‘ಮೊಬೈಲ್ ನೋಡಬೇಡ’, ‘ಆಟ ಆಮೇಲೆ’, ‘ಈಗ ಕಷ್ಟಪಟ್ಟರೆ ಲೈಫ್ ಸೆಟ್ಲ್...’ ಹೀಗೆ ಆರಂಭವಾಗುವ ಒಂದು ಮನೆಯ ದೈನಿಕದ ಸಂಘರ್ಷ, ಇಂದಿನ ಭಾರತದಲ್ಲಿ ಯಾವುದೋ ಒಂದು ಮನೆಯ ಕಥೆಯಲ್ಲ; ಲಕ್ಷಾಂತರ ಕುಟುಂಬಗಳ ದೈನಂದಿನ ಜೀವನವಾಗಿದೆ. ನೀಟ್, ಜೆಇಇ, ಯುಪಿಎಸ್ಸಿ, ಕೆಇಎ, ಬ್ಯಾಂಕಿಂಗ್, ಪೊಲೀಸ್ ನೇಮಕಾತಿ – ಪರೀಕ್ಷೆಗಳ ಹೆಸರು ಮಾತ್ರ ಬೇರೆ. ಪ್ರತಿಯೊಂದು ಪರೀಕ್ಷೆಯ ಹಿಂದೆಯೂ ಒಂದೇ ತರಹದ ಒತ್ತಡ, ಒಂದೇ ಬಗೆಯ ಭಯ, ಒಂದೇ ರೀತಿಯ ನಿರೀಕ್ಷೆ.

ಒಬ್ಬ ಹುಡುಗ ಅಥವಾ ಹುಡುಗಿ ಪರೀಕ್ಷೆ ಬರೆಯುವಾಗ, ನಿಜವಾಗಿ ಪರೀಕ್ಷೆ ಬರೆಯುವುದು ಇಡೀ ಕುಟುಂಬ! ತಂದೆ ಹೆಚ್ಚುವರಿ ಕೆಲಸ ಮಾಡುತ್ತಾನೆ. ತಾಯಿ ತನ್ನ ಆಸೆಗಳನ್ನು ಬದಿಗಿಡುತ್ತಾಳೆ. ಅಜ್ಜಿ ದೇವರುಗಳಿಗೆ ಹರಕೆ ಹೊರುತ್ತಾಳೆ. ತಂಗಿ ಟಿ.ವಿ.ಯ ಧ್ವನಿ ಕಡಿಮೆ ಮಾಡುತ್ತಾಳೆ. ಮನೆಯ ಗಡಿಯಾರವೇ ಪರೀಕ್ಷೆಯ ಟೈಮ್ ಟೇಬಲ್ಗೆ ತಕ್ಕಂತೆ ಓಡತೊಡಗುತ್ತದೆ. ಮಕ್ಕಳ ಕಣ್ಣಿನ ಕೆಂಪು, ನಿದ್ದೆಯ ಕೊರತೆ, ಅರ್ಧ ಊಟ, ಆತಂಕ, ಇವೆಲ್ಲ ಮನೆಯ ಪ್ರತಿಯೊಬ್ಬರ ದೇಹದಲ್ಲೂ ನೆರಳಾಗಿ ಇಳಿಯುತ್ತವೆ.

ಪರೀಕ್ಷೆಯ ದಿನ ಕಾಲೇಜಿನ ಗೇಟ್ ಹೊರಗೆ ಬಿಸಿಲಿನಲ್ಲಿ ಬೆವರುತ್ತ ನಿಂತಿರುವ ಪೋಷಕರನ್ನು ಗಮನಿಸಿ ನೋಡಿ. ಮಕ್ಕಳು ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಬಿಡಿಸುತ್ತಿರುತ್ತಾರೆ. ಹೊರಗೆ ನಿಂತಿರುವ ಪೋಷಕರು ತಮ್ಮ ಬದುಕಿನ ವರ್ಷಗಳನ್ನು ಲೆಕ್ಕ ಹಾಕುತ್ತಿರುತ್ತಾರೆ. ಇಂತಹ ಸಾಮಾಜಿಕ ವಾಸ್ತವದ ದೇಶದಲ್ಲಿ, ಪರೀಕ್ಷಾ ಅಕ್ರಮವೆಂದರೆ ಬರೀ ಮಾಲ್ಪ್ರಾಕ್ಟೀಸ್ ಅಲ್ಲ. ಅದು ಲಕ್ಷಾಂತರ ಕುಟುಂಬಗಳ ವಿಶ್ವಾಸದ ಮೇಲೆ ನಡೆಸುವ ದಾಳಿ. ಪ್ರಶ್ನೆಪತ್ರಿಕೆ ಸೋರಿಕೆ ಎಂದರೆ ಬರೀ ಒಂದು ಕಾಗದ ಹೊರಗೆ ಬರುವುದು ಅಲ್ಲ. ಅದರ ಜೊತೆಗೆ ಭಗ್ನಗೊಳ್ಳುತ್ತದೆ: ಬಡ ಕುಟುಂಬದ ಹುಡುಗನ ಎರಡು ವರ್ಷದ ಶ್ರಮ, ನಿದ್ದೆ ಬಿಟ್ಟು ಓದಿದ ಹುಡುಗಿಯ ಆತ್ಮವಿಶ್ವಾಸ, ಸಾಲ ತೀರಿಸುವ ತಂದೆಯ ವಿಶ್ವಾಸ, ತಾಯಿಯ ಪ್ರಾರ್ಥನೆ ಹಾಗೂ ಕುಟುಂಬದ ಭವಿಷ್ಯದ ಕನಸು.

ಪರೀಕ್ಷೆ ರದ್ದಾದಾಗ ಸಾವಿರಾರು ಮನೆಗಳಲ್ಲಿ ಮತ್ತೆ ಆತಂಕ, ಅಳು, ಅವಮಾನ, ಡಿಪ್ರೆಶನ್, ಔಷಧಿ, ಕೌನ್ಸೆಲಿಂಗ್ ಆರಂಭವಾಗುತ್ತದೆ. ಕೆಲವು ಮಕ್ಕಳು ಮರುಪರೀಕ್ಷೆ ಬರೆದು ಯಶಸ್ವಿಯಾಗಬಹುದು. ಆದರೆ, ಒಮ್ಮೆ ಕುಸಿದ ಮಾನಸಿಕ ಸ್ಥೈರ್ಯವನ್ನು ಎಲ್ಲರೂ ಮರಳಿ ಕಟ್ಟಿಕೊಳ್ಳಲಾರರು.

ಪರೀಕ್ಷಾ ಅಕ್ರಮಗಳಲ್ಲಿ ವ್ಯವಸ್ಥೆ ಮಾತ್ರ ತಪ್ಪಿತಸ್ಥ ಅಲ್ಲ. ಕೆಲವು ಪೋಷಕರ ನೈತಿಕ ದಿವಾಳಿತನವೂ ಇಲ್ಲಿ ಪ್ರಶ್ನೆಗೊಳಗಾಗಬೇಕು. ಕದ್ದು ತಂದ ಪ್ರಶ್ನೆಪತ್ರಿಕೆಯನ್ನು ತಮ್ಮ ಮಕ್ಕಳ ಕೈಗೆ ಕೊಡುವ ಪೋಷಕರು, ಮಕ್ಕಳಿಗೆ ಯಶಸ್ಸಿನ ಹೆಸರಿನಲ್ಲಿ ವಂಚಿಸುವುದನ್ನು ಸಂಸ್ಕಾರವಾಗಿ ಮೈಗೂಡಿಸುತ್ತಿದ್ದಾರೆ. ‘ಹೇಗಾದರೂ ಗೆಲ್ಲು’ ಎಂಬ ವಿಷಕಾರಿ ಮನೋಭಾವವೇ ಇಂತಹ ಅಕ್ರಮಗಳ ಮೂಲ. ಮಕ್ಕಳಿಗೆಆದರ್ಶವಾಗಬೇಕಾದವರೇ, ‘ಒಮ್ಮೆ ಸೀಟ್ ಸಿಕ್ಕರೆ ಸಾಕು’ ಎಂದು ಅಕ್ರಮಕ್ಕೆ ಮೌನ
ಒಪ್ಪಿಗೆ ನೀಡಿದಾಗ, ಸಮಾಜದ ನೈತಿಕ ಬೆನ್ನುಹುರಿಯೇ ಮುರಿಯುತ್ತದೆ. ಒಂದು ದಿನ ಆ ಮಗು ವೈದ್ಯನಾಗ
ಬಹುದು, ಎಂಜಿನಿಯರ್ ಆಗಬಹುದು, ಶಿಕ್ಷಕನಾಗಬಹುದು, ಅಧಿಕಾರಿಯಾಗಬಹುದು. ಆದರೆ, ಅದರ ಯಶಸ್ಸಿನ ಅಡಿಪಾಯದಲ್ಲೇ ಮೋಸದ ಬೀಜಗಳಿದ್ದರೆ, ಆ ಸಮಾಜದ ಭವಿಷ್ಯ ಎಷ್ಟು ಸುರಕ್ಷಿತ?

ನಮ್ಮ ವ್ಯವಸ್ಥೆಗೆ ಪರೀಕ್ಷಾ ಅಕ್ರಮಗಳು ಹೊಸದಲ್ಲ. ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಅಭ್ಯರ್ಥಿಗಳು, ನೋಟಿಗಾಗಿ ಸೀಟು, ಡಿಜಿಟಲ್ ಚೀಟಿಂಗ್, ಎಲ್ಲವನ್ನೂ ನೋಡುತ್ತಾ ಬಂದಿದ್ದೇವೆ. ಆದರೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಿರುವ ಉದಾಹರಣೆಗಳು ಅಪರೂಪ. ಕೆಲವು ದಿನ ಸುದ್ದಿ, ಚರ್ಚೆ. ಮತ್ತೆ ಮೌನ. ಈ ಮೌನವೇ ಅಪರಾಧಿಗಳಿಗೆ ಧೈರ್ಯ ತುಂಬುತ್ತದೆ.

ಪರೀಕ್ಷಾ ಅಕ್ರಮಗಳನ್ನು ಆಡಳಿತಾತ್ಮಕ ಲೋಪ ಎಂದಷ್ಟೇ ನೋಡಬಾರದು. ಅದು ಸಂಘಟಿತ ಭಯೋತ್ಪಾದನೆಯಷ್ಟೇ ಅಪಾಯಕಾರಿ, ಸಾಮಾಜಿಕ ಅಪರಾಧವೂ ಹೌದು. ಭಯೋತ್ಪಾದನೆ ಜನರ ಸುರಕ್ಷತೆಯನ್ನು ಹಾಳು ಮಾಡುತ್ತದೆ. ಪರೀಕ್ಷಾ ಅಕ್ರಮಗಳು ಯುವಜನರ ಭವಿಷ್ಯದ ಮೇಲಿನ ನಂಬಿಕೆಯನ್ನು ಹಾಳುಮಾಡುತ್ತವೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಮೋಸ, ಡಿಜಿಟಲ್ ಚೀಟಿಂಗ್, ಹಣಕ್ಕಾಗಿ ರ್ಯಾಂಕ್ ವ್ಯಾಪಾರ, ಇವೆಲ್ಲವನ್ನು ಅಪರಾಧಗಳೆಂದು ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸಬೇಕು.

ಪಾರದರ್ಶಕತೆ ಇಲ್ಲದೆ ವಿಶ್ವಾಸ ಮರಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಇಲ್ಲದೆ ಭಯ ಹುಟ್ಟುವುದಿಲ್ಲ. ಒಂದು ದೇಶದಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎಂದು ನಾವು ಹೇಳುತ್ತೇವೆ. ಆ ತರಗತಿಯ ಬಾಗಿಲಿಗೆ ತಲಪುವ ಪರೀಕ್ಷೆಯ ದಾರಿಯೇ ಕಲುಷಿತವಾದರೆ, ಮುಂದೆ ರೂಪುಗೊಳ್ಳುವ ಸಮಾಜ ಎಷ್ಟು ಪ್ರಾಮಾಣಿಕ?

ಜನರ ಆರೋಗ್ಯ ರಕ್ಷಿಸುವ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ವ್ಯವಸ್ಥೆಯೇ ‘ನೀಟ್’ ಆಗಿಲ್ಲ ಎನ್ನುವುದಾದರೆ, ಇಲ್ಲಿಯಾವುದು ವಿಶ್ವಾಸಾರ್ಹ ಆಗಿರಲು ಸಾಧ್ಯ? ವಿದ್ಯಾರ್ಥಿ ಪರೀಕ್ಷೆಯಲ್ಲಿ ಸೋತರೆ ಮತ್ತೆ ಪ್ರಯತ್ನಿಸಬಹುದು. ಆದರೆ, ಒಂದು ಪೀಳಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡರೆ, ದೇಶವೇ ನಿಧಾನವಾಗಿ ಸೋಲತೊಡಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.