ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ಎರಡು ಮತಗಟ್ಟೆಗಳು

ಹೇರೂರು ಮತ್ತು ‘ಸಖಿ ಪಿಂಕ್ ಮತಗಟ್ಟೆ’
Last Updated 13 ಮೇ 2018, 8:33 IST
ಅಕ್ಷರ ಗಾತ್ರ

ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಎರಡು ಮತದಾನ ಕೇಂದ್ರಗಳು ವಿಶಿಷ್ಟ ಕಾರಣಕ್ಕಾಗಿ ಗಮನ ಸೆಳೆದವು.

ಇದೇ ಮೊದಲ ಬಾರಿಗೆ ಆರಂಭಿ ಸಿದ್ದ ‘ಸಖಿ ಪಿಂಕ್ ಮತಗಟ್ಟೆ’ ಶಿರೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿರ್ಮಾಣವಾಗಿದ್ದರೆ, ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದ ಪ್ರವೇಶದ್ವಾರವನ್ನು ಬುಡಕಟ್ಟು ಜನರ ಪಾರಂಪರಿಕ ವಸತಿಯಂತೆ ವಿನ್ಯಾಸಗೊಳಿಸಲಾಗಿತ್ತು.

ಶಿರೂರು ಮತಗಟ್ಟೆಯ ಆವರಣದ ಪ್ರವೇಶದಲ್ಲಿ ಸ್ವಾಗತ ಕಮಾನು, ಒಳಗಿನ ಶಾಮಿಯಾನ, ಕಟ್ಟಡದ ಹೊರಗೆ ಸಿಂಗರಿಸಲು ಬಳಸಿದ ಬಟ್ಟೆ, ಕೊಠಡಿಯ ಗೋಡೆ ಎಲ್ಲ ಪಿಂಕ್ ಬಣ್ಣದವಾಗಿದ್ದುವು. ಈ ಮತಕೇಂದ್ರದ ನೇತೃತ್ವ ವಹಿಸಿ ದ್ದವರು ಹೊಸಾಡು ಗ್ರಾಮದ ಮೊವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ ಐತಾಳ್. ಇಲ್ಲಿನ ಎಲ್ಲ ಸಿಬ್ಬಂದಿ, ಅಭ್ಯರ್ಥಿಗಳ ಏಜೆಂಟ್, ರಕ್ಷಣಾ ಸಿಬ್ಬಂದಿ ಎಲ್ಲ ಮಹಿಳೆಯರಾಗಿದ್ದರು. ಹೊಸ ಮತದಾರರಿಗೆ ಇಲ್ಲಿ ಅಚ್ಚರಿ ಕಾದಿತ್ತು. ಮತದಾನ ಮಾಡಿ ಬರು ತ್ತಿದ್ದಂತೆ ಮತಗಟ್ಟೆ ಅಧಿಕಾರಿ ಕರೆದು ನಗುಮೊಗದಿಂದ ಅಭಿನಂದಿಸಿ ಮೊದಲ ಮತದಾನವನ್ನು ನೆನಪಿಸುವ ಸ್ಮರಣಿಕೆ ನೀಡುತ್ತಿದ್ದರು. ಹೊರಗೆ ಆರೋಗ್ಯ ಇಲಾಖೆಯ ಶುಶ್ರೂಷಕಿ ವಿಜಯಾ ಅವರಿಂದ ಪ್ರಥಮ ಚಿಕಿತ್ಸಾ ಸೌಲಭ್ಯ ಇತ್ತು. ಪುಟ್ಟ ಮಕ್ಕಳನ್ನು ಕರೆತಂದ ತಾಯಂದಿರು ಕೇಂದ್ರದ ಒಂದೆಡೆ ಇರುವ ‘ಚಿಣ್ಣರ ಅಂಗಳ’ದಲ್ಲಿ ಅವರನ್ನು ಬಿಟ್ಟು ನಿಶ್ಚಿಂತೆಯಿಂದ ಮತದಾನ ಮಾಡಬಹುದಾಗಿತ್ತು. ಅದನ್ನು ನಿರ್ವಹಿಸುತ್ತಿದ್ದ ಶಿರೂರು ಕೆಳಪೇಟೆಯ ಅಂಗನವಾಡಿ ಸಹಾಯಕಿ ಶಿಲ್ಪಾ ಶ್ಯಾನುಭಾಗ್ ಈ ಕೇಂದ್ರದಲ್ಲಿ ಮಕ್ಕಳನ್ನು ಇರಿಸಿಕೊಂಡು ಆಟ ಆಡಿಸಿದ ಅನುಭವ ಹಂಚಿಕೊಂಡರು.

ಮತದಾನ ಮಾಡಿಬಂದ ಪವಿತ್ರಾ ಮೇಸ್ತ ಮತ್ತು ಪೂಜಾ ಮೇಸ್ತ ‘ಇದು ನಮಗೆ ಅನಿರೀಕ್ಷಿತ ಅಚ್ಚರಿ ಮೂಡಿಸಿತು. ಸಮಾರಂಭದ ಮನೆ ಹೊಕ್ಕ ಅನುಭವ ನೀಡಿತು. ಮಹಿಳೆಯರು ಆತಂಕರಹಿತವಾಗಿ ಮತದಾನ ಮಾಡುವ ವಾತಾವರಣ ಇತ್ತು’ ಎಂದರು. ಇಲ್ಲಿ 384 ಪುರುಷರು, 396 ಮಹಿಳೆಯರು ಸೇರಿ 780 ಜನರು ಮತದಾನ ಮಾಡಬೇಕಿತ್ತು. ಅಂತಿಮ ವಾಗಿ ಇಲ್ಲಿ 296 ಪುರುಷರು ಮತ್ತು 340 ಮಹಿಳೆಯರು ಸೇರಿ ಒಟ್ಟು 636 ಜನರು (ಶೇ 81.5) ಮತದಾನ ಮಾಡಿದರು.

ಹೇರೂರಿನ ಮತಗಟ್ಟೆಯ ಮುಂಭಾಗ ಬುಡಕಟ್ಟು ಜನರ ವಸತಿಯನ್ನು ನೆಪಿಸಿತು. ಅಲ್ಲಿ ಅವರು ರಚಿಸುವ ಸಾಂಪ್ರದಾಯಿಕ ಬೀಳಿನ ವಿವಿಧ ಬುಟ್ಟಿ, ವಾದನ ತೂಗು ಹಾಕಲಾಗಿತ್ತು. ಅವರ ಕೃಷಿಯನ್ನು ಸಂಕೇತಿಸುವ ಗಿಡಗಳಿದ್ದವು. ತಳಿರಿನಿಂದ ಸಿಂಗರಿಸಲಾಗಿತ್ತು. ಅದಕ್ಕೆ ಸರಿಯಾಗಿ ಅಲ್ಲಿನ ಕೊರಗ ಕುಟುಂಬದ ಸದಸ್ಯರು ತಮ್ಮ ಸಾಂಪ್ರ ದಾಯಿಕ ದಿರಿಸಿನಲ್ಲಿ ಬಂದು ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT