ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಆನ್‌ಲೈನ್‌ ಆತಿಥ್ಯ

Last Updated 16 ಜುಲೈ 2020, 21:49 IST
ಅಕ್ಷರ ಗಾತ್ರ

ಪರೀಕ್ಷೆಯಿಲ್ಲದೇ ಪಾಸ್ ಆದದ್ದು ಪುಟ್ಟಿಯ ಸಂಭ್ರಮಕ್ಕೆ ಇಂಬು ಕೊಟ್ಟಿತ್ತು.

‘ಈ ಬಾರಿ ಎಲ್ಲ ಸಂತೋಷ, ಉತ್ಸಾಹವನ್ನೂ ಕೊರೊನಾ ನುಂಗಿಬಿಡ್ತಿದೆ. ಈ ಮೊದಲು, ಫಲಿತಾಂಶ ಬಂದಾಗ ಎಲ್ಲ ಕಡೆ ಅದರದೇ ಸುದ್ದಿ, ಮಕ್ಕಳು ಆ ಖುಷೀನ ಟೀವೀಲಿ ಹಂಚಿಕೊಳ್ಳುವಾಗ ನಾವೇ ಸಾಧಿಸಿದ ತೃಪ್ತಿ... ಈ ಸಲ ಯಾಕೋ ಸಪ್ಪೆ ಸಪ್ಪೆ’ ಅತ್ತೆ ಅಲವತ್ತುಕೊಂಡರು.

‘ಇದರ ಮಧ್ಯೆ ಆನ್‌ಲೈನ್‌ ಕ್ಲಾಸ್ ಅನ್ನೋ ಗುಮ್ಮ. ಮಕ್ಕಳನ್ನು ಎಬ್ಬಿಸಿ ಕೂರಿಸೋದೇ ದೊಡ್ಡ ಸಾಹಸ. ನೆಟ್ಟಗೆ ಕ್ಲಾಸ್ನಲ್ಲಿ ಪಾಠ ಕೇಳಿದರೇ ಅರ್ಥವಾಗೋಲ್ಲ ಅನ್ನೋವು ಪರದೆ ಮೇಲೆ ಬರೋದನ್ನ ಪಿಕ್ಚರ್ ನೋಡಿದಂತೆ ನೋಡಿ ಮರೆತುಹೋಗ್ತಾವೆ’ ನನ್ನವಳ ಹಾಜರಿ.

‘ಕಂಠಿ ಮನೇಲಿಲ್ಲ, ಆಫೀಸಲ್ಲೂ ಇಲ್ಲ...’ ನನ್ನಷ್ಟಕ್ಕೆ ನಾನೇ ಗೊಣಗಿಕೊಂಡೆ.
ನಿರೀಕ್ಷೆಯಂತೆ ನನ್ನವಳ ರಿಯಾಕ್ಷನ್ ‘ವರ್ಕ್ ಫ್ರಮ್ ಹೋಮು, ಅವರ ಬಾಸ್ ಮನೇಲಿ ಅಂದ್ಳು ಶ್ರೀಮತಿ, ವಿತ್ ಟಿ.ಎ., ಡಿ.ಎ. ಅಂತೆ’.

‘ಎಲಾ ಇವನ, ನನಗೆ ತಿಳಿಸದೇ ಹೋದನಲ್ಲ- ನಾಲ್ಕು ಕಿಲೊ ಮೀಟರು ದೂರದ ಬಾಸ್ ಮನೆ ಕೆಲಸಕ್ಕೆ ಆತಿಥ್ಯ ಬೇರೆ!’

‘ತಗೋಪ್ಪ, ಈ ಔಷಧ ಕುಡಿ, ಉದರದ ಉರಿ ಕಡಿಮೆಯಾಗುತ್ತೆ’ ಪುಟ್ಟಿ ಔಷಧದ ಬಾಟಲಿ ತೋರಿಸಿ ರೇಗಿಸಿದಳು. ಅದರ ಅವಶ್ಯಕತೆ ಬಾರದಂತೆ ಕಂಠಿಯೇ ಬಂದ.

‘ಬಾಸ್ ಮನೇಲಿ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್, ಪೋಷಕರು ಪಕ್ಕದಲ್ಲಿರಬೇಕು ಅನ್ನೋ ಕಡ್ಡಾಯ, ಬಾಸೂ ಮೇಡಮ್ಮೂ ಬಿಜಿ ಇರೋದ್ರಿಂದ ವಾರಕ್ಕೆ ನಾಲ್ಕು ದಿನ ನಾನೇ ಆ ಮಕ್ಕಳ ಜೊತೆ ಕೂತಿರ್ತೀನಿ’ ಅಂದ.

‘ಕಂಡುಹಿಡಿಯೋಲ್ವೆ ಸ್ಕೂಲಿನವರು?’ ಹುಬ್ಬೇರಿಸಿದೆ. ‘ಮೂಗಿನವರೆಗೂ ಮುಖಗವಸು ಎಳಕೊಂಡು ಮ್ಯಾನೇಜ್ ಮಾಡ್ತಿದ್ದೀನಿ. ಅವ್ರ ಮನೇಲಿ ಇವತ್ತಿನ ವಿಶೇಷ ಹಾಗಲಕಾಯಿ ಚಿಪ್ಸ್, ಹೋಳಿಗೆ, ಹೆಚ್ಚುವರಿ ಪಾರ್ಸೆಲ್ ನಿನಗೂ ಕೊಟ್ಟು ಹೋಗೋಣಾಂತ ಬಂದೆ’ ಎಂದ.

‘ಹೋಳಿಗೆ ನಮಗಿರಲಿ’ ಎಂದಳು ನನ್ನವಳು. ‘ಹಾಗಲ ಆರೋಗ್ಯಕ್ಕೆ ಒಳ್ಳೆಯದು’ ಕಂಠಿ ನನ್ನತ್ತ ನೋಡಿ ಇನ್ನಷ್ಟು ಹೊಟ್ಟೆ ಉರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT