ಶುಕ್ರವಾರ, ಜೂನ್ 5, 2020
27 °C
ಈಗ ನಾವು ಯೋಜಿತ ಮಾರ್ಪಾಡುಗಳನ್ನು ಮಾಡಿಕೊಳ್ಳದಿದ್ದರೆ, ಮುಂದಿನ ತಲೆಮಾರುಗಳು ಜೀವಂತ ಕಲಿಕಾ ಅನುಭವಗಳಿಂದ ವಂಚಿತವಾದಾವು

ಸಂಗತ| ಪರೀಕ್ಷಾ ವಿಧಾನ: ಸಂಶಯಪಡಲು ಸಕಾಲ!

ಉದಯ ಗಾಂವಕಾರ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಶಾಲೆಗಳು ಯಾವಾಗ ಆರಂಭವಾಗುತ್ತವೋ ಎಂದು ಎಲ್ಲರೂ  ಚಿಂತಿತರಾಗಿದ್ದಾರೆ ಎನ್ನುವುದು, ತಪ್ಪಾಗಿ ಸಾಮಾನ್ಯೀಕರಿಸಿದ ಹೇಳಿಕೆಯಾಗುತ್ತದೆ. ದಿನದ ಊಟದ ಬಗ್ಗೆಯೇ ಚಿಂತಿತವಾಗಿರುವ ದೊಡ್ಡ ಸಮೂಹವನ್ನು ಅಲಕ್ಷಿಸಿ ಆಡಬಹುದಾದ ಮಾತದು. ಆದರೆ, ಮುಂದಿನ ತಲೆಮಾರನ್ನು ರೂಪಿಸುವ ಶಾಲಾ ಶಿಕ್ಷಣ ವ್ಯವಸ್ಥೆಯ ಕುರಿತು ಯೋಚಿಸದೆ ಇರಲೂ ಸಾಧ್ಯವಿಲ್ಲ.

ಹೊಸ ಶೈಕ್ಷಣಿಕ ವರ್ಷದ ಆರಂಭದ ಕುರಿತು ಅನಿಶ್ಚಿತತೆ ಇದೆ. ಹಿಂದಿನ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಗಳೇ ಇನ್ನೂ ಆಗಿಲ್ಲ. ಕೆಲವರು ಪರೀಕ್ಷೆಗಳನ್ನುಶಾಲಾ ಮಟ್ಟದಲ್ಲಿ ಮಾಡಬಹುದೆಂಬ ಸಲಹೆ ನೀಡಿದರೆ, ಇನ್ನು ಕೆಲವರು ಯಾವ ಮಟ್ಟದಲ್ಲಾದರೂ
ಪರೀಕ್ಷೆಗಳು ಬೇಕೇ ಎಂದು ಕೇಳುತ್ತಿದ್ದಾರೆ.  ದಿನಕಳೆದಂತೆ, ಪರೀಕ್ಷೆಗಳು ಆಗಿಲ್ಲವೆಂಬ ಆತಂಕವನ್ನು ಹೋಗಲಾಡಿಸಲು ಪರೀಕ್ಷೆಯನ್ನು ಮಾಡದಿರುವುದೇ ಒಳ್ಳೆಯ ಪರಿಹಾರ ಎಂದು ಕೆಲವರಿಗಾದರೂ ಅನ್ನಿಸುತ್ತಿದೆಯೆಂದಾದರೆ, ಅದು ಕೋವಿಡ್-19 ನಿಂದ ಸ್ತಬ್ಧವಾದ ಜಗತ್ತಿನ ಧ್ಯಾನಸ್ಥ ಮನಸ್ಸಿನಲ್ಲಿ ಒಡಮೂಡಿದ ಬೆಳಕೇ ಸರಿ. ನಮ್ಮ ಪರೀಕ್ಷಾ ವಿಧಾನಗಳು ಮತ್ತು ಅವುಗಳ ಗುರಿ-ಉದ್ದೇಶಗಳನ್ನು
ಸಂಶಯದಿಂದ ನೋಡಲು ಈ ಹಿಂದೆ ಸಾಧ್ಯವಾಗುತ್ತಿರಲಿಲ್ಲ. ಲಾಕ್‌ಡೌನ್‌ ನಮ್ಮ ಯೋಚನೆಗಳನ್ನು ಈ ಮಟ್ಟಿಗೆ ವಿಕೇಂದ್ರೀಕರಿಸಿದೆ.

ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 220 ಶಾಲಾದಿನಗಳು ಇರಬೇಕೆಂಬ ಆಶಯ ಈ ಹಿಂದಿನ ವರ್ಷಗಳಲ್ಲೂ ಈಡೇರಿರಲಿಲ್ಲ. ಈ ವರ್ಷ ಅದು ಅರ್ಧಕ್ಕೆ ಇಳಿಸಲ್ಪಡಬಹುದು. ಹಾಗಾದರೆ, 220 ದಿನಗಳಿಗೆಂದು ನಿಗದಿಪಡಿಸಿದ ಪಠ್ಯ ಸಾಮಗ್ರಿಗಳನ್ನು 100 ದಿನಗಳಲ್ಲಿ ಬೋಧಿಸಬಹುದೇ? ಇಲ್ಲವಾದರೆ, ನಮ್ಮ ಮಕ್ಕಳಿಗೆ ಕಲಿಸಲು ಬೇರೆ ದಾರಿಗಳಿವೆಯೇ ಎಂಬಂಥ ಪ್ರಶ್ನೆಗಳು ನಮ್ಮ ಎದುರಿಗಿವೆ.

ಆನ್‌ಲೈನ್‌ ಅಥವಾ ಟಿ.ವಿ ವಾಹಿನಿಗಳ ಮೂಲಕ ಮಕ್ಕಳಿಗೆ ಬಹುಮಾಧ್ಯಮ ಕಲಿಕಾ ಅನುಭವಗಳನ್ನು ವರ್ಗಾಯಿಸಬಹುದೆಂಬ ಆಕರ್ಷಕ ಸಲಹೆಗಳನ್ನು ಹಲವರು ನೀಡುತ್ತಾರೆ. ಮೊಬೈಲ್ ನೆಟ್‌ವರ್ಕ್ ಎಲ್ಲ ಪ್ರದೇಶಗಳನ್ನೂ ತಲುಪುವುದಿಲ್ಲ ಮತ್ತು ಎಲ್ಲರಲ್ಲೂ ಟಿ.ವಿ ಅಥವಾ ತಕ್ಕದಾದ ಮೊಬೈಲ್ ಫೋನ್‌ಗಳಿಲ್ಲವಲ್ಲ ಎಂಬ ಪ್ರಶ್ನೆಗೂ ಅವರಲ್ಲಿ ಅಷ್ಟೇ ಆಕರ್ಷಕ ಉತ್ತರವಿದೆ. ಶಿಕ್ಷಣಕ್ಕೆ ಈ ಹಿಂದೆ ವಿನಿಯೋಗಿಸುತ್ತಿದ್ದಷ್ಟೇ ಹಣದಲ್ಲಿ ಎಲ್ಲ ಊರುಗಳಿಗೂ ಮೊಬೈಲ್ ಸಂಪರ್ಕ ದೊರೆಯುವಂತೆ ಮಾಡಬಹುದು. ಟಿ.ವಿ, ಮೊಬೈಲ್ ಫೋನ್ ಲಭ್ಯವಿಲ್ಲದ ಮಕ್ಕಳಿಗೆ ಅವುಗಳನ್ನು ಕೊಡಿಸುವುದು ಅಥವಾ ಸಮುದಾಯ ವೀಕ್ಷಣೆಗೆ ಸಹಾಯಕವಾಗುವ ದೊಡ್ಡ ಪರದೆಗಳನ್ನು ಅಳವಡಿಸುವುದು ಅಸಾಧ್ಯವಲ್ಲ ಎಂಬಂಥ ವಾದ ಮೇಲ್ನೋಟಕ್ಕೆ ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡಾ. ಸದ್ಯ ಎದುರಿಸುತ್ತಿರುವ ಸಮಸ್ಯೆಗೆ ಅತ್ಯಂತ ಸುಲಭದ ಪರಿಹಾರವೆಂಬಂತೆ ಬಿಂಬಿತವಾಗುವ ಈ ಯೋಚನೆಯ ಗರ್ಭದೊಳಗೆ, ಮುಂದಿನ ತಲೆಮಾರನ್ನು ಜೀವಂತ ಕಲಿಕಾ ಅನುಭವಗಳಿಂದ ವಂಚಿಸುವ ಬೀಜಗಳಿವೆ.

ಬಹುಪಾಲು ಕಲಿಕೆಯು ಒಡನಾಟದ ಅನುಭವದ ಮೂಲಕವೇ ನಡೆಯುತ್ತದೆ ಮತ್ತು ಒಡನಾಟದ ಅನುಭವಕ್ಕೆ ವರ್ಚುವಲ್ ಅನುಭವಗಳು ಎಂದೂ ಬದಲಿಯಾಗಲಾರವು. ಮನೆ, ಶಾಲೆ, ಆಟದ ಮೈದಾನದಂಥ ಒಡನಾಟದ ಸ್ಥಳಗಳು ಮಗುವಿಗೆ ತನ್ನದೇ ವಿಧಾನಗಳ ಮೂಲಕ ಜ್ಞಾನದ ಸಂರಚನೆಗಳನ್ನು ಕಟ್ಟಿಕೊಳ್ಳಲು ನೆರವಾಗಬಲ್ಲವು. ಮಗುವೇ ಕಲಿಕೆಯ ಸಂದರ್ಭಗಳನ್ನು ಸೃಷ್ಟಿಸುವ, ನಿಭಾಯಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ದೊರೆತ ಅನುಭವಗಳ ಮೂಲಕ ತನ್ನದೇ ಜ್ಞಾನರಚನೆಯಲ್ಲಿ ತೊಡಗುವ ತರಗತಿ ಸನ್ನಿವೇಶಗಳನ್ನು ಶಿಕ್ಷಕರಷ್ಟೇ ಯೋಜಿಸಬಲ್ಲರು.

ಕೋವಿಡ್‌ನಿಂದಾಗಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ ಮತ್ತು ಕಡಿಮೆ ಶಾಲಾ ದಿನಗಳಲ್ಲಿ ಸೂಚಿತ ಪಠ್ಯವನ್ನು ಬೋಧಿಸಬೇಕಾಗಿ ಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು, ಕಲಿಕೆಯೆಂಬುದು ಮಾಹಿತಿಯ ವರ್ಗಾವಣೆಯೆಂಬ ಜನಪ್ರಿಯ ಗ್ರಹಿಕೆಯನ್ನು ಇನ್ನಷ್ಟು ಸದೃಢಗೊಳಿಸುತ್ತಾ, ಆನ್‍ಲೈನ್ ಶಿಕ್ಷಣವು ತನ್ನ ಕಳ್ಳಹೆಜ್ಜೆಗಳನ್ನು ಇಡಲು ಅವಕಾಶ ನೀಡುವ ಬದಲು ಮಗುವು ಜ್ಞಾನವನ್ನು ರಚಿಸಿಕೊಳ್ಳಲು ಇರುವ ಪರ್ಯಾಯ ಮಾರ್ಗಗಳನ್ನು ಹುಡುಕಲು ದಾರಿಮಾಡಿಕೊಡಬೇಕಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಐದು ತಿಂಗಳು ಶಾಲೆ ತೆರೆಯಲು ಸಾಧ್ಯವಾಗುತ್ತದೆ ಎಂದು ಭಾವಿಸೋಣ. ಪ್ರತೀ ತರಗತಿಯ ಮಕ್ಕಳೂ ಪ್ರತೀ ಪರ್ಯಾಯ ದಿನಕ್ಕೊಮ್ಮೆ ಬರುವುದಾದರೆ ಭೌತಿಕ ಅಂತರ ಕಾಪಾಡಿಕೊಂಡೇ ಶಾಲೆ ನಡೆಸಲು ಸಾಧ್ಯ. ಶಾಲೆಯಲ್ಲಿರದ ದಿನಗಳಲ್ಲಿಯೂ ಮಗುವಿಗೆ ಯೋಜಿತ ಮನೆಕೆಲಸ, ಟಾಸ್ಕ್‌ಗಳನ್ನು ನೀಡಿ ಕಲಿಕೆಯ
ವೈವಿಧ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು. ದಿನವೂ ಶಾಲೆಗೆ ಬರುವುದಿಲ್ಲವಾದ್ದರಿಂದ ಮಕ್ಕಳಿಗೆ ಭಾನುವಾರದ ರಜೆಯ ಅವಶ್ಯಕತೆ ಇರದು. ಶಿಕ್ಷಕರಿಗೆ ವಾರಕ್ಕೊಮ್ಮೆ ಆವರ್ತನೆಯಂತೆ ರಜೆ ನೀಡಿ ಪ್ರತಿದಿನವೂ ಶಾಲೆ ತೆರೆದಿರುವಂತೆ ಮಾಡಬಹುದು.

ಇಂತಹ ಯೋಜನೆಗಳ ಮೂಲಕ ಕಾರ್ಯೋನ್ಮುಖರಾದರೆ ಕೋವಿಡ್-19 ತಂದಿಟ್ಟಿರುವ ಈ ಪರಿಸ್ಥಿತಿಗೆ ಮುಂದಿನ ತಲೆಮಾರುಗಳು ಋಣಿಯಾಗಿರುತ್ತವೆ. ಈಗ ಮಾಡಿಕೊಳ್ಳುವ ಮಾರ್ಪಾಡುಗಳು ಸದ್ಯದ ಅವಶ್ಯಕತೆಯನ್ನು ಪೂರ್ಣಗೊಳಿಸಿದರಷ್ಟೇ ಸಾಲದು. ಕಲಿಕೆಯನ್ನು ಇನ್ನಷ್ಟು ಅನುಭವಕೇಂದ್ರಿತಗೊಳಿಸಲು, ಎದುರಿರುವ ಸಮಸ್ಯೆಯನ್ನೇ ಅವಕಾಶವಾಗಿಸಿ ಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು