ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಮತ್ತು ವೈಫಲ್ಯದ ಹೊಣೆ

Last Updated 2 ಜುಲೈ 2019, 20:00 IST
ಅಕ್ಷರ ಗಾತ್ರ

ಸಂವಿಧಾನವು ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಕೊಡಮಾಡಿದರೂ ಅದನ್ನು ಜಾರಿಗೊಳಿಸಬೇಕಾದ ಅಧಿಕಾರಶಾಹಿ ಮತ್ತು ಸಂಬಂಧಿಸಿದ ಇಲಾಖೆಗಳು ಬದ್ಧತೆ ಹಾಗೂ ಇಚ್ಛಾಶಕ್ತಿ ತೋರದಿದ್ದರೆ, ಅದು ಹೆಸರಿಗಷ್ಟೇ ಹಕ್ಕಾಗಿ ಉಳಿದುಬಿಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ, ಶಾಲೆಗೆ ಸೇರದ ಅಥವಾ ಮಧ್ಯದಲ್ಲಿಯೇ ಶಾಲೆ ತೊರೆದ ಮಕ್ಕಳ ವ್ಯಥೆಯ ಕತೆ.

ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ, ಪ್ರಾಥಮಿಕ ಶಿಕ್ಷಣಕ್ಕೆ ಸೇರಿರದ ಅಥವಾ ಸೇರಿ ಪೂರ್ಣಗೊಳಿಸಲಾಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಪೂರೈಸಲು ಮತ್ತೊಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ, ಆರು ವರ್ಷಕ್ಕೆ ಮೇಲ್ಪಟ್ಟ ಇಂತಹ ಮಗುವನ್ನು ವಯಸ್ಸಿಗೆ ಅನುಗುಣವಾಗಿ ಸೂಕ್ತವಾದ ತರಗತಿಗೆ ನೇರವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ತದನಂತರ, ಈ ಮಗು ತನ್ನ ಇತರ ಸಹಪಾಠಿಗಳಿಗೆ ಸಮನಾಗಿ ಪಾಠಗಳನ್ನು ಕಲಿಯುವುದಕ್ಕೆ ಪೂರಕವಾಗಿ ವಿಶೇಷ ತರಬೇತಿ ಪಡೆಯುವ ಹಕ್ಕು ಹೊಂದಿರುತ್ತದೆ.

ಆದರೆ, ಕಾಯ್ದೆ ಜಾರಿಯಾಗಿ 10 ವರ್ಷಗಳಾಗುತ್ತಾ ಬಂದಿದ್ದರೂ ಮಕ್ಕಳ ಈ ಮೂಲಭೂತ ಹಕ್ಕು ನಿರೀಕ್ಷಿತ ಪ್ರಮಾಣದಲ್ಲಿ ಸಾಕಾರಗೊಳ್ಳದೇ ಇರುವುದು ದುರದೃಷ್ಟಕರ. ಕಾಯ್ದೆ ಜಾರಿಯಾದ ಮೂರು ವರ್ಷಗಳ ನಂತರ, ಅಂದರೆ 2013ರಲ್ಲಿ ರಾಜ್ಯದಲ್ಲಿ ಸುಮಾರು 54 ಸಾವಿರ ಮಕ್ಕಳು ಶಾಲೆಯಿಂದ ಹೊರಗಿದ್ದ ಸಂಗತಿ ತಿಳಿದುಬಂದಿತ್ತು. ಈ ಕುರಿತ ಪತ್ರಿಕಾ ವರದಿಯನ್ನು ಆಧರಿಸಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಎಲ್ಲಾ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ತುರ್ತು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿತ್ತು. ಜೊತೆಗೆ, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮಗ್ರ ಸಮೀಕ್ಷೆ ಮಾಡುವಂತೆಯೂ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಅದರಂತೆ ಶಿಕ್ಷಣ ಇಲಾಖೆಯು ಸಮೀಕ್ಷೆ ನಡೆಸಿ 2014ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2014ರಲ್ಲಿ ರಾಜ್ಯದಲ್ಲಿ ಒಟ್ಟು 1,70,525 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಅವರ ಪೈಕಿ ಪರಿಶಿಷ್ಟ ಜಾತಿ– ಪಂಗಡ, ಅಲ್ಪಸಂಖ್ಯಾತ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳ ಸಂಖ್ಯೆ 1,63,369 ಎಂದು ತಿಳಿದುಬಂದಿತ್ತು.

ಹೈಕೋರ್ಟ್‌ನ ಖಡಕ್ ಆದೇಶದ ಹೊರತಾಗಿಯೂ ಶಾಲೆಯಿಂದ ಹೊರಗುಳಿದ ಮಕ್ಕಳ ವಸ್ತುಸ್ಥಿತಿ ಇಂದಿಗೂ ಪೂರ್ಣವಾಗಿಯೇನೂ ಬದಲಾಗಿಲ್ಲ. ಶಿಕ್ಷಣ ಇಲಾಖೆಯ ಇತ್ತೀಚಿನ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ 69,740 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಶಾಲೆ ಬಿಟ್ಟ ಸರಿಸುಮಾರು ಅರ್ಧದಷ್ಟು ಮಕ್ಕಳು ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬಳ್ಳಾರಿ, ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿದ್ದಾರೆ. ಇಂತಹ ಬೆಳವಣಿಗೆಯು ಸರ್ಕಾರದ ವೈಫಲ್ಯ ಮಾತ್ರವಲ್ಲ, ಒಂದು ನಾಗರಿಕ ಸಮಾಜದ ವೈಫಲ್ಯವೂ ಹೌದು.

ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ರಾಜ್ಯ ಸರ್ಕಾರವು 2012ರ ಏಪ್ರಿಲ್‌ನಲ್ಲಿ ನಿಯಮಗಳನ್ನು ರೂಪಿಸಿದೆ. ಅದರ ಅನ್ವಯ, ಶಿಕ್ಷಣ ಇಲಾಖೆಯು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ. ಅವುಗಳೆಂದರೆ: ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಎಸ್‌ಡಿಎಂಸಿಯು ಗುರುತಿಸಿ ವಿಶೇಷ ತರಬೇತಿ ಆಯೋಜಿಸಬೇಕು. ಶೈಕ್ಷಣಿಕ ಪ್ರಾಧಿಕಾರವಾದ ರಾಜ್ಯ ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಸಂಸ್ಥೆಯು (ಡಿಎಸ್‍ಇಆರ್‌ಟಿ) ವಿಶೇಷವಾಗಿ ತಯಾರಿಸಿದ, ವಯಸ್ಸು ಮತ್ತು ತರಗತಿಗೆ ಅನುಗುಣವಾದ ಕಲಿಕಾ ಸಾಮಗ್ರಿಗಳ ಆಧಾರದ ಮೇಲೆ ತರಬೇತಿ ನಡೆಯಬೇಕು.

ತರಬೇತಿ ಹೊಂದಿದ ಶಾಲಾ ಶಿಕ್ಷಕರು ಅಥವಾ ವಿಶೇಷವಾಗಿ ನೇಮಕವಾದ ಶಿಕ್ಷಕರು ತರಬೇತಿ ನೀಡಬೇಕು. ವಿಶೇಷ ತರಬೇತಿಯ ಕನಿಷ್ಠ ಕಾಲಮಿತಿ ಮೂರು ತಿಂಗಳು. ಈ ಅವಧಿಯಲ್ಲಿ ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವ ಮೂಲಕ ತರಬೇತಿಯನ್ನು ಗರಿಷ್ಠ ಎರಡು ವರ್ಷಗಳವರೆಗೆ ವಿಸ್ತರಿಸಬಹುದು. ಬಳಿಕ ಶಾಲಾ ಮುಖ್ಯವಾಹಿನಿ ಸೇರುವ ಮಕ್ಕಳ ಬಗ್ಗೆ ಶಿಕ್ಷಕರು ವಿಶೇಷ ಗಮನ ಹರಿಸಿ, ಅವರು ಇತರ ಮಕ್ಕಳೊಡನೆ ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ಬೆರೆತು ಎಂಟು ವರ್ಷಗಳ ಎಲಿಮೆಂಟರಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕಾಯ್ದೆ ಜಾರಿಯ ಮೇಲುಸ್ತುವಾರಿ ಹೊಣೆ ಹೊತ್ತಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಪುನಃ ಶಾಲಾ ಮುಖ್ಯವಾಹಿನಿಗೆ ತರಲು ‘ಶಾಲೆ ಕಡೆ ನನ್ನ ನಡೆ’ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಹತ್ವದ ಅಭಿಯಾನಕ್ಕೆ ಮೇ 18ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಚಾಲನೆ ನೀಡಿದ್ದಾರೆ. ಆದರೆ, ಶಿಕ್ಷಣ ಇಲಾಖೆಯಿಂದ ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಅಭಿಯಾನವು ಮಂದಗತಿಯಲ್ಲಿ ಸಾಗುತ್ತಿದ್ದು, ಅದನ್ನು ಚುರುಕುಗೊಳಿಸಬೇಕಾಗಿರುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಹೊಸದಾಗಿ ಶಿಕ್ಷಣ ಖಾತೆಯ ಸಾರಥ್ಯ ವಹಿಸಿಕೊಂಡಿರುವ ಸಚಿವ ಎಸ್.ಆರ್‌. ಶ್ರೀನಿವಾಸ್‌ ಈ ಮಹತ್ವದ ಮಕ್ಕಳ ಹಕ್ಕಿನ ಉಲ್ಲಂಘನೆಯ ವಿಚಾರದಲ್ಲಿ ತುರ್ತು ಗಮನ ಹರಿಸುವರೇ ಎಂದು ಕಾದು ನೋಡಬೇಕಿದೆ.

ಲೇಖಕ: ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT