಡಿಸಿದೆ. ಇದರ ಅನ್ವಯ, ನಾಗರಿಕರ ದೇಹದ ಜೀವಕೋಶದಲ್ಲಿರುವ ವಂಶವಾಹಿಗಳುಳ್ಳ ಡಿಎನ್ಎ ರಾಸಾಯನಿಕ ಸಂಯುಕ್ತದ ದತ್ತಾಂಶನಿಧಿಯೊಂದನ್ನು (ಡೇಟಾಬೇಸ್) ರೂಪಿಸಲಾಗುವುದು. ಹೊಸದಾಗಿ ರಚಿಸಲಾಗುವ ಡಿಎನ್ಎ ನಿರ್ವಹಣಾ ಮಂಡಳಿಯು ಇದನ್ನು ನಿರ್ವಹಿಸಲಿದೆ. ವಿಧಿವಿಜ್ಞಾನದಲ್ಲಿ ಬಳಸುತ್ತಿರುವ ಎಲ್ಲ ಬಗೆಯ ಡಿಎನ್ಎ ಬೆರಳಚ್ಚು ತಂತ್ರಜ್ಞಾನಾಧರಿತ ಚಟುವಟಿಕೆಗಳನ್ನು ಈ ಮೂಲಕ ನಿಯಂತ್ರಿಸುವುದು ಮತ್ತು ನಿರ್ದೇಶಿಸುವುದು ಈ ಮಸೂದೆಯ ಉದ್ದೇಶ. ದುರಂತದಲ್ಲಿ ಕಣ್ಮರೆಯಾದವರು, ಸಾವನ್ನಪಿದವರು ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಖಚಿತವಾಗಿ ಗುರುತಿಸಲು ಡಿಎನ್ಎ ವಿಶ್ಲೇಷಣೆ ತಂತ್ರಗಳನ್ನು ಪೋಲಿಸ್, ನ್ಯಾಯಾಂಗ ಹಾಗೂ ವೈದ್ಯಕೀಯ ಕ್ಷೇತ್ರಗಳು ಈಗಾಗಲೇ ಬಳಸುತ್ತಿವೆಯಷ್ಟೇ. ಇವನ್ನು ಸಮಗ್ರವಾಗಿ ನಿಯಂತ್ರಿಸುವ ಕಾನೂನು ಹಾಗೂ ಆಡಳಿತಾತ್ಮಕ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಒಂದು ದಶಕದಿಂದ ಚಿಂತನೆ ನಡೆಯುತ್ತಿತ್ತು. ರಾಷ್ಟ್ರೀಯ ಕಾನೂನು ಆಯೋಗವು ಇದರ ಕರಡೊಂದನ್ನು 2017ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು ಕೂಡ. ಈ ಚಿಂತನೆಗಳ ಫಲವಾಗಿ ಇದೀಗ ಈ ಮಸೂದೆಯು ಮೂಡಿಬಂದಿದೆ.

ಡಿಎನ್ಎ ತಂತ್ರಜ್ಞಾನಾಧರಿತ ಮಾಹಿತಿ ವಿಶ್ಲೇಷಣೆ ಹಾಗೂ ಬಳಕೆಯನ್ನು ನಿಯಂತ್ರಿಸಲು ಈ ಬಗೆಯ ಕಾನೂನೊಂದು ಬೇಕಿದೆ. ಅಭಿವೃದ್ಧಿ ಹೊಂದಿದ ಬಹುತೇಕ ದೇಶಗಳಲ್ಲಿ ಈ ಬಗೆಯ ಡೇಟಾಬೇಸ್ ಹಾಗೂ ಅವನ್ನು ನಿಯಂತ್ರಿಸುವ ಕಾನೂನುಗಳಿವೆ. ಹೀಗಾಗಿ ಸಂಸತ್ತಿನಲ್ಲಿ ಈಗ ಮಂಡಿಸಿರುವ ಮಸೂದೆಯು ಸ್ವಾಗತಾರ್ಹ. ಆದರೆ ಇದರಲ್ಲಿರುವ ಕೆಲವು ಅಂಶಗಳು ಅಸ್ಪಷ್ಟವಾಗಿದ್ದು, ಗೊಂದಲ ಮೂಡಿಸುತ್ತಿವೆ. ಈ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ ಈ ಕುರಿತು ವ್ಯಾಪಕ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ. ಅಂಥ ಚರ್ಚೆಗೆ ಪೂರಕವಾಗಿ ನಾಲ್ಕು ಪ್ರಮುಖ ಕಾಳಜಿಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಮೊದಲನೆಯದು, ನಾಗರಿಕರ ಖಾಸಗಿತನಕ್ಕೆ ಸಂಬಂಧಿಸಿದ್ದು. ವ್ಯಕ್ತಿಯೊಬ್ಬನನ್ನು ಗುರುತಿಸಲು ಜೀವಕೋಶದಲ್ಲಿನ ಡಿಎನ್ಎ ಅವಶ್ಯವಿರುವುದರಿಂದ, ವಿಧಿವಿಜ್ಞಾನ ಪ್ರಯೋಗಾಲಯವು ರಕ್ತ, ಜೊಲ್ಲು, ಕೂದಲು ಇತ್ಯಾದಿ ಸೇರಿದಂತೆ ದೇಹದಿಂದ ವಿವಿಧ ಅಂಗಾಂಶಗಳನ್ನು ಸಂಗ್ರಹಿಸುತ್ತದೆ. ಇವನ್ನು ಪರೀಕ್ಷಿಸುವುದರಿಂದ ದೊರಕುವ ಡಿಎನ್ಎ ಮಾಹಿತಿಯು ಡೇಟಾಬೇಸ್‌ ಅನ್ನು ಸೇರುತ್ತದೆ. ಹೀಗಾಗಿ, ಡಿಎನ್ಎ ಮಂಡಳಿಯ ಬಳಿ ವ್ಯಕ್ತಿಯೊಬ್ಬನನ್ನು ಕುರಿತ ಬಹುಮುಖ್ಯವಾದ ಮತ್ತು ಅತಿ ವಿವರವಾದ ಮಾಹಿತಿಗಳು ಸಂಗ್ರಹವಾಗುತ್ತವೆ.

ಯಾವುದೇ ವಿಚಾರಕ್ಕೆ ಸಂಬಂಧಿಸಿದ ತನಿಖೆಯು ಮುಗಿದ ಮೇಲೆ ಆ ಮಾಹಿತಿಯನ್ನು ನಾಶ ಮಾಡಲಾಗುವುದೆಂದು ಮಸೂದೆಯಲ್ಲಿ ಹೇಳಲಾಗಿದೆ. ಏಕೆಂದರೆ, ಈ ಬಗೆಯ ಘಟನೆಗಳಲ್ಲಿ ಸಂಬಂಧಪಡದ ಅದೆಷ್ಟೋ ಮುಗ್ಧ ನಾಗರಿಕರ ಅಂಗಾಂಶ ನಮೂನೆಗಳೂ ದತ್ತಾಂಶನಿಧಿಯನ್ನು ಸೇರಿರುವ ಸಾಧ್ಯತೆ ಇರುತ್ತದೆ. ನಾಗರಿಕರ ಖಾಸಗಿ ಮಾಹಿತಿಯ ದುರ್ಬಳಕೆಯಾಗಬಾರದಲ್ಲವೇ?
ತನಿಖೆ ಪೂರ್ಣವಾದ ನಂತರ ಡೇಟಾಬೇಸ್‌ನಲ್ಲಿರುವ ಅನಗತ್ಯ ಮಾಹಿತಿಯನ್ನು ನಾಶ ಮಾಡುವ ಆಶಯ ಸರಿಯಾದದ್ದೇ. ಆದರೆ, ಅದನ್ನು ನಿರ್ವಹಿಸುವ ಕುರಿತು ಉತ್ತರದಾಯಿತ್ವ ಹಾಗೂ ಕಾಲಮಿತಿಯುಳ್ಳ ನಿಯಮಗಳನ್ನು ಮಸೂದೆಯಲ್ಲಿ ಹೇಳಲಾಗಿಲ್ಲ. ಆದ್ದರಿಂದ, ಈ ಕುರಿತು ಖಚಿತ ಸೂತ್ರಗಳನ್ನು ರೂಪಿಸಬೇಕಿದೆ.

ಎರಡನೆಯದು, ಪ್ರಯೋಗಾಲಯದಲ್ಲಿ ಬಳಕೆಯಾಗುವ ತಂತ್ರಜ್ಞಾನದ ಕುರಿತು. ಪ್ರತಿಯೊಬ್ಬನ ಡಿಎನ್ಎಯಲ್ಲಿಯೂ ಯಾವುದೇ ಪ್ರೊಟೀನನ್ನೂ ಸ್ರವಿಸದ ರಾಸಾಯನಿಕ ಅಣುಗಳ ಪುನುರುಕ್ತಿಯುಳ್ಳ ಭಾಗಗಳಿರುತ್ತವೆ. ಅವನ್ನು ವೈಜ್ಞಾನಿಕ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಎಸ್‌ಟಿಆರ್ ಹಾಗೂ ವಿಎನ್‌ಟಿಆರ್ ಸರಣಿಗಳೆಂದು ಕರೆ ಯುತ್ತಾರೆ. ಇದರಲ್ಲಿರುವ ಪಟ್ಟಿಗಳ ಸ್ವರೂಪ, ಬಣ್ಣದ ದಟ್ಟತೆ, ಉದ್ದ ಇತ್ಯಾದಿಗಳು ಪ್ರತಿ ವ್ಯಕ್ತಿಯಲ್ಲಿ ಭಿನ್ನವಾಗಿರುವುದರಿಂದ ಅವನ್ನು ಗಮನಿಸಿಯೇ ವ್ಯಕ್ತಿಯೊಬ್ಬನ ಡಿಎನ್ಎ ಬೆರಳಚ್ಚನ್ನು ನಿರ್ಧರಿಸುವುದು. ಇದು ಜಾಗತಿಕವಾಗಿ ಒಪ್ಪಿಕೊಂಡ ವೈಜ್ಞಾನಿಕ ಪದ್ಧತಿ. ಈ ಬಗೆಯ ಡಿಎನ್ಎ ಭಾಗಗಳನ್ನು ಮಾತ್ರ ಈ ಪರೀಕ್ಷೆಗಳಲ್ಲಿ ಬಳಸಬೇಕೆಂದು ಈ ಮಸೂದೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕಿದೆ. ಏಕೆಂದರೆ, ಡಿಎನ್ಎ ಅಣುವಿನಲ್ಲಿ ವ್ಯಕ್ತಿಯ ರೂಪ-ಗುಣ ನಿರ್ಧರಿಸುವ ಹತ್ತಾರು ಸಹಸ್ರ ವಂಶವಾಹಿಗಳಿರುವ ಬೇರೆ ಭಾಗಗಳೂ ಇವೆ. ಅವನ್ನು ಬಳಸಿ ಆ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಪಡೆಯಲು ಸಾಧ್ಯ. ಉದಾಹರಣೆಗೆ, ಭವಿಷ್ಯದಲ್ಲಿ ಬರಬಹುದಾದ ಕಾಯಿಲೆ, ವಂಶವೃಕ್ಷದ ವಿವರ... ಇತ್ಯಾದಿ. ಆಗ, ಅಂಥ ಮಾಹಿತಿಗಳ ದುರ್ಬಳಕೆಗೂ ಅವಕಾಶವಾಗಬಹುದು.

ಮೂರನೆಯದು, ಈ ಪ್ರಯೋಗಾಲಯಗಳ ನಿರ್ವಹಣೆ ಕುರಿತದ್ದು. ಈ ಕಾನೂನಿನ ಒಟ್ಟಾರೆ ಯಶಸ್ಸಿರುವುದು ಡಿಎನ್ಎ ನಮೂನೆಗಳನ್ನು ಪರೀಕ್ಷಿಸುವ ಮತ್ತು ಡೇಟಾಬೇಸ್ ನಿರ್ವಹಿಸುವ ಪ್ರಯೋಗಾಲಯಗಳ ಕ್ಷಮತೆಯಲ್ಲಿ. ಡಿಎನ್‌ಎ ಮಾದರಿ ಸಂಗ್ರಹಣೆ, ಸಾಗಣೆ, ಶೇಖರಣೆ, ಮಾಹಿತಿ ದಾಖಲಾತಿ, ಪರೀಕ್ಷೆ, ಫಲಿತಾಂಶದ ವಿಶ್ಲೇಷಣೆ- ಈ ಎಲ್ಲ ಹಂತಗಳಲ್ಲಿ ಅಲ್ಲಿನ ತಜ್ಞರು ಮತ್ತು ಸಿಬ್ಬಂದಿ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಫಲಿತಾಂಶ ಏರುಪೇರಾಗುವ ಅಥವಾ ಅಂಗಾಂಶ ನಮೂನೆಗಳು ಬೆರ
ಕೆಯಾಗುವ ಅಪಾಯವಿರುತ್ತದೆ. ಆದ್ದರಿಂದ, ಪ್ರಯೋಗಾಲಯಗಳ ತಾಂತ್ರಿಕ ಕ್ಷಮತೆ ಮತ್ತು ನೈತಿಕ ಜವಾಬ್ದಾರಿಗಳ ಕುರಿತು ಮಾರ್ಗದರ್ಶಿ ಸೂತ್ರಗಳ ಅಗತ್ಯವಿದೆ. ಪ್ರಯೋಗಾಲಯ ಮತ್ತು ದತ್ತಾಂಶನಿಧಿಗಳಿಗೆ ಮಾನ್ಯತೆ ನೀಡುವ ಮತ್ತು ನಿರ್ವಹಣೆ ಕುರಿತ ಆಡಳಿತಾತ್ಮಕ ವಿಧಾನಗಳಲ್ಲಿ ಈ ಸೂತ್ರಗಳು ಸೇರಬೇಕಾಗಿವೆ.

ನಾಲ್ಕನೆಯದು, ಈ ದತ್ತಾಂಶನಿಧಿಗಳ ವರ್ಗೀಕರಣ ಕುರಿತದ್ದು. ಡಿಎನ್ಎ ಮಾದರಿಗಳನ್ನು ದುರಂತದಲ್ಲಿ ಕಣ್ಮರೆಯಾದವರು ಅಥವಾ ನಿಧನ ಹೊಂದಿದವರು, ಕಾಣೆಯಾದವರು ಮತ್ತು ಅಪರಾಧಿಗಳನ್ನು ಗುರುತಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತದಷ್ಟೇ. ಈ ಮೂರೂ ಬಗೆಯ ದತ್ತಾಂಶನಿಧಿಗಳನ್ನು ಪ್ರತ್ಯೇಕವಾಗಿಯೇ ನಿರ್ವಹಿಸಬೇಕಿದೆ. ಅನಗತ್ಯ ಗೊಂದಲ ಹಾಗೂ ಸಂಶಯಗಳನ್ನು ತಪ್ಪಿಸಲು ಈ ವಿಧಾನ ಅಗತ್ಯ.

ಇದು ಕ್ಲಿಷ್ಟವಾದ ತಾಂತ್ರಿಕ ಅಂಶಗಳುಳ್ಳ ಮಸೂದೆಯೇನೋ ಹೌದು. ಈ ಕ್ಷೇತ್ರದ ತಜ್ಞರು ಇವನ್ನೆಲ್ಲ ಇನ್ನೂ ಕೂಲಂಕಷವಾಗಿ ಪರಿಶೀಲಿಸಿ, ಇದರ ಉದ್ದೇಶ ಸಾರ್ಥಕ
ವಾಗುವಂತೆ ನೋಡಿಕೊಳ್ಳಬೇಕು. ನಾಗರಿಕರ ಮೂಲಭೂತ ಹಕ್ಕುಗಳನ್ನು ಪ್ರಭಾವಿಸಬಲ್ಲ ಕಾನೂನೊಂದರ ರಚನೆಯ ವಿಧಾನವು ಜನಸಾಮಾನ್ಯರ ಅಭಿಪ್ರಾಯಗಳಿಗೂ ಕಿವಿಗೊಡಬೇಕಲ್ಲವೇ?

-ಡಾ. ಕೇಶವ ಎಚ್. ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞರು
ನಿರ್ದೇಶಕರು, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ,
ವಿಳಾಸ: ’ಇಂಚರ’, ನ್ಯೂಪಟೇಲ್ ಸಾಮಿಲ್ ರಸ್ತೆ, ಗುಡ್ಡಮನೆ, ಶಿರಸಿ.- 581402 ಉತ್ತರ ಕನ್ನಡ (Ph: 9448931142)

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !