ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗ: ಭರ್ಜರಿ ಕನಸಷ್ಟೇ ಸಾಕೆ?

ಕಳೆದ ಬಜೆಟ್‌ನಲ್ಲಿ ಸಿನಿಮಾರಂಗಕ್ಕೆ ಕೋಟ್ಯಂತರ ರೂಪಾಯಿ ಮೀಸಲಿಟ್ಟ ಘೋಷಣೆಯ ಫಲಶ್ರುತಿ ನೆಲಮಟ್ಟದಲ್ಲಿ ಕಾಣುತ್ತಿಲ್ಲವೇಕೆ?
Last Updated 4 ಮಾರ್ಚ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು ಜಾಗತಿಕ ಸಿನಿಮಾರಂಗದ ಮಹತ್ವದ ಸ್ಥಾನಕ್ಕೆ ಏರುವ ಸಾಮರ್ಥ್ಯ ಇರುವ ನಗರ. ಆದರೆ ಯಾಕೆ ಇಲ್ಲಿ ಕಳಪೆ ಚಿತ್ರಗಳು ಕ್ಲೀಷೆ ಮಾದರಿಯಲ್ಲಿ ನಿರ್ಮಾಣವಾಗುತ್ತಿವೆ? ಯಾಕೆ ಹೊಸ ಹೊಳಹುಗಳ ಸಾಧ್ಯತೆ ಕೂಡ ಇಲ್ಲಿ ಹುಟ್ಟುತ್ತಿಲ್ಲ? ಇಲ್ಲಿನ ಚಿತ್ರೋದ್ಯಮದ ಗಣ್ಯರಿಂದ ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ ಅಥವಾ ಚೆನ್ನೈನ ಅಡ್ಯಾರ್ ಫಿಲಂ ಇನ್‌ಸ್ಟಿಟ್ಯೂಟ್‌ಗೆ ಸಾಟಿ ಆಗುವಂತಹ ಒಂದು ಸಂಸ್ಥೆಯನ್ನೂ ಯಾಕೆ ಕಟ್ಟಲಾಗಿಲ್ಲ? ಸರ್ಕಾರಿ ಫಿಲಂ ಇನ್‌ಸ್ಟಿಟ್ಯೂಟ್‌ ಯಾಕೆ ರೋಗಗ್ರಸ್ತವಾಗಿದೆ?

ಖಾಸಗಿ ಸಹಭಾಗಿತ್ವದಲ್ಲಿ ಹಾಲಿವುಡ್ ಮಟ್ಟದ ಫಿಲಂ ಸಿಟಿಯನ್ನು ಹೆಸರಘಟ್ಟದಲ್ಲಿ ಕಟ್ಟುವ ಯೋಜನೆ ಮೈಸೂರು, ರಾಮನಗರ ಕಡೆಗೆ ಹೋಗಿ ಯಾಕಿನ್ನೂ ಗಿರಕಿ ಹೊಡೆಯುತ್ತಿದೆ? ಚಲನಚಿತ್ರ ಅಕಾಡೆಮಿ ಕೆಲಸ ಒಂದೆರಡು ‘ಹೆಜ್ಜೆ ಗುರುತು’, ಒಂದು ಚಲನಚಿತ್ರೋತ್ಸವಕ್ಕಷ್ಟೇ ಸೀಮಿತವೇ? ಕಳೆದ ಬಜೆಟ್‌ನಲ್ಲಿ ಸಿನಿಮಾ ವಿಶ್ವವಿದ್ಯಾಲಯಕ್ಕೆ ₹ 30 ಕೋಟಿ, ತಾಂತ್ರಿಕ ಸೇವಾದಾತ ಸಂಸ್ಥೆಗಳಿಗೆ ₹ 40 ಕೋಟಿ, ತಂತ್ರಜ್ಞರ ವಸತಿ ಸೌಕರ್ಯಕ್ಕೆ ₹ 20 ಕೋಟಿ ಮೀಸಲಿಡಲಾಗಿತ್ತು. ಈ ಅದ್ಧೂರಿ ಘೋಷಣೆಯ ಫಲಶ್ರುತಿ ನೆಲಮಟ್ಟದಲ್ಲಿ ಯಾಕೆ ಕಾಣುತ್ತಿಲ್ಲ?

ಹೋಗಲಿ ಇನ್‌ಸ್ಟಿಟ್ಯೂಟ್‌, ಅಕಾಡೆಮಿ, ಫಿಲಂ ಸಿಟಿ ಹಾಗೂ ವಿಶ್ವವಿದ್ಯಾಲಯಗಳ ನಿಖರ ಕಲ್ಪನೆ ನಮ್ಮ ಸರ್ಕಾರಕ್ಕಾಗಲೀ ಕನ್ನಡ ಚಿತ್ರೋದ್ಯಮದ ಗಣ್ಯರಿಗಾಗಲೀ ಇದೆಯೇ? ‘ಕರ್ನಾಟಕ’ ಚಿತ್ರೋದ್ಯಮವನ್ನು ಕೇವಲ ‘ಕನ್ನಡ’ದಲ್ಲಿ ಕಲ್ಪಿಸಿಕೊಳ್ಳುವ ಜನ, ಜಾಗತಿಕವಾಗಿ ಯೋಚಿಸದೆ ಏನು ಮಾಡಿದರೂ ಅದು ‘ಅಂತರರಾಷ್ಟ್ರೀಯ’ ಆಗುವುದಿಲ್ಲ. ಹೊಸ ಹೊಳಹುಗಳು ಬರಲು ಪ್ರತಿಭೆಗಳು ಬೆಳೆಯುವ ಮುಕ್ತ ವಾತಾವರಣ ಇರಬೇಕಾಗುತ್ತದೆ. ಇಲ್ಲಿನ ಬಾವಿ ಕಪ್ಪೆಗಳೇ ಭಾವಿ ಕಪ್ಪೆಗಳಿಗೆ ನೆಗೆಯುವ ತರಬೇತಿ ಕೊಡುವ ಯಾವ ಸಂಕುಚಿತ ಯೋಜನೆಯೂ ಅಂತರರಾಷ್ಟ್ರೀಯವೂ ಆಗದು, ರಾಷ್ಟ್ರೀಯವೂ ಆಗದು.

ಎಲ್ಲಾ ಬಂಡವಾಳಗಳಿಗಿಂತ ಪ್ರಮುಖವಾದುದು ಮಾನವ ಸಂಪನ್ಮೂಲದ ಬಂಡವಾಳ. ಇದನ್ನು ಅಭಿವೃದ್ಧಿಪಡಿಸುವುದು ಅಕಾಡೆಮಿಯ ಉದ್ದೇಶ. ಹೊಸ ಜ್ಞಾನ, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಆಯ್ಕೆಯಾಗುವ ನಮ್ಮ ಹುಡುಗರಿಗೆ ಸ್ಕಾಲರ್‌ಶಿಪ್, ಫೆಲೋಶಿಪ್, ಸರಳ ಸಾಲ ಇತ್ಯಾದಿ ಕೊಡುವ ಯೋಜನೆ ರೂಪಿಸುವುದು, ಚಲನಚಿತ್ರ ಪ್ರಶಸ್ತಿ ಕೊಡುವುದು ಕೂಡ ಅಕಾಡೆಮಿಯ ಕೆಲಸ, ಸರ್ಕಾರದ್ದಲ್ಲ. ಪದವಿ ಅಥವಾ ಡಿಪ್ಲೊಮಾ ಕೋರ್ಸುಗಳನ್ನು ನೀಡುವುದು ಇನ್‌ಸ್ಟಿಟ್ಯೂಟ್‌ನ ಕೆಲಸ.

ಈ ಕೋರ್ಸುಗಳಿಗೆ ಸಿಲೆಬಸ್ ಕೊಟ್ಟು ಜೊತೆಗೆ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ನಡೆಸುವುದು ವಿಶ್ವವಿದ್ಯಾಲಯದ ಕೆಲಸ. ಸಿನಿಮಾ ವಿಶ್ವವಿದ್ಯಾಲಯ ಅಂತ ಆದ ಮೇಲೆ ಎಲ್ಲಾ ಪದವಿ, ಡಿಪ್ಲೊಮಾ ಫಿಲಂ ಇನ್‌ಸ್ಟಿಟ್ಯೂಟ್‌ಗಳೂ ಅದಕ್ಕೆ ಸಂಲಗ್ನಗೊಳ್ಳಬೇಕಾಗುತ್ತದೆ.

ಲೊಕೇಷನ್‌ಗಳು, ಸ್ಟುಡಿಯೊ, ಸೆಟ್ಟು, ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್‌ನಂತಹ ಎಲ್ಲ ಮೂಲ ಸೌಕರ್ಯಗಳನ್ನೂ ಹೊಂದಿರುವ ಸಮುಚ್ಚಯ ಫಿಲಂ ಸಿಟಿ. ಅದಕ್ಕೆ ಹೊಂದಿಕೊಂಡಂತೆ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರ ವಸತಿ ಸಮುಚ್ಚಯ– ಟೌನ್‌ಶಿಪ್. ಭಾರತದ ಶ್ರೇಷ್ಠ ಸಿನಿಮಾ ದಿಗ್ಗಜರು, ಹಾಲಿವುಡ್‌ ಹಾಗೂ ಯುರೋಪಿನ ಸಿನಿಮಾ ಸಾಧಕರನ್ನು ಒಳಗೊಂಡು ಜಗತ್ತಿನ ಸಿನಿಮಾಗೋಸ್ಕರ ಮಾಡುವ ಕೆಲಸ ಇದು. ಜಗತ್ತಿನ ಎಲ್ಲ ಶ್ರೇಷ್ಠ ಚಿಂತನೆ ಮತ್ತು ಕಲೆಗಾರಿಕೆ ಇಲ್ಲಿ ಬರುವ ಹಾದಿಗಳನ್ನು ನಾವೇ ತೆರೆಯಬೇಕು. ಕೇವಲ ಕನ್ನಡಕ್ಕೋಸ್ಕರ ಕನ್ನಡಿಗರಿಂದ ಕನ್ನಡದವರು ಮಾತ್ರ ಅಂದುಕೊಂಡು ಹೊರಟರೆ ಈ ಕಾರ್ಯ ಸಾಧ್ಯವಾಗದು. ಆದ್ದರಿಂದ ಕೂಡಲೇ ಸರ್ಕಾರ ಒಂದು ಅಂತರರಾಷ್ಟ್ರೀಯ ತಜ್ಞ ಸಮಿತಿ ರಚಿಸಿ ಫಿಲಂ ಸಿಟಿ ಮತ್ತು ಫಿಲಂ ವಿಶ್ವವಿದ್ಯಾಲಯ ಯೋಜನೆಯ ನೀಲನಕ್ಷೆ ತಯಾರಿಸಬೇಕು. ರಾಮನಗರವೋ ಮೈಸೂರೋ ಹೆಸರಘಟ್ಟವೋ ಎಂದು ಗೊಂದಲಗಳೂ ಇವೆ. ಇದು ಒಂದು ಅಂತರರಾಷ್ಟ್ರೀಯ ಯೋಜನೆ ಆಗಿದ್ದಲ್ಲಿ ಈ ಪ್ರಶ್ನೆಗಳೇ ಕಾಡಬಾರದು. ಈ ಮೂರೇ ಏಕೆ, ಹುಬ್ಬಳ್ಳಿ, ಬೆಳಗಾವಿಯಲ್ಲೂ ಮಾಡಬಹುದು. ಎಲ್ಲಾ ನಾವೇ ಮಾಡುತ್ತೇವೆ, ಇಲ್ಲೇ ನಮ್ಮ ಮನೆ ಪಕ್ಕದಲ್ಲೇ ಮಾಡುತ್ತೇವೆ ಎಂದು ನಮ್ಮದೇ ಬಾವಿ ಕಪ್ಪೆ ನಿರ್ದೇಶಕರು, ನಿರ್ಮಾಪಕರು, ನಟರು, ಫಿಲಂ ಚೇಂಬರ್ ಇತ್ಯಾದಿ ರಚ್ಚೆ ಹಿಡಿಯುವ ಅಪಾಯ ಇದೆ. ಈ ರೀತಿ ಎಲ್ಲವನ್ನೂ ನಾವೇ ಮಾಡುತ್ತೇವೆ ಎಂದು ಹೊರಟೇ ನಮ್ಮ ಸಿನಿಮಾರಂಗ ತಳ ಸೇರಿರುವುದು.

ಆದ್ದರಿಂದ ವಿವಿಧ ಚಿತ್ರರಂಗಗಳ ತಜ್ಞರನ್ನು ಕರೆಸಿ ಇಲ್ಲಿನ ತಂತ್ರಜ್ಞರು, ಕಲಾವಿದರು, ಕಾರ್ಮಿಕರು ಸೇರಿದಂತೆ ಚಿತ್ರರಂಗದ ಎಲ್ಲರಿಗೂ ಅಕಾಡೆಮಿಯು ಕಡ್ಡಾಯವಾಗಿ ತರಬೇತಿ ಕೊಡಿಸಬೇಕು. ನಮ್ಮ ಹುಡುಗರು ಹೆಸರಾಂತ ಸಿನಿಮಾ ಶಾಲೆಗಳಿಗೆ ಆಯ್ಕೆ ಆದಾಗ ಅವರ ಖರ್ಚು ವೆಚ್ಚವನ್ನು ಹಗುರಗೊಳಿಸುವ ಮೂಲಕ ಪ್ರೋತ್ಸಾಹಿಸಬೇಕು.

ದುರಂತ ಎಂದರೆ, ಸರ್ಕಾರಕ್ಕಾಗಲೀ ಅಕಾಡೆಮಿಗಾಗಲೀ ಪ್ರತಿವರ್ಷ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಿನಿಮಾ ಶಾಲೆಗಳಿಗೆ ಆಯ್ಕೆ ಆಗುವ ನಮ್ಮ ಹುಡುಗರ ಹೆಸರೂ ಗೊತ್ತಿರುವಂತೆ ಕಾಣುತ್ತಿಲ್ಲ. ಅದ್ಧೂರಿ ಕನಸು ಕಾಣುವುದು ಒಳ್ಳೆಯದೇ, ಅದನ್ನು ನನಸು ಮಾಡಿಕೊಳ್ಳುವ ಹಾದಿಯೂ ಗೊತ್ತಿರಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT