ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಹಿಂದೊಮ್ಮೆ ಕಾಗೆ ಯೊಂದು ಸುದ್ದಿ ಮಾಡಿತ್ತು! ಪ್ರಶಾಂತ ಎನ್ನುವವರು ಚಿಕ್ಕ ಕಾಗೆ (ವಾಯಸ) ಮರಿಯನ್ನು ಆರೈಕೆ ಮಾಡಿ ಬೆಳೆಸಿದರು. ಅಪರಕ್ರಿಯೆ ಪ್ರಕ್ರಿಯೆಯಲ್ಲಿ ಬಲಿಯ ಅನ್ನವನ್ನು ಕಾಗೆ ತಿಂದರೆ ಮೃತರಿಗೆ ಸದ್ಗತಿ ಎನ್ನುವುದು ನಂಬುಗೆ. ಸಾಕಿದ ಕಾಗೆಯನ್ನು ಅಂತಹ ಕ್ರಿಯೆಗಳಿಗೆ ಬಳಸಬಹುದೆನ್ನುವ ಅಥವಾ ಬಳಸುತ್ತಾರೆನ್ನುವ (ಸತ್ಯವೋ, ಸುಳ್ಳೋ) ಸುದ್ದಿಗಳು ನವಮಾಧ್ಯಮ ಗಳಲ್ಲಿ ಬಣ್ಣಬಣ್ಣವಾಗಿ ಹರಿದಾಡಿದವು. ಅನೇಕರಿಗೆ ಪ್ರಾಣಿ ದಯೆ ಉಕ್ಕಿತು. ಮಾಧ್ಯಮದ ಬೆಳಕು ಬಿತ್ತು. ಅರಣ್ಯ ಇಲಾಖೆ ಚುರುಕಾಯಿತು. ದೂರದ ಕಾಡೊಳಗೆ ಕಾಗೆಯನ್ನು ಬಿಡು ವಲ್ಲಿಗೆ ಇಲಾಖೆಯ ನಿಟ್ಟುಸಿರು!

ಪ್ರಾಣಿ–ಪಕ್ಷಿಗಳ ಕುರಿತಾದ ಕಾಳಜಿ, ಪ್ರೀತಿ, ದಯೆ ಶ್ಲಾಘ್ಯ. ವರ್ತಮಾನದಲ್ಲಿ ಅನಿವಾರ್ಯ ಕೂಡ. ಆದರೆ, ಈ ದಯೆ ಆಯ್ದ ಸಂದರ್ಭಗಳಲ್ಲಿ ಮಾತ್ರ ಏಕೆ? ಅಥವಾ ನಮ್ಮ ಕಾಳಜಿ–ಚಿಂತನೆ ಸೀಮಿತ ಚೌಕಟ್ಟು ದಾಟುತ್ತಿಲ್ಲ ಏಕೆ?

ಒಂದು ಕಾಲಘಟ್ಟದಲ್ಲಿ ಕಾಗೆಗಳ ಸಂತತಿ ಎಷ್ಟಿತ್ತು? ಈಗ ಎಷ್ಟಿದೆ? ಕಾಗೆ ಒಂದೇ ಅಲ್ಲ, ಪಕ್ಷಿಸಂಕುಲಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಕುಸಿದಿದೆ. ಮನೆಯ ಸೂರಲ್ಲಿ ಗೂಡುಕಟ್ಟಿ, ಮನೆ ಮಂದಿಯ ಮಧ್ಯೆ ಹಾರಾಡುತ್ತಿದ್ದ ಗುಬ್ಬಚ್ಚಿಗಳೂ ಕಾಣೆ ಯಾಗಿವೆ. ಮಳೆಗಾಲದಲ್ಲಿ ಕಪ್ಪೆಗಳ ಕೂಗು ಹಿಂದಿನಷ್ಟು ಕೇಳಿಸುತ್ತಿಲ್ಲ. ಯಾಕೆ ಹೀಗೆ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಹಾಕಿ ಕೊಂಡಾಗ ನಿರುತ್ತರಿಗಳಾಗುತ್ತೇವೆ.

ಬದುಕಿನಲ್ಲಿ ಕೀಟನಾಶಕಗಳ ಬಳಕೆ ವ್ಯಾಪಕವಾಗಿದೆ; ತಿನ್ನುವ ಅನ್ನದಿಂದ ಶುರುವಾಗಿ ಕಳೆ ನಾಶಕದ ತನಕ. ಬೇಕೋ ಬೇಡವೋ ಅವ್ಯಾಹತವಾಗಿ ಸಿಂಪಡಣೆಯಾಗುವ ವಿಷದ ಪರಿಣಾಮ ಅನುಭವಿಸುತ್ತಿದ್ದೇವೆ. ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಹೊಸತೇನಲ್ಲ. ಹಿಂದೆಲ್ಲಾ ಅನುಭವಿಗಳು ಡೋಸೇಜನ್ನು ನಿಗದಿ ಮಾಡುತ್ತಿದ್ದರು. ಈಗ ಹಾಗಲ್ಲವಲ್ಲ. ಡೋಸೇಜ್ ನಿರ್ಧಾರ ಮಾಡುವವರಿಗೆ ಪರಿಸರ, ಆರೋಗ್ಯದ ಕಾಳಜಿ ಹುಟ್ಟುವುದಿಲ್ಲ.

ಕೀಟನಾಶಕಗಳ ದುಷ್ಪರಿಣಾಮಗಳಿಂದ ಮನುಷ್ಯನೇ ಸಾಯುತ್ತಿದ್ದಾನೆ. ಆಸ್ಪತ್ರೆಗಳಿಗೆ ಹೋದರೆ ಒಂದು ಯಾಕೆ, ಸಹಸ್ರಾರು ಉದಾಹರಣೆಗಳು ಕಣ್ಣಮುಂದೆ ರಾಚುತ್ತವೆ. ಇನ್ನು ಪ್ರಾಣಿ–ಪಕ್ಷಿ, ಕೀಟಗಳ ಪಾಡು ಹೇಳಬೇಕಾಗಿಲ್ಲ. ಒಂದು ಕಾಗೆಗಾಗಿ ಮಿಡಿಯುವ ಮನಸ್ಸು, ಇಡೀ ಪಕ್ಷಿಸಂಕುಲ ನಾಶದಲ್ಲಿರುವಾಗ ಮೌನವಾಗಿರುತ್ತದೆ. ‘ದಯೆ’ ಎನ್ನುವುದು ‘ಉಳಿವಿನ’ ಹಿನ್ನೆಲೆಯಲ್ಲೂ ಯೋಚಿಸಬೇಕು. ಪರಿಸರವನ್ನು ವಿಷದಿಂದ ಮುಕ್ತಿಗೊಳಿಸುವ ‘ದಯೆ’ ನಮ್ಮೊಳಗೆ ಮೂಡಿ ದಾಗ ‘ಪ್ರಾಣಿದಯೆ’ಗೆ ಗೌರವ.

ರಾಜಸ್ಥಾನದ ಲಪೋಡಿಯಾದಲ್ಲಿ ಪ್ರಾಣಿ–ಪಕ್ಷಿಗಳ ‘ದಯೆ’ಯು ಬದುಕಿನೊಳಗೆ ಮಿಳಿತಗೊಂಡಿದೆ. ಹಕ್ಕಿಗಳಿಗೆ ಕಲ್ಲು ಎಸೆಯ ಬಾರದು. ಎಸೆದುದು ಗೊತ್ತಾದರೆ ಐನೂರು ರೂಪಾಯಿ ದಂಡ. ಹಕ್ಕಿಗಳ ಹೊಟ್ಟೆತಂಪಿಗಾಗಿ ಅಲ್ಲಲ್ಲಿ ‘ಧಾನ್ಯ ಬ್ಯಾಂಕ್’ಗಳ ಸ್ಥಾಪನೆ. ಜಾನುವಾರು, ಹಕ್ಕಿಗಳಿಗೆ ಸುಲಭದಲ್ಲಿ ನೀರು ಸಿಗುವ ವ್ಯವಸ್ಥೆ. ಅಲ್ಲಿ ಮರ ಕಡಿಯುವುದು ಅಪರಾಧ. ಕಡಿದರೆ ಶಿಕ್ಷೆ ಖಚಿತ. ಒಂದು ಮರ ಕಡಿದರೆ ಎರಡು ಗಿಡ ನೆಟ್ಟು ಸಾಕುವ ಶಿಕ್ಷೆ. ಇವೆಲ್ಲಾ ‘ದಯೆ’ಯ ಪ್ರಾಮಾಣಿಕ ಪುಟಗಳು.

ಇನ್ನೇನು ಗಣೇಶೋತ್ಸವ ಸಮೀಪಿಸುತ್ತಿದೆ. ಭರ್ಜರಿ ಆಚರಣೆಗೆ ಮನಸ್ಸುಸಿದ್ಧವಾಗುತ್ತಿದೆ. ಕಳೆದ ವರ್ಷ ಧಾರವಾಡದ ಸ್ನೇಹಿತ ರೊಬ್ಬರು ಸಂದೇಶ ಕಳುಹಿಸಿದ್ದರು. ಅಲ್ಲಿ ಗಣೇಶೋತ್ಸವ ಮಂಟಪದ ಅಲಂಕಾರಕ್ಕೆ ಗೀಜಗನ ಗೂಡುಗಳಿಗೆ ಬೇಡಿಕೆ. ಕಾಡೆಲ್ಲಾ ಅಲೆದು ಗೂಡಿನಲ್ಲಿದ್ದ ಮರಿ ಗಳನ್ನು, ಮೊಟ್ಟೆಗಳನ್ನು ಹೊಸಕಿಹಾಕಿ ಗೂಡನ್ನು ಆಯುವ ಒಂದಷ್ಟು ಮಂದಿ ಇದ್ದಾರಂತೆ. ಹೀಗೆ ಸಂಗ್ರಹಿಸಿದ ಗೂಡುಗಳು ದುಬಾರಿ ಕ್ರಯಕ್ಕೆ ಮಾರಾಟವಾಗುತ್ತವೆ. ಸರಿ, ಇದನ್ನು ನಂಬುಗೆ ಅಂತ ಕರೆಯೋಣ. ಹೊಟ್ಟೆಪಾಡು ಎಂದು ಗ್ರಹಿಸೋಣ. ಆದರೆ, ನಾಶವಾದ ಮೊಟ್ಟೆಗಳು ಹಾಗೂ ಚಿಕ್ಕ ಮರಿಗಳಿಗೆ ದನಿ ಕೊಡುವವರು ಯಾರು? ‘ದಯೆ’ ಇಂತಹ ಸಂದರ್ಭದಲ್ಲಿ ದನಿಯೆತ್ತಬೇಕು.

ಮೂರ್ನಾಲ್ಕು ವರ್ಷಗಳ ಹಿಂದೆ ಗೋವಾಕ್ಕೆ ಹೋಗಿದ್ದೆ. ತಾಜ್ ಹೋಟೆಲಿನ ಸನಿಹದ ಆವರಣದಲ್ಲಿ ಸಹಸ್ರಾರು ಪಾರಿವಾಳಗಳು ಸ್ವಚ್ಛಂದವಾಗಿದ್ದವು. ಪ್ರವಾಸಿಗರಲ್ಲಿ ಅನೇಕರು ಕಾಳನ್ನು ಹಾಕುತ್ತಿದ್ದರು. ಇನ್ನೂ ಕೆಲವರು ದೊಡ್ಡಗದ್ದಲ ಎಬ್ಬಿಸಿ, ಪಾರಿವಾಳಗಳಿಗೆ ಭಯ ಹುಟ್ಟಿಸಿ, ಅವೆಲ್ಲಾ ಏಕಕಾಲಕ್ಕೆ ಭಯದಿಂದ ಹಾರುವುದನ್ನು ನೋಡಿ ಸಂತೋಷ ಪಡುತ್ತಿದ್ದರು. ಆಗ ಅಲ್ಲಿನ ರಕ್ಷಕ ಭಟ ಏನು ಹೇಳಿರ ಬಹುದು? ‘ಇವರಿಗೆಲ್ಲಾ ಹೃದಯ ಇಲ್ಲ. ದಯೆಯಿಲ್ಲ, ದಾಕ್ಷಿಣ್ಯವಿಲ್ಲ. ಪಕ್ಷಿಪ್ರೀತಿ ಇಲ್ಲವೇ ಇಲ್ಲ’. ಹೌದು. ಮನುಷ್ಯ ರಾದ ನಮ್ಮಲ್ಲಿ ಮಾನವೀಯ ಸ್ಪಂದನಗಳೇ ಇಲ್ಲದಿದ್ದ ಮೇಲೆ ಪಕ್ಷಿಗಳ ಕುರಿತಾದ ದಯೆ ಎಲ್ಲಿಂದ ಬಂದೀತು?

ಸ್ವ–ಆಸಕ್ತಿಗಾಗಿ ಪಕ್ಷಿ, ನಾಯಿ, ಮೊಲ ಸಾಕುವವರಿದ್ದಾರೆ. ಮಾರಾಟ ಉದ್ದೇಶ ಅಲ್ಲೋ ಇಲ್ಲೋ ಬಿಟ್ಟರೆ ಮತ್ತೆಲ್ಲಾ ತಂತಮ್ಮ ಸಂತೋಷಕ್ಕಾಗಿ ಸಾಕುತ್ತಾರೆ. ಆಹಾರ, ನೀಡಿ ಸಲಹುತ್ತಾರೆ. ಮನೆಯ ಸದಸ್ಯರಂತೆ ಕಾಪಾಡುತ್ತಾರೆ. ಅವು ಗಳು ಮೃತಪಟ್ಟಾಗ ರಕ್ತಸಂಬಂಧಿ ಮರಣಿಸಿದಂತೆ ಕಣ್ಣೀರು ಹಾಕುತ್ತಾರೆ. ಇವೆಲ್ಲಾ ಬಾಯಿಬಾರದ ಪ್ರಾಣಿ, ಪಕ್ಷಿಸಂಕುಲ ಮತ್ತು ಮನುಷ್ಯನ ಮಧ್ಯೆ ಅವ್ಯಕ್ತವಾಗಿ ಉಂಟಾಗುವ ದಯೆ, ಪ್ರೀತಿಯ ಅನುಸಂಧಾನ. ‘ದಯೆ’ ಎನ್ನುವುದು ಆಚರಣೆ ಯಲ್ಲಿ ಬಾರದೆ ಅದೊಂದು ‘ಸ್ವ–ಸ್ಥಾಪನೆ’ಗಿರುವ ಟೂಲ್ ಆಗಬಾರದು.

ಒಂದು ಕಾಗೆಯ ಕುರಿತು ಹುಟ್ಟಿದ ಮರುಕ ಸ್ವಾಗತಾರ್ಹ; ಅದು ಪ್ರಾಣಿ–ಪಕ್ಷಿ, ಕೀಟ ಸಂಕುಲಗಳ ರಕ್ಷಣೆಗೂ ಹಬ್ಬಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.