ಕೊಡಗಿನ ದುಬಾರೆ ಆನೆ ಶಿಬಿರದಲ್ಲಿನ ದುರಂತವು ಪ್ರವಾಸಿಗರ ಸುರಕ್ಷತೆ ಕುರಿತಂತೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ, ಕಾಲಿಗೆ ಕಬ್ಬಿಣದ ದೊಡ್ಡ ಸರಪಳಿಯನ್ನು ಬಿಗಿಸಿಕೊಂಡು ಇಡೀ ಜೀವಿತಾವಧಿಯನ್ನು ಒಂದೇ ಸ್ಥಳದಲ್ಲಿ ಸವೆಸುವ ಸಾಕಾನೆಗಳ ದೂರು ದುಮ್ಮಾನಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ.

ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವ ಅವುಗಳನ್ನು ಕುಟುಂಬಗಳಿಂದ ಬೇರ್ಪಡಿಸಿ ಮನರಂಜನೆಯ ಸರಕುಗಳಾಗಿ ಬಳಸುವುದು ನೈತಿಕ ಅಪರಾಧವಲ್ಲವೆ? ಆನೆಗಳನ್ನು ಸೆರೆಹಿಡಿದು ಪಳಗಿಸಿ ನಮ್ಮ ಅಧೀನದಲ್ಲಿ ಇರಬೇಕೆಂದು ಬಯಸುವುದು ಮನುಷ್ಯನ ಅಹಂಕಾರ ಅಲ್ಲವೆ?

ಮಾನವನಂತೆಯೇ ಆನೆಯೂ ಸಾಮಾಜಿಕ ಜೀವಿ. ಅವುಗಳದು ಮಹಿಳಾಪ್ರಧಾನ ಕೌಟುಂಬಿಕ ವ್ಯವಸ್ಥೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಸೋದರಿ ಮತ್ತು ಮಕ್ಕಳೇ ಆಕೆಯ ಕುಟುಂಬ. ಚಿಕ್ಕಮ್ಮ ಆನೆಯದು ಮರಿಗಳ ಪಾಲನೆ ಕೆಲಸ; ಮರಿಗಳಿಗೆ ಕಾಡಿನ ಕಾಗುಣಿತ ಹೇಳಿಕೊಡುವುದು ಅದೇ. ಆ ಪಾಠವೇ ಅವುಗಳ ಭವಿಷ್ಯತ್ತಿಗೆ ಜೀವಾಳ. ಹಲವು ಸೋದರ ಸಂಬಂಧಿಗಳು ಸೇರಿ ಆನೆಯ ಒಂದು ಕುಲವಾಗುತ್ತದೆ. ಆ ಗುಂಪಿನಲ್ಲಿ 60ರಿಂದ 90 ಆನೆಗಳಿರುತ್ತವೆ. ವರ್ಷವೊಂದರಲ್ಲಿ ಆ ಗುಂಪು ಕಾಡಿನಲ್ಲಿ ಒಂದು ಸಾವಿರ ಚದರ ಕಿ.ಮೀ.ನಷ್ಟು ಚಲಿಸುತ್ತದೆ. ಆದರೆ, ಎಂದಿಗೂ ದಾರಿ ತಪ್ಪುವುದಿಲ್ಲ; ಅವು ಮುತ್ತಜ್ಜಿಯಿಂದ ಪಡೆದ ಜ್ಞಾನದ ಬಳುವಳಿ ಇದು.

ಬೇಸಿಗೆಯಲ್ಲಿ ಒಣಗಿ ನಿಂತ ಉದ್ದನೆಯ ಹುಲ್ಲು ಎಲ್ಲಿದೆ (ಎಲಿಫೆಂಟ್ ಗ್ರಾಸ್), ಯಾವ ಭಾಗದಲ್ಲಿ ಸೀಗೆಮುಳ್ಳು ಚಿಗುರೊಡೆದಿದೆ, ಉಪ್ಪಿನ ಅಂಶದ ಮಣ್ಣು ಯಾವ ಮೂಲೆಯಲ್ಲಿದೆ, ಕೆರೆಗಳು ಬತ್ತಿದಾಗ ಕಾಡಿನಲ್ಲಿ ಅಡಗಿರುವ ನೀರೆಲ್ಲಿದೆ; ಸಮೃದ್ಧವಾಗಿ ಬೆಳೆದುನಿಂತ ಬಿದಿರು ಮೆಳೆ ಎಲ್ಲಿದೆ? ಇದೆಲ್ಲ ಜ್ಞಾನ ಅಜ್ಜಿಯಿಂದ ತಾಯಿಗೆ, ತಾಯಿ
ಯಿಂದ ಮರಿಗಳಿಗೆ ಹರಿಯುತ್ತಿರುತ್ತದೆ. ಗಂಡಾನೆಗಳಿಗೆ ಕುಟುಂಬದ ರೀತಿ ರಿವಾಜುಗಳೆಂದರೆ ಅಪಥ್ಯ. ಹತ್ತು ವರ್ಷಕ್ಕೆ ಕಾಲಿಡುವ ವೇಳೆಗೆ ಅವು ಕುಟುಂಬದ ಬಂಧವನ್ನು ಕಳಚಿಕೊಳ್ಳುತ್ತವೆ; ಗುಂಪಿನಿಂದ ದೂರ ಸರಿದು ತಮ್ಮದೇ ಹಾದಿ ಹಿಡಿಯುತ್ತವೆ.

ಕಾಡಾನೆಗಳ ದೈನಂದಿನ ದಿನಚರಿಗೆ ಹೋಲಿಸಿದರೆ ಅರಣ್ಯ ಇಲಾಖೆಯ ಶಿಬಿರಗಳು, ದೇಗುಲಗಳು ಮತ್ತು ಮಠಗಳ ಸುಪರ್ದಿಯಲ್ಲಿರುವ ಸಾಕಾನೆಗಳ ದಿನಚರಿ ತದ್ವಿರು
ದ್ಧವಾದುದು. ಕಾಡಾನೆಯೊಂದು ಅರಣ್ಯದಲ್ಲಿ ದಿನವೊಂದಕ್ಕೆ 20ರಿಂದ 40 ಚ.ಕಿ.ಮೀ. ಚಲಿಸಿದರೆ, ಸಾಕಾನೆಯು ಒಂದರಿಂದ ಎರಡು ಕಿ.ಮೀ. ಸಂಚರಿಸುವುದೇ ಹೆಚ್ಚು. ಅವುಗಳಿಗೆ ಕಾಡಿನ ಭಾಷೆ ಅಪರಿಚಿತ. ಮಾವುತನೇ ಅವುಗಳ ಒಡನಾಡಿ. ಪೇಟೆ ಮಂದಿಯ ಇತಿಮಿತಿಗಳು ಎಂದಿಗೂ ಅವುಗಳಿಗೆ ಅರ್ಥವಾಗದು.

ಶಿಬಿರಗಳಲ್ಲಿರುವ ಆನೆಗಳಿಗೆ ಸ್ನಾನ ಮಾಡಿಸಿ, ಕಾಡಿನೊಳಗೆ ಮೇಯಲು ಬಿಡುವುದು ವಾಡಿಕೆ. ಆದರೆ, ಈ ಪದ್ಧತಿಯು ಅವುಗಳ ಏಕಾಂಗಿತನಕ್ಕೆ ಪರಿಹಾರವಾಗದು. ಮತ್ತೊಂದೆಡೆ ದೇಗುಲಗಳಲ್ಲಿರುವ ಆನೆಗಳ ಏಕಾಂಗಿ ಬಾಳು–ನೋವು ಯಾರಿಗೂ ತಿಳಿಯದು. ಅವುಗಳದ್ದು ಒಂದರ್ಥದಲ್ಲಿ ಗ್ರೀಕ್ನ ದುರಂತ ನಾಟಕಗಳ ಸ್ಥಿತಿ; ಮಾವುತ ಹೇಳಿದರೆ ಭಕ್ತರಿಗೆ ನಮಸ್ಕರಿಸುವುದು, ದೇವಾಲಯವನ್ನು ಸುತ್ತು ಹಾಕುವುದು, ಗಂಟೆ ಬಾರಿಸುವುದು, ಕಾಣಿಕೆ ಕೊಡುವ ಭಕ್ತರ ಕೊರಳಿಗೆ ಹೂವಿನ ಹಾರ ಹಾಕುವುದು, ಅವರು ನೀಡಿದ ಹಣ್ಣುಹಂಪಲು ಮೆಲ್ಲುತ್ತಾ, ಮಾವುತನ ಆದೇಶಗಳನ್ನು ಪಾಲಿಸುವುದಷ್ಟೆ ಅವುಗಳ ಕಾಯಕ. ಸ್ವಚ್ಛಂದದ ಬದುಕೆಂಬುದು ಅವುಗಳ ಪಾಲಿಗೆ ಮರೀಚಿಕೆ.

ಆನೆಗಳು ಶಿಬಿರದಲ್ಲಿರಲಿ ಅಥವಾ ದೇವಸ್ಥಾನದಲ್ಲಿರಲಿ ಅವು ವನ್ಯಜೀವಿಗಳೇ. ಏಕಾಂಗಿಯಾಗಿದ್ದಾಗ ಅಥವಾ ಗುಂಪಿನಲ್ಲಿದ್ದಾಗಲೂ ಅವುಗಳ ಸ್ವಭಾವಸಿದ್ಧ ಗುಣ ಬದಲಾಗದು. ಅವುಗಳ ಮನಸ್ಸು ಒಂದೇ ತೆರನಾಗಿ ಇರುವುದಿಲ್ಲ; ಸ್ವಭಾವ, ವರ್ತನೆಯನ್ನು ಅಂದಾಜು ಮಾಡುವುದು ಕಷ್ಟ.

ಸೆರೆ ಹಿಡಿದ ಆನೆಗಳು, ಪ್ರವಾಸೋದ್ಯಮ ಚಟುವಟಿಕೆ ಮತ್ತು ಧಾರ್ಮಿಕ ಸಭೆ– ಸಮಾರಂಭಗಳಲ್ಲಿ ಬಳಸುವ ಸಾಕಾನೆಗಳು ಹೆಚ್ಚು ಮಾನಸಿಕ ಒತ್ತಡಕ್ಕೆ ಸಿಲುಕುತ್ತವೆ ಎಂದು ಹೈದರಾಬಾದ್ನ ಸಿಎಸ್ಐಆರ್ – ಜೀವಕೋಶ ಮತ್ತು ಆಣ್ವಿಕ ಜೀವವಿಜ್ಞಾನ ಕೇಂದ್ರದ (ಸಿಸಿಎಂಬಿ) ವಿಜ್ಞಾನಿಗಳು ನಡೆಸಿದ ಅಧ್ಯಯನ ಹೇಳಿದೆ. ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ವಾದ್ಯಮೇಳ, ಜನರ ಗದ್ದಲಕ್ಕೆ ಅವು ಬೆದರು
ತ್ತವೆ. ಈ ಸಂದರ್ಭದಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ಗಳ ವ್ಯತ್ಯಾಸ ಅವುಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅವುಗಳ ದಿಢೀರ್ ವರ್ತನೆಯು ಸಾರ್ವಜನಿಕ ಆಸ್ತಿ, ಜೀವಹಾನಿಗೆ ಕಾರಣ ಆಗುತ್ತದೆ.

ಕಾಡಿನಲ್ಲಿರುವ ಆನೆಗಳಿಗೆ ಹೋಲಿಸಿದರೆ ಸಾಕಾನೆಗಳು ಜೀವಿತಾವಧಿ ಮತ್ತು ಫಲವತ್ತತೆಯ ಸಮಸ್ಯೆ ಎದುರಿಸುತ್ತವೆ. ಇದರಿಂದ ದೇಹದಲ್ಲಾಗುವ ಬದಲಾವಣೆಯು ಅವುಗಳ ಪುಂಡಾಟಕ್ಕೂ ಕಾರಣವಾಗುತ್ತದೆ ಎಂದು ವನ್ಯಜೀವಿ ವಿಜ್ಞಾನಿಗಳು ಹೇಳುತ್ತಾರೆ.

ಆನೆಗಳ ಕಿವಿಗಳು ಅತ್ಯಂತ ಸೂಕ್ಷ್ಮ. ಭಕ್ತರು ದೇಗುಲಗಳಲ್ಲಿ ಬಾರಿಸುವ ಗಂಟೆನಾದ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆನೆ ಶಿಬಿರಗಳಲ್ಲಿ ಜನರು ಕೇಕೆ ಹಾಕುತ್ತಾರೆ; ಚಪ್ಪಾಳೆ ತಟ್ಟುತ್ತಾರೆ. ಜನರ ಈ ವರ್ತನೆಯಿಂದ ಅವು ಕೆರಳುವ ಸಾಧ್ಯತೆ ಇರುತ್ತದೆ. ಜೀವವಿಕಾಸದ ಕುಲುಮೆಯಲ್ಲಿ ಅರಳಿ ಲಕ್ಷಾಂತರ ವರ್ಷ ಬಾಳಿದ ಆನೆಗಳನ್ನು ಜನರ ಹುಚ್ಚಾಟವು ಸಂಕಷ್ಟಕ್ಕೆ ಸಿಲುಕಿಸಿರುವುದು ಸ್ಪಷ್ಟ. ದುಬಾರೆಯ ದುರಂತ ಪ್ರವಾಸಿಗರ ಸುರಕ್ಷತೆಯ ಬಗ್ಗೆ ವ್ಯವಸ್ಥೆಯನ್ನು ಜಾಗೃತಿಗೊಳಿಸಿದರಷ್ಟೇ ಸಾಲದು; ಆನೆಗಳ ಮೇಲಿನ ಮನುಷ್ಯನ ಆಧಿಪತ್ಯದ ಚಟುವಟಿಕೆಗಳು ಈಗಲೂ ಅಗತ್ಯವೇ ಎನ್ನುವ ಅವಲೋಕನಕ್ಕೂ ಕಾರಣವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.