ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನಡೆ: ವ್ಯವಸ್ಥೆ ಎಡವುತ್ತಿರುವುದೆಲ್ಲಿ?

Last Updated 2 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಪತ್ರಿಕೆಗಳಲ್ಲಿ ಇತ್ತೀಚೆಗೆ ವರದಿಯೊಂದು ಪ್ರಕಟವಾಗಿತ್ತು. ಹದಿನಾರರ ಹರೆಯದ ಮಗಳು ತನ್ನ ಹತ್ತೊಂಬತ್ತರ ಹರೆಯದ ಸ್ನೇಹಿತನೊಡಗೂಡಿ, ಉದ್ಯಮಿಯಾದ ತನ್ನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಸುದ್ದಿಯದು. ಅದನ್ನು ಓದಿದಾಗ ಕಸಿವಿಸಿಯೆನಿಸಿದ್ದು, ಮಗಳೊಬ್ಬಳು ತನ್ನ ಹರೆಯದ ಪ್ರೀತಿಯನ್ನು ಖಂಡಿಸಿದ ತಂದೆಯನ್ನು ಕೊಲ್ಲಲು ಮುಂದಾದಳಲ್ಲ ಎಂಬುದಕ್ಕಷ್ಟೇ ಅಲ್ಲ, ಬದುಕಿನ ರೀತಿ ಇಷ್ಟರಮಟ್ಟಿಗೆ ಬದಲಾಗುವುದಕ್ಕೆ ಕಾರಣವೇನು ಎಂಬುದಕ್ಕೊಂದು ನಿರ್ದಿಷ್ಟ ಹೊಳಹು ಕಾಣದೇ ಹೋದದ್ದಕ್ಕಾಗಿ. ಪ್ರೀತಿಯೆಂಬ ಮಾಯೆ ಅನಾದಿ ಕಾಲದಿಂದಲೂ ಬದುಕನ್ನು ಅರಳಿಸುತ್ತಲೂ, ಕೆರಳಿಸುತ್ತಲೂ ಇದೆ. ಆದರೆ ಮಿಂಚಿನ ವೇಗದಲ್ಲಿ ಚಲಿಸುತ್ತಿರುವ ಬದುಕು, ಮೌಲ್ಯಗಳ ಹಿಡಿತ ಮೀರಿ ಸಾಗುತ್ತಿಲ್ಲವೇ?

ಯಾವುದೇ ಬಗೆಯ ಕೊಲೆ, ಸುಲಿಗೆ ಅನಾಚಾರ ಇಂದು ನಿನ್ನೆಯವಲ್ಲ. ತ್ರೇತಾಯುಗದ ರಾಮಾಯಣದಿಂದ ತೊಡಗಿ, ದ್ವಾಪರಯುಗದ ಮಹಾಭಾರತದಿಂದ ಮುಂದುವರಿದು ಪ್ರಸಕ್ತ ಕಲಿಯುಗದವರೆಗೂ ದ್ವೇಷಸಾಧನೆಯೋ ವೈಷಮ್ಯವೋ ಮುಗಿಯದ ಕತೆ. ಆದರೆ ಆಸ್ತಿ ವಿಚಾರಕ್ಕಾಗಿ ಮಗ ತಂದೆಯನ್ನು ಕೊಂದ ನಿದರ್ಶನಗಳಿದ್ದಂತೆ, ಮಗಳು ಅನ್ಯಜಾತಿ ಅಥವಾ ಅನ್ಯ ಧರ್ಮದವರನ್ನು ಪ್ರೀತಿಸಿದಳೆಂಬ ಕಾರಣಕ್ಕೆ ನಡೆಸಿದ ಮರ್ಯಾದೆಗೇಡು ಹತ್ಯೆಗಳಂತೆ, ಮಗಳೇ ಹೆತ್ತವರನ್ನು ಕೊಂದ ಪ್ರಸಂಗಗಳಿಲ್ಲ. ಹೆಣ್ಣು ಮಮತೆಯ ಕಡಲೋ, ಕ್ಷಮಯಾಧರಿತ್ರಿಯೋ ಎಂಬುದೆಲ್ಲ ಪಕ್ಕಕ್ಕಿರಲಿ. ಆದರೆ ತಾನು ನೋವುಂಡೂ ಹೆತ್ತವರ ನೆಮ್ಮದಿಗಾಗಿ ಸಂತೋಷದಿಂದಿರುವುದಾಗಿ ಅವರೆದುರು ತೋರಿಸಿಕೊಳ್ಳುವ ಹೆಣ್ಣುಮಕ್ಕಳಂತೂ ಇಂದಿಗೂ ಇದ್ದಾರೆ. ಹಾಗಿರುವಾಗ ಈ ಮಗಳ ನಡೆ, ನಡತೆ ನಿಜಕ್ಕೂ ವಿಷಾದನೀಯ. ಇಷ್ಟಕ್ಕೂ ನಮ್ಮ ಸಾಮಾಜಿಕ ವ್ಯವಸ್ಥೆಯೇ ಎಡವುತ್ತಿದೆಯೇ?

ಇಂದಿನ ದಿನವಂತೂ ಎಲ್ಲದಕ್ಕೂ ಅವಸರಿಸುವ, ಅತಿರೇಕದಿಂದ ವರ್ತಿಸುವ, ವಿಪರೀತವೆನಿಸುವಂತೆ ಪ್ರತಿಕ್ರಿಯಿಸುವ ಹಪಹಪಿಯಾಗಿ ಬದಲಾಗಿಬಿಟ್ಟಿದೆ. ಅಂಗೈಯಲ್ಲಿ ಬಂದಿಳಿದ ಪ್ರಪಂಚದ ಮೂಲೆಮೂಲೆಯ ವಿಡಿಯೊಗಳು ಜನರಿಗೆ ಹಲವು ಮುಖಗಳ ಪರಿಚಯ ಮಾಡಿಕೊಡುತ್ತಿವೆ. ಎಲ್ಲದಕ್ಕೂ ಬೇಕುಬೇಕಾದಂಥ ಮಾಹಿತಿ, ಮಾದರಿಗಳು ದೊರೆಯುತ್ತಾ ಹೋಗುವಾಗ, ಕೊಲೆ, ಸುಲಿಗೆ, ದೌರ್ಜನ್ಯಗಳಿಗೆ ದೊರೆಯದೇನು? ಈ ಎಲ್ಲ ಅಡಾವುಡಿಗಳ ನಡುವೆ, ನಮ್ಮ ಮಕ್ಕಳೇನು ಕಲಿಯುತ್ತಿದ್ದಾರೆ ಎಂಬುದನ್ನು ಗಮನಿಸುವ, ಅವರನ್ನು ಹದ್ದುಬಸ್ತಿನಲ್ಲಿರಿಸುವ ಸಹನೆ, ಸ್ಥೈರ್ಯ ನಮ್ಮಲ್ಲಿದೆಯೇ? ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಅಂಕದ ಹಿಂದೆ ಓಡುವುದನ್ನು ಕಲಿಸುತ್ತಿದೆ ವಿನಾ ಬದುಕಿನ ಪಥ ಹೇಗಿರಬೇಕು ಎಂಬುದನ್ನಲ್ಲ. ಪ್ರತಿಭಾವಂತ ವಿದ್ಯಾರ್ಥಿ ಯಾವುದೋ ವಿಷಯದ ಪರೀಕ್ಷೆಯೊಂದು ಕಠಿಣವಾಗಿತ್ತೆಂಬ ಕಾರಣಕ್ಕೆ, ಫಲಿತಾಂಶ ಬರುವ ಮೊದಲೇ ಸಾವಿಗೆ ಶರಣಾಗುತ್ತಾನೆ. ಇನ್ನೊಂದು ಕಡೆ, ಮೆಡಿಕಲ್ ಓದಬೇಕೆಂಬ ಹಂಬಲದ ವಿದ್ಯಾರ್ಥಿ ಎಂಬಿಬಿಎಸ್‌ಗೆ ಬದಲಾಗಿ ಆಯುರ್ವೇದ ಕಲಿಕೆಗೆ ಸೀಟು ಸಿಕ್ಕಿತೆಂದು ನೇಣಿಗೆ ಶರಣಾಗುತ್ತಾನೆ. ಅರ್ಥವಿಲ್ಲದ ಈ ಸಾವುಗಳು ನಮಗೆ ಕಲಿಸುವ ಪಾಠಗಳೇನು ಎಂಬುದನ್ನು ನಾವು ಅರಿಯಬೇಡವೇ?

ಮಕ್ಕಳಿಗೆ ಶಿಕ್ಷಕರು ನಿಜಕ್ಕೂ ಬೋಧಿಸಬೇಕಾದುದು ಏನನ್ನು? ಸಿಲೆಬಸ್ ಮುಗಿಸುವ, ಪರೀಕ್ಷೆಗಳನ್ನು ಪುಂಖಾನುಪುಂಖವಾಗಿ ನಡೆಸುವ ಇಂದಿನ ಮಾದರಿಯಲ್ಲಿ ಶಿಕ್ಷಕರು ಮಕ್ಕಳಿಗೆ ನೀತಿ ಬೋಧಿಸಲು ಸಾಧ್ಯವಾಗುತ್ತಿದೆಯೇ? ಯಾವುದೇ ಪಾಠವನ್ನು ಬೋಧಿಸಬೇಕಾದರೆ ಅದಕ್ಕೆ ಪೂರಕವಾಗಿ ಪುರಾಣ, ಇತಿಹಾಸದ ಕತೆಗಳನ್ನು ಹೇಳುವಷ್ಟರ ಮಟ್ಟಿಗಿನ ಮೌಲ್ಯದ ಸರಕು ನಮ್ಮ ಉಪನ್ಯಾಸಕ ವರ್ಗದಲ್ಲಿ ಇದೆಯೇ ಎಂಬುದೂ ಪ್ರಶ್ನಾರ್ಹವೇ. ಕೊಂಚ ಬಿಡುವು ದೊರೆತರೂ ಫೇಸ್‌ಬುಕ್, ಯೂಟ್ಯೂಬ್‌ಗೆ ಎಡತಾಕಿಕೊಂಡು ತಮ್ಮ ಅಮೂಲ್ಯ ಕ್ಷಣಗಳನ್ನು ತಮಗರಿವಿಲ್ಲದಂತೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಶಿಕ್ಷಕ ವೃಂದದಲ್ಲೂ ಹೆಚ್ಚಾಗಿರುವ ಇಂದಿನ ಸನ್ನಿವೇಶದಲ್ಲಿ, ನೀತಿಬೋಧೆ ಎಲ್ಲಿಂದ ಆರಂಭವಾಗಬೇಕು ಎಂಬುದೂ ಬೀಜವೃಕ್ಷ ನ್ಯಾಯವಾದೀತು.

ಹಾಗೆ ನೋಡಿದರೆ, ಇಂದು ಎಲ್ಲದಕ್ಕೂ ಪರಿಣತರಿಂದಲೇ ತರಬೇತಿ ಕೊಡಿಸುವುದು ಪರಿಪಾಟ. ಆದರೆ ಪ್ರಶ್ನೆ ಉದ್ಭವಿಸುವುದು ಇಲ್ಲಿಯೇ. ವರ್ಷಪೂರ್ತಿ ಮಕ್ಕಳನ್ನು ತಮ್ಮ ಕಣ್ಗಾವಲಲ್ಲಿ ಇರಿಸಿಕೊಳ್ಳುವ ಶಿಕ್ಷಕರು ಹೇಳಬಹುದಾದ ಮೌಲ್ಯಗಳಿಗಿಂತ, ವರ್ಷದಲ್ಲೆರಡು ದಿನವೋ ಒಂದು ವಾರವೋ ನಡೆಯುವ ವ್ಯಕ್ತಿತ್ವ ವಿಕಸನ ಶಿಬಿರಗಳಿಗೇನು ಹೆಚ್ಚುಗಾರಿಕೆ ಇರಲು ಸಾಧ್ಯ? ಬೀಸುವ ಗಾಳಿಗೆ ಮರ ವಾಲಿದಂತೆ ಒಂದರೆಕ್ಷಣ ಆ ಪ್ರಭಾವದಲ್ಲಿ ಇದ್ದಂತೆ ವರ್ತಿಸಿಯಾರು ಅಷ್ಟೆ. ಆದರೆ ತಾವು ಬೋಧಿಸುವ ವಿಷಯಗಳಿಗಿಂತ ಹೆಚ್ಚಿನದೇನನ್ನಾದರೂ ಹೇಳಿದರೆ ಕೇಳುವ ಮಕ್ಕಳೂ ಬೆರಳೆಣಿಕೆಯವೇ ಸರಿ. ವಿಷಾದವೆಂದರೆ ಇಂದು ಅಂತರ್ಜಾಲಕ್ಕಿಂತ ದೊಡ್ಡ ಶಿಕ್ಷಕರು ಬೇಕಿಲ್ಲ ಎಂದು ವಿದ್ಯಾರ್ಥಿಗಳಿಗೆ ಅನ್ನಿಸುವ, ಆ ಮನಃಸ್ಥಿತಿಯನ್ನೇ ಬೆಳೆಸುವ ವಾತಾವರಣ ಸೃಷ್ಟಿಯಾಗಿರುವುದು.

ಮಕ್ಕಳ ಭವಿಷ್ಯದಲ್ಲಿ ನಮ್ಮ ನಾಳೆಗಳೂ ನಿಂತಿವೆ. ಲೇಖನಿ ಹಿಡಿಯಬೇಕಾದ ಮಕ್ಕಳು ಚೂರಿ ಕೈಗೆತ್ತಿಕೊಳ್ಳ ದಂತೆ ಆಗಬೇಕಾದರೆ, ಹೂಮನಸ್ಸಿನ ಕಂದಮ್ಮಗಳು ದ್ವೇಷ ತುಂಬಿಕೊಳ್ಳದಂತೆ ಇರಬೇಕಾದರೆ ನಮ್ಮ ಹೊಣೆಗಾರಿಕೆ ಬಹಳವಿದೆ. ಈ ಕುರಿತು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT