ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಗಳಾಚೆಯ ಬದುಕಿನ ನೋಟ

Last Updated 28 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ದ್ವಿತೀಯ ಪಿಯುಸಿ ಓದುತ್ತಿರುವ ಸಂಜಯನ ತರಗತಿಗಳು ಬೇಗ ಮುಕ್ತಾಯಗೊಂಡರೂ ಕಾಲೇಜು, ಟ್ಯೂಷನ್‍ಗಳ ನೆಪ ಹೇಳಿ ಬಹು ಹೊತ್ತಿನವರೆಗೆ ಅಲ್ಲಿ ಇಲ್ಲಿ ಸುತ್ತಾಡಿ ನಂತರ ಮನೆ ಸೇರುತ್ತಿದ್ದ. ಮನೆಯಲ್ಲಿದ್ದಾಗಲೆಲ್ಲಾ ಅಪ್ಪ ಅಮ್ಮನದು ನಿರಂತರವಾಗಿ ಓದು, ಓದು ಎಂಬ ಒಂದೇ ಮಂತ್ರ... ಇದರಿಂದ ರೋಸಿ ಹೋದ ಅವನು ಸಾಧ್ಯವಾದಾಗಲೆಲ್ಲಾ ಅಪ್ಪ ಅಮ್ಮನ ನೇರ ಭೇಟಿ, ಜೊತೆಗೆ ಊಟ ಸೇವನೆ, ಇತ್ಯಾದಿಗಳನ್ನು ತಪ್ಪಿಸಿಕೊಳ್ಳುತ್ತಿದ್ದ. ಕಾಲೇಜು, ಕೋಚಿಂಗ್ ಎಂದು ನಿರಂತರ ಎಡತಾಕುವ ಇನ್ನೊಬ್ಬ ವಿದ್ಯಾರ್ಥಿನಿ ಸನ್ನಿಧಿ, ಟೆಸ್ಟ್‌ಗಳಲ್ಲಿ ಕಡಿಮೆ ಅಂಕ ಗಳಿಸಿದರೆ ಅವಳ ತಾಯಿಯಿಂದ ಬೈಗುಳ, ಹೊಡೆತ ಶತಃಸಿದ್ಧ. ಸಂಜಯ, ಸನ್ನಿಧಿ ಇಲ್ಲಿ ಸಾಂಕೇತಿಕ ಅಷ್ಟೆ. ಎಸ್ಎಸ್ಎಲ್‌ಸಿ, ಪಿಯುಸಿ ಓದುತ್ತಿರುವ ಸಾವಿರಾರು ಸಂಜಯ, ಸನ್ನಿಧಿಯರು ತೀವ್ರ ಒತ್ತಡ ಎದುರಿಸುತ್ತಿರುವುದು ಸಾಮಾನ್ಯವಾಗಿದೆ.

ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಹೊಂದಿರುತ್ತಾರೆ. ಮಕ್ಕಳಲ್ಲಿಯೂ ಅವೇ ಕನಸುಗಳನ್ನು ತುಂಬಲು ಪ್ರಯತ್ನಿಸುತ್ತಾರೆ. ಮಕ್ಕಳ ಆಸಕ್ತಿ, ಅಭಿರುಚಿ ಏನಿರಬಹುದು ಎಂಬ ಕುರಿತಂತೆ ತಲೆಕೆಡಿಸಿಕೊಳ್ಳುವುದಿಲ್ಲ.

ಎಲ್ಲಾ ವಿದ್ಯಾರ್ಥಿಗಳೂ ಗರಿಷ್ಠ ಸಾಧನೆ ಮಾಡಲಾಗದು. ನಿಸರ್ಗದ ಸಾಮಾನ್ಯ ಸಂಭಾವ್ಯ ರೇಖೆಯ ನಿಯಮದಂತೆ ಹೆಚ್ಚಿನವರು ಸರಾಸರಿ ಮಟ್ಟದಲ್ಲಿದ್ದರೆ, ಕೆಲವರು ಅತಿಹೆಚ್ಚು ಇನ್ನು ಕೆಲವರು ಅತಿಕಡಿಮೆ ಸಾಧನೆಯ ಹಂತದಲ್ಲಿರುತ್ತಾರೆ. ಅದರಲ್ಲೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೋರುವ ಸಾಧನೆಗೆ ಅನೇಕ ಕಾರಣಗಳಿರುತ್ತವೆ. ಜನ್ಮಜಾತ ಬುದ್ಧಿಶಕ್ತಿ, ಸಾಧಿಸಲು ದೊರೆತ ಪ್ರೇರಣೆ, ಕೈಗೊಂಡ ಅಧ್ಯಯನದ ಪ್ರಮಾಣ ಮತ್ತು ವಿಧಾನ, ದೊರೆತ ಬೋಧನಾ ಗುಣಮಟ್ಟ ಹಾಗೂ ಬೆಂಬಲ, ಪರೀಕ್ಷೆಗಾಗಿ ನಡೆಸಿದ ಸಿದ್ಧತೆ, ವಿದ್ಯಾರ್ಥಿಯ ಆರೋಗ್ಯ, ಮಾನಸಿಕ ಸ್ಥಿತಿ, ಪರೀಕ್ಷಾ ಭಯ, ಆತಂಕಗಳ ನಿರ್ವಹಣೆ ಮುಂತಾದವು ಪ್ರಭಾವ ಬೀರುತ್ತವೆ.

ವಿದ್ಯಾರ್ಥಿಗಳ ಭವಿಷ್ಯವು ಅಂಕಗಳ ಮೇಲೆ ಅವಲಂಬಿತ ಆಗಿರುವುದನ್ನು ತಳ್ಳಿಹಾಕಲಾಗದು. ಒಂದಷ್ಟು ಒತ್ತಡ, ಆರೋಗ್ಯಕರ ಆತಂಕಗಳು ಮಕ್ಕಳ ಸಾಧನೆಯನ್ನು ಉತ್ತಮಪಡಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಕೆಲವೊಮ್ಮೆ ಆರೋಗ್ಯಕರ ನಿರೀಕ್ಷೆ, ಬಿರುನೋಟ, ಗಂಭೀರ ಎಚ್ಚರಿಕೆ, ವಿರಳವಾಗಿ ದೊರೆತ ಕಿರು ಅವಮಾನಗಳು ಮಕ್ಕಳಲ್ಲಿ ಸಾಧಿಸುವ ಹಂಬಲ, ಕಿಡಿಯನ್ನು ಹೊತ್ತಿಸಬಲ್ಲವು. ಆದರೆ ಮಕ್ಕಳು ಇಷ್ಟೇ ಅಂಕಗಳನ್ನು ಗಳಿಸಬೇಕೆಂದು ಗೆರೆ ಹಾಕಿ ನಿರೀಕ್ಷಿಸುವುದು ಸಾಧುವಾಗಲಾರದು. ಕೆಲವು ಪೋಷಕರು ಬಿಗಿ ತಂತ್ರಗಳಿಂದ ಯಶ ಕಂಡಿದ್ದರೂ ಕೆಲವೊಮ್ಮೆ ಅದೇ ತಿರುಗುಬಾಣವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಅಂಕ ಗಳಿಕೆಯ ಒತ್ತಡ, ಪೋಷಕರೊಂದಿಗೆ ಬಾಂಧವ್ಯದ ಕೊರತೆ, ತಿರಸ್ಕೃತ ಭಾವ, ಪರೀಕ್ಷಾ ವೈಫಲ್ಯ... ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಂತಹ ವಿಪರೀತದ ಕೃತ್ಯಗಳಿಗೆ ಕೈಹಾಕುವಂತೆ ಮಾಡಬಹುದು. ಅಧ್ಯಯನಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ಒಟ್ಟು ಪ್ರಕರಣಗಳಲ್ಲಿ ಕಡಿಮೆ ಆದಾಯ, ಅಸಂತೋಷದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳೇ ಹೆಚ್ಚು ಎನ್ನಲಾಗಿದೆ. 2012ರ ಲ್ಯಾನ್ಸೆಟ್‌ ವರದಿಯ ಪ್ರಕಾರ, 15ರಿಂದ 29ರ ವಯೋಮಾನದವರಲ್ಲಿ ಆತ್ಮಹತ್ಯೆಗೆ ಈಡಾಗುವವರಲ್ಲಿ ನಮ್ಮ ದೇಶವು ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. 2014ರಿಂದ 2016ರವರೆಗೆ ನಡೆದ ಒಟ್ಟು 26,500 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ 7,462 ಪ್ರಕರಣಗಳು ಪರೀಕ್ಷಾ ವೈಫಲ್ಯದಿಂದ ಎಂಬುದು ಸಮಸ್ಯೆಯ ಗಂಭೀರ ಮುಖವನ್ನು ತೋರಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿ ತರಬೇತಿ ನೀಡುವ ಹೆಗ್ಗಳಿಕೆ(?)ಯ ರಾಜಸ್ಥಾನದ ಕೋಟ ನಗರದಲ್ಲಿ 2016ರ ವರ್ಷವೊಂದರಲ್ಲೇ 57 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಇವರಲ್ಲಿ ಹೆಚ್ಚಿನವರು ಪರೀಕ್ಷೆಯಲ್ಲಿನ ವೈಫಲ್ಯ, ಪೋಷಕರ ನಿರೀಕ್ಷೆ ಪೂರೈಸಲಾಗದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ದಿನಕ್ಕೆ 18 ಗಂಟೆ ಓದಿನಲ್ಲಿ ತೊಡಗಿಸಿ, ಲಕ್ಷಾಂತರ ಹಣ ಪೀಕುವ ಕೋಟ ನಗರದ ಕೋಚಿಂಗ್ ಕೇಂದ್ರಗಳು ವರ್ಷವೊಂದಕ್ಕೆ ಅಂದಾಜು 1.6 ಲಕ್ಷ ವಿದ್ಯಾರ್ಥಿಗಳನ್ನು ಇತರ ರಾಜ್ಯಗಳಿಂದ ಸೆಳೆಯುತ್ತವೆ. ದೇಶದ ಹಲವು ನಗರಗಳು ಕೋಟ ನಗರದ ಜೊತೆ ಪೈಪೋಟಿಗೆ ಬಿದ್ದಿರುವುದು ಸುಳ್ಳಲ್ಲ. ಆದರೆ ಇವುಗಳ ನೇರ ಪರಿಣಾಮ ಮಾತ್ರ ಪೋಷಕರ ಜೇಬು ಹಾಗೂ ಮಕ್ಕಳ ಮಾನಸಿಕ, ಭಾವನಾತ್ಮಕ ಮನಃಸ್ಥಿತಿಯ ಮೇಲಾಗುತ್ತದೆ.

ಫಲಿತಾಂಶವನ್ನು ಪೋಷಕರು ಸಮಚಿತ್ತದಿಂದ ಸ್ವೀಕರಿಸಿ ಮಕ್ಕಳಿಗೆ ಆಸರೆಯಾಗಬೇಕಿದೆ. ಕೆಲವೊಮ್ಮೆ ಪೋಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಆಪ್ತ ಸಮಾಲೋಚನೆಯ ಅಗತ್ಯ ಉಂಟಾಗಬಹುದು. 2011ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ದೇಶದ ಆರೋಗ್ಯ ಆಯವ್ಯಯದ ಶೇ 0.06ರಷ್ಟನ್ನು ಮಾತ್ರ ಮಾನಸಿಕ ಆರೋಗ್ಯಕ್ಕೆ ವೆಚ್ಚ ಮಾಡುತ್ತಿದ್ದು, ಇದು ನೆರೆಯ ಬಾಂಗ್ಲಾ ದೇಶ ಮಾಡುತ್ತಿರುವ ವೆಚ್ಚಕ್ಕಿಂತ (ಶೇ 0.44) ಅತಿ ಕಡಿಮೆ. ಮುಂದುವರಿದ ದೇಶಗಳಲ್ಲಿ ಈ ಪ್ರಮಾಣವು ಶೇ 4ರಷ್ಟಿದೆ. ದೇಶದಲ್ಲಿ ಮಾನಸಿಕ ತಜ್ಞರ ಕೊರತೆ ತೀವ್ರವಾಗಿರುವ ಸನ್ನಿವೇಶದಲ್ಲಿ ಪರೀಕ್ಷೆ, ಫಲಿತಾಂಶ ಕುರಿತ ಭಯ, ಆತಂಕಗಳಿಗೆ ಆಪ್ತ ಸಮಾಲೋಚನೆ ಸೇವೆ ಒದಗಿಸುವುದು ಅಸಾಧ್ಯವೇ ಸರಿ. ಪರೀಕ್ಷಾ ಫಲಿತಾಂಶದ ಈ ಹೊತ್ತಿನಲ್ಲಿ ಪೋಷಕರು ಅಂಕಗಳಾಚೆ ಇರುವ ಬದುಕನ್ನು ನೋಡಲು ಅರಿವು, ಜಾಗೃತಿಯನ್ನು ಹೊಂದಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT