ಬುಧವಾರ, ನವೆಂಬರ್ 13, 2019
28 °C

ಏಕೀಕೃತ ವ್ಯವಸ್ಥೆ ‘112’ಕ್ಕೆ ಇನ್ನೂ 18 ತುರ್ತು ಸೇವೆ

Published:
Updated:
Prajavani

ಡಾ. ಆರ್.ಪಿ. ಶರ್ಮಾ,  ಎಡಿಜಿಪಿ, ಪೊಲೀಸ್ ಇಲಾಖೆಯ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗ  ಅವರೊಂದಿಗೆ ಫಟಾಫಟ್ ಮಾತು

ಪೊಲೀಸ್‌, ಅಗ್ನಿಶಾಮಕ ಮತ್ತು ಆಂಬುಲೆನ್ಸ್‌ಗಾಗಿ ಇನ್ನು ಮುಂದೆ ಬೇರೆ ಬೇರೆ ನಂಬರ್‌ಗಳಿಗೆ ಕರೆ ಮಾಡಬೇಕಿಲ್ಲ. ಈ ಮೂರಕ್ಕೂ ಒಂದೇ ನಂಬರ್‌ ‘112’ ಜಾರಿಗೆ ಬಂದಿದೆ. ಏನಿದು ಏಕೀಕೃತ ವ್ಯವಸ್ಥೆ?

ಕೇಂದ್ರ ಸರ್ಕಾರದ ‘ಒನ್‌ ಇಂಡಿಯಾ, ಒನ್‌ ಎಮರ್ಜೆನ್ಸಿ ನಂಬರ್’ ಭಾಗವಾಗಿ ಈ ವ್ಯವಸ್ಥೆ ರಾಜ್ಯದಲ್ಲೂ ಜಾರಿಗೆ ಬಂದಿದೆ. ಪೊಲೀಸ್‌ (100), ಅಗ್ನಿಶಾಮಕ ದಳ (101) ಮತ್ತು ಆಂಬುಲೆನ್ಸ್‌ (108) ತುರ್ತು ನೆರವಿಗೆ ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅದನ್ನು ತಕ್ಷಣ ಆಯಾ ವಿಭಾಗಕ್ಕೆ ವರ್ಗಾಯಿಸಿ ತುರ್ತು ಸೇವೆಗಳನ್ನು ಒದಗಿಸುವ ವ್ಯವಸ್ಥೆ ಇದು.

ಈ ಯೋಜನೆಯ ನೋಡಲ್ ಅಧಿಕಾರಿಯೂ ಆಗಿದ್ದೀರಿ. ಹೊಸ ಸಂಖ್ಯೆ ಜನರಿಗೆ ರೂಢಿ
ಯಾಗುವವರೆಗೆ ಪರ್ಯಾಯವೇನು?

112 ಸಂಖ್ಯೆ ಜನಪ್ರಿಯತೆ ಪಡೆಯುವವರೆಗೆ 100, 101 ಮತ್ತು 108 ಕೂಡಾ ಕಾರ್ಯನಿರ್ವಹಿಸಲಿವೆ. ಹೊಸ ಸಂಖ್ಯೆಗೆ ಹೆಚ್ಚು ಕರೆಗಳು ಬರಲು ಆರಂಭಗೊಂಡ ಬಳಿಕ ಈ ಮೂರೂ ಸಂಖ್ಯೆಗಳು ನೇಪಥ್ಯಕ್ಕೆ ಸರಿಯಲಿವೆ.

ಮುಂದೆ ಬೇರೆ ಸಹಾಯವಾಣಿ ಸಂಖ್ಯೆಗಳೂ 112 ಜೊತೆ ಏಕೀಕೃತಗೊಳ್ಳಲಿವೆಯೇ?

ಹೌದು, ಸದ್ಯ ಈ ಮೂರು ಸೇವೆಗಳು ಸೇರಿಕೊಂಡಿವೆ. ಮುಂದೆ ಮಹಿಳೆ ಮತ್ತು ಮಕ್ಕಳ ಸಹಾಯವಾಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಸೇರಿದಂತೆ ಇನ್ನೂ 18 ತುರ್ತು ಸೇವೆಗಳ ಸಹಾಯವಾಣಿ ಸಂಖ್ಯೆಗಳು 112 ಸಂಖ್ಯೆಯ ಜೊತೆ ಏಕೀಕೃತಗೊಳ್ಳಲಿವೆ.

ಏಕಕಾಲಕ್ಕೆ ಅಷ್ಟೂ ಸಹಾಯವಾಣಿ ಕರೆಗಳನ್ನು ನಿಭಾಯಿಸಲು ಏನಿದೆ ವ್ಯವಸ್ಥೆ?

ಸದ್ಯ 3 ಪಾಳಿಗಳಲ್ಲಿ ತಲಾ 60 ಪೊಲೀಸ್ ಸಿಬ್ಬಂದಿ ಕರೆ ಸ್ವೀಕರಿಸುತ್ತಾರೆ ಮತ್ತು ಅವುಗಳನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ವರ್ಗಾಯಿಸುವ ಕೆಲಸ ನಿರ್ವಹಿಸುತ್ತಾರೆ. ಶೀಘ್ರ ಇನ್ನೂ 90 ಯುನಿಟ್ ಹೆಚ್ಚಿಸಿ, ಈ ಸಂಖ್ಯೆಯನ್ನು 150ಕ್ಕೆ ಏರಿಸಲಾಗುವುದು. ಅಲ್ಲದೆ, ಕರೆ ಡಿಸ್‌ಪ್ಯಾಚ್‌ ಯುನಿಟ್ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು.

ಜಿಲ್ಲಾ ಮಟ್ಟದಲ್ಲಿ ಏನಿದೆ ವ್ಯವಸ್ಥೆ?

ಕೇಂದ್ರ ಘಟಕಕ್ಕೆ ಬಂದ ಕರೆಗಳ ಮಾಹಿತಿ ಪಡೆದು ಜಿಲ್ಲಾ ಮಟ್ಟದಲ್ಲಿರುವ ಜಿಲ್ಲಾ ಕೊಆರ್ಡಿನೇಟ್‌ ಸೆಂಟರ್‌ಗಳಿಗೆ (ಡಿಸಿಸಿ) ವರ್ಗಾಯಿಸಲಾಗುವುದು. ಅಲ್ಲಿಯೂ ಮೂರು ಪಾಳಿಗಳಲ್ಲಿ ತಲಾ ಇಬ್ಬರಂತೆ ಕೆಲಸ ಮಾಡುತ್ತಾರೆ. ತುರ್ತು ಕರೆಗಳಿಗೆ ಸ್ಪಂದಿಸಲು ಪೂರಕವಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗತ್ಯ ಸಂಖ್ಯೆಯ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗುತ್ತದೆ.

 

ಪ್ರತಿಕ್ರಿಯಿಸಿ (+)