ಶನಿವಾರ, ಸೆಪ್ಟೆಂಬರ್ 21, 2019
21 °C

ಹಿಂದಿನ ಸರ್ಕಾರಗಳ ವೈಖರಿಗಳನ್ನು ಸುನಾಯಾಸವಾಗಿ ಸಮರ್ಥಿಸುತ್ತಿದ್ದೇವೆಯೇ?

Published:
Updated:

ಆರ್ಥಿಕ ಹಿಂಜರಿತದ ಬಗೆಗಿನ ಗಂಭೀರ ಚರ್ಚೆಯೊಂದು ಕೇಸರಿ ಹರವು ಮತ್ತು ರಾಜಾರಾಂ ತಲ್ಲೂರ್ ಅವರ ಫೇಸ್‌ಬುಕ್‌ ಪುಟಗಳಲ್ಲಿ ಆರಂಭವಾಗಿದೆ. ಚರ್ಚೆಯ ಭಾಗವಾಗಿರುವ ಮೂರು ಬರಹಗಳು ಇಲ್ಲಿವೆ.

---

ಹಿಂದಿನ ಸರ್ಕಾರಗಳ ವೈಖರಿಗಳನ್ನು ಸುನಾಯಾಸವಾಗಿ ಸಮರ್ಥಿಸುತ್ತಿದ್ದೇವೆಯೇ: ಕೇಸರಿ ಹರವು ಪ್ರಶ್ನೆ

ಮೋದಿ ಸರ್ಕಾರದ ಆಡಳಿತ ವೈಖರಿಯನ್ನು ಅನೇಕ ಮಜಲುಗಳಲ್ಲಿ ಟೀಕಿಸಿಬೇಕಾದ್ದೇ. ಅದರಲ್ಲಿ ಯಾವ ಗೊಂದಲವೂ ಇಲ್ಲ. ಆದರೆ ಹಾಗೆ ಟೀಕಿಸುವ ಭರದಲ್ಲಿ ಹಿಂದಿನ ಸರ್ಕಾರಗಳ ವೈಖರಿಗಳನ್ನು ಸುನಾಯಾಸವಾಗಿ ಸಮರ್ಥಿಸುತ್ತಿದ್ದೇವೆಯೇ? ನಾವು ಸೈದ್ಧಾಂತಿಕವಾಗಿ ಮಾಡಿಕೊಂಡೇ ಬೆಳೆದ ಟೀಕೆಗಳನ್ನೆಲ್ಲ ಇಂದು ಬದಿಗೆ ಸರಿಸುತ್ತಿದ್ದೇವೆಯೇ?

ಇದನ್ನೂ ಓದಿ: ಪುರುಷೋತ್ತಮ ಬಿಳಿಮಲೆ ಕಿವಿಮಾತು– ಇನ್ನೊಂದು ವರ್ಷ ಹುಷಾರಾಗಿರಿ

ಬೃಹತ್ ಯೋಜನೆಗಳು, ಹಸಿರುಕ್ರಾಂತಿ ಇವುಗಳನ್ನು ವಿರೋಧಿಸುವುದರಿಂದ ಆರಂಭಗೊಂಡು, ನಮ್ಮ ದೇಶ ಗ್ಯಾಟ್ ಒಪ್ಪಂದಕ್ಕೆ ಸಹಿಮಾಡುವ ಸಂದರ್ಭದಿಂದ ಹಿಡಿದು ಇತ್ತೀಚಿನವರೆಗೂ ನಾವು ಜಾಗತೀಕರಣ, ಖಾಸಗೀಕರಣ ಮತ್ತು ಔದಾರೀಕರಣವನ್ನು ವಿರೋಧಿಸುತ್ತಲೇ ಬಂದಿದ್ದೆವು.

ಅರಣ್ಯ, ಕೃಷಿ, ಕಾರ್ಮಿಕ, ಮಾನವ ಹಕ್ಕು, ಆಮದು-ರಫ್ತು ನೀತಿಗಳಲ್ಲಿ ಆಗಾಗ್ಗೆ ಆದ ಬದಲಾವಣೆಗಳನ್ನು ಖಂಡಿಸುತ್ತಲೇ ಬಂದಿದ್ದೆವು. ತೊಂಭತ್ತರ ದಶಕದಲ್ಲಿ Structural Adjustment ಅನ್ನು ತೀರ್ವವಾಗಿ ವಿರೋಧಿಸಿದ್ದೆವು. World Bank ಮತ್ತು IMF ಹುನ್ನಾರಗಳು ನಮ್ಮ ದೇಶದ ಸಾರ್ವಭೌಮತ್ವಕ್ಕೆ ಅತಿಮಾರಕ ಎಂದೇ ವಾದಿಸಿದ್ದೆವು. ಬಹುರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯ, ಪೇಟೆಂಟ್, ಅವುಗಳು ನಮ್ಮ ದೇಶಕ್ಕೆ ಉಣಿಸ ಹೊರಟಿದ್ದ ವಿಷಯುಕ್ತ ಆಹಾರ, ಕುಲಾಂತರಿ ತಳಿ ಅಭಿವೃದ್ಧಿ ಮತ್ತು ಮಾರಾಟ, ವಿಸ್ತರಣೆ... ಹೀಗೆ ಅನೇಕಾನೇಕ ಜಾಗತಿಕ ವಿಷಯಗಳು ನಮ್ಮ ದೇಸೀತನವನ್ನೇ ಕಸಿದುಕೊಳ್ಳುತ್ತಿವೆ, ನಮ್ಮ ಜ್ಞಾನಸಂಪತ್ತನ್ನು ಅಪಮೌಲ್ಯ ಮಾಡುತ್ತಿವೆ, ನಮ್ಮ ಔದ್ಯೋಗೀಕರಣದ ಲಕ್ಷಣಗಳನ್ನೇ ಬದಲಿಸುತ್ತಿವೆ - ಹೀಗೆ ತಾತ್ವಿಕ, ಭಾವನಾತ್ಮಕ ಹೋರಾಟಗಳನ್ನು ಹಮ್ಮಿಕೊಂಡಿದ್ದೆವು. ಇವೆಲ್ಲ ಸಮಸ್ಯೆಗಳೂ ಹಿಂದಿಗಿಂತ ಇಂದು ಹತ್ತು ಪಟ್ಟು ಹೆಚ್ಚಾಗಿದೆಯೇ ಹೊರತು ಹೊಸದಾಗಿ ಸೃಷ್ಟಿಯಾಗಿಲ್ಲ. ಹಿಂದಿನ ಸರ್ಕಾರಗಳು ಈ ಪ್ರಕ್ರಿಯೆಗಳನ್ನು ಆರಂಭಿಸಿದ್ದವು, ಈ ಸರ್ಕಾರ ಅವನ್ನು ದೊಡ್ಡಮಟ್ಟದಲ್ಲಿ ಕೈಗೊಂಡಿದೆ.

ಇದನ್ನೂ ಓದಿ: ದ್ವೇಷ ಬಿಡಿ, ಆರ್ಥಿಕತೆಯತ್ತ ದೃಷ್ಟಿ ನೆಡಿ: ಮನಮೋಹನ್‌ ಸಿಂಗ್‌ ಸಲಹೆ

ಆಶ್ಚರ್ಯವೆಂದರೆ, ಇಂದು ನಮಗೆ ಹಿಂದಿನ ಸರ್ಕಾರಗಳೇ ಮೇಲು, ನಮ್ಮ ಜಿಡಿಪಿ ಉತ್ತಮವಾಗಿತ್ತು, 2001ರ ಜಾಗತಿಕ ಆರ್ಥಿಕ ಹಿಂಜರಿತ ನಮ್ಮ ದೇಶದ ಮೇಲೆ ದೊಡ್ಡ ಪರಿಣಾಮ ಬೀರಿರಲೇ ಇಲ್ಲ ಎಂದು ಮಾತಾಡುತ್ತಿದ್ದೇವೆ. ಅನೇಕ ಸಾರಿ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಭಾಷೆಯೂ ಆರ್ಥಿಕ ಭಾಷೆಯಾಗಿ ಬದಲಾಗುತ್ತಿದೆ. ಯಾವ ಅಭಿವೃದ್ಧಿ ಮಾದರಿಯನ್ನು ನಾವೆಲ್ಲ ಸಾರಾಸಗಟಾಗಿ ತಿರಸ್ಕರಿಸಿದ್ದೇವೋ ಅದೇ ಇಂದು ಹತ್ತುಪಟ್ಟು ದೊಡ್ಡದಾಗಿ ಕಾಣುವಾಗ ನಮಗೆಲ್ಲ ಸಮೀಪದೃಷ್ಟಿ ದೋಷವೆಂಬಂತೆ, ಮರೆಗುಳಿತನವಿದ್ದಂತೆ ವರ್ತಿಸುತ್ತಿದ್ದೇವೆ.

ಇದನ್ನೂ ಓದಿ: ಬೀದಿಗೆ ಬೀಳುವ ಆತಂಕದಲ್ಲಿ 12 ಲಕ್ಷ ಕಾರ್ಮಿಕರು

ಅನಂತಮೂರ್ತಿಯವರು ಹೇಳಿದ ಕತೆಯ ಹಾಗೆ, ಸೊಂಟದ ಮಟ್ಟದ ನೀರಲ್ಲಿ ಬಿಟ್ಟು ಹೋಗುತ್ತಿದ್ದ ಹೊಳೆ ದಾಟಿಸುವ ಅಂಬಿಗನ ಮುಂದೆ ಮೊಣಕಾಲು ಮಟ್ಟದಲ್ಲಿ ಬಿಟ್ಟು ಹೋಗುತ್ತಿದ್ದ ಅವನ ಅಪ್ಪನೇ ಇಂದು ನಮಗೆ ಉತ್ತಮನಾಗಿ ಕಾಣುತ್ತಿದ್ದಾನೆಯೇ? ನಮ್ಮ ಸೈದ್ಧಾಂತಿಕ ನಿಲುವುಗಳು ಏನಾಗಿ ಹೋದವು? ಅಥವಾ, ಅವು ಅಂದು ಅಷ್ಟು ಜಾಳಾಗಿದ್ದವೇ? ಅಥವಾ, ಈ ಜಾಗತಿಕ ವಾಸ್ತವಕ್ಕೆ ನಾವು ಹೊಂದಿಕೊಂಡುಬಿಟ್ಟಿದ್ದೇವೆಯೇ?

ನಾವೆಲ್ಲ ಮೂಲಕ್ಕೆ ಹೋಗಿ ಮಾತಾಡಬೇಕು ಎಂದು ಗಾಢವಾಗಿ ಅನಿಸುತ್ತಿದೆ.

 

ಮೂಲಕ್ಕೆ ಎಂದರೆ ಎಷ್ಟು ಮೂಲಕ್ಕೆ?: ರಾಜಾರಾಂ ತಲ್ಲೂರ್

ಗ್ಲೋಬಲೈಸೇಷನ್ ಈವತ್ತು ವಾಸ್ತವ. ತೊಂಭತ್ತರ ದಶಕದ ಗ್ಲೋಬಲೈಸೇಷನ್ ಆರಂಭಿಕ ಹಂತದಲ್ಲಿ ಅದಕ್ಕೆ ವಿರೋಧ ವ್ಯಕ್ತಪಡಿಸುವಾಗ ಕೂಡ ಈವತ್ತಿನ ಸರ್ಕಾರಕ್ಕೆ ಮಾಡುತ್ತಿರುವ ಟೀಕೆಗಳಂತೆಯೇ ಕಾರ್ಯಸಾಧ್ಯ ಪರ್ಯಾಯಗಳನ್ನು ಸೂಚಿಸದ ಬ್ಲಾಂಕೆಟ್ ಟೀಕೆಗಳೇ ವ್ಯಕ್ತವಾದದ್ದರಿಂದ ಅದಕ್ಕೆ ಕೊಳ್ಳುಗರು ಸಿಗಲಿಲ್ಲ. ಕಂಪ್ಯೂಟರೀಕರಣವನ್ನಾಗಲೀ, ಇಂಟರ್ನೆಟ್ ತಂತ್ರಜ್ಞಾನವನ್ನಾಗಲೀ ದೂರ ಇಟ್ಟು ಗ್ಲೋಬಲೈಸೇಷನ್ ಅನ್ನು ವಿರೋಧಿಸುವುದು ಅಂದೂ ಸಾಧ್ಯ ಇರಲಿಲ್ಲ, ಇಂದೂ ಸಾಧ್ಯ ಇಲ್ಲ. ಈ ನಿಟ್ಟಿನಲ್ಲಿ ಸ್ಪಷ್ಟ ಅಜೆಂಡಾ ಈವತ್ತಿಗೂ ಸಾಧ್ಯ ಆಗಿಲ್ಲ.

ಇದನ್ನೂ ಓದಿ: 6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ ಆರ್ಥಿಕ ವೃದ್ಧಿ ದರ

ಭಾರತದ ಮಟ್ಟಿಗೆ ಮೋದಿ ಸರ್ಕಾರ ತಂದಿರುವ ಬದಲಾವಣೆ ಎಂದರೆ, ಹಿಂದೆ ಕಾಂಗ್ರೆಸ್ ಜನರಿಗೆ ಹೆದರಿ ಕದ್ದುಮುಚ್ಚಿ ಮಾಡುತ್ತಿದ್ದುದನ್ನು ಮೋದಿಯವರ ಸರ್ಕಾರ ಬಹಿರಂಗವಾಗಿ, ಮಾರ್ಕೆಟಿಂಗ್ ಸಹಿತವಾಗಿ ಮಾಡುತ್ತಿದೆ. WB, IMF ಸಾಲಪತ್ರಗಳಲ್ಲಿ, ವಿಶ್ಲೇಷಣಾ ವರದಿಗಳಲ್ಲಿ ಹೇಳಲಾಗಿರುವ ಷರತ್ತುಗಳೇ ಸರ್ಕಾರಿ ಕಾರ್ಯಕ್ರಮಗಳಾಗಿ ರೂಪುಗೊಂಡಿವೆ (ಸ್ವಚ್ಛಭಾರತ್, ಡಿಜಿಟಲ್ ಇಂಡಿಯಾ, ಕಾರ್ಪೋರೇಟ್ ಫಾರ್ಮಿಂಗ್ ಗಳನ್ನೆಲ್ಲ ಆ ದಾಖಲೆಗಳಲ್ಲಿ ಖಚಿತವಾಗಿ ಗುರುತಿಸಬಹುದು).

ನಮ್ಮ ಬಳಿ ಸ್ಪಷ್ಟವಾದ ಒಂದು ಗ್ಲೋಬಲ್ ನಿಲುವು ಇಲ್ಲದೇ ಇದನ್ನು ಎದುರಿಸುವುದು ಇಂದು ಅಸಾಧ್ಯ.

ಸಮಸ್ಯೆಯ ಮೂಲ ಇರುವುದು ಡಿಮಾಂಡ್/ಸಪ್ಲೈ ಆಧರಿತ ಹಳೆಯ ತಲೆಮಾರಿನ ಎಕನಾಮಿಕ್ಸ್ ತಳಹದಿಯಲ್ಲಿ. ಸಾಂಪ್ರದಾಯಿಕ ಎಕನಾಮಿಕ್ ಸಿದ್ಧಾಂತ ಸೋತಿದೆ ಎಂದು ಗೊತ್ತಿದ್ದೂ ಗೊತ್ತಿದ್ದೂ, ಈವತ್ತಿಗೂ ಅದೇ ತಳಹದಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದು ಯಾವತ್ತೂ ಲಭ್ಯತೆ/ಬಳಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈವತ್ತು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯೇ ಅಪಾಯದಲ್ಲಿದೆ. ಅವನ್ನು ಬೇಡಿಕೆ/ಸರಬರಾಜು ಆಧರಿತ ಆರ್ಥಿಕತೆಯ ಮೂಲಕ ನಿಭಾಯಿಸುವುದು ಬಹಳ ಒಡ್ಡೊಡ್ಡು. ನನ್ನ ಪ್ರಕಾರ ಮೂಲಕ್ಕೆ ಹೋಗಿ ಚರ್ಚೆ ನಡೆಯಬೇಕಾಗಿರುವುದು, ಪರ್ಯಾಯವೊಂದು ರೂಪುಗೊಳ್ಳಬೇಕಾಗಿರುವುದು ಈ ದಿಕ್ಕಿನಲ್ಲಿ.

ಇದನ್ನೂ ಓದಿ: ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ: ಸುಬ್ರಮಣಿಯನ್ ಸ್ವಾಮಿ

ಗ್ಲೋಬಲೈಸೇಷನ್ ಎಂಬ ವಾಸ್ತವವನ್ನು ಮರೆತು ಈ ಚರ್ಚೆ ಈವತ್ತು ನಡೆಯದು. ಜನಪರ ನಿಲುವುಗಳು ಎಂದುಕೊಂಡದ್ದು ಹಾಗೆ ಹೇಳಹೇಳುತ್ತಲೇ ಸಂಪೂರ್ಣವಾಗಿ ಜನರಿಂದ ದೂರವಾಗಿ ನಿಂತದ್ದನ್ನು ಮತ್ತು ಫ್ಯಾಸಿಸ್ಟ್ ಶಕ್ತಿಗಳು ಈ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು, ಜನರ ನಡುವಿನಲ್ಲಿ ಅವರಿಗೆ ಅರ್ಥವಾಗುವ ಕರಿ-ಬಿಳಿ ನರೇಟಿವ್‌ಗಳ ಮೂಲಕವೇ ತಮ್ಮ ವಿಚಾರಗಳನ್ನು ಬಿತ್ತಿ ನಡುಮನೆಯಲ್ಲಿ ಪ್ರತಿಷ್ಠಾಪನೆಗೊಂಡದ್ದನ್ನು ನಮ್ಮ ಸೋಲು ಎಂದು ಒಪ್ಪಿಕೊಂಡು, ಸ್ಪಷ್ಟ ಅಜೆಂಡಾದೊಂದಿಗೆ ಶೂನ್ಯದಿಂದಲೇ ಪ್ರಯತ್ನಗಳು ಆರಂಭ ಆಗಬೇಕಿವೆ.

 

ಸಮಸ್ಯೆಯ ಪ್ರಮುಖ ಭಾಗವನ್ನು ರಾಜಾರಾಂ ತಲ್ಲೂರ್ ಗುರುತಿಸಿದ್ದಾರೆ: ಕೇಸರಿ ಹರವು

ನಾನು ಬರೆದ ಒಂದು ವಿಚಾರಕ್ಕೆ ರಾಜಾರಾಂ ತಲ್ಲೂರ್ ಪ್ರಾಜ್ಞ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತುಗಳಿಗೆ ಪ್ರತಿಸ್ಪಂದಿಯಾಗಿ ಇನ್ನಷ್ಟು ಬರೆಯುತ್ತೇನೆ.

ರಾಜಾರಾಂ ತಲ್ಲೂರ್ ಅವರು ಬಹಳ ಸ್ಪಷ್ಟವಾಗಿ ಸಮಸ್ಯೆಯ ಒಂದು ಪ್ರಮುಖ ಭಾಗವನ್ನು ಗುರುತಿಸಿದ್ದಾರೆ.

ಇಂದು ಜಾಗತೀಕರಣವನ್ನು ಹೊರಗಿಟ್ಟು ನಾಳೆಗಳನ್ನು ಕಟ್ಟಿಕೊಳ್ಳುವುದು ಅಸಾಧ್ಯ, ಸರಿಯೇ. ಹಾಗೆಯೇ, ದೇಶದ ಇಂದಿನ ಬಹುತೇಕ ಸಮಸ್ಯೆಗಳು ಬರಿಯ ದೇಶದ ಸಮಸ್ಯೆಗಳಲ್ಲ, ಅವು ಜಾಗತಿಕ ಸಮಸ್ಯೆಗಳು ಕೂಡಾ. ಹಾಗೆಯೇ, ಈ ಸಂಕ್ರಮಣ ಕಾಲದಲ್ಲಿ ಇನ್ನೊಂದು advantage ಕೂಡ ಇದೆ ಎನ್ನುವುದನ್ನೂ ನಾವು ಗುರುತಿಸದೇ ಹೋದರೆ ಮತ್ತು ಆ ನಿಟ್ಟಿನಲ್ಲಿ ನಾವು ನಮ್ಮ ಮೂಲವನ್ನೂ, ನಾಳೆಯನ್ನೂ ಕಂಡುಕೊಳ್ಳದೇ ಹೋದರೆ ದೊಡ್ಡ ಪ್ರಮಾದವಾಗುತ್ತದೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತ- ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

‘ಮಾನವಕುಲ ಎಲ್ಲಿಂದ ಎಲ್ಲಿಯವರೆಗೂ, ಎಂದಿನಿಂದ ಎಂದಿನವರೆಗೂ ಒಂದೇ ಎನ್ನುವ ಆಶಯವನ್ನು ಕೊನೆಗೂ ಎಂದಾದರೊಂದು ದಿನ ಮನುಷ್ಯ ತಲುಪಬೇಕು’ ಎಂದು ಇಲ್ಲಿ ಈಗಾಗಲೇ ಆಗಿಹೋಗಿರುವ ಅನೇಕ ಮಹಾನುಭಾವರ ಕಾಣ್ಕೆಯನ್ನು ಸಾಕಾರಗೊಳಿಸುತ್ತ ಮುನ್ನಡೆಯುವುದಕ್ಕೆ ಇದು ಅತ್ಯಂತ ಸೂಕ್ತ ಸಮಯ. ಇದು ತಲುಪಲಾರದಂತಹ ತೀರಾ ಆದರ್ಶ ಗುರಿ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಅದು ಹಾಗಲ್ಲ.

ಮೊಟ್ಟಮೊದಲಿಗೆ, ಈ ಗುರಿಯನ್ನು ಮಾನವ ಸಮಾಜಗಳು universal ಆಗಿ ಇನ್ನೂ ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳುವ ಮೊದಲೇ ಸಂಪನ್ಮೂಲಗಳ ಹಂಚಿಕೆಯ ವಿಚಾರದಲ್ಲೇ ಕಾದಾಡುತ್ತಾ, ಅವನ್ನು ಸಾಕಷ್ಟು ಬರಿದು ಮಾಡುವ ಹಂತಕ್ಕೆ ತಲುಪಿವೆ. ಈಗ ಕಾಣಿಸಿಕೊಳ್ಳುತ್ತಿರುವ ಸಂಪನ್ಮೂಲ ಕೊರತೆ ನಮ್ಮ ಕಾದಾಟವನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ. ಬಹುಶಃ ಈ ಕಾರಣಕ್ಕಾಗಿಯೇ ಇಡೀ ಜಗತ್ತಿನಲ್ಲಿ ಜಾತಿ, ಧರ್ಮ, ವರ್ಣ, ಲಿಂಗ, ಪೌರಾತ್ಯ-ಪಾಶ್ಚಾತ್ಯ, ಉತ್ತರ-ದಕ್ಷಿಣ ಹೆಮಿಸ್ಫಿಯರ್, ಈ ಮುಂತಾದ ತಾರತಮ್ಯಗಳು ಇನ್ನಷ್ಟು ಹೆಚ್ಚುತ್ತಿವೆ. ಇವು ಹೆಚ್ಚುವುದಕ್ಕೆ ಜಾಗತೀಕರಣದ ಕೊಡುಗೆ ದೊಡ್ಡದು ಎನ್ನುವುದನ್ನೂ ನಾವು ನಿಖರವಾಗಿ ಗುರುತಿಸಬೇಕು.

ಇದನ್ನೂ ಓದಿ: ನಮ್ಮ ಆದಾಯಕ್ಕೂ ಜಿಡಿಪಿಗೂ ಏನು ಸಂಬಂಧ?

ಏಕೆಂದರೆ, ಜಾಗತೀಕರಣವು ಕಾಲಿಟ್ಟಿದ್ದು ವ್ಯಾಪಾರೀ ಜಾಗತೀಕರಣವಾಗಿಯೇ ಹೊರತು, ವೈವಿಧ್ಯತೆಯಲ್ಲಿ ಸಮಾನತೆ, ಸುಸ್ಥಿರತೆ ಮತ್ತು ಏಕತೆಯನ್ನು ಪೋಷಿಸುವ ಸಾಮಾಜಿಕ ಅಥವಾ ಸಾಂಸ್ಕೃತಿಕ ಜಾಗತೀಕರಣವಾಗಿ ಅಲ್ಲ. Capitalism ಮತ್ತು ಜಾಗತಿಕ ವ್ಯಾಪಾರೀ ಸಂಸ್ಥೆಗಳಿಗೆ ಭೌಗೋಳಿಕ ಮತ್ತು ದ್ರವ್ಯ ವಿಸ್ತರಣೆಯೇ ತತ್ವವಾದ್ದರಿಂದ, ಸಂಪನ್ಮೂಲ ಹಾಗೂ ಮಾರುಕಟ್ಟೆಗಳ ಸ್ವಾಮ್ಯ ಅವುಗಳ ಅಸ್ತಿತ್ವದ ಮೂಲ. ಅವುಗಳ ಕೊರತೆ ತಲೆದೋರುತ್ತಾ ಹೋದಂತೆ ಕಮ್ಯೂನಿಸಂ, ಸೋಷಿಯಲಿಸಂ, ಪ್ರಜಾಪ್ರಭುತ್ವ ಇವೆಲ್ಲವೂ ಇಂದು ಅವಗಣನೆಗೆ ಗುರಿಯಾಗುತ್ತ, ಪ್ರಜಾಪ್ರಭುತ್ವದ ಸುರಕ್ಷಿತ ಮುಸುಕಿನಲ್ಲೇ ಅಥಾರಿಟೇರಿಯನಿಸಂ, ಆಟೋಕ್ರೆಸಿ, ಬಲಪಂಥೀಯತೆ ಎಲ್ಲೆಡೆ ವ್ಯಾಪಿಸುತ್ತಿದೆ.

ಇದನ್ನೂ ಓದಿ: ಗೋಡಂಬಿಗೂ ಹಿಂಜರಿತದ ಬಿಸಿ; ಕುಸಿದ ಖರೀದಿ ಸಾಮರ್ಥ್ಯ

ಈ ಬಿಂದುವಿನಲ್ಲಿಯೇ ನಾವು ನಿಂತು ನಮ್ಮನ್ನು ನೋಡಿಕೊಳ್ಳಬೇಕು ಎನಿಸಿತ್ತದೆ. ಡಿಮಾಂಡ್ ಸೈಡ್ ಮತ್ತು ಸಪ್ಲೈ ಸೈಡ್ ಎಕನಾಮಿಕ್ಸ್ ಎರಡೂ ತಮ್ಮದೇ ಆದ ಅನನುಕೂಲತೆಗಳಿಂದ ಹಾಳುಗೆಡಹಿವೆ (ನಾನು ತಜ್ಞನಲ್ಲ). ಇಂದು ನಮಗೆ ಬೇಕಿರುವುದು sustainable ಎಕನಾಮಿಕ್ಸ್ ಮತ್ತು sustainable ಪಾಲಿಟಿಕ್ಸ್. 
ಇದನ್ನು ನಾವು ಗುರುತಿಸಿದಾಗಷ್ಟೇ ನಮಗೆ ಮೇಲೆ ಹೇಳಿದ ಕಾಣ್ಕೆಯನ್ನು ಗುರಿ ಎಂದು ಒಪ್ಪಿಕೊಳ್ಳಲು ಮತ್ತು ಅತ್ತ ಸಾಗಲು ಸಾಧ್ಯ. ಹಾಗೆಯೇ, ಈ ಕಾಣ್ಕೆಯನ್ನು ಗುರಿ ಎಂದು ಒಪ್ಪಿಕೊಂಡಾಗಲಷ್ಟೇ sustainable ಎಕನಾಮಿಕ್ಸ್ ಮತ್ತು sustainable ಪಾಲಿಟಿಕ್ಸ್ ಕೂಡ ಸಾಧ್ಯ.

ಇದಕ್ಕೆ ಜಗತ್ತು, ನಾನು ಮತ್ತು ನೀವು ತಯಾರಿದ್ದೇವೆಯೇ ಎನ್ನುವುದು ಮೂಲಪ್ರಶ್ನೆ.

(ಇದು ಅಪೂರ್ಣ ಹಾಗೂ ತೀರಾ ಸಂಕ್ಷಿಪ್ತ ಟಿಪ್ಪಣಿಯಾದ್ದರಿಂದ ಕೆಲವು ಅಂಶಗಳು ಸ್ಪಷ್ಟನೆ ಬಯಸಬಹುದು. ಚರ್ಚೆಯಾಗಲಿ ಎಂದೇ ಇಷ್ಟಕ್ಕೆ ನಿಲ್ಲಿಸಿದ್ದೇನೆ.)

ಆರ್ಥಿಕ ಹಿಂಜರಿತ ಕುರಿತ ಇನ್ನಷ್ಟು ಬರಹಗಳಿಗೆ www.prajavani.net/tags/financial-crisis ಲಿಂಕ್ ಕ್ಲಿಕ್ ಮಾಡಿ

ಇನ್ನಷ್ಟು...

ಜವಳಿ ಉದ್ಯಮಕ್ಕೂ ಕವಿದ ಕಾರ್ಮೋಡ
ಬೇಡಿಕೆ ಕುಸಿತ ಸೃಷ್ಟಿಸಿದ ಆತಂಕ
ಬ್ಯಾಂಕುಗಳ ವಿಲೀನ: ನೌಕರರಿಗೆ ಭಯಬೇಡ- ನಿರ್ಮಲಾ ಸೀತಾರಾಮನ್
ಮನಮೋಹನ್ ಸಿಂಗ್ ಹಾಗೆ ಹೇಳಿದ್ದಾರೆಯೇ? ಸರಿ, ಧನ್ಯವಾದಗಳು: ನಿರ್ಮಲಾ ಸೀತಾರಾಮನ್
ಆರ್ಥಿಕ ಪ್ರಗತಿಗೆ ಮೊದಲ ಆದ್ಯತೆ: ನಿರ್ಮಲಾ ಸೀತಾರಾಮನ್‌
ಆರ್ಥಿಕ ಬಿಕ್ಕಟ್ಟು, ತಿನ್ನದಿರಿ ಪೆಟ್ಟು
ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ: ದೇಣಿಗೆ ಕುಸಿತ

Post Comments (+)