ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾಷ್ಟ್ರೀಯತೆ ಮತ್ತು ಪ್ರಾದೇಶಿಕ ಅಸ್ಮಿತೆ

ಅಕ್ಷರ ಗಾತ್ರ

ಸಾಂವಿಧಾನಿಕವಾಗಿ ಭಾರತ ಎಂಬ ರಾಜಕೀಯ ಅಸ್ಮಿತೆಯ ಶಕ್ತಿ, ನಾವು ಒಪ್ಪಿಕೊಂಡಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಅಡಕವಾಗಿದೆ. ಆ ಕಾರಣಕ್ಕೇ, ಭಾರತದ ಸಂವಿಧಾನದಲ್ಲಿ ಎಲ್ಲಿಯೂ ದೇಶ ಎಂಬ ಪರಿಭಾಷೆಯನ್ನು ಬಳಸಲಾಗಿಲ್ಲ. ಬದಲಾಗಿ, ಭಾರತವನ್ನು ‘ರಾಜ್ಯಗಳ ಒಕ್ಕೂಟ’ ಎಂದು, ಕೇಂದ್ರ ಸರ್ಕಾರವನ್ನು ‘ಒಕ್ಕೂಟ ಸರ್ಕಾರ’ ಎಂದು ಗುರುತಿಸಲಾಗಿದೆ. ಈ ಮುಖ್ಯವಾದ ಸಾಂವಿಧಾನಿಕ ಲಕ್ಷಣವು ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಲು ನಮಗೆ ಭಿನ್ನವಾದ ತಿಳಿವನ್ನು ಒದಗಿಸುತ್ತದೆ.

ಈ ಬಾರಿಯ ಚುನಾವಣೆಯು ಸಂಪೂರ್ಣವಾಗಿ ನರೇಂದ್ರ ಮೋದಿ ಮತ್ತು ಅವರು ನಿರೂಪಿಸಿದ ನವರಾಷ್ಟ್ರೀಯತೆ ಅಲೆಯ ಮೇಲೆ ನಡೆಯಿತು. ಇಲ್ಲಿ ನೈಜ ಭಾರತದ ಚಿತ್ರಣಕ್ಕೆ ಪ್ರಾಮುಖ್ಯ ಇರುವುದಿಲ್ಲ. ಇದು, ಭಾವನಾತ್ಮಕವಾದುದು. ಈ ಅಲೆಯ ವಿರುದ್ಧ ಸೆಣಸಿದ ಬಹುಪಾಲು ಪ್ರಾದೇಶಿಕ ಪಕ್ಷಗಳನ್ನು ಈ ನವರಾಷ್ಟ್ರೀಯತೆಯು ಸೋಲಿಸಿದೆ. ಈ ಕಾರಣಕ್ಕೆ, ರಾಜ್ಯಗಳ ಪ್ರಾದೇಶಿಕ ಅಸ್ಮಿತೆ ಮತ್ತು ಸ್ವಾಯತ್ತತೆಯ ನೆಲೆಯಿಂದ ಈ ಚುನಾವಣಾ ಫಲಿತಾಂಶದ ವಿಶ್ಲೇಷಣೆಗೆ ಮಹತ್ವವಾದ ದೃಷ್ಟಿಕೋನವೊಂದು ಲಭಿಸಿದೆ.

ಕರ್ನಾಟಕವನ್ನು ಆಧರಿಸಿ ನೋಡುವುದಾರೆ, ಇಂದು ಯಾವುದನ್ನು ನಾವು ‘ರಾಜಕೀಯವಾಗಿ ಕರ್ನಾಟಕ’ ಎಂದು ಗುರುತಿಸುತ್ತಿದ್ದೇವೆಯೋ ಇದು ಆಧುನಿಕ ಪರಿಕಲ್ಪನೆ. ಈ ಅಸ್ಮಿತೆ ರೂಪುಗೊಳ್ಳುವುದರ ಹಿಂದೆ ದಶಕಗಳ ಚಳವಳಿ, ಹೋರಾಟಗಳು ಇವೆ. ಭಾರತದ ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಏಕೀಕೃತ ಕರ್ನಾಟಕದ ಕನಸನ್ನು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಪಾದಿಸುತ್ತಲೇ ಬಂದಿದ್ದರು. ಇದರ ಪರಿಣಾಮವಾಗಿ, 1956ರ ಹೊತ್ತಿಗೆ ಹರಳುಗಟ್ಟಿದ ಕರ್ನಾಟಕ ಏಕೀಕರಣ ಜನಚಳವಳಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿ, 22 ವಿಭಿನ್ನ ಆಡಳಿತ ಘಟಕಗಳ ನಡುವೆ ಹರಿದು ಹಂಚಿಕೊಂಡಿದ್ದ ಕರ್ನಾಟಕವನ್ನು ಭಾಷೆಯ ನೆಲೆಯಲ್ಲಿ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಹುಟ್ಟಿಕೊಂಡ ಈ ಆಧುನಿಕ ‘ರಾಜಕೀಯ ಕರ್ನಾಟಕ’ ಎಂಬ ಅಸ್ಮಿತೆಯ ಬೆನ್ನಲ್ಲೇ ರಾಜ್ಯದಲ್ಲಿ ನಡೆದ ಗೋಕಾಕ್ ಚಳವಳಿ, ರೈತ-ಕಾರ್ಮಿಕ ಚಳವಳಿ, ಹಿಂದುಳಿದ ವರ್ಗಗಳ ಹೋರಾಟ, ದಲಿತ ಚಳವಳಿ ಇತ್ಯಾದಿ ಚಳವಳಿಗಳು ಕರ್ನಾಟಕದ ಪರಿಕಲ್ಪನೆಯನ್ನು ಈ ಸಮಾಜದ ಮೂಲ ಸೆಲೆಯಾದ ಬಹುತ್ವದ ನೆಲೆಯಿಂದ ನಿರೂಪಿಸಿದವು. ಈ ಆಧುನಿಕ ಚಳವಳಿಗಳಿಗೆ ಬೌದ್ಧಿಕ ಜೀವದ್ರವ್ಯ ಒದಗಿಸಿದ್ದು ಇದೇ ನೆಲದ ವಚನ ಚಳವಳಿ ಮತ್ತು ದಾಸ ಪಂಥದ ಚಳವಳಿಗಳ ಆಶಯಗಳು ಎಂಬುದನ್ನು ಚರಿತ್ರಕಾರರು ಗುರುತಿಸುತ್ತಾರೆ.

ಚಾರಿತ್ರಿಕವಾಗಿ ನೋಡುವುದಾದರೆ, ನಾಡು-ನುಡಿ ಕೇಂದ್ರಿತವಾಗಿ ಹುಟ್ಟಿದ ವರ್ತಮಾನದ ರಾಜಕೀಯ ಕರ್ನಾಟಕದ ಆಶಯಗಳು ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಮಹತ್ವದ ಸ್ಥಾನವನ್ನು ಒದಗಿಸಿವೆ. ಈ ಹೋರಾಟದ ಕಾರಣಕ್ಕೆ ಪ್ರವರ್ಧಮಾನಕ್ಕೆ ಬಂದ ಹಲವಾರು ರಾಜಕಾರಣಿಗಳು, ಆಧುನಿಕ ರಾಜಕೀಯ ಕರ್ನಾಟಕದ ಅಸ್ಮಿತೆಗಾಗಿ ಇಲ್ಲಿನ ನೆಲ, ಜಲ, ಗಡಿಗಳ ವಿಷಯದಲ್ಲಿ ರಾಜಿಯಾಗದೆ, ಪಕ್ಷಭೇದ ಮರೆತು ಲೋಕಸಭೆಯಲ್ಲಿ ಮಹತ್ವದ ಚರ್ಚೆಗಳನ್ನು ನಿರಂತರವಾಗಿ ನಿರ್ವಹಿಸಿದ್ದಾರೆ.

ಅಂತಹ ನಾಯಕರ ಪೈಕಿ ಬಿಜೆಪಿಯ ಅನಂತಕುಮಾರ್, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಪಕ್ಷದ ಎಚ್.ಡಿ.ದೇವೇಗೌಡ ಪ್ರಮುಖರು. ಅನಂತಕುಮಾರ್ ಅವರು ನಿಧನರಾದಾಗ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ‘ಇಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಮಹತ್ವದ ಕೊಂಡಿಯೊಂದು ಕಳಚಿಕೊಂಡಿತು. ಇದು ಕರ್ನಾಟಕಕ್ಕೆ ಆದ ನಷ್ಟ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪಕ್ಷಾತೀತವಾಗಿ ಹೊಮ್ಮಿದ ಆ ಅಭಿಪ್ರಾಯದಲ್ಲಿ ಕರ್ನಾಟಕತ್ವವನ್ನು ಕಾಣಬಹುದಾಗಿತ್ತು.

ಇಂದು ಈ ಮೂವರೂ ಸಂಸತ್ತಿನಲ್ಲಿ ಇಲ್ಲ. ಇವರ ಜಾಗದಲ್ಲಿ ನಾವು ಬಿಜೆಪಿಯ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್ ಕಟೀಲು,ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮೊದಲಾದ ನಾಯಕರನ್ನು ಕಲ್ಪಿಸಿಕೊಳ್ಳಬೇಕಿದೆ! ವಾಸ್ತವದಲ್ಲಿ ಇವರು, ನವರಾಷ್ಟ್ರೀಯತೆಯ ಚಿಂತನೆಗಳಿಂದ ರೂಪುಗೊಂಡಿರುವ ವ್ಯಕ್ತಿತ್ವಗಳಾಗಿರುವುದರಿಂದ, ಇವರು ಕರ್ನಾಟಕದ ಚರಿತ್ರೆ, ಅಸ್ಮಿತೆ, ರಾಜಕೀಯ ಮತ್ತು ಆರ್ಥಿಕತೆಯನ್ನು ಹೇಗೆ ಕೇಂದ್ರ ಶಾಸನಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಪ್ರತಿನಿಧಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಕರ್ನಾಟಕದ ಜನಬದುಕಿನ ಭಾಗವಾಗಿರುವ ಕಾವೇರಿ, ಮಹದಾಯಿ, ಎತ್ತಿನಹೊಳೆ, ಹಿಂದಿ ಹೇರಿಕೆ, ಗಡಿ ಸಮಸ್ಯೆಗಳು, ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ, ಮಲೆನಾಡಿನ ಜನರನ್ನು ಚಿಂತೆಗೆ ಈಡುಮಾಡಿರುವ ಕಸ್ತೂರಿ ರಂಗನ್ ವರದಿ ಜಾರಿಯಂಥ ವಿಷಯಗಳ ಕುರಿತು ಇವರು ಕೇಂದ್ರ ಸರ್ಕಾರದ ಮೇಲೆ ಸೃಷ್ಟಿಸಬಹುದಾದ ಒತ್ತಡವು ಮಲೆನಾಡಿಗರೂ ಸೇರಿದಂತೆ ಕನ್ನಡಿಗರ ಅಸ್ತಿತ್ವದ ಪ್ರಶ್ನೆಯಾಗಿ ಇರಲಿದೆ.

ಏಕೀಕೃತ ಅಖಂಡ ಭಾರತದ ಕನಸನ್ನು ಬಿತ್ತುವ ಇವರ ವಾದದಲ್ಲಿ, ವಚನ ಚಳವಳಿಗಳ ಕಾಲದಿಂದಲೂ ಕಟ್ಟಿಕೊಂಡು ಬಂದ ಬಹುತ್ವ ಕರ್ನಾಟಕತ್ವದ ಮೌಲ್ಯಗಳು ಹೇಗೆ ಪ್ರತಿನಿಧಿತ್ವಗೊಳ್ಳಲಿವೆ, ಅದು ಸಂಸತ್ತಿನಲ್ಲಿ ಯಾವ ಮಾದರಿಯ ಚರ್ಚೆಗೆ ದಾರಿ ತೆಗೆಯಲಿದೆ ಎಂಬ ತೀವ್ರ ಕುತೂಹಲ ಕನ್ನಡದ ರಾಜಕೀಯ, ಸಾಮಾಜಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಮನೆಮಾಡಿದೆ.

ಲೇಖಕ: ಅಧ್ಯಾಪಕ, ರಾಜ್ಯಶಾಸ್ತ್ರ ವಿಭಾಗ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT