ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಅಭದ್ರತೆ: ಅರಿವಿಗೆ ಅಭಿಯಾನ

Last Updated 27 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಜಾಗತಿಕ ತಾಪಮಾನ ಇಡೀ ವಿಶ್ವವನ್ನು ಕಂಗೆಡಿಸಿದ್ದು, ಅದನ್ನು ನಿಯಂತ್ರಣಕ್ಕೆ ತರಲು ಬಹುತೇಕ ರಾಷ್ಟ್ರಗಳು ಹೆಜ್ಜೆ ಇರಿಸಿವೆ. ಒಂದು ಹಂತಕ್ಕೆ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇಂತಹ ಸಂದರ್ಭದಲ್ಲೇ ‘ಭೂ ಫಲವಂತಿಕೆ ನಾಶ’ (ಲ್ಯಾಂಡ್‌ ಡೀಗ್ರೇಡೇಷನ್‌) ಮಾನವನ ಆಹಾರ ಭದ್ರತೆಗೇ ಗಂಡಾಂತರ ತಂದೊಡ್ಡುತ್ತಿದೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ 2030ರ ವೇಳೆಗೆ ಆಹಾರ ಲಭಿಸುವುದೇ ದುಸ್ತರವಾಗುತ್ತದೆ.

ಭೂ ಮೇಲ್ಭಾಗದಲ್ಲಿ ಅರಣ್ಯವಷ್ಟೇ ಅಲ್ಲ, ಕೃಷಿ ಭೂಮಿ, ನೀರಿನ ಫಲವತ್ತತೆಯ ಪ್ರದೇಶದ ಪ್ರಮಾಣವೂ ಅತಿವೇಗದಲ್ಲಿ ಕಡಿಮೆಯಾಗುತ್ತಿದ್ದು, ಆಹಾರ ಉತ್ಪಾದನೆಗೆ ಕಂಟಕವಾಗುತ್ತಿದೆ. ವಿಶ್ವದಲ್ಲಿ ಶೇ 20ರಷ್ಟು ಭೂ ಫಲವಂತಿಕೆ ನಾಶವಾಗಿದೆ. ಭಾರತದಲ್ಲಿ ಈ ಪ್ರಮಾಣ ಶೇ 30ರಷ್ಟಿದೆ. 30 ವರ್ಷಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ದುಪ್ಪಟ್ಟಾಗಿದೆ. ಇದು ಹೀಗೆಯೇ ಮುಂದುವರಿದರೆ ದೇಶಗಳಲ್ಲಿ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದ್ದು, ಮರುಭೂಮಿಯಂತಾಗುವ ಕೃಷಿ ಭೂಮಿಯಿಂದ ಜೀವನವ್ಯವಸ್ಥೆ ಕುಂಠಿತವಾಗುವ ಸಾಧ್ಯತೆಯೇ ಅಧಿಕ.

ಪ್ರತಿಯೊಂದು ದೇಶದಲ್ಲೂ ಸರಕು ಮತ್ತು ಸೇವೆಗಳಿಗೆ ಸ್ಪರ್ಧಾತ್ಮಕವಾಗಿ ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆಯೇ ಭೂ ಸಂಪನ್ಮೂಲಗಳ ಬಳಕೆಯ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆಯ ವೇಗ ಅತಿಯಾಗುತ್ತಿದೆ. ಈ ನಡುವೆಯೇ ಕೃಷಿ ಭೂಮಿಯ ಫಲವಂತಿಕೆ ನಾಶ ಮಾಡುವಾಗಲೇ 130 ಕೋಟಿಗೂ ಹೆಚ್ಚು ಜನರು ‘ರೆಡ್‌ ಹ್ಯಾಂಡ್‌’ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿಯೇ ಹೇಳುತ್ತದೆ. ಇದೆಲ್ಲ ಹೀಗೇ ಮುಂದುವರಿದರೆ 2050ರ ವೇಳೆಗೆ ನೈಸರ್ಗಿಕ ಸಂಪನ್ಮೂಲದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದನ್ನೆಲ್ಲ ಮನಗಂಡ ವಿಶ್ವಸಂಸ್ಥೆಯು ‘ದ ಯುನೈಟೆಡ್‌ ನೇಷನ್ಸ್‌ ಕನ್ವೆನ್ಷನ್ ಟು ಕಂಬ್ಯಾಟ್‌ ಡೆಸರ್ಟಿಫಿಕೇಷನ್’ (ಯುಎನ್‌ಸಿಸಿಡಿ) ಹೆಸರಿನಡಿ, ಭೂ ಬರಡು ತಡೆಗಾಗಿ ಆಂದೋಲನ ಆರಂಭಿಸಿದೆ.

ಮಳೆಯಾಶ್ರಿತ ಬೆಳೆಭೂಮಿ, ನೀರಾವರಿ ಬೆಳೆ ಭೂಮಿ, ಹುಲ್ಲುಗಾವಲು, ಕಾಡುಗಳಿಂದ ಜೈವಿಕ ಹಾಗೂ ಆರ್ಥಿಕ ಉತ್ಪಾದಕತೆ ಕಡಿತ ಅಥವಾ ನಷ್ಟವೇ ಭೂ ಫಲವಂತಿಕೆ ನಾಶ. ಇದಕ್ಕೆ ಪ್ರಮುಖ ಕಾರಣವೆಂದರೆ, ಅವೈಜ್ಞಾನಿಕ ಭೂಮಿ ಬಳಕೆ ಅಥವಾ ಚಟುವಟಿಕೆ. ಇವುಗಳಲ್ಲದೆ, ಮಳೆ ಅಥವಾ ಗಾಳಿಯಿಂದ ಉಂಟಾಗುವ ಮಣ್ಣಿನ ಸವೆತ, ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣಲಕ್ಷಣಗಳ ಕ್ಷೀಣಿಸುವಿಕೆ, ದೀರ್ಘ ಕಾಲದಿಂದ ನಷ್ಟವಾಗುತ್ತಿರುವ ನೈಸರ್ಗಿಕ ಸಸ್ಯವರ್ಗಗಳೂ ಇದಕ್ಕೆ ಕೊಡುಗೆ ನೀಡಿವೆ. ಇನ್ನು ಶುಷ್ಕ, ಅರೆ ಶುಷ್ಕ ಮತ್ತು ಒಣ ಉಪ ಆರ್ದ್ರದಲ್ಲಿನ ಭೂ ಫಲವಂತಿಕೆ ನಾಶಕ್ಕೆ ಹವಾಮಾನ ಬದಲಾವಣೆ, ಮಾನವ ಚಟುವಟಿಕೆಗಳು ಸೇರಿದಂತೆ ಹಲವು ಕಾರಣಗಳಿವೆ. ನಗರೀಕರಣ, ಹವಾಮಾನ ಬದಲಾವಣೆ, ಆಹಾರ ಪದ್ಧತಿಯ ಬದಲಾವಣೆ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬೇಡಿಕೆಯನ್ನು ಉಲ್ಬಣಗೊಳಿಸುತ್ತಿವೆ. ಭೂ ಫಲವಂತಿಕೆ ನಾಶದಿಂದ 320 ಕೋಟಿ ಜನರ ಆರೋಗ್ಯಕ್ಕೂ ಮಾರಕವಾಗಿದೆ.

ಭೂಮಿಯ ಸಂಪನ್ಮೂಲಗಳಾದ ಮಣ್ಣು, ನೀರು, ಪ್ರಾಣಿ, ಸಸ್ಯಗಳ ಬಳಕೆಯನ್ನು ಮರುವಿಮರ್ಶೆಗೆ ಒಳಪಡಿಸುವ ಮೂಲಕ ಭೂಮಿಯ ಸುಸ್ಥಿರ ನಿರ್ವಹಣೆಯಾಗಬೇಕಿದೆ. ಮಾನವನಿಗೆ ಅಗತ್ಯವಾದ ಉತ್ಪನ್ನಗಳಿಗೆ ಸಾಮಗ್ರಿಗಳನ್ನು ಪೂರೈಸುವ ದೀರ್ಘಕಾಲದ ಸಾಮರ್ಥ್ಯವನ್ನು ಈ ಸಂಪನ್ಮೂಲಗಳಿಗೆ ಒದಗಿಸಿ, ಅವುಗಳ ಪರಿಸರಾತ್ಮಕ ಕಾರ್ಯಗಳನ್ನು ನಿರ್ವಹಿಸಬೇಕಿರುವುದು ಭೂ ಫಲವಂತಿಕೆ ನಾಶವನ್ನು ತಡೆಯಲು ಇರುವ ತಕ್ಷಣದ ಮಾರ್ಗ ಎಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭೂಮಿಯನ್ನು ಹಿಂದಿನ ಉತ್ತಮ ಸ್ಥಿತಿಗೆ ತರಲು ಸಂರಕ್ಷಣೆ, ಸುಸ್ಥಿರತೆ ಮತ್ತು ಪುನಶ್ಚೇತನದ ಮೂರು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ 2030ರ ವೇಳೆಗೆ ಭೂ ಫಲವಂತಿಕೆ ನಾಶವನ್ನು ವಿಶ್ವದಲ್ಲಿ ಸಂಪೂರ್ಣ ತಡೆಯುವುದು ವಿಶ್ವಸಂಸ್ಥೆಯ ಗುರಿ. ಇದಕ್ಕಾಗಿಯೇ ವಿಶ್ವದಾದ್ಯಂತಯುಎನ್‌ಸಿಸಿಡಿ ಮೂಲಕ ‘ಅನುಷ್ಠಾನ ಅಭಿಯಾನ’ಕ್ಕೆ ಚಾಲನೆ ನೀಡಲಾಗುತ್ತಿದೆ.

ಯುಎನ್‌ಸಿಸಿಡಿಯಲ್ಲಿ 163 ದೇಶಗಳು ಸದಸ್ಯತ್ವ ಹೊಂದಿವೆ. ಈ ಎಲ್ಲ ಸದಸ್ಯರ ಸಮ್ಮೇಳನವೇ ಕಾನ್ಫರೆನ್ಸ್‌ ಆಫ್‌ ಪಾರ್ಟೀಸ್‌ (ಕಾಪ್‌). ಇದನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ಬಾರಿ 14ನೇ ಕಾಪ್‌ಗೆ ಭಾರತದ ಅಧ್ಯಕ್ಷತೆ ಇದೆ. ನವದೆಹಲಿ ಬಳಿಯ ಗ್ರೇಟರ್‌ ನೊಯ್ಡಾದ ಇಂಡಿಯಾ ಎಕ್ಸ್‌ಪೊ ಮಾರ್ಟ್‌ನಲ್ಲಿ ಸೆ. 2ರಿಂದ 13ರವರೆಗೆ ಕಾಪ್‌ ನಡೆಯಲಿದೆ. ಭೂ ಫಲವಂತಿಕೆ ನಾಶ ಹಾಗೂ ಭೂ ಬರಡು ತಡೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಗಳಾಗಲಿವೆ. ಅಲ್ಲದೆ, ಕಾಯ್ದೆ, ನಿಯಮಗಳನ್ನು ರೂಪಿಸುವುದೂ ಈ ಸಮ್ಮೇಳನದ ಪ್ರಮುಖ ಭಾಗ.

ತಾಪಮಾನ ಹೆಚ್ಚಳ, ಭೂ ಫಲವಂತಿಕೆ ನಾಶ ಎಂಬ ಸಂಕಷ್ಟಗಳು ಮಾನವನ ಜೀವನ ವ್ಯವಸ್ಥೆಗೇ ಆತಂಕವೊಡ್ಡುವ ಲಕ್ಷಣಗಳು ಈಗಾಗಲೇ ಗೋglobal warmingಚರಿಸುತ್ತಿವೆ. ಇನ್ನೂ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಆಹಾರದ ಜೊತೆಗೆ ಜೀವನಕ್ಕೇ ಗಂಡಾಂತರ ಉಂಟಾಗಲಿದೆ. ಹಾಗಾಗುವುದು ಬೇಡ ಎಂಬುದೇ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT