ಶುಕ್ರವಾರ, ಡಿಸೆಂಬರ್ 2, 2022
20 °C

ಸಂಗತ | ಶೈಕ್ಷಣಿಕ ಮಾರ್ಗದರ್ಶನ: ಇಂದಿನ ಅಗತ್ಯ

ಎಚ್‌.ಕೆ.ಶರತ್‌ Updated:

ಅಕ್ಷರ ಗಾತ್ರ : | |

Prajavani

‘ಮುಂದೆ ಏನು ಓದಿದ್ರೆ ಒಳ್ಳೆಯದು?’ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಮೂಡುವ ಪ್ರಶ್ನೆ ಇದು. ಇದಕ್ಕೆ ಉತ್ತರ ಕಂಡುಕೊಳ್ಳಲು ಅವರಿಗೆ ನೆರವಾಗುವವರು ಬಹುತೇಕ ಸಂದರ್ಭಗಳಲ್ಲಿ ಪೋಷಕರು, ಪರಿಚಯಸ್ಥರು ಹಾಗೂ ಶಿಕ್ಷಕರು. ಕೆಲವೊಮ್ಮೆ ಮಾತ್ರ ಮಾಧ್ಯಮ, ಅಂತರ್ಜಾಲ ಅಥವಾ ಖಾಸಗಿ ಕಾರ್ಯಕ್ರಮಗಳ ಮೂಲಕ ದೊರಕುವ ವೃತ್ತಿಪರ ಮಾರ್ಗದರ್ಶನ ನೆರವಿಗೆ ಬರುತ್ತದೆ.

ಇಲ್ಲಿ ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಾಮಾಜಿಕವಾಗಿ ಮುಂದುವರಿದ ಕೌಟುಂಬಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಸೂಕ್ತ ಮಾರ್ಗದರ್ಶನ ದೊರೆಯುವ ಸಾಧ್ಯತೆ ಹೆಚ್ಚು. ಶಿಕ್ಷಣಕ್ಕೆ ಒತ್ತು ಸಿಗದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಎದುರು ತೆರೆದುಕೊಳ್ಳುವ ಆಯ್ಕೆಗಳು ಸೀಮಿತ ಮಾತ್ರವಲ್ಲ, ಅವರಿಗೆ ಏನನ್ನು ಓದಬೇಕು ಎಂದು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವವರು ಸಿಗುವುದೂ ಅಪರೂಪವೇ. ಇನ್ನು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ, ಸೀಮಿತ ಹಣದಲ್ಲಿ ತಾವು ಓದಬಯಸಿರುವ ಪದವಿ ಕೋರ್ಸುಗಳನ್ನು ಪೂರೈಸಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ದೊರಕುವ ಸಲಹೆಗಳು ಪರಿಪೂರ್ಣವಾಗೇನೂ ಇರುವುದಿಲ್ಲ. ಸಲಹೆ ನೀಡುವವರ ತಿಳಿವಳಿಕೆ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಮಾರ್ಗದರ್ಶನ ದೊರಕುತ್ತದೆ.

ವಿದ್ಯಾರ್ಥಿ ಹಂತದಿಂದ ವೃತ್ತಿ ಬದುಕಿಗೆ ಕಾಲಿರಿಸುವವರೆಗೂ ವಿದ್ಯಾರ್ಥಿಗಳಲ್ಲಿ ಮೂಡುವ ನಾನಾ ರೀತಿಯ ಪ್ರಶ್ನೆಗಳು ಹಾಗೂ ಗೊಂದಲಗಳನ್ನು ಬಗೆಹರಿಸುವ ದಿಸೆಯಲ್ಲಿ ಸರ್ಕಾರವೇಕೆ ಕಾರ್ಯೋನ್ಮುಖವಾಗಬಾರದು? ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಪಡೆಯಲು ಸಾಧ್ಯವಾಗುವಂತಹ ಪರಿಣಾಮಕಾರಿ ಹಾಗೂ ಸಮಗ್ರ ಬೆಂಬಲ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬಂದರೆ, ಎಷ್ಟೋ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ದೊರಕಬಹುದು. ಈ ವ್ಯವಸ್ಥೆಯ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಿ, ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಅಸಂಖ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ.

ನೂತನ ಶಿಕ್ಷಣ ನೀತಿ ಜಾರಿಯ ಭಾಗವಾಗಿ ಪದವಿ ಹಂತದ ಶಿಕ್ಷಣದಲ್ಲಿ ತರಲಾಗುತ್ತಿರುವ ಬದಲಾವಣೆಗಳ ಕುರಿತು ಕೂಡ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೆಚ್ಚಿನ ಮಾಹಿತಿ ಒದಗಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಮೇಜರ್ ಡಿಗ್ರಿ, ಮೈನರ್ ಡಿಗ್ರಿ, ಆನರ್ಸ್ ಡಿಗ್ರಿ ಅಂತೆಲ್ಲ ವಿವಿಧ ರೀತಿಯ ಪದವಿಗಳನ್ನು ನೀಡಲು ಮುಂದಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಇವುಗಳ ನಡುವಿನ ವ್ಯತ್ಯಾಸ ಮತ್ತು ಇವಕ್ಕಿರುವ ಮಹತ್ವದ ಕುರಿತು ಅರಿವು ಮೂಡಿಸುವ ಅಗತ್ಯ ಇದೆ. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಹಾಗೂ ಪೋಷಕರ ವಲಯದಲ್ಲಿ ಹುಟ್ಟುಹಾಕಬಹುದಾದ ಬಹಳಷ್ಟು ಪ್ರಶ್ನೆಗಳಿವೆ. ಇವುಗಳಿಗೆ ಉತ್ತರಿಸುವ ಹೊಣೆಗಾರಿಕೆಯನ್ನು, ನೂತನ ಶಿಕ್ಷಣ ನೀತಿ ಜಾರಿಗೆ ಇನ್ನಿಲ್ಲದ ಉತ್ಸಾಹ ತೋರುತ್ತಿರುವ ರಾಜ್ಯ ಸರ್ಕಾರವೂ ಹೊರಬೇಕಲ್ಲವೇ?

ಇತ್ತೀಚಿನ ವರ್ಷಗಳಲ್ಲಿ ಹೊಸ ವಿಷಯಗಳಿಗೆ ಸಂಬಂಧಿಸಿದ ಬಹಳಷ್ಟು ಪದವಿ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಎದುರು ಅಸಂಖ್ಯ ಆಯ್ಕೆಗಳು ತೆರೆದುಕೊಳ್ಳುತ್ತಿವೆ. ಹೊಸ ಪದವಿ ಕೋರ್ಸುಗಳಿಗೆ ದಾಖಲಾದರೆ ಮುಂದೆ ಸಮಸ್ಯೆ ಎದುರಾಗುವುದಿಲ್ಲವೇ ಎಂಬ ಪ್ರಶ್ನೆಯೂ ಹಲವರನ್ನು ಕಾಡುವುದಿದೆ. ಖಾಸಗಿ ವಿಶ್ವವಿದ್ಯಾಲಯಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವ ಮತ್ತು ತರಹೇವಾರಿ ಪದವಿ ಕೋರ್ಸುಗಳನ್ನು ಪರಿಚಯಿಸುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಯಾವುದೇ ರೀತಿಯ ಸ್ವಹಿತಾಸಕ್ತಿ ಇಲ್ಲದೆ ವಸ್ತುನಿಷ್ಠವಾಗಿ ಮಾರ್ಗದರ್ಶನ ನೀಡುವ ಸದೃಢ ಬೆಂಬಲ ವ್ಯವಸ್ಥೆಯೊಂದರ ಅಗತ್ಯವಿದೆ. ಮತ್ತದನ್ನು ಎಲ್ಲರಿಗೂ ಉಚಿತವಾಗಿ ಮತ್ತು ಮುಕ್ತವಾಗಿ ಲಭ್ಯವಾಗಿಸುವ ಅನಿವಾರ್ಯವೂ ಇದೆ.

ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರಕ್ಕೆ ಹೆಚ್ಚಿನ ಸಂಪನ್ಮೂಲವೇನೂ ಬೇಕಿಲ್ಲ. ಬೇಕಿರುವುದು ಇಚ್ಛಾಶಕ್ತಿ ಮತ್ತು ಬದ್ಧತೆ. ಬಹುತೇಕ ಸರ್ಕಾರಿ ಯೋಜನೆಗಳ ಜಾರಿ ವೇಳೆ ಪರಿಗಣನೆಗೆ ಬರುವ, ‘ಇದರಿಂದ ನಮಗೇನು ಲಾಭ’ ಅಥವಾ ‘ಇದರಲ್ಲಿ ನಮಗೆಷ್ಟು ಪರ್ಸೆಂಟೇಜು’ ಎಂಬ ಧೋರಣೆ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ವ್ಯವಸ್ಥೆಯನ್ನು ರೂಪುಗೊಳಿಸುವಾಗಲೂ ನುಸುಳಿದರೆ, ಇದು ಕೂಡ ಮತ್ತೊಂದು ಜಡ, ಅಸಮರ್ಥ, ಕೆಲಸಕ್ಕೆ ಬಾರದ ಯೋಜನೆಯಾಗಿ ಹೊರಹೊಮ್ಮುವ ಸಾಧ್ಯತೆಯೂ ಇದೆ.

ವಿದ್ಯಾರ್ಥಿಗಳ ಕುರಿತು ನಿಜವಾದ ಕಾಳಜಿ ಹೊಂದಿರುವ ವೃತ್ತಿಪರರ ತಂಡವನ್ನು ಇದರ ನಿರ್ವಹಣೆಗೆ ಬಿಟ್ಟರೆ ಇದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ದೊರಕದ ಕಾರಣಕ್ಕೆ ಆಸಕ್ತಿ ಮತ್ತು ಸಾಮರ್ಥ್ಯವಿದ್ದೂ ಸಾಮಾಜಿಕ ಚಲನೆ ದಕ್ಕಿಸಿಕೊಳ್ಳದೇ ಹೋಗುವ ಎಷ್ಟೋ ಯುವಮನಸ್ಸುಗಳನ್ನು ಪೊರೆದ ಹಿರಿಮೆಯೂ ಸರ್ಕಾರಕ್ಕೆ ದಕ್ಕಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು