ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಸಿವೂ... ಅಪೌಷ್ಟಿಕತೆಯೂ

ಹಸಿವು ನೀಗಿಸುವುದರಿಂದ ಪೌಷ್ಟಿಕತೆ ಮೂಡಿಸಬಹುದು ಎಂಬುದು ಅಪನಂಬಿಕೆ
Last Updated 17 ಅಕ್ಟೋಬರ್ 2018, 18:17 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಪ್ರಕಟವಾದ ಈ ವರ್ಷದ ಜಾಗತಿಕ ಹಸಿವಿನ ಸೂಚ್ಯಂಕವು (ಗ್ಲೋಬಲ್‌ ಹಂಗರ್‌ ಇಂಡೆಕ್ಸ್‌– ಜಿಎಚ್‌ಐ) 119 ರಾಷ್ಟ್ರಗಳ ಪೈಕಿ ನಮ್ಮ ದೇಶ 103ನೇ ಸ್ಥಾನಕ್ಕೆ ಕುಸಿದಿರುವ ಕಡೆಗೆ ಗಮನ ಹರಿಸುವಂತೆ ಮಾಡಿದೆ.

ಹಸಿವು ಮತ್ತು ಪೌಷ್ಟಿಕತೆಯ ವಿಚಾರದಲ್ಲಿ ನಾವು ಇರಾಕ್‌ಗಿಂತಲೂ ಹಿಂದೆ ಉಳಿದಿರುವುದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ಲೆಕ್ಕದ ಪ್ರಕಾರ ನಮ್ಮ ದೇಶ ಗಳಿಸಿದ ಅಂಕ 31.4. ಇದು ಇಡೀ ಏಷ್ಯಾದಲ್ಲೇ ಅತಿ ಕಳಪೆ ಸಾಧನೆ. ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನುವಂತಿದೆ.

ಐದಕ್ಕಿಂತಲೂ ಕಡಿಮೆ ವಯಸ್ಸಿನ ನಮ್ಮ ಮಕ್ಕಳು ತಮ್ಮ ಎತ್ತರಕ್ಕೆ ಇರಬೇಕಾದಷ್ಟು ತೂಕವಿಲ್ಲ. ವಿಪರ್ಯಾಸವೆಂದರೆ ಇವರ ಪೈಕಿ ಹಲವರು ತಮ್ಮ ವಯಸ್ಸಿಗೆ ತಕ್ಕ ಎತ್ತರಕ್ಕೂ ಬೆಳೆಯಲು ಆಗಿಲ್ಲ. ಅಪೌಷ್ಟಿಕತೆ, ಸಾವು, ಕಡಿಮೆ ತೂಕ ಮತ್ತು 0–59 ತಿಂಗಳವರೆಗಿನ ಮಕ್ಕಳ ತೂಕ ನಿರೀಕ್ಷೆಗಿಂತ ಅತಿಕಡಿಮೆ ಇರುವ ಮುಖ್ಯ ಮಾನದಂಡಗಳನ್ನು ಆಧರಿಸಿ ರೂಪಿಸಲಾಗುವ ಸೂಚ್ಯಂಕವು ದೇಶದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಯ ಕಡೆಗೂ ಆತಂಕದಿಂದ ನೋಡುವಂತೆ ಮಾಡಿದೆ.

ನಿರೀಕ್ಷೆಗಿಂತ ಅತಿಕಡಿಮೆ ತೂಕದ 0–59 ತಿಂಗಳವರೆಗಿನ ಮಕ್ಕಳ ಪ್ರಮಾಣ 2005–06ರಲ್ಲಿ ಶೇ 20ರಷ್ಟಿತ್ತು. ಹತ್ತು ವರ್ಷಗಳ ಬಳಿಕ ಅದು ಶೇ 21ಕ್ಕೆ ಏರಿತ್ತು. ಇಪ್ಪತ್ತೈದು ವರ್ಷಗಳಲ್ಲಿ ಈ ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯೇ ಆಗಿಲ್ಲ. ಇಂಥ ಪರಿಸ್ಥಿತಿಯಲ್ಲೇ 2030ರ ವೇಳೆಗೆ ಎಲ್ಲರನ್ನೂ ಹಸಿವುಮುಕ್ತಗೊಳಿಸುವ ಸುಸ್ಥಿರ ಅಭಿವೃದ್ಧಿಯ ಗುರಿಯೂ ನಮ್ಮ ಮುಂದೆ ಇದೆ.

ಹಸಿವನ್ನು ನೀಗಿಸಿ ಪೌಷ್ಟಿಕತೆಯನ್ನು ತರುವ ಸಲುವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಕಳಪೆ ಅನುಷ್ಠಾನವೂ ಇದಕ್ಕೆ ಕಾರಣ ಎನ್ನಲೇಬೇಕು. ಈ ದೇಶದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಕಾಯ್ದೆ ಹೇಗೆ ಅನುಷ್ಠಾನವಾಗುತ್ತಿದೆ ಎಂಬುದನ್ನು ತಳಮಟ್ಟದಿಂದ ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಇನ್ನಷ್ಟು ವಿಪರ್ಯಾಸ ಮೂಡಿಸುವ ಸಂಗತಿಗಳು ಬೆಳಕಿಗೆ ಬರುತ್ತವೆ.

‘ಅಪೌಷ್ಟಿಕತೆಯನ್ನು ಗಮನಕ್ಕೆ ತಂದರೆ ಮತ್ತೆ ನಮಗೇ ಹೊಣೆ ಹೊರಿಸಲಾಗುತ್ತದೆ’ ಎಂಬ ಅಧಿಕಾರಿಗಳ ಬೇಜವಾಬ್ದಾರಿ ನಿಲುವು ಒಂದೆಡೆ ಇದೆ. ಅದರೊಂದಿಗೆ ಯೋಜನೆಗಳ ಲಾಭವನ್ನು ತಮ್ಮ ಹಕ್ಕು ಎಂದು ಪಡೆಯುವ ಮಂದಿಯೂ ಆಶಾದಾಯಕ ಸಂಖ್ಯೆಯಲ್ಲಿ ಇಲ್ಲ. ಇಂಥ ಸನ್ನಿವೇಶದಲ್ಲೇ ಸೌಲಭ್ಯಗಳನ್ನು ದೊರಕಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರಯತ್ನಗಳನ್ನು ಮರೆಯುವಂತಿಲ್ಲ.

ಜವಾಬ್ದಾರಿ ನಿರ್ವಹಣೆ ಮತ್ತು ಹಕ್ಕುಗಳ ಜಾರಿಯಲ್ಲಿ ಆಗಿರುವ ಲೋಪವನ್ನು ಸುಧಾರಿಸುವುದು ಹೇಗೆ ಎಂಬ ಬಗ್ಗೆ ಗಂಭೀರ ಆಲೋಚನೆಗಳಾಗಲೀ, ಅದಕ್ಕೆ ಅನುಸರಿಸಬೇಕಾದ ಪ್ರಯತ್ನಗಳ ಬಗ್ಗೆ ಚಿಂತನೆಗಳಾಗಲೀ ನಮ್ಮ ರಾಜ್ಯದಲ್ಲಂತೂ ಇನ್ನೂ ನಡೆದಿಲ್ಲ.

ಹಲವರನ್ನು ಸೋಮಾರಿಗಳನ್ನಾಗಿ ಮಾಡಿತು ಎಂಬ ಆರೋಪದ ನಡುವೆಯೂ ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆಯು ಹಸಿವು ನೀಗಿಸುವ ದಾರಿಯಲ್ಲಿ ಒಂದು ಮುಖ್ಯ ಪ್ರಯತ್ನ. ಆದರೆ ಹಸಿವು ನೀಗಿಸಿದರೆ ಸಾಕೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಲೇಬೇಕು. ಹಸಿವು ನೀಗಿಸುವುದರಿಂದ ಪೌಷ್ಟಿಕತೆ ಮೂಡಿಸಬಹುದು ಎಂಬ ಅಪನಂಬಿಕೆಯೂ ನಮ್ಮಲ್ಲಿ ಚಾಲ್ತಿಯಲ್ಲಿದೆ.

ಹಸಿವು ನೀಗಿಸಲು ಗರ್ಭಿಣಿಯರಿಗೆ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಉತ್ತಮ ಆಹಾರ ನೀಡಿ ಪೌಷ್ಟಿಕತೆಯನ್ನು ತರಬೇಕು ಎಂಬ ಸರಳ ಸಂಗತಿ ಕಣ್ಣಂಚಿನಲ್ಲೇ ಇದ್ದರೂ ಮರೆಯಾಗಿರುತ್ತದೆ. ಅಥವಾ ಅದನ್ನು ಬೇಕೆಂದೇ ಪಕ್ಕಕ್ಕೆ ಸರಿಸಲಾಗಿರುತ್ತದೆ.

ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಹುಟ್ಟುವ ಮಗುವಿಗೆ ಅಪೌಷ್ಟಿಕತೆಯ ಶಾಪ ಮೊದಲೇ ತಟ್ಟಿರುತ್ತದೆ. ಮಗು ಅಪೌಷ್ಟಿಕವಾಗುವುದನ್ನು ತಪ್ಪಿಸಬೇಕೆಂದರೆ ಗರ್ಭಿಣಿಗೆ ಪೌಷ್ಟಿಕ ಆಹಾರ ಕೊಡುವುದು ಕಡ್ಡಾಯ. ಆಹಾರ ಮತ್ತು ಆರೋಗ್ಯ ಸ್ಥಿತಿಯೇ ಪೌಷ್ಟಿಕತೆಯ ಮಾನದಂಡ ಎಂಬುದನ್ನು ನಾವು ಮರೆಯುವಂತಿಲ್ಲ.

ಬಳ್ಳಾರಿಯಲ್ಲಿ ಇತ್ತೀಚೆಗೆ ವಿವಿಧ ಇಲಾಖೆಗಳ ಅಧಿಕಾರಿ–ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ವಿಭಾಗದ ಸಿಬ್ಬಂದಿ ನಡೆಸಿದ್ದ ಕ್ಷೇತ್ರಕಾರ್ಯದಲ್ಲಿ ಕಂಡುಬಂದ ಸಂಗತಿಗಳು ಒಟ್ಟಾರೆ ವ್ಯವಸ್ಥೆಯ ಲೋಪಗಳ ಕಡೆಗೆ ಬೆರಳು ಮಾಡುತ್ತವೆ.

ಅಪೌಷ್ಟಿಕತೆಗೆ ಬಡತನದೊಂದಿಗೆ ಬಾಲ್ಯವಿವಾಹಗಳೂ ಕಾರಣ, ‘ಪೌಷ್ಟಿಕ ಆಹಾರ ನಮ್ಮ ಹಕ್ಕು’ ಎಂಬ ಜಾಗೃತಿಯ ಕೊರತೆ, ಅಂಕಿ–ಅಂಶದಲ್ಲಷ್ಟೇ ಪೌಷ್ಟಿಕತೆಯನ್ನು ತೋರಿಸುವ ಅಧಿಕಾರಿಗಳ ಉಮೇದು, ಅಧಿಕಾರಿ– ಸಿಬ್ಬಂದಿಗೆ ತುಂಬಾ ಕೆಲಸ, ಯೋಜನೆಗಳ ಅನುಷ್ಠಾನ ಕಷ್ಟ ಎಂಬ ಚಿಂತೆ, ‘ಅಪೌಷ್ಟಿಕತೆಯ ಕುರಿತು ರೆಫರ್‌ ಮಾಡಿದರೆ ನಮಗೇ ಕಷ್ಟ’ ಎಂಬ ಭಾವನೆ... ಇಂಥ ವಿಷಯಗಳ ಕುರಿತು ಗಮನ ಸೆಳೆದ ವಿಭಾಗದ ಸಿಬ್ಬಂದಿ ಮನೋಧರ್ಮದಲ್ಲಿ ಬದಲಾವಣೆಯಾಗದೆ ಪರಿಸ್ಥಿತಿಯಲ್ಲಿ ಸುಧಾರಣೆ ಕಡುಕಷ್ಟ ಎಂಬ ಸ್ಪಷ್ಟ ಅಭಿಪ್ರಾಯವನ್ನು ಮುಂದಿಟ್ಟರು.

ಇದು ಹೆಸರಿರುವುದಕ್ಕೆ ಬಳ್ಳಾರಿಯ ಪರಿಸ್ಥಿತಿ ಎಂದು ಉಲ್ಲೇಖಿಸಬಹುದು. ಆದರೆ ಹೆಸರು ತೆಗೆದರೆ ಎಲ್ಲ ಊರುಗಳಲ್ಲೂ ಇದೇ ವಾಸ್ತವ. ಆಹಾರವೊಂದೇ ಅಪೌಷ್ಟಿಕತೆಯನ್ನು ನಿವಾರಿಸಲಾರದು. ಜೀವನಶೈಲಿಯಲ್ಲೂ ಬದಲಾವಣೆಯಾಗಬೇಕು. ಹುಟ್ಟಿದ ನಂತರದ 1000 ದಿನಗಳಲ್ಲಿ ಮಗು ಮತ್ತು ಬಾಣಂತಿಯನ್ನು ಎಷ್ಟು ಜತನವಾಗಿ ಕಾಪಾಡಬೇಕು ಎಂಬ ಬಗ್ಗೆ ಎಲ್ಲ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಲ್ಲಿ ಕಾಳಜಿ ಮೂಡಬೇಕು. ಮನೆಗಳಲ್ಲಿ ಗರ್ಭಿಣಿ, ಮಗು ಮತ್ತು ಬಾಣಂತಿಯರ ಕುರಿತು ತಾರತಮ್ಯ ರಹಿತವಾದ ಪ್ರೀತಿ ಹುಟ್ಟಬೇಕು. ತಿಳಿವಳಿಕೆ ಹೆಚ್ಚಾಗಬೇಕು.

ಬಳ್ಳಾರಿಯ ಕಾರ್ಯಾಗಾರದಲ್ಲಿ ಯುನಿಸೆಫ್‌ ಪ್ರತಿನಿಧಿ ಡಾ.ಎಂ.ಎಸ್‌.ತಾರಾ ಒಂದು ಪ್ರಶ್ನೆ ಕೇಳಿದರು. ಆರೋಗ್ಯವಂತ ಮಗು ಹುಟ್ಟಿದಾಗ ತೂಕ ಎಷ್ಟಿರಬೇಕು? ಒಬ್ಬ ಅಧಿಕಾರಿ 2.8 ಕೆ.ಜಿ. ಎಂದರು. ಮತ್ತೊಬ್ಬರು 3 ಕೆ.ಜಿ. ಎಂದರು. ಆಶಾ ಕಾರ್ಯಕರ್ತೆಯೊಬ್ಬರು 2.5 ಕೆ.ಜಿ. ಎಂದರು. ವಿವಿಧ ಮಾನದಂಡಗಳ ಪ್ರಕಾರ ಇವರೆಲ್ಲರೂ ಸರಿಯಾದ ಉತ್ತರವನ್ನೇ ಕೊಟ್ಟರು.

ಆದರೆ ಹುಟ್ಟುವ ಮಗುವಿನ ತೂಕ 3 ಕೆ.ಜಿಗೂ ಹೆಚ್ಚಿರಬೇಕು ಎಂದು ನಿರೀಕ್ಷಿಸಿದರೆ ಮಾತ್ರ ಮಗು ಕನಿಷ್ಠ 2.8 ಕೆ.ಜಿ. ತೂಗುತ್ತದೆ. ಅದಕ್ಕಿಂತಲೂ ಕಡಿಮೆ ನಿರೀಕ್ಷಿಸಿದರೆ ಮಗು ಉಳಿಯುವುದೇ ಕಷ್ಟ. ಇಂಥ ಸರಳ ಮಹತ್ವಾಕಾಂಕ್ಷೆಯೇ ನಮ್ಮ ಮಕ್ಕಳನ್ನು ಹಾಗೂ ತಾಯಂದಿರನ್ನು ಉಳಿಸಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT